ಪಡುಗಡಲ ತೀರದಲ್ಲಿ ಸುಂದರ ಪ್ರಾಕೃತಿಕ ಸೊಬಗನ್ನು ತನ್ನದಾಗಿಸಿಕೊಂಡ ನಮ್ಮೀ ಕರಾವಳಿಯು ಹಲವು ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿ ಪ್ರತಿಭೆಗಳ ಮನದಲ್ಲಿ ಸಾಧನೆಯ ಶಿಖರವನ್ನೇರುವ ಕನಸನ್ನು ಭಿತ್ತುವ ನಮ್ಮೂರಿನ ಮಣ್ಣು ನಿಜಕ್ಕೂ ಶ್ರೇಷ್ಠವಾದುದು. ಕನಸುಗಳ ಬೆನ್ನೇರಿ ಹೊರಟ ಹಲವು ಸಾಧಕರ ನಡುವೆ ಈ ಹುಡುಗನೊಬ್ಬ ಕ್ರಿಕೆಟ್ ಅನ್ನು ತನ್ನ ಮೆಚ್ಚಿನ ಕ್ರೀಡೆಯಾಗಿಸಿಕೊಂಡು ಸಾಧನೀಯ ಪಥದಲ್ಲಿ ಸಾಗುತ್ತಿರುವ.
ಉಡುಪಿ ಜಿಲ್ಲೆಯ ಕೋಟ ಸೀತಾರಾಮ ಆಚಾರ್ ಹಾಗೂ ಪ್ರೇಮ ದಂಪತಿಯ ಹಿರಿಯ ಮಗನಾದ ಪ್ರಣಮ್ ಕ್ರಿಕೆಟ್ ನಲ್ಲಿ ತನ್ನದೇ ಆದ ಸಾಧನೆಯನ್ನು ಮಾಡುತ್ತಿರುವಂತಹ ಪ್ರತಿಭೆ. ಬಾಲ್ಯದಲ್ಲಿಯೇ ಕ್ರಿಕೆಟ್ ಮೇಲೆ ಅತೀವವಾದ ಆಸಕ್ತಿಯನ್ನು ಇಟ್ಟುಕೊಂಡು ಅತಿ ಕಿರಿಯ ವಯಸ್ಸಿನಿಂದಲೂ ಹಿರಿಯರೊಂದಿಗೆ ಬಹಳ ಸರಳವಾಗಿ ಬೆರೆತು ಕ್ರಿಕೆಟ್ ಕೌಶಲ್ಯಗಳನ್ನು ಕರಗತ ಮಾಡಿಕೊಂಡ ನಮ್ಮೂರಿನ ಹುಡುಗ ಇವನು. ಅತಿ ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ನಲ್ಲಿ ಆತನಿಗಿದ್ದ ಆಸಕ್ತಿ, ಶಿಸ್ತಿನೊಂದಿಗೆ ಕಲಾತ್ಮಕವಾಗಿದ್ದ ಆತನ ಆಟದ ವೈಖರಿಯನ್ನು ಕಂಡ ಹಲವು ಹಿರಿಯ ಕ್ರಿಕೇಟಿಗರು ಆತನಲ್ಲಿ ಒಬ್ಬ ಪ್ರಬುದ್ಧ ಕ್ರಿಕೇಟಿಗನನ್ನು ಕಂಡಿದ್ದರು. ಅವರ ಭರವಸೆಗೆ ಹಿಡಿದ ಕೈಗನ್ನಡಿಯಂತೆ ತನ್ನಲ್ಲಿರುವ ಕ್ರಿಕೆಟ್ ಕೌಶಲ್ಯವನ್ನು ಬಹಳ ಶ್ರದ್ದೆಯಿಂದ ವೃದ್ಧಿಸಿಕೊಂಡು ಇಂದು ಕ್ರಿಕೆಟ್ ನಲ್ಲಿ ತನ್ನದೇ ಆದ ಸಾಧನೆಯ ಹೆಜ್ಜೆಗಳೊಂದಿಗೆ ಸಾಗುತ್ತಿದ್ದಾನೆ.
