Categories
ಕ್ರಿಕೆಟ್

ಲಂಕಾ ವಿರುದ್ಧ ರೋಹಿತ್ ಸೆಂಚುರಿ; ಸಚಿನ್, ಸಂಗಕ್ಕಾರ ದಾಖಲೆ ಪುಡಿ ಪುಡಿ!

ಲೀಡ್ಸ್(ಜು.06): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 5ನೇ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ 92 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಶ್ರೀಲಂಕಾದ ಕುಮಾರ  ಸಂಗಕ್ಕಾರ ದಾಖಲೆಯನ್ನು ಪುಡಿ ಮಾಡಿದ್ದಾರೆ.

ಲಂಕಾ ವಿರುದ್ಧದ ಶತಕದೊಂದಿಗೆ ರೋಹಿತ್, ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಈ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆಯನ್ನು ಪುಡಿ ಮಾಡಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಸಂಗಕ್ಕಾರ 4 ಸೆಂಚುರಿ ಸಿಡಿಸಿದ್ದರು. ಇದೀಗ ರೋಹಿತ್ 5 ಶತಕ ಸಿಡಿಸಿ ದಾಖಲೆ ಪುಡಿ ಮಾಡಿದ್ದಾರೆ.

2003 ರ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ  ಸಚಿನ್ ತೆಂಡುಲ್ಕರ್ 586  ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದರು.  ಇದೀಗ ರೋಹಿತ್ ಈ ದಾಖಲೆ ಮುರಿದಿದ್ದಾರೆ. 2019 ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ರೋಹಿತ್ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಒಟ್ಟು 6 ಶತಕ ಸಿಡಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 6 ಶತಕ ಸಿಡಿಸೋ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.

Categories
ಸಂಪಾದಕರ ಮಾತು

ಸಂಪಾದಕರ ಮಾತು

ವಿಶ್ವದ ವಿವಿಧ ಕ್ರೀಡಾಸುದ್ದಿಗಳು ಕ್ಷಿಪ್ರ ಗತಿಯಲ್ಲಿ ಕ್ರೀಡಾಭಿಮಾನಿಗಳನ್ನು ತಲುಪಿಸುವುದು,70 ರ ದಶಕದಿಂದ ಹಿಡಿದು ಪ್ರಸ್ತುತ ಕ್ರೀಡಾಪಟುಗಳ,ಪರಿಚಯ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವಿಕೆ.

ತೆರೆಮರೆಯಲ್ಲಿರುವ ಕ್ರೀಡಾಪಟುಗಳ ಪ್ರತಿಭೆ ಅನಾವರಣ,ಜೊತೆಯಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ನಡೆದು ಬಂದ ದಾರಿ ಹಾಗೂ ದಿಗ್ಗಜ ಆಟಗಾರರ ಸಂಪೂರ್ಣ ಮಾಹಿತಿ ಜೊತೆಯಾಗಿ ತೆರೆಮರೆಯ ಪ್ರತಿಭೆಗಳನ್ನು ಮುಖ್ಯ ವೇದಿಕೆ ತರುವ ನನ್ನ ಕನಸಿನ ಕೂಸು “ಸ್ಪೋರ್ಟ್ಸ್ ಕನ್ನಡ”…

ಕೋಟ ರಾಮಕೃಷ್ಣ ಆಚಾರ್ಯ
(ಆರ್.ಕೆ)

Categories
ಕ್ರಿಕೆಟ್ ಯಶೋಗಾಥೆ

ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಸಚಿನ್ “ಮಹಾದೇವ”

“DON’T CELEBRATE UNTIL U WIN”

ಇಂಗ್ಲೀಷ್ ನ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು,ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ರೋಚಕ ಪಂದ್ಯವೊಂದು ಸಮರ್ಥಿಸಿ ತೋರಿಸಿತ್ತು.

ಹೌದು ಆತ್ಮೀಯ ಕ್ರಿಕೆಟ್ ಪ್ರೇಮಿಗಳೇ,ಕ್ರಿಕೆಟ್ ಕೇವಲ ಮೂರ್ಖರ ಆಟವಷ್ಟೇ ಎಂದು ತಿಳಿದವರು ಸ್ವಯಂ ಮೂರ್ಖರು ಎನ್ನೋ ವಾದ ನನ್ನದು. ಶಿಸ್ತುಸಂಯಮ,ಸಂಯೋಜನೆ,ಹೋರಾಟ,ಸೋಲು ಗೆಲುವಿನ ಸಮಭಾವದ ಸ್ವೀಕೃತಿ ಕ್ರಿಕೆಟ್ ನಿಂದ ನಾವು  ಜೀವನದಲ್ಲಿ  ಅಳವಡಿಸಿಕೊಳ್ಳಬೇಕಾದ ಮಹತ್ತರ ಅಂಶಗಳು.

