Categories
ಕಾಫಿ ವಿತ್ ಅರ್ ಕೆ ಗ್ರಾಮೀಣ

ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ : ತನುಶ್ರೀ ಪಿತ್ರೋಡಿ

ಉಡುಪಿ : ಕಳೆದ ತಿಂಗಳಿನಲ್ಲಿ ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದ ಏಕಕಾಲದಲ್ಲಿ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಪ್ರೇಕ್ಷಕರ ಈ ಅಸಾಧಾರಣ 10 ರ ಪೋರಿ ತನುಶ್ರೀ ಪಿತ್ರೋಡಿಯ ಪ್ರದರ್ಶನ ನೋಡಿ ಬೆಕ್ಕಸಬೆರಗಾದರು.

ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ ಬಹುಮುಖ ಪ್ರತಿಭೆಯ,ವಿಶ್ವದಾಖಲೆಗಳ ಸರದಾರಿಣಿ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ 15/3/2009 ರಂದು ಸಂಧ್ಯಾ,ಉದಯ್ ಕುಮಾರ್ ದಂಪತಿಗಳಿಗೆ ಮೊದಲ ಮಗಳಾಗಿ ಜನಿಸಿದರು.ಪ್ರಸ್ತುತ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ 3 ವರ್ಷ ಪ್ರಾಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್ ಉಡುಪಿ ಇವರಲ್ಲಿ ನೃತ್ಯ ತರಬೇತಿಯನ್ನು ಆರಂಭಿಸಿ,ಸತತವಾಗಿ ಮುದ್ದು ಕೃಷ್ಣ ಸ್ಪರ್ಧೆ,ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಕಾರ್ಯಕ್ರಮ ನೀಡುವುದರ ಮೂಲಕ ಇದುವರೆಗೆ 342 ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿರುತ್ತಾರೆ.

ನೃತ್ಯ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ ಇವರಿಂದ ಭರತನಾಟ್ಯ ತರಬೇತಿಯನ್ನು, ಯೋಗ ತರಬೇತಿಯನ್ನು ಶ್ರೀ ಹರಿರಾಜ್ ಕಿನ್ನಿಗೋಳಿ ಇವರಿಂದಲೂ,ಹಾಗೂ ಆದಿತ್ಯ ಅಂಬಲಪಾಡಿ ಇವರಿಂದ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿರುವ ತನುಶ್ರೀ ಕಳೆದೆರಡು ವರ್ಷಗಳಿಂದ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಹಾಕಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯ ಮಜಾಟಾಕೀಸ್ ನ ಎರಡು ಸಂಚಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ತಾ 21/6/2018 ರಂದು ಯೋಗ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕದ ಹೆಸರಾಂತ ಚಾನೆಲ್ ಪಬ್ಲಿಕ್ ಟಿ.ವಿಯಲ್ಲಿ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದರು.ತಾ 14/11/2018 ರಂದು ಇಟಲಿಯ ರೋಮ್ ನಗರದಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ
ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಗುರುತಿಸಿಕೊಂಡಿರುವುದು ಶ್ರೇಷ್ಠ ಸಾಧನೆ.

ವಿಶ್ವ ದಾಖಲೆಗಳ ಸವಿವರ :  ತಾ 11-11-2017 ರಂದು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ನಿರಾಲಾಂಭ ಪೂರ್ಣ ಚಕ್ರಾಸನ” ಎಂಬ ಕಠಿಣ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ ರೆಕಾರ್ಡ್ ಪುಟದಲ್ಲಿ ದಾಖಲೆಯ ಮೊದಲ ಅಧ್ಯಾಯ ಬರೆದರು.

ತಾ 7/4/2018 ರಂದು ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ನೇತೃತ್ವದಲ್ಲಿ “Most full body revolution maintaining a chest stand position” ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ದೇಶಕ್ಕೆ ಕೀರ್ತಿ ತಂದಿರುತ್ತಾರೆ.

ತಾ 23/2/2019 ರಂದು “Most no of rolls in one minute in dhanurasana posture”ಯೋಗಾಸನದ ಭಂಗಿಯಲ್ಲಿ 1 ನಿಮಿಷದಲ್ಲಿ 62 ರೋಲ್ ಹಾಗೂ 100 ರೋಲ್ ಗಳನ್ನು ಕೇವಲ 1.40 ನಿಮಿಷದಲ್ಲಿ ಉರುಳಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಏಕಕಾಲದಲ್ಲಿ 2 ವಿಶ್ವದಾಖಲೆ ಸ್ಥಾಪಿಸಿ ಒಂದಿನಿತೂ ಸುಸ್ತಾದಂತೆ ಕಾಣದ ತನುಶ್ರೀ ಈ ದಾಖಲೆಯನ್ನು ಪುಲ್ವಾಮದಲ್ಲಿ ಮಡಿದ ಸೈನಿಕರಿಗೆ ಸಮರ್ಪಿಸಿರುತ್ತಾರೆ.

ಈ ಎಲ್ಲಾ ಸಾಧನೆಯ ಹಿಂದೆ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಮೂರು ದಶಕಗಳ ಅತಿ,ಶಿಸ್ತು ಮಾದರಿಯ ಇತಿಹಾಸವನ್ನು ಬರೆದ ” ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ)” ನ ಸಹಕಾರವನ್ನು ತನುಶ್ರೀ ಹಾಗೂ ಪೋಷಕರು ಸದಾ ಸ್ಮರಿಸುತ್ತಾರೆ‌. ತಂದೆ ಉದಯ್ ಕುಮಾರ್ ವೆಂಕಟರಮಣ ಸಂಸ್ಥೆಯ ಸಕ್ರಿಯ ಸದಸ್ಯರಾಗಿರುತ್ತಾರೆ.

ಇತ್ತೀಚೆಗಷ್ಟೇ ಚಲನಚಿತ್ರಗಳಲ್ಲಿ ಅವಕಾಶವು ಗಿಟ್ಟಿಸಿಕೊಂಡಿದ್ದು,ಅನೇಕರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ತನುಶ್ರೀ ಪಿತ್ರೋಡಿಯ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎಂದು “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ಪರವಾಗಿ ಆಶಿಸುತ್ತೇವೆ.

