ಕಳೆದ 30 ವರ್ಷಗಳಿಂದ ವೀಕ್ಷಕ ವಿವರಣೆಗಾರರಾಗಿ ಹಾಗೂ 20 ವರ್ಷಗಳಿಂದ ಕೆ.ಎಸ್.ಸಿ.ಎ ಅಂಗೀಕೃತ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿತ್ತಿರುವ ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ್ ಐತಾಳ್ ಕೋಟ 2021 ನೇ ಸಾಲಿನ ಕ್ರೀಡಾ ಕಲಾ ವಲ್ಲಭ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾರ್ಚ್ 7 ರವಿವಾರದಂದು ಬೀಡಿನ ಗುಡ್ಡೆಯಲ್ಲಿ ನಡೆದ ವಿಪ್ರ ಸಮಾಜದ ಪ್ರತಿಷ್ಟಿತ ಕ್ರಿಕೆಟ್ ಪಂದ್ಯಾವಳಿ “ಶ್ರೀ ರಾಮ ಟ್ರೋಫಿ-2021” ರ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ,ಕಾರ್ಯದರ್ಶಿ ರಾಜೇಶ್ ಉಪಾಧ್ಯ,ಕೋಶಾಧಿಕಾರಿ ರಾಜ್ ಕುಮಾರ್ ಉಪಾಧ್ಯ ಹಾಗೂ ಕಾರ್ಯದರ್ಶಿ ಯು.ಬಿ.ಶ್ರೀನಿವಾಸ ಭಾದ್ಯ ಉಪಸ್ಥಿತರಿದ್ದರು.
ಶಿವನಾರಾಯಣ್ ಐತಾಳ್ ಕೋಟ ವಿಶಿಷ್ಟ ಶೈಲಿಯ ಬ್ಯಾಟಿಂಗ್ (ದಿಲ್ಸ್ಕೂಪ್-ಶಿವಸ್ಕೂಪ್ ಹೊಡೆತಗಳು) ಹಾಗೂ ಆಫ್ ಸ್ಪಿನ್ ಎಸೆತಗಾರರಾಗಿ ಗುರುತಿಸಿಕೊಂಡು ಇಲೆವೆನ್ ಅಪ್ ಕೋಟ ತಂಡದಲ್ಲಿ ಬಹಳಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.90 ರ ದಶಕದ ಸಮಯದಲ್ಲಿ ಹಿರಿಯ ವೀಕ್ಷಕ ವಿವರಣೆಕಾರರು ನೇಪಥ್ಯಕ್ಕೆ ಸರಿದ ಸಂದರ್ಭ ಮೈಕ್ ಹಿಡಿದು,ಕನ್ನಡ ವೀಕ್ಷಕ ವಿವರಣೆಗೆ ಚುರುಕು ಮುಟ್ಟಿಸಿ,ಕಳೆದ 30 ವರ್ಷಗಳಿಂದ
ಟೆನ್ನಿಸ್ಬಾಲ್ ಹಾಗೂ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಾಗಿ ಕರ್ನಾಟಕ ರಾಜ್ಯದ ವಿವಿಧೆಡೆ ವೀಕ್ಷಕ ವಿವರಣೆ ನಡೆಸಿದ್ದಾರೆ.ಮಂಗಳೂರಿನಲ್ಲಿ ನಡೆಯುವ ಪ್ರತಿಷ್ಟಿತ M.P.L ಹಾಗೂ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ನಲ್ಲಿ ವೀಕ್ಷಕ ವಿವರಣೆಯ ನೇತೃತ್ವ ವಹಿಸಿದ್ದರು.ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಆಗಿ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಯು.ಎ.ಇ ರಾಷ್ಟ್ರದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
ಇವರು 1996 ರಲ್ಲಿ “ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ” ವನ್ನು ಸ್ಥಾಪಿಸಿ ಕ್ರಿಕೆಟ್,ಚೆಸ್ ಹಾಗೂ ವಿವಿಧ
ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸಿದ್ದು,ಸಾಲಿಗ್ರಾಮ ಜಾತ್ರೆಯ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.