2013 ರ ಮಾರ್ಚ್ ನ ಸಮಯ.ಮಹಾಶಿವರಾತ್ರಿಯಂದು ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2 ಲಕ್ಷ ಮೊತ್ತದ ಅದ್ಧೂರಿ Y.P.L(ಯಲಹಂಕ ಪ್ರಿಮಿಯರ್ ಲೀಗ್)ಐತಿಹಾಸಿಕ ಟೂರ್ನಿಯು,ರಾಜ್ಯ ಟೆನ್ನಿಸ್ ವಲಯವನ್ನು ನಿಬ್ಬೆರಗಾಗಿಸಿತ್ತು ಫೈನಲ್ ಪಂದ್ಯಾಟ.ಉಡುಪಿ,ದ.ಕ ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆಯಿಂದ ಬಲಿಷ್ಟ ತಂಡಗಳು  ಬಾಗವಹಿಸಿದ್ದ ಈ ಟೂರ್ನಿಯಲ್ಲಿ ಅಂತಿಮವಾಗಿ ಬೆಂಗಳೂರಿನ ಯುವಕರ ಪಡೆ “ಎಸ್ ಝಡ್‌‌.ಸಿ.ಸಿ” ತಂಡ, ಟೆನ್ನಿಸ್ ಕ್ರಿಕೆಟ್ ನ (ಹಿರಿಯಣ್ಣ),ಸರಿ ಸುಮಾರು 5 ದಶಕಕ್ಕೂ ಮಿಗಿಲಾದ ಸುವರ್ಣ ಇತಿಹಾಸ ಬರೆದ “ಜೈ ಕರ್ನಾಟಕ ಬೆಂಗಳೂರು” ತಂಡವನ್ನು ಎದುರಿಸಲು ಸಜ್ಜಾಗಿದ್ದವು. ಜೈ ಕರ್ನಾಟಕ ಈ ಪಂದ್ಯಾಟದಲ್ಲಿ ನಿವೃತ್ತಿಯ ಹೊಸ್ತಿಲಲ್ಲಿದ್ದ ದಂತಕಥೆಗಳಾದ(ಸಾಂಬಾಜಿ,ಮನೋಹರ್,ಭಗವಾನ್,ನಾಗೇಶ್ ಸಿಂಗ್,ಮಹೇಶ್ (ಮ್ಯಾಕ್))ಹಿರಿಯ ಆಟಗಾರರನ್ನೇ ಕಣಕ್ಕಿಳಿಸಿತ್ತು‌.ಈ ಪಂದ್ಯಾಟದಲ್ಲಿ ಅದ್ಭುತ ಸವ್ಯಸಾಚಿ ಆಟಗಾರರಾದ ಜಾನ್,ಪ್ರದೀಪ್ ಗೌಡ ಹಾಗೂ ಕೀಪರ್ ಆಗಿ “ಕ್ರಿಕ್ ಸೇ ಗಿರೀಶ್ ರಾವ್, ಸಚಿನ್ ಮಹಾದೇವ್ ಯುವ ಆಟಗಾರರಾಗಿ ಪ್ರತಿನಿಧಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜೈ ಕರ್ನಾಟಕ 5 ಓವರ್ ನಲ್ಲಿ 18 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಶೋಚನೀಯ ಹಂತ ತಲುಪಿದಾಗ ,ನಂಬುಗೆಯ ಆಲ್ ರೌಂಡರ್ ಜಾನ್ ಹಾಗೂ ಸಚಿನ್ ಮಹಾದೇವ್ ರ ಬಿರುಸಿನ ಅಜೇಯ 30 ರನ್ನಿನ ಭಾಗೇದಾರೀಕೆಯ ಆಟ ಎದುರಾಳಿಗೆ 8 ಓವರ್ ಗೆ 49 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ನಿಗದಿಗೊಳಿಸಿತ್ತು. ಬೆಂಬತ್ತಿದ “ಎಸ್.ಝಡ್.ಸಿ.ಸಿ” ಆಲ್ ರೌಂಡರ್ ಫಾರ್ಮ್ ನ ಉಚ್ಛ್ರಾಯ ಹಂತದಲ್ಲಿದ್ದ ಸ್ವಸ್ತಿಕ್ ನಾಗರಾಜ್ ರವರ ಅಮೂಲ್ಯ ಆಟದ ನೆರವಿನಿಂದ ಕೊನೆಯ 2 ಓವರ್ ಗಳಲ್ಲಿ ಕೇವಲ 4 ರನ್ ಗಳಷ್ಟೇ ಗಳಿಸಬೇಕಾದ ಹಂತಕ್ಕೆ ತಲುಪಿಸಿ ಔಟಾಗಿದ್ದರು.ಬಹುತೇಕ ವಿಜಯದ ಹೊಸ್ತಿಲಲ್ಲಿದ್ದ ಎಸ್‌.ಝಡ್.ಸಿ.ಸಿ
ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮೂಡಿತ್ತು.ಮೈದಾನದ ಒಳ,ಹೊರಗೆ ಸಿಡಿಮದ್ದುಗಳ ಪ್ರದರ್ಶನ,ಬೆಂಬಲಿಗರು,ನೆರೆದಿದ್ದ ಪ್ರೇಕ್ಷಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
7 ನೇ ಓವರ್  ಅರುಣ್ ಎಸೆತಗಾರಿಕೆಯಲ್ಲಿ 3 ರನ್ ಹರಿದು ಬಂತು.ಕೊನೆಯ ಓವರ್ ನ ಜವಾಬ್ದಾರಿ ಯುವ ಸವ್ಯಸಾಚಿ “ಸಚಿನ್ ಮಹಾದೇವ್” ಹೆಗಲ ಮೇಲಾಯಿತು.ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ಮೇಡನ್ ಓವರ್ ಎಸೆದು 3 ವಿಕೆಟ್ ಉರುಳಿಸಿ,ನೆರೆದಿದ್ದ ಪ್ರೇಕ್ಷಕರನ್ನು ಮೂಕ  ವಿಸ್ಮಿತರನ್ನಾಗಿಸಿದ್ದರು.”ಜೈ ಕರ್ನಾಟಕ ಬೆಂಗಳೂರು” ಟ್ರೋಫಿ ಜಯಿಸಿತ್ತು. ಫೈನಲ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ಸಚಿನ್ ಪಡೆದಿದ್ದರು. ಈ ಪಂದ್ಯಾಟದ ಯಶಸ್ಸು ಸಚಿನ್ ರನ್ನು ರಾಜ್ಯಾದ್ಯಂತ ಪ್ರಸಿದ್ಧಿಗೊಳಿಸಿತ್ತು.
Categories
ಕ್ರಿಕೆಟ್ ಯಶೋಗಾಥೆ