– ಆರ್.ಕೆ.ಆಚಾರ್ಯ ಕೋಟ

Categories
Action Replay ಕ್ರಿಕೆಟ್ ತಾಲೂಕ

ಕುಂದಾಪುರ : ಫ್ರೆಂಡ್ಸ್ ಬೆಂಗಳೂರು ಹಿರಿಯರ ಸಾಹಸಕ್ಕೆ ಒಲಿದ ಸ್ಪೋರ್ಟ್ಸ್ ಕನ್ನಡ ಟ್ರೋಫಿ

ಕುಂದಾಪುರ : ಹಲವು ದಶಕಗಳ ಬಳಿಕ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಪಂದ್ಯಾಕೂಟವೊಂದು ದಾಖಲಾಯಿತು. ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ಟೆನ್ನಿಸ್ ಕ್ರಿಕೆಟನ್ನು ಇನ್ನಿಲ್ಲದಂತೆ ಆಳಿ ಮೆರೆದ ದಂತಕಥೆಗಳ ನಡುವೆ ಹಣಾಹಣಿ ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿಮೈದಾನದಲ್ಲಿ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಹಿರಿಯ ತಂಡಗಳಾದ ಮನೋಹರ್ ನೇತೃತ್ವದ ಜೈ ಕರ್ನಾಟಕ,ರೇಣು ಗೌಡ ನೇತೃತ್ವದ ಫ್ರೆಂಡ್ಸ್ ಬೆಂಗಳೂರು,ಶ್ರೀಪಾದ ಉಪಾಧ್ಯ ಸಾರಥ್ಯದ ಚಕ್ರವರ್ತಿ ಕುಂದಾಪುರ ಹಾಗೂ ಸಫ್ದರ್ ಆಲಿ ನೇತೃತ್ವದ ಉಡುಪಿ ಕ್ರಿಕೆಟರ್ಸ್ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಫ್ರೆಂಡ್ಸ್ ತಂಡ ಚಕ್ರವರ್ತಿ ತಂಡವನ್ನು, ಉಡುಪಿ ಕ್ರಿಕೆಟರ್ಸ್ ಜೈ ಕರ್ನಾಟಕ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಫ್ರೆಂಡ್ಸ್ ತಂಡ ಎದುರಾಳಿ ಉಡುಪಿ ತಂಡವನ್ನು 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳಿಗೆ ನಿಯಂತ್ರಿಸಿತು‌.

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಫ್ರೆಂಡ್ಸ್ ನ ಆರಂಭಿಕ ಹಿರಿಯ ಆಟಗಾರ ಶ್ರೀಕಾಂತ್ ಅಮೂಲ್ಯ 15 ರನ್ ಹಾಗೂ ಗಂಗಾ, ನಿತಿನ್ ಮೂಲ್ಕಿ ಎಸೆತದಲ್ಲಿ ಸಿಡಿದ ಭರ್ಜರಿ 3 ಸಿಕ್ಸರ್ ಸಹಿತ 7 ಎಸೆತಗಳಲ್ಲಿ 21 ರನ್ ಸಿಡಿಸಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದರು.

“ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ವರ್ಣರಂಜಿತ ಉದ್ಘಾಟನಾ ಸಮಾರಂಭದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಂಗಾ,ಬೆಸ್ಟ್ ಬೌಲರ್ ನಿತಿನ್ ಮೂಲ್ಕಿ,ಬೆಸ್ಟ್ ಕೀಪರ್ ಕೆ.ಪಿ.ಸತೀಶ್ ,ಬೆಸ್ಟ್ ಕ್ಯಾಚ್ ಪ್ರೇಮೇಂದ್ರ ಶೆಟ್ಟಿ ,ಬೆಸ್ಟ್ ಬ್ಯಾಟ್ಸ್‌ಮನ್‌ ಫ್ರೆಂಡ್ಸ್ ನ ಶ್ರೀಕಾಂತ್ ಪಡೆದುಕೊಂಡರು.ಹಿರಿಯ ಕ್ರಿಕೆಟಿಗರನ್ನು ಹುರಿದುಂಬಿಸಲು ರಾಜ್ಯದ ಯುವ ಕ್ರಿಕೆಟಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಹಿರಿಯ ಕ್ರಿಕೆಟಿಗರನ್ನು ಅತಿಥಿಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬೆಳಗ್ಗಿನ ಪಂದ್ಯಾಕೂಟಕ್ಕಾಗಿ ಕರ್ನಾಟಕ ರಾಜ್ಯದ ಹಿರಿಯ ತಂಡಗಳಾದ ಬೆಂಗಳೂರಿನ ಜೈ ಕರ್ನಾಟಕದ ದಂತಕಥೆಗಳಾದ ಮನೋಹರ್, ಮ್ಯಾಜಿಕಲ್ ಸ್ಪಿನ್ನರ್ ಮೆರ್ವಿನ್,ನಂಬುಗೆಯ ದಾಂಡಿಗ ಕೀಪರ್ ನಾಗಿ,ಬಾಬು,ನಾಗೇಶ್ ಸಿಂಗ್,ಭಗವಾನ್ ಸಿಂಗ್,ಜಾನ್ಸನ್ ಶ್ರೀಧರ್,ಸಾಂಬಾಜಿ ಪ್ರತಿನಿಧಿಸಿದರೆ,
ಫ್ರೆಂಡ್ಸ್ ನ ರೇಣು ಗೌಡ, ಶ್ರೀಕಾಂತ್, ಸುನಿಲ್ ಬಿರಾದರ್,ಚಂದಿ,ಸೀನ,ಗಂಗಾ ಆಡಿದ್ದರೆ, ಉಡುಪಿ ಕ್ರಿಕೆಟರ್ಸ್ ನಿಂದ ನಾಯಕ ಸಪ್ಧರ್ ಆಲಿ,ನಿತಿನ್ ಮೂಲ್ಕಿ,ವಿನ್ಸೆಂಟ್, ಪ್ರವೀಣ್ ಪಿತ್ರೋಡಿ, ವಿಲ್ಫ್ರೆಡ್,ವಿಶ್ವನಾಥ್ ಹಾಗೂ ಚಕ್ರವರ್ತಿ ಕುಂದಾಪುರ ತಂಡ ನಾಯಕ ಶ್ರೀಪಾದ ಉಪಾಧ್ಯಾಯ ರ ಅನುಪಸ್ಥಿತಿಯಲ್ಲಿ ಸತೀಶ್ ಕೋಟ್ಯಾನ್ ರ ನಾಯಕತ್ವದಲ್ಲಿ ಮನೋಜ್ ನಾಯರ್,ಪ್ರದೀಪ್ ವಾಜ್,ಕೆ.ಪಿ.ಸತೀಶ್, ರಂಜಿತ್ ಶೆಟ್ಟಿ, ರಾಜಾ ಇನ್ನಿತರ ಹಿರಿಯ ದಂತಕಥೆಗಳು ದಶಕಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದರು.

