ಕ್ರೀಡಾಪಟುಗಳಿಗೆ ಅವರದ್ದೇ ಆದ ವಿಚಿತ್ರ ನಂಬಿಕೆಗಳಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಟೆನ್ನಿಸ್ ಪಟು ರಾಫಾ ನಡಾಲ್‌ನ ಈ ನಂಬಿಕೆ ಕೊಂಚ ವಿಲಕ್ಷಣವಾದದ್ದು.ಆತ ಟೆನ್ನಿಸ್ ಕೋರ್ಟ್‌ನಲ್ಲಿ ತಾನು ಕುಳಿತುಕೊಳ್ಳುವ ಸೀಟಿನ ಪಕ್ಕ ಯಾವತ್ತಿಗೂ ಎರಡು ಬಾಟಲಿಗಳನ್ನಿಡುತ್ತಾನೆ.ಅದು ನೀರಿರುವ ಅಥವಾ ಜ್ಯೂಸ್ ಇರಬಹುದಾದ ಬಾಟಲಿಯಿರಲಿ.ಎರಡು ಬಾಟಲಿಗಳು ಅವನಿಗೆ ಬೇಕು.ಅದೂ ಸಹ ಅವನು ಕುಳಿತುಕೊಳ್ಳುವ ಆಸನದ ಎಡಪಕ್ಕಕ್ಕೆ ಇರಬೇಕು.
ಒಂದರ ಮುಂದೆ ಒಂದು ಕೊಂಚವೂ ವ್ಯತ್ಯಾಸವಾಗದಂತೆ ಹೊಂದಿಕೆಯಾಗುವಂತೆ ಒಂದರ್ಧ ಅಡಿ ದೂರದಲ್ಲಿ ಇರಬೇಕು.ಹಾಗೆ ಇರುವಂತೆ ಸ್ವತ: ನಡಾಲ್ ಅವುಗಳನ್ನು ಹೊಂದಿಸಿಡುತ್ತಾನೆ.ಬಾಟಲಿಗಳ ಸ್ಥಾನದ ಬಗ್ಗೆ ಆತ ಎಷ್ಟು ಕಟ್ಟುನಿಟ್ಟು ಎಂದರೆ ಬಾಟಲಿಗಳು ಬಿದ್ದು ಹೋದರೆ ಆತ ಸರ್ವಿಸ್ ಮಾಡುವ ಹಂತದಲ್ಲಿದ್ದರೂ ತಕ್ಷಣವೇ ಆಟ ನಿಲ್ಲಿಸಿ ಬಾಟಲುಗಳನ್ನು ಸರಿಪಡಿಸಿಯೇ ಆತ ಮುನ್ನಡೆಯುವುದು.ಹಾಗೊಂದು ವರ್ತನೆಗೆ ಅದೆಷ್ಟೋ ಎಚ್ಚರಿಕೆಗಳು, ದೂರುಗಳು ಬಿದ್ದಿದ್ದರೂ ಆತ ಮಾತ್ರ ತನ್ನ ವರ್ತನೆ ಬದಲಿಸಿಲ್ಲ.
ತೀರ ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್‌ನ ಪಂದ್ಯವೊಂದರಲ್ಲಿ ಸಂದರ್ಶಕನಾಗಿದ್ದ ಮತ್ತೊಬ್ಬ ಟೆನ್ನಿಸ್ ದಂತಕತೆ ಮೆಕೆನ್ರೋ,’ಏನದು ನಿಮ್ಮ ಬಾಟಲಿಗಳ ಕುರಿತು ನಂಬಿಕೆ..?’ ಎಂದು ಪ್ರಶಿಸಿದಾಗ ಉತ್ತರಿಸಿದ್ದ ನಡಾಲ್,’ಬದುಕಿನಲ್ಲಿ ಯಾವುದಾದರೂ ನಂಬಿಕೆಗಳು ಫಲ ನೀಡುತ್ತಲಿವೆಯೆಂದರೆ ಅವುಗಳನ್ನು ಬದಲಿಸಬೇಡಿ, ಫಲ ನೀಡುತ್ತಿಲ್ಲ ಎಂದಾಗ ಮಾತ್ರ ಬದಲಿಸಿ, ಇಷ್ಟರವರೆಗಂತೂ ನನಗೆ ಈ ಬಾಟಲಿ ನಂಬಿಕೆ ಫಲ ನೀಡುತ್ತಲೇ ಇದೆ’ಎನ್ನುತ್ತ ನಕ್ಕಿದ್ದ.
ಯಕಶ್ಚಿತ್ ಪ್ಲಾಸ್ಟಿಕ್ ಬಾಟಲಿಗಳು ಸಹ ಬಲಿಷ್ಠ ಆಟಗಾರನೊಬ್ಬನನ್ನು ಆಡಿಸುವ ಈ ಬಗೆಯ ವರ್ತನೆ ನಿಜಕ್ಕೂ ಮನುಷ್ಯ ಸ್ವಭಾವದ ಕುರಿತು ಆಸಕ್ತಿ ಮೂಡಿಸುವುದಂತೂ ಸುಳ್ಳಲ್ಲ.
– ಗುರುರಾಜ್ ಕೊಡ್ಕಣಿ ಯಲ್ಲಾಪುರ