ಕನಸುಗಳ ಬೆನ್ನಟ್ಟಿ ಗೆದ್ದ ನಂತರವಷ್ಟೇ ನಿಂತ ಕ್ರೀಡಾಳು ಈತ…

ಅವನೊಬ್ಬನಿದ್ದ ಕ್ರೊಯೇಷಿಯನ್ ಆಟಗಾರ.ಹೆಸರು ಗೊರಾನ್ ಇವಾನಿಸವಿಚ್.ಸರಿಸುಮಾರು ಆರುವರೆ ಅಡಿಯ ಸ್ಪುರದ್ರೂಪಿ ಕ್ರೀಡಾಳು.ತನ್ನ ಹದಿನೇಳನೆಯ ವಯಸ್ಸಿನಲ್ಲಿ ಟೆನ್ನಿಸ್ ಲೋಕಕ್ಕೆ ವೃತ್ತಿಪರನಾಗಿ ಕಾಲಿಟ್ಟಿದ್ದ.ಮೊದಮೊದಲ ವರ್ಷಗಳಲ್ಲಿ ಸೋಲುಗಳನ್ನು ಕಂಡವನು,ಅತಿ ವೇಗವಾಗಿ ಆಟದಲ್ಲಿ ಸುಧಾರಣೆಗಳನ್ನು ತಂದುಕೊಂಡ.ಹಾಗೆ ಸುಧಾರಿಸಿಕೊಂಡು ವೃತ್ತಿ ಜೀವನದ ನಾಲ್ಕನೇ ವರ್ಷದ ವೇಳೆಗೆ ತನ್ನ ಬದುಕಿನ ಮೊದಲ ವಿಂಬಲ್ಡನದ ಫೈನಲ್ಲಿಗೇರಿದ.

ನಿಮಗೆ ಗೊತ್ತಿರಲಿ.ಟೆನ್ನಿಸ್ ರಂಗದಲ್ಲಿ ವಿಂಬಲ್ಡನ್‌ಗೆ ತನ್ನದೇ ಆದ ಮೌಲ್ಯವಿದೆ.ಉಳಿದ ಅದೆಷ್ಟೇ ಗ್ರಾಂಡ್ಸ್ಲಾಮ್‌ಗಳನ್ನು ಗೆದ್ದರೂ ಟೆನ್ನಿಸ್ ಕಾಶಿಯೆನ್ನಿಸಿಕೊಂಡಿರುವ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲದಿದ್ದರೆ ಆಟಗಾರ ಶ್ರೇಷ್ಟನೆಂದು ಪರಿಗಣಿತನಾಗಲಾರ. ಸಾಲುಸಾಲು ಪ್ರಶಸ್ತಿಗಳನ್ನು ಗೆದ್ದನಂತರವೂ ವಿಂಬಲ್ಡನ್ ಗೆದ್ದ ನಂತರವಷ್ಟೇ ರಾಫೆಲ್ ನಡಾಲ್‌ನನ್ನು ವಿಶ್ವ ಟೆನ್ನಿಸ್ ದಿಗ್ಗಜನೆಂದು ಗುರುತಿಸಿತ್ತು ಎನ್ನುವುದು ಅದಕ್ಕೊಂದು ಉದಾಹರಣೆ .ಹಾಗಿರುವ ವಿಂಬಲ್ಡನ್ ಟೆನ್ನಿಸ್‌ನ ಫೈನಲ್ ಪ್ರವೇಶಿಸಿದ್ದ ಗೊರಾನ್‌ಗೆ ಮೊದಲ ಬಾರಿ ಅನುಭವ ಕೊರತೆಯಿತ್ತು. ಎದುರಾಳಿಯಾಗಿದ್ದ ಅಗಾಸ್ಸಿಗೂ ಅದು ಮೊದಲ ವಿಂಬಲ್ಡನ್ ಫೈನಲ್ ಅನುಭವವೇ.ಆದರೆ ಅದಕ್ಕೂ ಮುನ್ನ ಮೂರು ಬಾರಿ ಪ್ರತಿಷ್ಟಿತ ಗ್ರಾಂಡ್‌ಸ್ಲಾಮ್ ಫೈನಲ್ ತಲುಪಿದ ಅನುಭವ ಅಗಾಸ್ಸಿಗಿತ್ತು.ಅಷ್ಟಾಗಿಯೂ ಇಬ್ಬರ ನಡುವಣ ಫೈನಲ್ ಪೂರ್ತಿ ಐದು ಸೆಟ್‌ಗಳವರೆಗೆ ನಡೆದಿತ್ತು.ಕೊನೆಗೆ ರೋಚಕ ಫೈನಲ್ಲಿನಲ್ಲಿ ಅಗಾಸ್ಸಿ ಗೆಲುವಿನ ನಗೆ ಬೀರಿದ್ದ.

