ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಭಾರತ ಮತ್ತು ಕುವೈತ್ ನಡುವಿನ SAFF ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ರೋಚಕವಾಗಿ ಕೊನೆಗೊಂಡಿತು. ರೋಚಕ ಸುತ್ತಿನ ಪೆನಾಲ್ಟಿ ಶೂಟೌಟ್‌ನಲ್ಲಿ ಪಂದ್ಯವು 5-4 ರಿಂದ ಭಾರತದ ಪರವಾಗಿ ಕೊನೆಗೊಂಡಿತು.
ಇದರೊಂದಿಗೆ ಭಾರತ ತಂಡ ಈ ಟೂರ್ನಿಯಲ್ಲಿ 9ನೇ ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಟೂರ್ನಿಯ ಚೊಚ್ಚಲ ತಂಡವಾಗಿರುವ ಕುವೈತ್‌ನ ಆಟವನ್ನು ಮೆಚ್ಚಲೇಬೇಕು.
ಫಿಫಾ ರ‍್ಯಾಂಕಿಂಗ್‌ನಲ್ಲಿ 100ನೇ ಸ್ಥಾನಕ್ಕೆ ಬಂದಿದ್ದ ಟೀಂ ಇಂಡಿಯಾ 141ನೇ ಸ್ಥಾನದಲ್ಲಿರುವ ಕುವೈತ್ ಎದುರು ಹೋರಾಟಕ್ಕೆ ನಿಂತಿತ್ತು. ಇದಕ್ಕೂ ಮುನ್ನ ಭಾರತ ಗ್ರೂಪ್ ಹಂತದಲ್ಲಿ ಕುವೈತ್ ವಿರುದ್ಧ 1-1 ಡ್ರಾ ಮಾಡಿಕೊಂಡಿತ್ತು. ಎ ಗುಂಪಿನಲ್ಲಿ ಪಾಕಿಸ್ತಾನ ಮತ್ತು ನೇಪಾಳವನ್ನು ಸೋಲಿಸುವ ಮೂಲಕ ಭಾರತ ಎರಡನೇ ಸ್ಥಾನ ಪಡೆದುಕೊಂಡಿತ್ತು. ಕುವೈತ್ ಮೊದಲ ಸ್ಥಾನದಲ್ಲಿತ್ತು.
ಅಂತಿಮ ಪಂದ್ಯದಲ್ಲಿ ಉಭಯ ತಂಡಗಳು ಮೊದಲಾರ್ಧದಲ್ಲಿ 1-1 ಗೋಲು ಗಳಿಸಿದರೂ ನಂತರ ಯಾವುದೇ ಗೋಲು ದಾಖಲಾಗಲಿಲ್ಲ. 90 ನಿಮಿಷಗಳ ಆಟದ ನಂತರ, ಹೆಚ್ಚುವರಿ ಸಮಯವನ್ನು ತಲುಪಿದ ಆಟದಲ್ಲಿ ಯಾವುದೇ ಗೋಲು ಇರಲಿಲ್ಲ, ಆದ್ದರಿಂದ ಪಂದ್ಯದ ಫಲಿತಾಂಶವು ಪೆನಾಲ್ಟಿ ಶೂಟೌಟ್ ಮೂಲಕ ಬಂದಿತು.
ಶಬೀಬ್ ಅಲ್ ಖಲೀದಿ 14ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಖಾತೆ ತೆರೆದಾಗ ಕುವೈತ್‌ಗೆ ಪಂದ್ಯ ಪ್ರಬಲವಾಗಿ ಆರಂಭವಾಯಿತು. ಆದರೆ 38ನೇ ನಿಮಿಷದಲ್ಲಿ ಲಾಲಿಯನ್‌ಜುವಾಲಾ ಚಾಂಗ್ಟೆ ಬಾರಿಸಿದ ಗೋಲಿನ ನೆರವಿನಿಂದ ಭಾರತ ಮೊದಲಾರ್ಧದಲ್ಲಿ 1-1ರಲ್ಲಿ ಸಮಬಲ ಸಾಧಿಸಿತು. ಈ ಸ್ಕೋರ್ ಪಂದ್ಯದುದ್ದಕ್ಕೂ ಮುಂದುವರೆಯಿತು.
*ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡ ರೋಚಕ ಫೈನಲ್*
ಪೆನಾಲ್ಟಿ ಶೂಟೌಟ್‌ನ ಆರಂಭದಲ್ಲಿ ಕುವೈತ್ ಮತ್ತು ಭಾರತ ತಲಾ ಐದು ಹಿಟ್‌ಗಳಲ್ಲಿ 4-4 ರಿಂದ ಸಮಬಲಗೊಂಡವು, ಆದರೆ ಭಾರತದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮತ್ತೊಮ್ಮೆ ನೆರವಿಗೆ ಬಂದರು. ಕುವೈತ್ ತಂಡದ ನಾಯಕನನ್ನು ಗೋಲ್ ಪೋಸ್ಟ್ ಗೆ ತಾಗದಂತೆ ತಡೆದು ಭಾರತವನ್ನು ಚಾಂಪಿಯನ್ ಮಾಡಿದರು.
ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಭಾರತ ಕಳೆದ ಆವೃತ್ತಿಯಲ್ಲಿ ನೇಪಾಳವನ್ನು 2-0 ಅಂತರದಿಂದ ಸೋಲಿಸಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು, ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಛೆಟ್ರಿ ಬಳಗಕ್ಕೆ ಬಿಗ್ ಕಂಗ್ರ್ಯಾಟ್ಸ್…