ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಆರಂಭಿಸಿರುವ ಕಪಿಲ್ ದೇವ್ ನಾಯಕತ್ವದ ಕ್ರಿಕೆಟ್ ಸಲಹಾ ಸಮಿತಿಯು ಮಂಗಳವಾರ ಮಹತ್ವದ ಹೆಜ್ಜೆ ಇಟ್ಟಿದೆ. ಆಕಾಂಕ್ಷಿಗಳ ದೊಡ್ಡ ಪಟ್ಟಿಯಿಂದ ಆರು ಮಂದಿಯನ್ನು ಆಯ್ಕೆ ಮಾಡಿ ಅಂತಿಮ ಸುತ್ತಿನ ಪರೀಕ್ಷೆಗೆ ಸಿದ್ದತೆ ನಡೆಸಿದೆ. ಪ್ರಸ್ತುತ ಭಾರತ ತಂಡದ ಮುಖ್ಯಕೋಚ್ ಆಗಿರುವ ರವಿಶಾಸ್ತ್ರಿ ಈ ಪಟ್ಟಿಯಲ್ಲಿದ್ದಾರೆ.
ಅವರಲ್ಲದೇ ಭಾರತದ ಲಾಲಚಂದ್ ರಜಪೂತ್ ಮತ್ತು ರಾಬಿನ್ ಸಿಂಗ್ ಕೂಡ ಸ್ಪರ್ಧೆಯಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಮಾಜಿ ಕೋಚ್ ಮೈಕ್ ಹೆಸನ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಮತ್ತು ಶ್ರೀಲಂಕಾ ಕೋಚ್ ಟಾಮ್ ಮೂಡಿ ಹಾಗೂ ವೆಸ್ಟ್ ಇಂಡೀಸ್‌ನ ಫಿಲ್ ಸಿಮನ್ಸ್ ಅವರು ಸ್ಪರ್ಧೆಯಲ್ಲಿದ್ದಾರೆ. ಇದರಿಂದಾಗಿ ಮೂವರು ದೇಶಿ ಮತ್ತು ಮೂವರು ವಿದೇಶಿ ಕೋಚ್‌ಗಳಿಗೆ ಅಂತಿಮ ಸುತ್ತಿನಲ್ಲಿ ಪರೀಕ್ಷೆ ನಡೆಯಲಿದೆ.
ಈ ಅಭ್ಯರ್ಥಿಗಳು ತಮ್ಮ ಅನುಭವ, ಆಟದ ಜ್ಞಾನ ಮತ್ತು ಕೋಚ್ ಆದರೆ ಭವಿಷ್ಯದ ಯೋಜನೆಗಳ ಕುರಿತ ಮಾಹಿತಿಗಳನ್ನು ಸಿಎಸಿ ಮುಂದೆ ಪ್ರಸ್ತುತಪಡಿಸಬೇಕು. ಸಿಎಸಿಯಲ್ಲಿ ಕಪಿಲ್ ದೇವ್ ಅವರೊಂದಿಗೆ ಹಿರಿಯ ಕ್ರಿಕೆಟಿಗ ಅನ್ಷುಮನ್ ಗಾಯಕವಾಡ್ ಮತ್ತು ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಇದ್ದಾರೆ.
2007ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡವು ಟ್ವೆಂಟಿ–20 ವಿಶ್ವಕಪ್ ಗೆದ್ದಾಗ ರಾಬಿನ್ ಸಿಂಗ್ ಫೀಲ್ಡಿಂಗ್ ಕೋಚ್ ಆಗಿದ್ದರು. ರಜಪೂತ್ ಅವರು ಮುಖ್ಯ ಕೋಚ್ ಆಗಿದ್ದರು. ರಜಪೂತ್ ಅವರು ಅಫ್ಗಾ ನಿಸ್ತಾನ ಮತ್ತು ಜಿಂಬಾಬ್ವೆ ತಂಡಗಳಿಗೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ‘ಸೂಪರ್ ಸಿಕ್ಸ್’ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಲ್ಲದೇ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅನುಭವವೂ ಅವರಿಗೆ ಇದೆ.