ಗೆದ್ದ ಅಗಾಸಿಗೆ ಗೆಲುವಿನ ಸಂಭ್ರಮವಾದರೆ ಸೋತ ಗೊರಾನ್‌ಗೆ ನಿರಾಸೆ.ಆದರೆ ಗೋರಾನ್ ಸ್ಪೂರ್ತಿಯುತವಾಗಿಯೇ ಸೋಲನ್ನು ಸ್ವೀಕರಿಸಿದ್ದ.1992ರಲ್ಲಿ ಸೋತವನು ಪುನ: 1994ರಲ್ಲಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಗೋರಾನ್.ಈ ಬಾರಿ ಎದುರಿಗಿದ್ದವನು ದೈತ್ಯ ಪ್ರತಿಭೆ ಅಮೇರಿಕಾದ ಪೀಟ್ ಸಾಂಪ್ರಾಸ್.ಅದಾಗಲೇ ಪೀಟ್‌ಗೆ ಒಂದು ವಿಂಬಲ್ಡನ್ ಸೇರಿದಂತೆ ನಾಲ್ಕು ಗ್ರಾಂಡ್‌ಸ್ಲಾಮ್ ಗೆದ್ದ ಅನುಭವವಿತ್ತು.ಸಹಜವಾಗಿಯೇ ಪೀಟ್ ಆ ಬಾರಿಯ ಗೆಲುವಿಗೆ ನೆಚ್ಚಿನ ಆಟಗಾರನಾಗಿದ್ದ.ಸುಲಭವಾಗಿ ಸಾಂಪ್ರಾಸ್ ಗೆದ್ದು ಬಿಡುತ್ತಾನೆನ್ನುವುದು ಎಲ್ಲರ ಎಣಿಕೆಯಾಗಿತ್ತು.ನಿರೀಕ್ಷೆಯಂತೆ ಪೀಟ್ ಗೆದ್ದು ಬೀಗಿದ್ದ.ತೀವ್ರ ಹೋರಾಟ ನೀಡಿದ್ದ ಗೋರಾನ್‌ಗೆ ಮತ್ತೆ ಸೋಲಿನ ಆಘಾತ.ಮುಂದೆ ನಾಲ್ಕು ವರ್ಷಗಳ ಕಾಲ ಹೇಳಿಕೊಳ್ಳುವಂತಹ ಗೆಲುವು ಗೋರಾನ್‌ಗಿರಲಿಲ್ಲ.ಆದರೆ ಸತತ ಪ್ರಯತ್ನದಿಂದ 1998ರಲ್ಲಿ ಮತ್ತೊಮ್ಮೆ ಆತ ವಿಂಬಲ್ಡನ್ ಫೈನಲ್ ತಲುಪಿಕೊಂಡ.ಎದುರಿಗಿದ್ದವನು ಮತ್ತದೇ ಪೀಟ್ ಸಾಂಪ್ರಾಸ್. ಅಷ್ಟೊತ್ತಿಗಾಗಲೇ ಸಾಂಪ್ರಾಸ್ ,ಟೆನ್ನಿಸ್ ಲೋಕದ ದಂತಕತೆಯಾಗಿದ್ದವನು,ನಾಲ್ಕು ವಿಂಬಲ್ಡನ್ ಸೇರಿದಂತೆ ಒಟ್ಟು ಹತ್ತು ಗ್ರಾಂಡ್‌ಸ್ಲಾಮ್ ಗೆದ್ದು ಅಗ್ರಸ್ಥಾನಿಯಾಗಿದ್ದವನು.ಈ ಬಾರಿ ಇವಾನೆಸವಿಚ್ ಅವನಿಗೊಬ್ಬ ಶಕ್ತ ಎದುರಾಳಿಯೂ ಅಲ್ಲ ಎನ್ನುವುದು ಎಲ್ಲರ ಎಣಿಕೆಯಾಗಿತ್ತು.ಎಲ್ಲರ ಎಣಿಕೆ ಸುಳ್ಳಾಗುವಂತೆ ಆಡಿದವನು ಗೋರಾನ್.ಐದು ಸೆಟ್ಟುಗಳಲ್ಲಿ ಸಾಂಪ್ರಾಸ್ಸ‌ನಿಗೆ ಅಕ್ಷರಶ: ಬೆವರಿಳಿಸಿಬಿಟ್ಟಿದ್ದ ಗೋರಾನ್.ಇನ್ನೇನು ಗೆಲ್ಲುತ್ತಾನೇನೋ ಎನ್ನುವ ಹಂತದಲ್ಲಿ ಅನಗತ್ಯ ತಪ್ಪುಗಳನ್ನೆಸಗಿ ಸೋತು ಹೋಗಿದ್ದ.

ಮೂರು ಮೂರು ಫೈನಲ್ ಸೋಲುಗಳ ನಂತರ ಅಧೀರನಾಗಿದ್ದ ಗೋರಾನ್.ಗೆಲುವು ತುಂಬ ಸಮೀಪ ಬಂದು ಮೋಸ ಮಾಡಿತ್ತು. ನಿರಾಶನಾಗಿದ್ದ ಗೋರಾನ್,ದೇಹ ಪ್ರಕೃತಿ ಹದಗೆಟ್ಟಿತ್ತು.ಪದೇ ಪದೇ ಗಾಯದ ಸಮಸ್ಯೆಯಿಂದ ಆತ ಬಳಲಾರಂಭಿಸಿದ್ದ.ಅನೇಕ ಟೂರ್ನಿಗಳಲ್ಲಿ ಗೈರು ಹಾಜರಾದ ಅವನ ರ‌್ಯಾಂಕಿಂಗ್ ಸಹಜವಾಗಿಯೇ  ಪಾತಾಳಕ್ಕಿಳಿದಿತ್ತು.ತೀರ 125ನೇ ರ‌್ಯಾಂಕಿಗಿಳಿದು ಹೋದ ಅವನೆಡೆಗೆ ಅಭಿಮಾನಿಗಳಿಗೊಂದು ವಿಷಾದವಿತ್ತು.ಆವತ್ತಿನ ಕ್ರೀಡಾಭಿಮಾನಿಗಳ ಪ್ರಕಾರ ಅವನ ಕ್ರೀಡಾ ಜೀವನ ಮುಗಿದು ಹೋಗಿತ್ತು.

