ಇತ್ತೀಚಿನಿಂದ ಉಪ್ಪೂರು ಗ್ರಾಮದ ಕುದ್ರುಬೆಟ್ಟುವಿನ ನಿವಾಸಿಯಾಗಿರುವ ಅನಿತಾ ಹಾಗೂ ಪ್ರಭಾಕರರವರ 9 ವರ್ಷದ ಮಗಳು ಪ್ರಣವಿ ಇವರು ರಕ್ತ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಹೆತ್ತವರು ಸಹಾಯ ಹಸ್ತದ ಮೊರೆ ಹೋಗಿದ್ದರು.
ಸಹೋದರ ಕಲಾವೃಂದ ಕುದ್ರುಬೆಟ್ಟು ಉಪ್ಪೂರು ಇವರು ತಮ್ಮಿಂದ ಕೈಲಾದಷ್ಟು ಸಹಾಯ ಧನವನ್ನಿತ್ತು ಹೆಣ್ಣು ಮಗಳ ಚಿಕಿತ್ಸೆಗೆ ಸಹಕಾರಿಯಾಗುವಂತಹ ಧ್ಯೇಯದೊಂದಿಗೆ ಪ್ರಣವಿ ಟ್ರೋಫಿಯನ್ನು ಆಯೋಜಿಸಿ ಸ್ಥಳೀಯ ತಂಡಗಳಿಗೂ ಅವಕಾಶವನ್ನು ನೀಡಿತ್ತು. 11-06-2023 ಭಾನುವಾರದಂದು ಉಪ್ಪೂರು ಕುದ್ರುಬೆಟ್ಟುವಿನಲ್ಲಿ ನಡೆದ ಈ ಪ್ರಣವಿ ಟ್ರೋಪಿಗೆ ಪ್ರಥಮ ಬಹುಮಾನವಾಗಿ 12, 000ರೂ ಹಾಗೂ 6,000ರೂ ದ್ವಿತೀಯ ಬಹುಮಾನವನ್ನಿತ್ತು, ಊರಿನ ಸಮಸ್ತ ಜನರ ಸಹಕಾರದಿಂದ ಉಪ್ಪೂರು ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಸಂಘ ಸಂಸ್ಥೆಗಳ, ಕ್ರೀಡಾ ಅಭಿಮಾನಿಗಳ ಸಹಕಾರದಿಂದ ಒಟ್ಟು ಮೂರು ಲಕ್ಷದ ಹನ್ನೆರಡು ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಪ್ರಣವಿಯ ಚಿಕಿತ್ಸೆಗಾಗಿ ಸಹಕರಿಸಿದ್ದಾರೆ. ಈ ಸಹೋದರ ಕಲಾವೃಂದದ ಸೇವಾ ಮನೋಭಾವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.