ಶಾಲಾಮಟ್ಟದ ಪಂದ್ಯಾಟಗಳಲ್ಲಿ ಹಾಗೂ ಕೆ ಎಸ್ ಸಿ ಎ ಆಯೋಜಿತ ಮಂಗಳೂರು ವಲಯ 16ರ ವಯೋಮಾನದ ಕ್ರಿಕೆಟ್ ಪಂದ್ಯಾಟದಲ್ಲಿ 122 ಎಸೆತಗಳಲ್ಲಿ 120 ರನ್ ಗಳನ್ನು ದಾಖಲೆ ಹಾಗೂ 14ರ ವಯೋಮಾನದ ಕ್ರಿಕೆಟ್ ಪಂದ್ಯಾಟದಲ್ಲೂ ಶತಕವನ್ನು ದಾಖಲಿಸಿದ್ದಲ್ಲದೆ, ಕೀಪಿಂಗ್ ನಲ್ಲಿಯೂ ಅದ್ಭುತವಾದ ಪ್ರದರ್ಶನವನ್ನು ತೋರುವುದರೊಂದಿಗೆ ತನ್ನ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಮಾಡಿದವ. ಈಗಾಗಲೇ ಹಲವು ಪಂದ್ಯಾಟಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿ ವೈಯಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ.
ಹಂಗಾರಕಟ್ಟೆಯ ಬೆಳ್ಳಿಪ್ಪಾಡಿ ಅಕಾಡೆಮಿಯಲ್ಲಿ ಕೋಚ್ ವಿಜಯ್ ಆಳ್ವ ರ ಗರಡಿಯಲ್ಲಿ ಪಳಗುತ್ತಿರುವ ಪ್ರಣವ್ ಪ್ರಸ್ತುತ ಕೋಟದ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈತ ಅಕ್ಟೋಬರ್ 30 ಹಾಗೂ 31ರಂದು ಹಾಸನದಲ್ಲಿ ನಡೆಯಲಿರುವ 16ರ ವಯೋಮಾನದ ಅಂತರ್ ಶಾಲಾ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ನಮ್ಮ ವಿಭಾಗದ ತಂಡಕ್ಕೆ ಆಯ್ಕೆಯಾಗಿರುವುದು ಬಲು ಹೆಮ್ಮೆಯ ಸಂಗತಿ. ತನ್ನೊಳಗಿನ ಪ್ರತಿಭೆಗೆ ಹೆತ್ತವರಿಂದ, ಗುರುಳಿಂದ ಸಿಗುತ್ತಿರುವ ಅಗಾಧವಾದ ಪ್ರೋತ್ಸಾಹವನ್ನು ಬಳಸಿಕೊಂಡು ಅವಿರತವಾದ ಶ್ರಮದ ತರಬೇತಿಯೊಂದಿಗೆ ತನ್ನೊಳಗಿನ ಪ್ರತಿಭೆಯನ್ನು ಬೆಳಗಿಸಲು ಹೊರಟಿರುವ ನಮ್ಮೂರ ಹುಡುಗನಿಗೆ ನಮ್ಮೂರಿನ ಹಂಬಲ ಬೆಂಬಲದ ಶುಭ ಹಾರೈಕೆಗಳು.
ಕ್ರಿಕೆಟ್ ಎಂಬ ಸುವಿಸ್ತಾರ ಬಯಲಿನಲ್ಲಿ ಚಿಗುರೊಡೆದ ಭರವಸೆಯ ಬಳ್ಳಿಯೊಂದು ಸಾಧನೆಯ ಹಾದಿಯಲ್ಲಿ ಹಬ್ಬುತಿರಲಿ ಎಂಬ ಸದಾಶಯದೊಂದಿಗೆ ಪ್ರಣಮ್ ಎಂಬ ನಮ್ಮೂರಿನ ಕ್ರಿಕೆಟ್ ಪ್ರತಿಭೆಗೆ ಶುಭಹಾರೈಕೆಗಳು.
-ಮಂಜುನಾಥ್ ಕಾರ್ತಟ್ಟು