ಇಲ್ಲ, ಮುಗಿದಿಲ್ಲ ಎನ್ನುತ್ತ ಮತ್ತೆ ಎದ್ದು ನಿಂತಿದ್ದ ಗೋರಾನ್ 2001ರಲ್ಲಿ.ಆ ವರ್ಷ ವಿಂಬಲ್ಡನ್ ಮಂಡಳಿ ಆತನಿಗೆ ಆತನ ಹಿಂದಿನ ಪ್ರದರ್ಶನವನ್ನು ಪರಿಗಣಿಸಿ ವೈಲ್ಡ್ ಕಾರ್ಡ್ ಪ್ರವೇಶ ನೀಡಿತ್ತು. ತನಗಿದು ಕೊನೆಯ ಅವಕಾಶವೆಂದರಿತ ಗೋರಾನ್, ರಣಗಂಭೀರವಾಗಿ ಸೆಣದಾಡಿದ್ದ.ಎಲ್ಲರ ನಿರೀಕ್ಷೆ ಮೀರಿ ಆತ ಮಗದೊಮ್ಮೆ ಫೈನಲ್ ತಲುಪಿಕೊಂಡಿದ್ದ.ಈ ಬಾರಿ ಅವನ ಎದುರಾಳಿ ಆವತ್ತಿನ ಅಗ್ರಸ್ಥಾನಿ ಪ್ಯಾಟ್ರಿಕ್ ರಾಪ್ಟರ್.ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮದಗಜಗಳಂತೆ ಸೆಣಸಿದ್ದರು ಇಬ್ಬರು.ಮೊದಲ ಮತ್ತು ಮೂರನೇ ಸೆಟ್ ಗೋರಾನ್ ಗೆದ್ದರೆ ಎರಡನೇ ಮತ್ತು ನಾಲ್ಕನೇ ಸೆಟ್ ರಾಪ್ಟರ್ ಗೆದ್ದಿದ್ದ.ನಿರ್ಣಾಯಕ ಸೆಟ್ ಅಕ್ಷರಶ: ಯುದ್ಧವೇ.ಇನ್ನೇನು ಕೊನೆಯ ಕ್ಷಣಗಳಲ್ಲಿ ಗೊರಾನ್ ಗೆಲ್ಲುತ್ತಾನೇನೋ ಎನ್ನಿಸುವಷ್ಟರಲ್ಲಿ ಮತ್ತೊಮ್ಮೆ ಅನಗತ್ಯ ತಪ್ಪುಗಳನ್ನು ಮಾಡಿಬಿಟ್ಟಿದ್ದ ಗೋರಾನ್.ಬಹುಶ: ಆ ಹೊತ್ತಿಗೆ ಗತಕಾಲದ ಸೋಲುಗಳ ನೆನಪು ಅವನ ಏಕಾಗ್ರತೆಯನ್ನು ತಾತ್ಕಾಲಿಕವಾಗಿ ಭಂಗಗೊಳಿಸಿತ್ತು.ಥತ್..!! ಮತ್ತೆ ಸೋತ ಎಂದುಕೊಂಡರು ಜನ.ಊಹುಂ.. ಬಾರಿ ಬಾಗಲಿಲ್ಲ ಅವನು.ಕೊನೆಯ ಹಂತಕ್ಕೆ ರ‌್ಯಾಪ್ಟರ್‌ನನ್ನು ಬಗ್ಗು ಬಡಿದು ಚೊಚ್ಚಲ ಗ್ರಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡುಬಿಟ್ಟ ಏಸ್‌ಗಳ ರಾಜನೆಂದು ಬಿರುದಾಂಕಿತನಾಗಿದ್ದ ಗೋರಾನ್ ಇವಾನೆಸವಿಚ್.

ಸೋಲುಗಳ ಮೇಲೆ ಸೋಲು,ಗಾಯದ ಸಮಸ್ಯೆ ಎಲ್ಲವನ್ನೂ ಮೆಟ್ಟಿನಿಂತು ತನ್ನ ವೃತ್ತಿ ಬದುಕಿನ ಸಂಜೆಯಲ್ಲಿ ಗ್ರಾಂಡ್‌ಸ್ಲಾಮ್ ಗೆದ್ದ ಗೋರಾನ್‌ನ ಕತೆ ಇಂದಿಗೂ ಅನೇಕರಿಗೆ ದಾರಿದೀಪ. ತನ್ನ ಹದಿನೇಳನೆಯ ವಯಸ್ಸಲ್ಲಿ ಕರಿಯರ್ ಆರಂಭಿಸಿದ ಗೋರಾನ್, ಪ್ರತಿಷ್ಟಿತ ಪ್ರಶಸ್ತಿ ಗೆದ್ದಿದ್ದು ತನ್ನ ಮೂವತ್ತೊಂದನೇ ವಯಸ್ಸಿನಲ್ಲಿ. ಸರಿಸುಮಾರು ಒಂದೂವರೆ ದಶಕಗಳ ಕಾಲದ ನಂತರ ಕನಸನ್ನು ನನಸಾಗಿಸಿಕೊಂಡ ಗೋರಾನ್‌ನ ಕತೆ ಯಾವತ್ತಿಗೂ ಸ್ಪೂರ್ತಿದಾಯಕವೇ. ಕನಸುಗಳ ಬೆನ್ನಟ್ಟಿ ಹೋದರೆ ಗೆಲ್ಲುವವರೆಗೂ ನಿಲ್ಲಬಾರದು ಎನ್ನುವುದಕ್ಕೆ ಇವಾನೆಸವಿಚ್ ಒಂದು ಉದಾಹರಣೆ.ಕ್ರೀಡಾ ಜಗತ್ತೇ ಹಾಗೆ.ಇಲ್ಲಿ ಸೋಲು ಗೆಲವುಗಳು ಮಾತ್ರವಲ್ಲ,ಬದುಕಿನ ಗೆಲುವಿಗೂ ಅನೇಕ ಚಂದದ ಪಾಠಗಳಿವೆ.ನೋಡುವುದನ್ನು ನಾವು ಕಲಿಯಬೇಕಷ್ಟೇ.