ಬೆಳಗ್ಗಿನ ಪಂದ್ಯಾಕೂಟ ಹಾಗೂ ಸಂಜೆಯ ವೆಬ್ಸೈಟ್ ಲೋಕಾರ್ಪಣಾ ಕಾರ್ಯಕ್ರಮದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.SPORTS ವಿಶ್ವದಾದ್ಯಂತ ಪ್ರಸಾರ ಮಾಡಿದ್ದು,ಸಹಸ್ರಾರು ಮಂದಿ ವೀಕ್ಷಕರು ಅಪರೂಪದ ಸಮ್ಮಿಲನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

                                                                                                                                         – ಆರ್.ಕೆ‌.ಆಚಾರ್ಯ ಕೋಟ

Categories
ಕ್ರಿಕೆಟ್

ಐಸಿಸಿ ವಿಶ್ವಕಪ್ ಕ್ರಿಕೆಟ್ ಭಾರತಕ್ಕೆ ವಿರೋಚಿತ ಸೋಲು!

2 ನೇ ಭಾರಿಗೆ ಫೈನಲ್ ಗೆ ಏರಿದ ನ್ಯೂಜಿಲ್ಯಾಂಡ್. ಮ್ಯಾಂಚೆಸ್ಟರ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರೋಚಿತ ಸೋಲು ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್,ರಾಸ್ ಟೇಲರ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ನ್ಯೂಜಿಲ್ಯಾಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಪೇರಿಸಿತು.

ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತೀಯ ಬೌಲರ್ ಗಳು ನ್ಯೂಜಿಲ್ಯಾಂಡ್ ತಂಡವನ್ನು 250 ರ ಗಡಿ ಧಾಟದಂತೆ ನೋಡಿಕೊಂಡರು.ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದರೆ ಬುಮ್ರಾ,ಚಹಲ್,ಹಾರ್ದಿಕ ಪಾಂಡ್ಯ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆದು ಭುವಿ ಗೆ ಉತ್ತಮ ಸಾಥ್ ಕೊಟ್ಟರು.

240 ರನ್ ಗಳ ಗುರಿ ಬೆನ್ನತಿದ ಭಾರತ ತಂಡ ಆರಂಭಿಕದಲ್ಲೇ ಆಘಾತ ಅನುಭವಿಸಿತು.ಆರಂಭಿಕರಾಗಿ ಕ್ರೀಸ್ ಗೆ ಧಾವಿಸಿದ ರೋಹಿತ್ ಮತ್ತು ರಾಹುಲ್ ಬಂದ ದಾರಿಯಲ್ಲೇ ವಾಪಸಾದರು. ಭರ್ಜರಿ ಫಾರ್ಮ್ ನಲ್ಲಿದ್ದ ರೋಹಿತ್ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು.

ರಾಹುಲ್ ಕೂಡ ಬಂದಷ್ಟೆ ವೇಗವಾಗಿ ಪೆವಿಲಿಯನ್ ಗೆ ಹೋದರು.ನಾಯಕ ವಿರಾಟ್ ಕೊಹ್ಲಿ ಕೂಡ ಕೇವಲ ಒಂದು ರನ್ ಗಳಿಸಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.ಒಂದು ಹಂತದಲ್ಲಿ 24 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಆಸರೆ ಆದರು.ಆದರೆ ಅವರ ಜೊತೆಯಾಟ ಕೂಡ ಬೇಗನೆ ಅಂತ್ಯಗೊಂಡು ಮತ್ತೊಮ್ಮೆ ತಂಡ ಸಂಕಷ್ಟದತ್ತವಾಲಿತು.

ಆದರೆ ನಂತರ ಬಂದ ರವೀಂದ್ರ ಜಡೇಜಾ ಮತ್ತು ಧೋನಿ ಅವರ ಉತ್ತಮ ಜೊತೆಯಾಟದ ನೆರವಿನಿಂದ ಭಾರತ ಗೆಲ್ಲುವ ಸಮೀಪ ಬಂದಿತ್ತು. ಇವರ ಇಬ್ಬರ ಜೊತೆಯಾಟದಲ್ಲಿ ತಂಡಕ್ಕೆ 116 ರನ್ ಹರಿದು ಬಂದಿತ್ತು.ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜಡೇಜಾ 59 ಎಸೆತದಲ್ಲಿ 77 ರನ್ ಗಳಿಸಿದರು ಇದರಲ್ಲಿ 4 ಸಿಕ್ಸರ್ ಮತ್ತು 4 ಆಕರ್ಷಕ ಬೌಂಡರಿಕೂಡ ಗಳಿಸಿದ್ದರು ಬೌಲ್ಟ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ವಿಲಿಯಮ್ಸನ್ ಗೆ ಕ್ಯಾಚಿತ್ತು ನಿರ್ಗಮಿಸಿದರು.ತಾಳ್ಮೆಯುತ ಆಟ ಪ್ರದರ್ಶಿಸಿದ ಧೋನಿ 72 ಎಸೆತಗಳಲ್ಲಿ 50 ರನ್ ಗಳಿಸಿ ರನ್ ಔಟ್ ಆಗಿ ಪೆವಿಲಿಯನ್ ಗೆ ವಾಪಸಾದರು.

ಕಿವೀಸ್ ಪರ ಹೆನ್ರಿ 3 ವಿಕೆಟ್ ಪಡೆದರೆ ಸ್ಯಾಂಟ್ನರ್,ಬೌಲ್ಟ್, 2 ವಿಕೆಟ್ ಕಬಳಿಸಿದರೆ ನೀಶಮ್ ಮತ್ತು ಫರ್ಗಿಸನ್ ತಲಾ ಒಂದು ವಿಕೆಟ್ ಪಡೆದು ಭಾರತೀಯ ಬ್ಯಾಟ್ಸಮನ್ ಗಳಿಗೆ ಕಡಿವಾಣ ಹಾಕಿದರು. ಅಂತಿಮವಾಗಿ ಭಾರತ 18 ರನ್ ಗಳಿಂದ ಪರಾಭವಗೊಂಡು ಈ ಭಾರಿಯ ವಿಶ್ವಕಪ್ ರೇಸ್ ನಿಂದ ಹೊರಬಿದ್ದಿತು.

Categories
ಬ್ಯಾಡ್ಮಿಂಟನ್

ದೇಹದ ಅಲಸ್ಯವನ್ನು ಕ್ರೀಡೆಯಿಂದ ನಿಯಂತ್ರಿಸಿ : ಶಂಕರನಾರಾಯಣ

ಹಳೆಯಂಗಡಿ : ಟಾರ್ಪೋಡಸ್ ಸ್ಪೋರ್ಟ್ಸ್ ಕ್ಲಬ್‍ನ ಸಂಯೋಜನೆಯಲ್ಲಿ ಕ್ಲಬ್ ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ ಶಾಲಾ ಮಟ್ಟದ ಶಟ್ಲ ಬಾಡ್ಮಿಂಟನ್ ಸ್ಪರ್ಧೆಯ ಸಮಾರೋಪ ನಡೆಯಿತು.

ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಶಂಕರನಾರಾಯಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಿಂದ ಮನೋಬಲ ಹೆಚ್ಚಾಗಿದ್ದು, ಸೂಕ್ತ ವಯೋಮಾನದವರೆಗೂ ಕ್ರೀಡೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿರಿ. ದೇಹದ ಅಲಸ್ಯವನ್ನು ಕ್ರೀಡೆಯಿಂದ ನಿಯಂತ್ರಿಸಬಹುವುದು ಎಂದರು.

ಎನ್.ಎಂ.ಪಿ.ಟಿ.ಯ ವಾಲಿಬಾಲ್ ಕ್ರೀಡಾಪಟು ಭರತ್ ಅವರ ಕ್ರೀಡಾ ಜೀವನದ ಅನುಭವಗಳನ್ನು ಮಕ್ಕಳ ಜೊತೆಗೆ ಹಂಚಿಕೊಂಡದರು.

ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಸ್ಪರ್ಧೆಯಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ರಿವಸ್ರ್ಸ್ ಸಿಂಗಲ್ಸ್ ವಿಭಾಗದಲ್ಲಿ ಒಟ್ಟು 16 ವಿವಿಧ ಶಾಲೆಯ 235 ಮಕ್ಕಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದಾಮೋದರ, ಎ.ಎನ್.ಎಂ.ಪಿ.ಟಿ, ಟಾರ್ಪೋಡೇಸ್ ಸ್ಪೋಟ್ರ್ಸ್ ಕ್ಲಬ್‍ನ ನಿರ್ದೇಶಕ ನಾಗಭೂಷಣ್ ಮತ್ತು ರೆಡ್ಡಿ, ಚಂದ್ರಶೇಖರ ಸಜ್ಚಾ, ಸ್ಪರ್ಧಾ ಸಹ ಸಂಯೋಜಕ ಗಣೇಶ್ ಕಾಮತ್, ಬಾಡ್ಮಿಂಟನ್ ತರಬೇತಿದಾರ ಸಂತೋಷ್ ಖಾರ್ವಿ, ಟೇಬಲ್ ಟೆನ್ನಿಸ್ ತರಬೇತಿದಾರ ಅಶ್ವಿನ್ ಪಡುಕೋಣೆ, ಕೆ.ಪಿ. ಸತೀಶ್, ದೀಪಕ್ ಕೋಟ್ಯಾನ್, ಭಾಗ್ಯರಾಜ್, ನವನೀತ್, ಕಾರ್ತಿಕ್ ಹಾಗೂ ಮೊದಲಾದವರು ಇದ್ದರು.

ಟಾರ್ಪೋಡಸ್ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಫಲಿತಾಂಶ

ಬಾಲಕರ ವಿಭಾಗ – ಮಿಲಾಗ್ರಸ್ ಕಲ್ಯಾಣಪುರ ಉಡುಪಿ ಪ್ರಥಮ ಸ್ಥಾನ , ಸೈ ಅಲೋಶಿಯಸ್ ಮಂಗಳೂರು ದ್ವಿತೀಯ ಸ್ಥಾನ, ವಿದ್ಯಾದಯ ಪಬ್ಲಿಕ್ ಸ್ಕೂಲ್ ಹಾಗೂ ಅಮೃತಾ ವಿದ್ಯಾಲಯ ಮಂಗಳೂರು ತೃತೀಯಾ ಸ್ಥಾನ.

ಬಾಲಕಿಯರ ವಿಭಾಗ : ಹೋಲಿ ರೋಜಾರಿಯೋ ಕುಂದಾಪುರ ಪ್ರಥಮ ಸ್ಥಾನ, ಡಾ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತೋಕೂರು, ತಪೋವನ ದ್ವಿತೀಯ ಸ್ಥಾನ, ಮಣಿಪಾಲ ಸ್ಕೂಲ್ ಅತ್ತಾವರ, ಮೇರಿವೆಲ್ ಪ್ರೌಢಶಾಲೆ ಕಿನ್ನಿಗೊಳಿ ತೃತೀಯ ಸ್ಥಾನ

Categories
Action Replay ಇತರೆ

ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸಿದ್ದ ಶ್ರೀಪಾದ ಉಪಾಧ್ಯಾಯ, ಹುಟ್ಟುಹಬ್ಬದ ಶುಭಾಶಯಗಳು

ಕುಂದಾಪುರ : ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಚಕ್ರಾಧಿಪತ್ಯ ಮೆರೆದ ತಂಡ ಚಕ್ರವರ್ತಿ ಕುಂದಾಪುರ.ದಶಕಗಳ ಕಾಲ ತಂಡವನ್ನು ಮುನ್ನಡೆಸಿ ಕುಂದಾಪುರದ ಕೀರ್ತಿಯನ್ನು ರಾಜ್ಯ ರಾಷ್ಟ್ರದೆಲ್ಲೆಡೆ ಪಸರಿಸಿದ ನಾಯಕ ಶ್ರೀಪಾದ ಉಪಾಧ್ಯಾಯ.

ಟೆನ್ನಿಸ್ ಕ್ರಿಕೆಟ್ ನ ಹಲವಾರು ತಾರೆಗಳ ಭವಿಷ್ಯ ರೂಪಿಸಿದ ಅಂಗಣ ಉಡುಪಿಯ ಅಜ್ಜರಕಾಡಿನ ಮೈದಾನ.1996 ರಲ್ಲಿ ಕರಾವಳಿ ಕ್ರಿಕೆಟರ್ಸ್ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿದ್ದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಉಡುಪಿಯ ದುರ್ಗಾ ಕ್ರಿಕೆಟರ್ಸ್ 10 ಓವರ್ ಗಳಲ್ಲಿ 32 ರನ್ ಗಳಿಸಿ ಆಲೌಟ್ ಆಗಿತ್ತು.
ಆರಂಭಿಕ ದಾಂಡಿಗನಾಗಿ ಅಂಗಣಕ್ಕಿಳಿದ ನಾಯಕ ಹಾಗೂ ಆಲ್ ರೌಂಡರ್ ಶ್ರೀಪಾದ ಉಪಾಧ್ಯಾಯರವರು ಮೊದಲ ನಾಲ್ಕು ಎಸೆತಗಳಲ್ಲಿ ಅಜ್ಜರಕಾಡು ಅಂಗಣದ ಮೂಲೆ ಮೂಲೆಗೂ ನಾಲ್ಕು ಸಿಕ್ಸರ್ ಸಿಡಿಸಿ,ಎಸೆತಗಾರ ಐದನೇ ಎಸೆತ ವೈಡ್ ಎಸೆದರೆ,ಮತ್ತೆ ಮುಂದಿನ ಎರಡು ಎಸೆತಗಳಲ್ಲಿ ಮತ್ತೆರಡು ಸಿಕ್ಸರ್ ಬಾರಿಸಿ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ದಾಖಲೆ ಬರೆದರು.ಪಂದ್ಯ ಒಂದೇ ಓವರ್ ನಲ್ಲಿ ಮುಕ್ತಾಯ ಕಂಡಿತ್ತು.ನಂತರದ ದಿನಗಳಲ್ಲಿ ಉಪಾಧ್ಯಾಯರಿಗೆ ಬೌಲಿಂಗ್ ಮಾಡಲು ಎಸೆತಗಾರರು ಅಂಜುವ ದಿನಗಳಿತ್ತು.

ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ವಿಭಾಗದಲ್ಲಿಯೂ ಬಹಳಷ್ಟು ಸಾಧನೆಗೈದ ಕೀರ್ತಿ ಉಪಾಧ್ಯಾಯರಿಗೆ ಸಲ್ಲುತ್ತದೆ.ನಾಯಕನಾಗಿ ರಾಜ್ಯದ ನೂರಾರು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಪಂದ್ಯಾಕೂಟಗಳಲ್ಲಿ ಇವರ ಸಾರಥ್ಯದಲ್ಲಿ ಯಶಸ್ಸನ್ನು ಸಾಧಿಸಿತ್ತು.

ಪ್ರಸ್ತುತ (Above-40),ಹಾಗೂ ರೋಟರಿ ಪಂದ್ಯಾಕೂಟಗಳಲ್ಲಿ ಪಾಲ್ಗೊಳ್ಳುವ ಉಪಾಧ್ಯಾಯರು ಯಶಸ್ಸಿನ ಯಶೋಗಾಥೆ ಬರೆದ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಮಹಾನ್ ನಾಯಕ.

ಶ್ರೀಪಾದ ಉಪಾಧ್ಯಾಯರಿಗೆ “ಸ್ಪೋರ್ಟ್ಸ್ ಕನ್ನಡ” ಕ್ರೀಡಾ ವೆಬ್ಸೈಟ್ ನ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

 

ಆರ್.ಕೆ‌.ಆಚಾರ್ಯ ಕೋಟ

Categories
Action Replay

ಕುಂದಾಪುರ : ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣೆ ಸಮಾರಂಭ

ಕುಂದಾಪುರ : ಒಬ್ಬ ವ್ಯಕ್ತಿಗೆ ವಿದ್ಯೆ ಇದ್ದರೆ ಸಾಲದು ವಿನಯವೂ ಇರಬೇಕು. ವಿದ್ಯೆ ಮಾತ್ರ ಇದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ವಿನಯದಿಂದ ಜಗತ್ತನ್ನೇ ಗೆಲ್ಲಬಹುದು ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ ಮಹೇಂದ್ರ ಭಟ್ ಹೇಳಿದರು.

ಕುಂದಾಪುರ ಆರ್ಶೀವಾದ ಸಭಾಂಗಣದಲ್ಲಿ ನಡೆದ ಹಿರಿಯ ಕಿರಿಯರ ಸಮ್ಮಿಲನ ಟೆನ್ನಿಸ್‍ಬಾಲ್ ಕ್ರಿಕೆಟ್ ಸಮ್ಮೇಳನ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೋಟೇಶ್ವರ ಚೇತನಾ ಕ್ರೀಡಾ ಮತ್ತು ಕಲಾರಂಗದ ಗೋಪಾಲಕೃಷ್ಣ ಶೆಟ್ಟಿ ಅವರು ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣಾಗೈದು ಶುಭಾಹಾರೈಸಿದ್ದ.

 

ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಪೋಷಕ ಸೀತಾರಾಮ ಆಚಾರ್ಯ ತೆಕ್ಕಟ್ಟೆ, ನಿವೃತ್ತ ಶಿಕ್ಷಕ ವಿಶ್ವೇಶ್ವರ ಹಂದೆ, ಪ್ರಸಿದ್ಧ ಯೋಗ ಗುರು ರಾಜೇಂದ್ರ ಚಕ್ಕೇರ ಇವರಿಗೆ ಗುರುವಂದನಾ ಕಾರ್ಯ ನಡೆಯಿತು.

ಬನ್ನಂಜೆ ಪ್ಯಾರಡೈಸ್ ಡಾ ಮಂಜುನಾಥ ಮಯ್ಯ, ಬೆಂಗಳೂರು ಜೈ ಕರ್ನಾಟಕ ಆರ್ ಮನೋಹರನ್, ಬೆಂಗಳೂರು ಶ್ರೀ ಕ್ರಿಕೆಟರ್ಸ್ ಡಾ ಆರ್ ಪ್ರಸನ್ನ ಕುಮಾರ್, ಬೆಂಗಳೂರಿನ ಖ್ಯಾತ ಚಿತ್ರನಟ ಸಿ.ಸಿ.ಎಲ್. ರಾಜೀವ್ ಹನು, ದೊಡ್ಮನೆ ಆಕಾಶ್ ಗೌಡ, ಪಡುಬಿದ್ರೆ ಫ್ರೆಂಡ್ಸ್ ಶರತ್ ಶೆಟ್ಟಿ, ಟಾರ್ಪೊಡಸ್ ಕ್ರಿಕೆಟ್ ಕ್ಲಬ್‍ನ ಗೌತಮ್ ಶೆಟ್ಟಿ, ಬೆಂಗಳೂರು ಫ್ರೆಂಡ್ಸ್ ರೇಣು ಗೌಡ, ಕುಂದಾಪುರ ಚಕ್ರವರ್ತಿ ಕ್ರಿಕೆಟ್‍ನ ಶ್ರೀಪಾದ್ ಉಪಾಧ್ಯ, ಉಡುಪಿ ಕೆನರಾ ಮಿತ್ರ ಮಂಡಳಿಯ ಉದಯ್ ಕುಮಾರ್, ಶಿರ್ವ ಬ್ಲೂಸ್ಟಾರ್ ಸಫ್ತಾರ್ ಆಲಿ, ಕೋಟ-ಪಡುಕೆರೆ ವಾಹಿನಿಯ ರಾಜೇಂದ್ರ ಸುವರ್ಣ, ತುಮಕೂರು ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್ ಕೆ.ಸಿ, ಶ್ರೀಶ ಆಚಾರ್ಯ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪೋರ್ಟ್ಸ್ ಕನ್ನಡ ಮುಖ್ಯಸ್ಥ ರಾಮಕೃಷ್ಣ ಆಚಾರ್ಯ ಕೋಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚೈತ್ರಾ ಆಚಾರ್ಯ ಕೋಟ ಸನ್ಮಾನಿತರನ್ನು ಪರಿಚಯಿಸಿದರು. ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದ್ದರು.

