ಆಧುನಿಕ ಟೆನ್ನಿಸ್ ಜಗತ್ತಿನ ಅನಭಿಷಿಕ್ತ ದೊರೆ ರೋಜರ್ ಫೆಡರರ್ ಇಂದು ಟೆನ್ನಿಸಿಗೆ ವಿದಾಯವನ್ನು ಕೋರಿದ್ದಾರೆ.
41 ವರ್ಷದ ಈ ಸ್ವಿಸ್ ದೇಶದ ಸ್ಮಾರ್ಟ್ ಟೆನ್ನಿಸಿಗ ತನ್ನ 24 ವರ್ಷಗಳ ಸುದೀರ್ಘ ಮತ್ತು ವರ್ಣರಂಜಿತವಾದ ಟೆನ್ನಿಸ್ ಬದುಕಿಗೆ ಇಂದು ಪೂರ್ಣ ವಿರಾಮ ಹಾಕಿದ್ದಾರೆ! ಒಂದು ರೀತಿಯಲ್ಲಿ ಇದು ನಿರೀಕ್ಷಿತವಾದ ನಿರ್ಧಾರ ಎನ್ನಬಹುದು.
ಆತನ ದಾಖಲೆಗಳನ್ನು ಗಮನಿಸಿದಾಗ ಅವುಗಳು ನಿಜಕ್ಕೂ ಅದ್ಭುತವೇ ಆಗಿದೆ. ಹದಿನೆಂಟನೇ ವಯಸ್ಸಿಗೆ ವಿಂಬಲ್ಡನ್ ಜ್ಯೂನಿಯರ್ ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ ಆತ ಜಾಗತಿಕ ಟೆನ್ನಿಸ್ ರಂಗಕ್ಕೆ ಪದಾರ್ಪಣೆಯನ್ನು ಮಾಡಿದ್ದರು. ಮುಂದೆ ಮೊದಲನೆಯ ವಿಂಬಲ್ಡನ್ ಕಿರೀಟವನ್ನು ಗೆದ್ದಾಗ ಆತನಿಗೆ ಕೇವಲ 21 ವರ್ಷ!
ಮುಂದೆ ರೋಜರ್ ಫೆಡರರ್ ಆಡಿದ್ದು 1500ಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು! ಗೆಲುವಿನ ಪ್ರಮಾಣ 60%ಗಿಂತ ಹೆಚ್ಚು ಇದೆ. ಒಟ್ಟು 103 ATP ಪ್ರಶಸ್ತಿಗಳನ್ನು ಗೆದ್ದ ಯಶಸ್ವೀ ಆಟಗಾರ ಆತ! ಅದರಲ್ಲಿ ಗ್ರಾನ್ ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯೇ 20!
ಅದರಲ್ಲಿ ಎಂಟು ಹೊಳೆಯುವ ವಿಂಬಲ್ಡನ್ ಕಿರೀಟಗಳು, ಐದು ಅಮೆರಿಕನ್ ಓಪನ್ ಕಿರೀಟಗಳು ಇವೆ. ಅದರ ಜೊತೆಗೆ ಮೂರು ಒಲಿಂಪಿಕ್ ಪದಕಗಳು ಇವೆ. ಒಟ್ಟು 310 ವಾರ ವಿಶ್ವದ ನಂಬರ್ ಒನ್ ಆಟಗಾರನಾಗಿ ಮೆರೆದ ಏಕೈಕ ಟೆನ್ನಿಸಿಗ ಫೆಡರರ್!
ಆತನ ಬಲಿಷ್ಠವಾದ ಮುಂಗೈ ಹೊಡೆತಗಳು, ಎದುರೇ ಇಲ್ಲದ ಸರ್ವಗಳು, ಕೋರ್ಟಿನ ಮೂಲೆ ಮೂಲೆಗೂ ಪಾದರಸದ ಪಾದಗಳ ಚಲನೆ, ಆಕ್ರಮಣಕಾರಿಯಾದ ಆಟ, ದಣಿವು ಅರಿಯದ ಫಿಟ್ನೆಸ್, ಎಂದಿಗೂ ಸೋಲನ್ನು ಒಪ್ಪದ ಮೈಂಡ್ ಸೆಟ್……. ಇವುಗಳು ರೋಜರ್ ಫೆಡರರ್ ಅವರ ಪ್ರಬಲ ಅಸ್ತ್ರಗಳು.
ಆಧುನಿಕ ಟೆನ್ನಿಸ್ ಲೋಕವು ಮಿಂಚಿದ್ದು ಇದೇ ಮೂರು ಲೆಜೆಂಡ್ ಆಟಗಾರರಿಂದ. ಅವರೆಂದರೆ ಇದೇ ರೋಜರ್ ಫೆಡರರ್, ನೋವಾನ್ ಜಾಕೋವಿಕ್ ಮತ್ತು ರಾಫೆಲ್ ನಡಾಲ್!
ಫೆಡರರ್ 20 ಗ್ರಾನಸ್ಲಾಂ ಗೆದ್ದಿದ್ದರೆ, ಜಾಕೊವಿಕ್ ಗೆದ್ದಿದ್ದು 21 ಗ್ರಾನ್ಸಲಾಂ, ರಾಫೆಲ್ ನಡಾಲ್ ಗೆದ್ದಿದ್ದು 22 ಗ್ರಾನ್ಸಲಾಂ ತಳಿಗೆಗಳನ್ನು! ಈ ತ್ರಿವಳಿ ಟೆನ್ನಿಸ್ ಆಟಗಾರರು ಪರಸ್ಪರ ಮುಖಾಮುಖಿ ಆದರೆ ಕೋರ್ಟಲ್ಲಿ ಗುಡುಗು, ಸಿಡಿಲು, ಮಿಂಚುಗಳು ಒಟ್ಟೊಟ್ಟಿಗೆ ಕಾಣಿಸುತ್ತಿದ್ದವು.
ಅದರಲ್ಲಿ ಒಬ್ಬೊಬ್ಬರೇ ಈಗ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಇಂದು ರೋಜರ್ ಫೆಡರರ್ ಅವರ ಸರದಿ. ಕಳೆದ ಹಲವು ವರ್ಷಗಳಿಂದ ಗಾಯ, ಸರ್ಜರಿ, ನೋವುಗಳಿಂದ ನೊಂದಿದ್ದ ಆತ ಇಂದು ಟೆನ್ನಿಸ್ ರಾಕೆಟ್ ಕೈ ಚೆಲ್ಲಿ ಇಂದು ಗುಡ್ ಬೈ ಹೇಳಿದ್ದಾರೆ.
ಒಂದೊಂದು ಪಂದ್ಯವನ್ನು ಗೆದ್ದವನು ವಿನ್ನರ್. ಸತತವಾಗಿ ಗೆಲ್ಲುವವನು ಖಂಡಿತ ಚಾಂಪಿಯನ್! ಗೆಲುವನ್ನು ಅಭ್ಯಾಸ ಮಾಡಿಕೊಂಡವನು ಲೆಜೆಂಡ್! ಫೆಡರರ್ ನಿಶ್ಚಿತವಾಗಿ ಮೂರನೇ ಗುಂಪಿಗೆ ಸೇರುತ್ತಾನೆ.
ಹೋಗಿ ಬನ್ನಿ ಲೆಜೆಂಡ್!
ರಾಜೇಂದ್ರ ಭಟ್ ಕೆ.