ಗುರುರಾಜ್ ಕೋಡ್ಕಣಿ 

Categories
ಕ್ರಿಕೆಟ್ ರಾಜ್ಯ

ಕೆ.ಎಸ್.ಸಿ.ಎ 3 ನೇ ಡಿವಿಜನ್ : ಆಕರ್ಷಕ ಶತಕ ಸಿಡಿಸಿದ ನಿತಿನ್.ಜಿ.ಮೂಲ್ಕಿ

ಬೆಂಗಳೂರಿನ ರೇವೋ ಯೂನಿವರ್ಸಿಟಿ ಅಂಗಣದಲ್ಲಿ ” ನಸ್ಸೂರ್ ಸ್ಮಾರಕ‌ ಟ್ರೋಫಿ”ಗಾಗಿ ನಡೆಯುತ್ತಿರುವ  ಕೆ.ಎಸ್.ಸಿ.ಎ 3 ನೇ ಡಿವಿಜನ್ ಪಂದ್ಯಾಕೂಟದಲ್ಲಿ B.E.L ಕಾಲನಿ ರಿಕ್ರಿಯೇಶನ್ ಕ್ಲಬ್ ವಿರುದ್ದ 83 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಬಿರುಸಿನ ಶತಕ 106 ರನ್ ಗಳಿಸುವ ಮೂಲಕ ತಾನಾಡಿದ ತಂಡ ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ತಂಡಕ್ಕೆ 215 ರನ್ ಅಂತರದ ದಾಖಲೆಯ ಗೆಲುವನ್ನು ತಂದಿತ್ತಿದ್ದಾರೆ.

ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಆದರ್ಶ ಕಪ್ತಾನ ಶರತ್ ಶೆಟ್ಟಿ ಪಡುಬಿದ್ರಿ ನೇತೃತ್ವದ ಪ್ರತಿಷ್ಠಿತ ತಂಡ “ಪಡುಬಿದ್ರಿ ಫ್ರೆಂಡ್ಸ್” ತಂಡದ ಮೂಲಕ ತನ್ನ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದ ಇವರು,ಕ್ರಿಕೆಟ್ ಜೀವನದುದ್ದಕ್ಕೂ ರಾಜ್ಯದ ಅತ್ಯಂತ ಶಿಸ್ತುಬದ್ಧ ಆಟಗಾರನಾಗಿ ಗುರುತಿಸಿಕೊಂಡಿದ್ದು ನಿತಿನ್.ಜಿ‌.ಮೂಲ್ಕಿ ಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಟೆನ್ನಿಸ್ ಕ್ರಿಕೆಟ್ ನಿಂದ ಪ್ರಾರಂಭವಾದ ಇವರ ಕೀರ್ತಿ ಅಂತರಾಷ್ಟ್ರೀಯ ಮಟ್ಟದವರೆಗೂ ವ್ಯಾಪಿಸಿದೆ. ಯು.ಎ.ಇ ಯ ಅಂತರಾಷ್ಟ್ರೀಯ ತಂಡದಲ್ಲಿ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಗಮನಾರ್ಹ ನಿರ್ವಹಣೆ ತೋರಿದ್ದರು.

ರಾಜ್ಯದ ಪ್ರತಿಷ್ಠಿತ ಕೆ.ಪಿ.ಎಲ್ ಪಂದ್ಯಾವಳಿಗಳಲ್ಲಿ ಮಂಗಳೂರು ಯುನೈಟೆಡ್,ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಿಜಾಪುರ ಬುಲ್ಸ್ ನ ಪರವಾಗಿ‌ ಆಡಿದ ಅನುಭವ ಹೊಂದಿದ್ದಾರೆ.

M.P.L ನ ಈ ಬಾರಿಯ ಆವೃತ್ತಿಯಲ್ಲಿ ಕಾರ್ಕಳ ಗ್ಲಾಡಿಯೇಟರ್ಸ್ ಪರವಾಗಿ ಆಡಿ ಸರ್ವಾಂಗೀಣ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ “ರೆನಿಗೇಡ್ ಕಮಾಂಡೋ 300 ಸಿ.ಸಿ” ದುಬಾರಿ ದ್ವಿಚಕ್ರ ವಾಹನವನ್ನು ಪಡೆದಿದ್ದು,ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು.

(ಮುಂದಿನ ದಿನಗಳಲ್ಲಿ “ಸ್ಪೋರ್ಟ್ಸ್ ಕನ್ನಡ” ವೆಬ್ ಸೈಟ್ ನಲ್ಲಿ  ನಿತಿನ್.ಜಿ‌.ಮೂಲ್ಕಿ ಯವರ ಕ್ರೀಡಾ ಜೀವನದ ಸಾಧನೆಗಳನ್ನು ಬರೆಯಲಿದ್ದೇನೆ).

ಆರ್.ಕೆ.ಆಚಾರ್ಯ ಕೋಟ

Categories
ಕ್ರಿಕೆಟ್

ಪೇಪರ್ ಮೇಲೆ ಕೊಹ್ಲಿ ಕ್ಯಾಪ್ಟನ್, ಗ್ರೌಂಡ್​ನಲ್ಲಿ ಧೋನಿಯೇ ನಾಯಕ..!

