ಕನಸು ಕಂಗಳಲ್ಲಿ ಬಂದು ಭರವಸೆಯ ಹಾದಿಯಲ್ಲಿ ಸಾಗುತ್ತಿರುವ “ಹೊದ್ರೋಳಿಯ ಮುತ್ತು”, ಪ್ರದೀಪ್ ಆಚಾರ್ಯ.
“ಪ್ರದೀಪ್” ಅಂದಾಕ್ಷಣ ನೆನಪಾಗುವುದು ಒಬ್ಬ ಭರವಸೆಯ ಕ್ರಿಕೆಟ್ ನ ಬೆಳಕು. ದೇಹದ ಅಂಗದ ನ್ಯೂನತೆಯನ್ನು ಲೆಕ್ಕಿಸದೆ ಅದು ದೇವರು ಸಾಧನೆ ಮಾಡಲು ತನಗಿತ್ತ ಅವಕಾಶ ಎಂದು ತಿಳಿದು ಸಾಧನೆಯ ಹಾದಿಯಲ್ಲಿ ಸಾಗಿದ ಕ್ರಿಕೆಟ್ ಆಟಗಾರ.
ಅದೆಷ್ಟೋ ಅಂಗ ವೈಕಲ್ಯ ಇರುವ ವ್ಯಕ್ತಿ ಗಳು ಅದನ್ನು ನೆಪ ಮಾಡಿಕೊಂಡು ಬದುಕುವ ಈ ಕಾಲಘಟ್ಟದಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ, ಕೈ ಕಟ್ಟಿ ಕೂರದೆ ಅವರಿಗೆ ಮಾದರಿಯಾಗಿ ಬದುಕಿ ತೋರಿಸಿದ ಅಸಾಮಾನ್ಯ ಕ್ರಿಕೆಟ್ ಪ್ರೇಮಿ.
ಆರಂಭದಲ್ಲಿ ಎಲ್ಲರೂ ಈತ ಅಂಗ ವೈಕಲ್ಯ ಇದ್ದುಕೊಂಡು “ಏನು ತಾನೇ ಸಾಧಿಸಿಯಾನು “ಎಂದು ತಮಾಷೆ ಮಾಡುತ್ತಿದ್ದ ಜನ ಈಗ ಆತನ ಸಾಧನೆ ಕಂಡು ಬೆರಗಾಗಿದ್ದು ನಿಜ.
ಪ್ರದೀಪ್ ಒಬ್ಬ ಅದ್ಭುತ ಕ್ರಿಕೆಟ್ ಆಟಗಾರ,ಆತನ ಆಟವು ಅಂಗಾಗಗಳು ಸರಿ ಇರುವ ಆಟಗಾರರನ್ನು ನಾಚಿಸುವಂತಿದೆ ಎಂದರೆ ತಪ್ಪಾಗಲಾರದು. ಮೈಕ್ ಹಿಡಿದು ಕಾಮೆಂಟರಿ ಹೇಳಲು ಶುರು ಮಾಡಿದರೆ ಮೈದಾನದಲ್ಲಿ ಆಟ ಆಡುವ ಎಲ್ಲ ಆಟಗಾರರಿಗೆ ಸ್ಫೂರ್ತಿ ಬಂದಂತೆ. ಮೈದಾನದ ಪ್ರೇಕ್ಷಕರು ಕುಣಿದು ಕುಪ್ಪಳಿಸುವುದಂತೂ ನಿಜ. ಆತನ ಬ್ಯಾಟಿಂಗ್ ವೈಖರಿ ನೋಡಿ ಅದೆಷ್ಟೋ ಬೌಲರ್‌ಗಳು ಬೆವರು ಇಳಿಸಿ ಕೊಂಡದ್ದು ಇದೆ. ಅನೇಕ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಕಾಮೆಂಟರಿ ಮಾಡಿದ ಒಬ್ಬ ಅದ್ಭುತ ವಾಗ್ಮಿ.
ಕ್ರಿಕೆಟ್ ಕ್ಷೇತ್ರದಲ್ಲಿ ಮಾತ್ರ ತನ್ನನ್ನು ತಾನು ತೊಡಗಿಸಿಕೊಂಡಿರದ ಪ್ರದೀಪ್ ವೃತ್ತಿಯಲ್ಲಿ ಒಬ್ಬ ಚಿನ್ನದ ಕೆಲಸ ಮಾಡುವ ವ್ಯಕ್ತಿ. ಕೋಟೇಶ್ವರದ ಲಕ್ಷ್ಮಿ ಜುವೆಲರ್ಸ್ ನಲ್ಲಿ ಹತ್ತು ವರ್ಷಗಳ ಸೇವೆ ಮಾಡಿ ಇದೀಗ ಎರಡು ವರ್ಷದಿಂದ ವಕ್ವಾಡಿಯ ನವಮಿ ಜುವೆಲರ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ ಹಾಗಾಗಿ ನಮ್ಮ ಯೋಚನೆಯ ಬಗ್ಗೆ ಎಚ್ಚರ ವಹಿಸಬೇಕು ಇದು ಪ್ರದೀಪ್ ಕಂಡುಕೊಂಡ ಸತ್ಯ. ಬದುಕಲು ಇರುವುದು ಒಂದೇ ದಾರಿ ಅದು ಆತ್ಮ ವಿಶ್ವಾಸ. ಸಾಧಿಸಬೇಕು ಅನ್ನುವ ಹುಮ್ಮಸ್ಸು ನಮ್ಮಲ್ಲಿ ಇದ್ದರೆ ಸಾಧನೆ ಅಸಾಧ್ಯವಲ್ಲ ಸರಿಯಾದ ಉದ್ದೇಶದಿಂದ ಮುನ್ನಡೆದರೆ ಗುರಿ ತಲುಪಲು ಸಾಧ್ಯ ಅನ್ನುವ ಪ್ರದೀಪ್ ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಭರವಸೆಯ ಹಾದಿಯಲ್ಲಿ ಸಾಗುತ್ತ ಇದ್ದಾರೆ. ಇವರ ಪ್ರತಿಭೆ ಎಲ್ಲಾ ಕಡೆ ಪಸರಿಸಲಿ. ಇವರು ಜೀವನದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ.
ಕೋಟ ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಶುಭ ಹಾರೈಕೆ.