ಮಂಗಳವಾರ, ಜನವರಿ 6ರಂದು ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ 2024ರ ಅಂಡರ್-19 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 48.5 ಓವರ್‌ಗಳಲ್ಲಿ 245 ರನ್‌ಗಳನ್ನು ಬೆನ್ನಟ್ಟಿದ ಭಾರತ ಯುವ ಪಡೆ ಎರಡು ವಿಕೆಟ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಸತತ 5ನೇ ಹಾಗೂ ಒಟ್ಟಾರೆ 9ನೇ ಬಾರಿ ಫೈನಲ್‌ಗೆ ಪ್ರವೇಶಿಸಿತು.
11.2 ಓವರ್‌ಗಳಲ್ಲಿ 32 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ ಕಾರಣ ಉತ್ತಮ ಆರಂಭ ಪಡೆಯಲಿಲ್ಲ ಮತ್ತು ಸೋಲಿನ ದವಡೆಗೆ ತಲುಪಿತ್ತು.ಆದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಉದಯ್ ಸಹರಾನ್ 124 ಎಸೆತಗಳಲ್ಲಿ 81 ರನ್ ಮತ್ತು ಸಚಿನ್ ಧಾಸ್ 95 ಎಸೆತಗಳಲ್ಲಿ 96 ರನ್ ಗಳಿಸಿ ಭಾರತದ ಗೆಲುವಿನ ಆಸೆಗೆ ಜೀವ ತುಂಬಿದರು. ಈ ಜೋಡಿ ಐದನೇ ವಿಕೆಟ್‌ಗೆ 187 ಎಸೆತಗಳಲ್ಲಿ 171 ರನ್‌ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು ಮತ್ತು ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಅಂತಿಮವಾಗಿ ಭಾರತ ತಂಡವು ಎರಡು ವಿಕೆಟ್‌ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗಿತು. 95 ಎಸೆತಗಳನ್ನು ಎದುರಿಸಿ 11 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಅದ್ಭುತ 96 ರನ್ ಗಳಿಸಿದ ಸಚಿನ್ ಧಾಸ್ ನಿಸ್ಸಂದೇಹವಾಗಿ ಪಂದ್ಯದ ಹೀರೋ ಆದರು. ಈ ಮೂಲಕ ಕ್ರಿಕೆಟ್ ಜಗತ್ತಿಗೆ ಮತ್ತೊಬ್ಬ ಸಚಿನ್ ಎಂಟ್ರಿ ಕೊಟ್ಟಿದ್ದಾನೆ. ಗಮನಾರ್ಹವಾಗಿ, ಸಚಿನ್ ಧಾಸ್ ಕೂಡ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಂತೆ 10 ನಂಬರ್ ಜೆರ್ಸಿ ಧರಿಸುತ್ತಾರೆ.
ಸಚಿನ್ ಧಾಸ್ ಯಾರು? ಹಿನ್ನೆಲೆ ಏನು?
ಗಮನಾರ್ಹವಾಗಿ, ಯುವ ಬ್ಯಾಟರ್ ಸಚಿನ್ ಧಾಸ್ ಮಹಾರಾಷ್ಟ್ರದ ಬೀಡ್ ಪ್ರದೇಶದಿಂದ ಬಂದವರು. ಪುಣೆಯಲ್ಲಿ ನಡೆದ ಆಹ್ವಾನಿತ ಅಂಡರ್-19 ಪಂದ್ಯಾವಳಿಯ ಸಂದರ್ಭದಲ್ಲಿ ಅವರ ಸಿಕ್ಸ್ ಬಾರಿಸುವ ಸಾಮರ್ಥ್ಯದಿಂದ ಎಲ್ಲರನ್ನು ನಿಬ್ಬೆರಗಾಗಿಸಿದರು.
ಯುವ ಕ್ರಿಕೆಟಿಗನ ಸಿಕ್ಸರ್ ಬಾರಿಸುವ ಬ್ಯಾಟಿಂಗ್ ಶೈಲಿಯು ಸಂಘಟಕರನ್ನು ತುಂಬಾ ಗೊಂದಲಕ್ಕೀಡುಮಾಡಿತು. ಅವರು ಯಾವುದೇ ಫೌಲ್ ಆಟವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರ ಬ್ಯಾಟ್‌ನ ಗಾತ್ರವನ್ನು ಸಹ ಪರಿಶೀಲಿಸಿದರು. ಸಚಿನ್ ತಂದೆ ಸಂಜಯ್ ದಾಸ್ ಅವರು ಸುನಿಲ್ ಗವಾಸ್ಕರ್ ನಂತರ, ತಮ್ಮ ಎರಡನೇ ನೆಚ್ಚಿನ ಕ್ರಿಕೆಟಿಗರಾದ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನೇ ಇಟ್ಟಿದ್ದಾರೆ.