2017ರಲ್ಲಿ ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವ ತ್ಯಜಿಸಿದ ಧೋನಿ, ಇನ್ನೂ ಕೆಲ ಕ್ರಿಕೆಟಿಗರ ಪಾಲಿಗೆ ನಾಯಕನಾಗೇ ಉಳಿದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಧೋನಿ, ಟೀಮ್ ಇಂಡಿಯಾದ ಕ್ರಿಕೆಟಿಂಗ್ ಬ್ರೈನ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಇದನ್ನ ಆಟಗಾರರಷ್ಟೇ ಅಲ್ಲ.. ಸ್ವತಃ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೂ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಐಪಿಎಲ್ ಫ್ರಾಂಸೈಸಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಧೋನಿ ನಾಯಕತ್ವದಲ್ಲಿ ಆಡಿರೋ ಸುರೇಶ್ ರೈನಾ, ತಮ್ಮ ನಾಯಕನನ್ನ ಮನಸಾರೆ ಕೊಂಡಾಡಿದ್ದಾರೆ. ‘ ಪೇಪರ್ ಮೇಲೆ ಧೋನಿ ನಾಯಕನಾಗಿ ಇಲ್ಲದಿರಬಹುದು. ಆದ್ರೆ ಗ್ರೌಂಡ್​ನಲ್ಲಿ ಕೊಹ್ಲಿಗೆ ಧೋನಿಯೇ ನಾಯಕ . ಧೋನಿ ನಾಯಕತ್ವ ತ್ಯಜಿಸಿದ್ದಾರೆ ನಿಜ. ಆದ್ರೆ ವಿಕೆಟ್ ಹಿಂದೆ ನಿಂತು ಬೌಲರ್​ಗಳ ಜೊತೆ ಮಾತನಾಡೋದು, ಫೀಲ್ಡ್​ ಸೆಟ್ ಮಾಡೋದು ಎಲ್ಲವೂ ಧೋನಿಯೇ. ಹೀಗಾಗಿ ಧೋನಿ ನಾಯಕರಿಗೆಲ್ಲಾ ನಾಯಕ ​’ ಅಂತ ಎಡಗೈ ಬ್ಯಾಟ್ಸ್​ಮನ್ ಸುರೇಶ್ ರೈನಾ, ಮಾಜಿ ನಾಯಕ ಎಂ.ಎಸ್.ಧೋನಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಸದ್ಯ ರೈನಾ ನದರ್​ಲೆಂಡ್​​ನಲ್ಲಿ ತಮ್ಮ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.

Categories
ಕ್ರಿಕೆಟ್

ವಿಶ್ವಕಪ್ ಅಸಲಿ ಕದನಕ್ಕೂ ಮೊದಲು ಟೀಂ ಇಂಡಿಯಾ ಪ್ರಾಬ್ಲಮ್​​ ಕ್ಲಿಯರ್..!

ವಿಶ್ವಕಪ್​ ಟೂರ್ನಿಯ ಅಸಲಿ ಆಟ ಶುರುವಾಗುವ ಮೊದಲು ಟೀಂ ಇಂಡಿಯಾಗೆ ಶುಭಸೂಚನೆ ಸಿಕ್ಕಿದೆ.ತಂಡದ ಚಿಂತೆ ಹೆಚ್ಚಿಸಿದ್ದ ಮಿಡ್ಲ್​ ಆರ್ಡರ್​ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ದೊರತಿದೆ. ಹೌದು, ಬಾಂಗ್ಲಾದೇಶದ ವಿರುದ್ಧ ನಿನ್ನೆ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಮಾಜಿ ಕ್ಯಾಪ್ಟನ್ ಧೋನಿ, ಕನ್ನಡಿಗ ಕೆ.ಎಲ್ ರಾಹುಲ್​ ಮಧ್ಯಮ ಕ್ರಮಾಂಕದದಲ್ಲಿ ತಂಡಕ್ಕೆ ಆಸರೆಯಾದ್ರು. ಇಬ್ಬರು ಶತಕ ಸಿಡಿಸುವ ಮೂಲಕ ಮಿಂಚಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ರಾಹುಲ್,ನಿಧಾನವಾಗಿ ರನ್​ಕಲೆಹಾಕುತ್ತಾ ಇನ್ನಿಂಗ್ಸ್ ಬಿಲ್ಡ್ ಮಾಡಿದ್ರು. ಕ್ಲಾಸ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು.99 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗು 12 ಬೌಂಡರಿಗಳ ಮೂಲಕ 108 ರನ್​ ಬಾರಿಸಿದ್ರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಧೋನಿ, ರಾಹುಲ್​​ಗೆ ಉತ್ತಮ ಸಾಥ್ ನೀಡಿದ್ರು.ಆರಂಭದಿಂದಲೇ ಬಾಂಗ್ಲಾ ಬೌಲರ್​ಗಳ ಮೇಲೆ ದಾಳಿಗಿಳಿದ್ರು. ವೇಗದ ಆಟದ ಮೂಲಕ ತಂಡದ ಸ್ಕೋರ್ ಹಿಗ್ಗಿಸಿದ್ರು. ರಾಹುಲ್-ಧೋನಿಜೊತೆಗೂಡಿ 5ನೇ ವಿಕೆಟ್​​ಗೆ 164ರನ್​ಗಳ ಜೊತೆಯಾಟವಾಡಿದ್ರು. ತಮ್ಮಹಳೆಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಧೋನಿ ಆರ್ಭಟಿಸಿದ್ರು. ಕೇವಲ 78 ಎಸೆತಗಳಲ್ಲಿ 8 ಫೋರ್ ಹಾಗು 7 ಸಿಕ್ಸರ್ ನೆರವಿನಿಂದ 113 ರನ್​ ಸಿಡಿಸಿದ್ರು. ಈ ಇಬ್ಬರ ಶತಕದಾಟದಿಂದಾಗಿ ಟೀಂ ಇಂಡಿಯಾ, 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 359 ರನ್​ ದಾಖಲಿಸಲು ಸಾಧ್ಯವಾಯ್ತು. ಅಲ್ಲದೇ 95 ರನ್​ಗಳಿಂದ ಪಂದ್ಯ ಗೆದ್ದುಕೊಂಡಿತು. ಒಟ್ಟಿನಲ್ಲಿ ಟೀಂ ಮ್ಯಾನೇಜ್​ಮೆಂಟ್​ಗೆ ಸಿಕ್ಕಾಪಟ್ಟೆ ತಲೆನೋವಾಗಿದ್ದ ನಂ.4 ಸ್ಲಾಟ್​ನಲ್ಲಿ ರಾಹುಲ್​ ಸಕ್ಸಸ್​ ಕಂಡಿದ್ದಾರೆ. ಇದರೊಂದಿಗೆ ತಾವು ಈ ಸ್ಥಾನ ತುಂಬಲು ಅರ್ಹರು ಎಂಬುದನ್ನು ಪ್ರೂ ಮಾಡಿದ್ದಾರೆ. ಕೆಳಕ್ರಮಾಂಕದಲ್ಲಿ ನಾನು ಫಿನಿಶರ್ ರೋಲ್ ನಿಭಾಯಿಸಲು ನಾನು ರೆಡಿಯಾಗಿದ್ದೇನೆ ಎಂದು ಧೋನಿ ನಿರೂಪಿಸಿದ್ದಾರೆ.