ಸಭಾ ಕಾರ್ಯಕ್ರಮದ ಮುಂಚಿತವಾಗಿ ಅಂಬಿಕಾ ಗುರುರಾಜ್ ಆಚಾರ್ಯ ಮಂಗಳೂರು, ಮಹಿಳಾ ಐತಾಳ್, ಸಂಧ್ಯಾ ಬಂಗೇರ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ , ಕಟಕ ಚಲನಚಿತ್ರದ ಬಾಲ ನಟಿ ಶ್ಲಾಘ ಸಾಲಿಗ್ರಾಮ, ಸಹನಾ ರೈ ಹಾಗೂ ಸುಪ್ರೀತಾ ವೈದ್ಯ ಇವರಿಂದ ನೃತ್ಯ ವೈಭವ, ಮುಕ್ತವಾಹಿನಿಯ ಖ್ಯಾತಿಯ ಚೇತನ್ ನೈಲ್ಯಾಡಿ ಇವರಿಂದ “ಸ್ಟ್ಯಾಂಡ್ ಅಪ್ ಕಾಮಿಡಿ ಪ್ರದರ್ಶನ ನಡೆಯಿತು.

Categories
ಕ್ರಿಕೆಟ್

ಭಾರತದ ಕ್ರಿಕೆಟ್ ನ ದಂತಕಥೆ ‘ಯುವರಾಜ’ ಇನ್ನು ಬ್ಲೂ ಜರ್ಸಿಯಲ್ಲಿ ನೆನೆಪು ಮಾತ್ರ

ಯುವರಾಜ್ ಸಿಂಗ್ ಎಂದೊಡನೆ ನಮಗೆಲ್ಲಾ ನೆನಪಿಗೆ ಬರುವುದೇ ಆ ೬ ಸಿಕ್ಸರ್ ಗಳು ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ೨೦೦೭ರ ಟಿ೨೦ ವಿಶ್ವಕಪ್ ಮತ್ತು ೨೦೧೧ರ  ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಯುವರಾಜ್ ಸಿಂಗ್  ಯೋಗರಾಜ್ ಸಿಂಗ್ ಮತ್ತು ಶಬ್ನಮ್ ಸಿಂಗ್ ಅವರ ಪುತ್ರನಾಗಿ ೧೨ ಡಿಸೆಂಬರ್ ೧೯೮೧ರಂದು ಚಂಡೀಗಡ್ ನಲ್ಲಿ ಜನಿಸಿದರು. ೩೦ ನವೆಂಬರ್ ೨೦೧೬ ರಂದು ಹಜೆಲ್ ಕೀಚ್ ಅವರನ್ನು ಯುವಿ ವಿವಾಹವಾಗಿದ್ದಾರೆ.

ಯುವರಾಜ್ ಸಿಂಗ್ ತಮ್ಮ ೧೩ ನೇ ವಯಸ್ಸಿಗೆ ಪಂಜಾಬ್ ತಂಡದ ಪರವಾಗಿ ೧೬ರ ವಯೋಮಿತಿಯ ತಂಡದಲ್ಲಿ ಆಡಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ತಮ್ಮ  ಕ್ರಿಕೆಟ್ ಪಯಣವನ್ನು ಪ್ರಾರಂಭಿಸಿದರು. ಅದಾದ ನಂತರ ೧೯ ರ ವಯೋಮಿತಿಯಲ್ಲಿ ಹಿಮಾಚಲ ತಂಡ ವಿರುದ್ಧ  ಆಕರ್ಷಕ ೧೩೭ರನ್ ಗಳಿಸಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ ಆಗುವ ಎಲ್ಲಾ ಮುನ್ಸೂಚನೆಯನ್ನು ನೀಡಿದರು

೧೯೯೭ ರಲ್ಲಿ ಒಡಿಸ್ಸಾ ವಿರುದ್ಧ ತಮ್ಮ ಪ್ರಥಮ ದರ್ಜೆ ಪಂದ್ಯವನ್ನಾಡಿದ ಯುವಿ ಆಮೇಲೆ ಇಂದಿಗೂ ಹಿಂದಿರುಗಿ ನೋಡಲೇ ಇಲ್ಲ.ಅದಾದ ನಂತರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

೧೯೯೯-೨೦೦೦ ನೇ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಹರಿಯಾಣ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ೧೪೯ ರನ್ ಗಳಿಸಿದ್ದರು.ಯುವಿ ೨೦೦೦ನೇ ಸಾಲಿನಲ್ಲಿ ೧೯ರ ವಯೋಮಿತಿಯ ವಿಶ್ವಕಪ್ ನಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ತಂಡದಲ್ಲಿ ಸ್ಥಾನ  ಗಿಟ್ಟಿಸಿದ್ದ ಯುವ ಭರ್ಜರಿ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರರಾಗಿದ್ದರು. ೨೦೦೨ ರ ನಾಟ್ ವೆಸ್ಟ್ ಸರಣಿ ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ. 2003ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. 40 ಟೆಸ್ಟ್ ಆಡಿರುವ ಯುವಿ 1900 ರನ್ ಬಾರಿಸಿದ್ದಾರೆ. ಇನ್ನು 11 ಅರ್ಧ ಶತಕ ಹಾಗೂ 3 ಶತಕ ಬಾರಿಸಿದ್ದಾರೆ.

ಯುವಿಯ ನಿವೃತ್ತಿಯ ಮಾತು:

25 ವರ್ಷಗಳ ಕಾಲದಿಂದ 22 ಯಾರ್ಡ್ ಪಿಚ್‌ನ ಆಚೀಚೆ, ಸುಮಾರು 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಳಗೆ, ಹೊರಗೆ ಇದ್ದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳು ಕೊಡವಿಕೊಳ್ಳಬೇಕು ಮತ್ತು ಪುನಃ ಎದ್ದು ಮುನ್ನಡೆಯಬೇಕು ಎಂಬುದನ್ನೆಲ್ಲ ಈ ಆಟವು ನನಗೆ ಕಲಿಸಿಕೊಟ್ಟಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಹೇಳಿದರು. ನಿವೃತ್ತಿ ಬಳಿಕ ಜಿಟಿ20 (ಕೆನಾಡಾ), ಐರ್ಲೆಂಡ್ ಮತ್ತು ಹಾಲೆಂಡ್ ನಲ್ಲಿನ ಯೂರೋ ಟಿ20ಯಂತ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅವರು ಬಿಸಿಸಿಐ ಜೊತೆ ಚರ್ಚಿಸಿ, ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದಾರೆ.