ಇತ್ತೀಚಿಗೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗಿನ ಸಂವಾದದಲ್ಲಿ, ಸ್ವತಃ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದ ಸಂಜಯ್ ಧಾಸ್, ತನ್ನ ಮಗನನ್ನು ಕೂಡ ಕ್ರಿಕೆಟಿಗನನ್ನಾಗಿ ಮಾಡಲು ಯೋಜಿಸಿದ್ದಾಗಿ ಸಚಿನ್ ಧಾಸ್ ಬಹಿರಂಗಪಡಿಸಿದ್ದರು. ಸಂಜಯ್ ಧಾಸ್ ತನ್ನ ಮಗನಿಗೆ ತರಬೇತಿ ನೀಡಲು ಹಣವನ್ನು ಸಾಲ ಪಡೆದು ಟರ್ಫ್ ವಿಕೆಟ್‌ಗಳನ್ನು ಸಿದ್ಧಪಡಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಆದರೆ, ಬೀಡ್‌ನಲ್ಲಿ ನೀರಿನ ಸಮಸ್ಯೆಯಿಂದಾಗಿ ವಿಕೆಟ್‌ಗಳನ್ನು ತಾಜಾವಾಗಿಟ್ಟುಕೊಳ್ಳುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ, ತಂದೆ ಸಂಜಯ್ ಪ್ರತಿ ಎರಡನೇ ಅಥವಾ ಮೂರನೇ ದಿನಕ್ಕೆ ನೀರಿನ ಟ್ಯಾಂಕರ್‌ಗೆ ಕರೆ ಮಾಡಬೇಕಾಗಿತ್ತು. ಸಚಿನ್ ಧಾಸ್ ಅವರ ಕೋಚ್ ಅಜರ್ ಕೂಡ ಪ್ರತಿಭಾವಂತ ಬ್ಯಾಟರ್‌ನನ್ನು ತಯಾರು ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ. ಸಚಿನ್ ಧಾಸ್ ಅವರ ತಾಯಿ ಸುರೇಖಾ ಧಾಸ್ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (API) ಆಗಿದ್ದಾರೆ ಮತ್ತು ಕಾಲೇಜು ದಿನಗಳ ಸಮಯದಲ್ಲಿ ಕಬಡ್ಡಿ ಆಟಗಾರರಾಗಿದ್ದರು. ಮತ್ತೊಂದೆಡೆ, ಸಚಿನ್ ಸಹೋದರಿ ಪ್ರತೀಕ್ಷಾ ಪುಣೆಯಲ್ಲಿ ಯುಎಸ್‌ಪಿಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಸಚಿನ್ ಧಾಸ್ 2024ರ ಅಂಡರ್-19 ವಿಶ್ವಕಪ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಇನ್ನು ಸಚಿನ್ ಧಾಸ್ ತಮ್ಮ ಸತತ ಪಂದ್ಯ-ವಿಜೇತ ಪ್ರದರ್ಶನಗಳ ನಂತರ, ಆವರು ಆಡಿದ ಆರು ಇನ್ನಿಂಗ್ಸ್‌ಗಳಿಂದ 73.50ರ ಸರಾಸರಿ ಮತ್ತು 116.66ರ ಸ್ಟ್ರೈಕ್ ರೇಟ್‌ನಲ್ಲಿ 294 ರನ್‌ಗಳೊಂದಿಗೆ ಸದ್ಯ ಪಂದ್ಯಾವಳಿಯ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಭಾನುವಾರ, ಫೆಬ್ರವರಿ 11ರಂದು ಬೆನೋನಿಯಲ್ಲಿ ನಡೆಯುವ 2024ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಸಚಿನ್ ಧಾಸ್ ತಮ್ಮ ತಂಡಕ್ಕಾಗಿ ಮತ್ತೊಂದು ಪಂದ್ಯ-ವಿಜೇತ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.
ಸುರೇಶ್ ಭಟ್ ಮುಲ್ಕಿ
ಸ್ಪೋರ್ಟ್ಸ್ ಕನ್ನಡ