Categories
ಕ್ರಿಕೆಟ್

ಕಾಮೆಂಟರಿ ಬಾಕ್ಸ್​ನಲ್ಲಿ ರೈಟ್​-ಗಂಗೂಲಿ ಸಮಾಗಮ..!

ಒಂದು ಕಾಲದ ಟೀಂ ಇಂಡಿಯಾ ಯಶಸ್ವಿ ಕೋಚ್​ ಜಾನ್​ ರೈಟ್ ಹಾಗು ಕ್ಯಾಪ್ಟನ್ ಸೌರವ್ ಗಂಗೂಲಿ, ಹಲವು ದಿನಗಳ ಬಳಿಕ ಮತ್ತೆ ಒಟ್ಟಾಗಿ ಕಾಣಿಸಿಕೊಂಡ್ರು. ಟೀಂ ಇಂಡಿಯಾ- ಬಾಂಗ್ಲಾದೇಶದ ನಡುವೆ ನಿನ್ನೆ ನಡೆದ ವಿಶ್ವಕಪ್​ ಟೂರ್ನಿಯ ಎರಡನೇ ಅಭ್ಯಾಸ ಪಂದ್ಯದ ವೇಳೆ, ಈ ದಿಗ್ಗಜರ ಸಮಾಗಮವಾಯ್ತು. ಕಾಮೆಂಟೇಟರಿ ಬಾಕ್ಸ್​ನಲ್ಲಿ ಈ ಇಬ್ಬರು ಕೂತು ವೀಕ್ಷಕ ವಿವರಣೆ ನೀಡಿದ್ರು. ಅಲ್ಲದೇ ಟೀಂ ಇಂಡಿಯಾ ಜೊತೆಗಿನ ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು.ನಾನು ಕ್ಯಾಪ್ಟನ್ ಆಗಿದ್ದಾಗ ಕೋಚ್​ ಜಾನ್ ರೈಟ್ ಎಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ರು. ನಾನು ವಿಧೇಯ ವಿದ್ಯಾರ್ಥಿಯಂತೆ ಅವರ ಸೂಚನೆಗಳನ್ನ ಪಾಲಿಸುತ್ತಿದ್ದೆ ಎಂದು ಗಂಗೂಲಿ ಹೇಳಿದ್ರು. 2000ರಿಂದ 2005ರವರೆಗು, ಟೀಂ ಇಂಡಿಯಯಾದ ಕೋಚ್ ಆಗಿ ರೈಟ್ ಕಾರ್ಯನಿರ್ವಹಿಸಿದ್ರು. ಇದೇ ವೇಳೆ ಸೌರವ್ ಗಂಗೂಲಿ ತಂಡದ ನಾಯಕರಾಗಿದ್ರು. ಇವರಿಬ್ಬರ ನೇತೃತ್ವದಲ್ಲಿ ಟೀಂ ಇಂಡಿಯಾ ಹಲವು ಟೂರ್ನಿಗಳನ್ನ ಗೆದ್ದುಕೊಂಡಿತ್ತು. 2003ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್​ವರೆಗೆ ತಲುಪಿತ್ತು.

Categories
ಕ್ರಿಕೆಟ್

ಇಂದು ಕಾರ್ಡಿಫ್​ನಲ್ಲಿ ಏಷ್ಯನ್ ಟೈಗರ್ಸ್​ ಫೈಟ್..!

ಇಂದು ಕಾರ್ಡಿಫ್​ನಲ್ಲಿ ನಡೆಯಲಿರೋ ಎರಡನೇ ಅಭ್ಯಾಸ ಪಂದ್ಯದಲ್ಲಿ, ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಕೊಹ್ಲಿ ಪಡೆ, ಇಂದು ಬಾಂಗ್ಲಾ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಕಿವೀಸ್ ವಿರುದ್ಧ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಂಡು, ವಿಶ್ವಕಪ್ ಅಭಿಯಾನ ಆರಂಭಿಸೋಕೆ ಕೊಹ್ಲಿ ಬಾಯ್ಸ್​ ರೆಡಿಯಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಡಿಪಾರ್ಟ್​ಮೆಂಟ್​ನಲ್ಲಿ ಎದುರಾಗಿರೋ ಸಮಸ್ಯೆಗಳನ್ನ ಬಗೆಹರಿಸಲು, ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್ ಮುಂದಾಗಿದೆ. ಮತ್ತೊಂದೆಡೆ ಪಾಕ್ ವಿರುದ್ಧ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾದ ಕಾರಣ, ಇಂದು ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಬಾಂಗ್ಲಾ ತಂಡಕ್ಕೆ ಅತ್ಯಂತ ಮಹತ್ವದಾಗಿದೆ. ಹೀಗಾಗಿ ಬಲಿಷ್ಠ ಟೀಮ್ ಇಂಡಿಯಾಕ್ಕೆ ಟಫ್ ಫೈಟ್ ನೀಡಲು ಬಾಂಗ್ಲಾ ಟೈಗರ್ಸ್​ ರೆಡಿಯಾಗಿದೆ.