ಯುವರಾಜ್ ಅವರಿಗೆ 2012 ರಲ್ಲಿ ಅರ್ಜುನ ಪ್ರಶಸ್ತಿ, ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2014 ರಲ್ಲಿ, ಅವರಿಗೆ ಪದ್ಮಶ್ರೀ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ನೀಡಿ ಗೌರವಿಸಲಾಯಿತು

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಭಾರತಕ್ಕೆ ತಂಡ ಸಾಕಷ್ಟು ಕೊಡುಗೆ ನೀಡಿರುವ ಯುವಿ, ಯುವಿಕ್ಯಾನ್ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗೂ 2014ರಲ್ಲಿ ಯುವರಾಜ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಶ್ವಕಪ್ ಹೀರೊ :

1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಯುವರಾಜ್ ಸಿಂಗ್ ಅವರು ವಿಶ್ವಕಪ್ ಹೀರೋ ಆಗಿ, 2007ರಲ್ಲಿ ಇಂಗ್ಲೆಂಡಿನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ವಿಶ್ವ ದಾಖಲೆಯನ್ನು ಸ್ಥಾಪಿಸಿದರು

ಯುವಿ ಕ್ರಿಕೆಟ್ ನ ಅಂಕಿ ಅಂಶಗಳು :

  • ಟೆಸ್ಟ್ : 40 ಪಂದ್ಯ, 1900ರನ್, 33.92ರನ್ ಸರಾಸರಿ, 3 ಶತಕ, 11 ಅರ್ಧಶತಕ, 169 ಗರಿಷ್ಠ ರನ್ ಗಳಿಕೆ, 9ವಿಕೆಟ್
  • ಏಕದಿನ ಕ್ರಿಕೆಟ್ : 304 ಪಂದ್ಯ, 8,701 ರನ್, 36.55 ರನ್ ಸರಾಸರಿ, 14 ಶತಕ, 52 ಅರ್ಧ ಶತಕ, 150 ಗರಿಷ್ಠ ಮೊತ್ತ, 111 ವಿಕೆಟ್
  • ಟಿ20ಐ: 58 ಪಂದ್ಯ, 1177 ರನ್, 28.02 ರನ್ ಸರಾಸರಿ, 77ಅಜೇಯ ಗರಿಷ್ಠ ಮೊತ್ತ, 28 ವಿಕೆಟ್
  • ಪ್ರಥಮ ದರ್ಜೆ: 139 ಪಂದ್ಯ, 8965ರನ್, 44.16ರನ್ ಸರಾಸರಿ, 26ಶತಕ, 36 ಅರ್ಧಶತಕ, 260ಗರಿಷ್ಠ ಮೊತ್ತ, 41 ವಿಕೆಟ್. ಪಡೆದುಕೊಂಡಿದ್ದಾರೆ.– ಪ್ರೀತಮ್ ಹೆಬ್ಬಾರ್
Categories
ಕ್ರಿಕೆಟ್

ಲಂಕಾ ವಿರುದ್ಧ ರೋಹಿತ್ ಸೆಂಚುರಿ; ಸಚಿನ್, ಸಂಗಕ್ಕಾರ ದಾಖಲೆ ಪುಡಿ ಪುಡಿ!

ಲೀಡ್ಸ್(ಜು.06): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 5ನೇ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ 92 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಶ್ರೀಲಂಕಾದ ಕುಮಾರ  ಸಂಗಕ್ಕಾರ ದಾಖಲೆಯನ್ನು ಪುಡಿ ಮಾಡಿದ್ದಾರೆ.

ಲಂಕಾ ವಿರುದ್ಧದ ಶತಕದೊಂದಿಗೆ ರೋಹಿತ್, ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಈ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆಯನ್ನು ಪುಡಿ ಮಾಡಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಸಂಗಕ್ಕಾರ 4 ಸೆಂಚುರಿ ಸಿಡಿಸಿದ್ದರು. ಇದೀಗ ರೋಹಿತ್ 5 ಶತಕ ಸಿಡಿಸಿ ದಾಖಲೆ ಪುಡಿ ಮಾಡಿದ್ದಾರೆ.

2003 ರ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ  ಸಚಿನ್ ತೆಂಡುಲ್ಕರ್ 586  ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದರು.  ಇದೀಗ ರೋಹಿತ್ ಈ ದಾಖಲೆ ಮುರಿದಿದ್ದಾರೆ. 2019 ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ರೋಹಿತ್ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಒಟ್ಟು 6 ಶತಕ ಸಿಡಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 6 ಶತಕ ಸಿಡಿಸೋ ಮೂಲಕ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.

Categories
ಸಂಪಾದಕರ ಮಾತು

ಸಂಪಾದಕರ ಮಾತು

ವಿಶ್ವದ ವಿವಿಧ ಕ್ರೀಡಾಸುದ್ದಿಗಳು ಕ್ಷಿಪ್ರ ಗತಿಯಲ್ಲಿ ಕ್ರೀಡಾಭಿಮಾನಿಗಳನ್ನು ತಲುಪಿಸುವುದು,70 ರ ದಶಕದಿಂದ ಹಿಡಿದು ಪ್ರಸ್ತುತ ಕ್ರೀಡಾಪಟುಗಳ,ಪರಿಚಯ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವಿಕೆ.

ತೆರೆಮರೆಯಲ್ಲಿರುವ ಕ್ರೀಡಾಪಟುಗಳ ಪ್ರತಿಭೆ ಅನಾವರಣ,ಜೊತೆಯಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ನಡೆದು ಬಂದ ದಾರಿ ಹಾಗೂ ದಿಗ್ಗಜ ಆಟಗಾರರ ಸಂಪೂರ್ಣ ಮಾಹಿತಿ ಜೊತೆಯಾಗಿ ತೆರೆಮರೆಯ ಪ್ರತಿಭೆಗಳನ್ನು ಮುಖ್ಯ ವೇದಿಕೆ ತರುವ ನನ್ನ ಕನಸಿನ ಕೂಸು “ಸ್ಪೋರ್ಟ್ಸ್ ಕನ್ನಡ”…

ಕೋಟ ರಾಮಕೃಷ್ಣ ಆಚಾರ್ಯ
(ಆರ್.ಕೆ)

Categories
ಕ್ರಿಕೆಟ್ ಯಶೋಗಾಥೆ

ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಸಚಿನ್ “ಮಹಾದೇವ”

“DON’T CELEBRATE UNTIL U WIN”

ಇಂಗ್ಲೀಷ್ ನ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು,ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ರೋಚಕ ಪಂದ್ಯವೊಂದು ಸಮರ್ಥಿಸಿ ತೋರಿಸಿತ್ತು.

ಹೌದು ಆತ್ಮೀಯ ಕ್ರಿಕೆಟ್ ಪ್ರೇಮಿಗಳೇ,ಕ್ರಿಕೆಟ್ ಕೇವಲ ಮೂರ್ಖರ ಆಟವಷ್ಟೇ ಎಂದು ತಿಳಿದವರು ಸ್ವಯಂ ಮೂರ್ಖರು ಎನ್ನೋ ವಾದ ನನ್ನದು. ಶಿಸ್ತುಸಂಯಮ,ಸಂಯೋಜನೆ,ಹೋರಾಟ,ಸೋಲು ಗೆಲುವಿನ ಸಮಭಾವದ ಸ್ವೀಕೃತಿ ಕ್ರಿಕೆಟ್ ನಿಂದ ನಾವು  ಜೀವನದಲ್ಲಿ  ಅಳವಡಿಸಿಕೊಳ್ಳಬೇಕಾದ ಮಹತ್ತರ ಅಂಶಗಳು.

2013 ರ ಮಾರ್ಚ್ ನ ಸಮಯ.ಮಹಾಶಿವರಾತ್ರಿಯಂದು ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2 ಲಕ್ಷ ಮೊತ್ತದ ಅದ್ಧೂರಿ Y.P.L(ಯಲಹಂಕ ಪ್ರಿಮಿಯರ್ ಲೀಗ್)ಐತಿಹಾಸಿಕ ಟೂರ್ನಿಯು,ರಾಜ್ಯ ಟೆನ್ನಿಸ್ ವಲಯವನ್ನು ನಿಬ್ಬೆರಗಾಗಿಸಿತ್ತು ಫೈನಲ್ ಪಂದ್ಯಾಟ.ಉಡುಪಿ,ದ.ಕ ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆಯಿಂದ ಬಲಿಷ್ಟ ತಂಡಗಳು  ಬಾಗವಹಿಸಿದ್ದ ಈ ಟೂರ್ನಿಯಲ್ಲಿ ಅಂತಿಮವಾಗಿ ಬೆಂಗಳೂರಿನ ಯುವಕರ ಪಡೆ “ಎಸ್ ಝಡ್‌‌.ಸಿ.ಸಿ” ತಂಡ, ಟೆನ್ನಿಸ್ ಕ್ರಿಕೆಟ್ ನ (ಹಿರಿಯಣ್ಣ),ಸರಿ ಸುಮಾರು 5 ದಶಕಕ್ಕೂ ಮಿಗಿಲಾದ ಸುವರ್ಣ ಇತಿಹಾಸ ಬರೆದ “ಜೈ ಕರ್ನಾಟಕ ಬೆಂಗಳೂರು” ತಂಡವನ್ನು ಎದುರಿಸಲು ಸಜ್ಜಾಗಿದ್ದವು. ಜೈ ಕರ್ನಾಟಕ ಈ ಪಂದ್ಯಾಟದಲ್ಲಿ ನಿವೃತ್ತಿಯ ಹೊಸ್ತಿಲಲ್ಲಿದ್ದ ದಂತಕಥೆಗಳಾದ(ಸಾಂಬಾಜಿ,ಮನೋಹರ್,ಭಗವಾನ್,ನಾಗೇಶ್ ಸಿಂಗ್,ಮಹೇಶ್ (ಮ್ಯಾಕ್))ಹಿರಿಯ ಆಟಗಾರರನ್ನೇ ಕಣಕ್ಕಿಳಿಸಿತ್ತು‌.ಈ ಪಂದ್ಯಾಟದಲ್ಲಿ ಅದ್ಭುತ ಸವ್ಯಸಾಚಿ ಆಟಗಾರರಾದ ಜಾನ್,ಪ್ರದೀಪ್ ಗೌಡ ಹಾಗೂ ಕೀಪರ್ ಆಗಿ “ಕ್ರಿಕ್ ಸೇ ಗಿರೀಶ್ ರಾವ್, ಸಚಿನ್ ಮಹಾದೇವ್ ಯುವ ಆಟಗಾರರಾಗಿ ಪ್ರತಿನಿಧಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜೈ ಕರ್ನಾಟಕ 5 ಓವರ್ ನಲ್ಲಿ 18 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಶೋಚನೀಯ ಹಂತ ತಲುಪಿದಾಗ ,ನಂಬುಗೆಯ ಆಲ್ ರೌಂಡರ್ ಜಾನ್ ಹಾಗೂ ಸಚಿನ್ ಮಹಾದೇವ್ ರ ಬಿರುಸಿನ ಅಜೇಯ 30 ರನ್ನಿನ ಭಾಗೇದಾರೀಕೆಯ ಆಟ ಎದುರಾಳಿಗೆ 8 ಓವರ್ ಗೆ 49 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ನಿಗದಿಗೊಳಿಸಿತ್ತು. ಬೆಂಬತ್ತಿದ “ಎಸ್.ಝಡ್.ಸಿ.ಸಿ” ಆಲ್ ರೌಂಡರ್ ಫಾರ್ಮ್ ನ ಉಚ್ಛ್ರಾಯ ಹಂತದಲ್ಲಿದ್ದ ಸ್ವಸ್ತಿಕ್ ನಾಗರಾಜ್ ರವರ ಅಮೂಲ್ಯ ಆಟದ ನೆರವಿನಿಂದ ಕೊನೆಯ 2 ಓವರ್ ಗಳಲ್ಲಿ ಕೇವಲ 4 ರನ್ ಗಳಷ್ಟೇ ಗಳಿಸಬೇಕಾದ ಹಂತಕ್ಕೆ ತಲುಪಿಸಿ ಔಟಾಗಿದ್ದರು.ಬಹುತೇಕ ವಿಜಯದ ಹೊಸ್ತಿಲಲ್ಲಿದ್ದ ಎಸ್‌.ಝಡ್.ಸಿ.ಸಿ
ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮೂಡಿತ್ತು.ಮೈದಾನದ ಒಳ,ಹೊರಗೆ ಸಿಡಿಮದ್ದುಗಳ ಪ್ರದರ್ಶನ,ಬೆಂಬಲಿಗರು,ನೆರೆದಿದ್ದ ಪ್ರೇಕ್ಷಕರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
7 ನೇ ಓವರ್  ಅರುಣ್ ಎಸೆತಗಾರಿಕೆಯಲ್ಲಿ 3 ರನ್ ಹರಿದು ಬಂತು.ಕೊನೆಯ ಓವರ್ ನ ಜವಾಬ್ದಾರಿ ಯುವ ಸವ್ಯಸಾಚಿ “ಸಚಿನ್ ಮಹಾದೇವ್” ಹೆಗಲ ಮೇಲಾಯಿತು.ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ಮೇಡನ್ ಓವರ್ ಎಸೆದು 3 ವಿಕೆಟ್ ಉರುಳಿಸಿ,ನೆರೆದಿದ್ದ ಪ್ರೇಕ್ಷಕರನ್ನು ಮೂಕ  ವಿಸ್ಮಿತರನ್ನಾಗಿಸಿದ್ದರು.”ಜೈ ಕರ್ನಾಟಕ ಬೆಂಗಳೂರು” ಟ್ರೋಫಿ ಜಯಿಸಿತ್ತು. ಫೈನಲ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ಸಚಿನ್ ಪಡೆದಿದ್ದರು. ಈ ಪಂದ್ಯಾಟದ ಯಶಸ್ಸು ಸಚಿನ್ ರನ್ನು ರಾಜ್ಯಾದ್ಯಂತ ಪ್ರಸಿದ್ಧಿಗೊಳಿಸಿತ್ತು.