ಪ್ರತಿ ವರ್ಷ ಎರಡನೇಯ ಗ್ರಾಂಡ್‌ಸ್ಲಾಮ್ ಆಗಿ ಮುಗಿಯುತ್ತಿದ್ದ ಫ್ರೆಂಚ್ ಓಪನ್ ಟೂರ್ನಿ ಈ ವರ್ಷ ,ವರ್ಷದ ಕೊನೆಯ ಪಂದ್ಯಾವಳಿಯಾಗಿ ಮುಗಿಯಲು ಕಾರಣ ಕರೊನಾ ಕಾಯಿಲೆ.ಕರೊನಾ ಬದುಕಿನ ಹಲವು ಸಂಗತಿಗಳನ್ನು ಬದಲಿಸಿತಾದರೂ ಫ್ರೆಂಚ್ ಓಪನ್ ಎಂದಾಗ ಅಲ್ಲಿ ನಡಾಲ್‌ನದ್ದೆ ಪಾರಮ್ಯವೆಂಬ ವಿಷಯವನ್ನು ಬದಲಿಸಲೂ ಕರೋನಾ ವೈರಸ್ ಕೈಯಿಂದಲೂ ಸಾಧ್ಯವಾಗಲಿಲ್ಲವೆನ್ನುವುದು ಸತ್ಯ.
ನಿನ್ನೆಯಷ್ಟೇ ಮುಗಿದ ಫ್ರೆಂಚ್ ಓಪನ್ ಫೈನಲ್ಲಿನಲ್ಲಿ ,ಎಂದಿನಂತೆ ರಾಫಾ ನಡಾಲ್ ಜಯ ಗಳಿಸಿದರು.ಬಲಾಡ್ಯ ಎದುರಾಳಿಯಾದ ಅಗ್ರಮಾನ್ಯ ಆಟಗಾರನಾದ ಸರ್ಬಿಯಾದ ನೋವಾಕ್ ಜೊಕೊವಿಚ್‌ರನ್ನು 6 -0,6-2,7-5 ಯ ನೇರ ಸೆಟ್ಟುಗಳಲ್ಲಿ ಸೋಲಿಸಿದ್ದು ವಿಶೇಷ.ಅದರಲ್ಲೂ ಮೊದಲ ಸೆಟ್‌ನಲ್ಲಿ ಜೋಕೊವಿಚ್‌ರನ್ನು ‘ಬೀಗಲ್’ (ಎದುರಾಳಿಗೆ ಒಂದೂ ಅಂಕ ಬಿಟ್ಟು ಕೊಡದೆ ಗೆಲ್ಲುವುದು) ಸೋಲಿಸಿದ್ದು ಆವೆಮಣ್ಣಿನಂಕಣದ ಮೇಲಿನ ನಡಾಲ್ ಹಿಡಿತಕ್ಕೆ ಸಾಕ್ಷಿ.ಈ ಮೂಲಕ ಫ್ರೆಂಚ್ ಓಪನ್ ಅಂಗಳದಲ್ಲಿ ಒಟ್ಟಾರೆ ನೂರನೇ ಜಯ ಸಾಧಿಸಿದ ನಡಾಲ್ ಒಟ್ಟಾರೆ ತಮ್ಮ ವೃತ್ತಿಬದುಕಿನ ಇಪ್ಪತ್ತನೇ ಗ್ರಾಂಡ್‌ಸ್ಲಾಮ್ ಜಯಿಸಿದರು.ಆ ಮೂಲಕ ಅತಿಹೆಚ್ಚು ಗ್ರಾಂಡ್‌ಸ್ಲಾಮ್ ಜಯಿಸಿದವರ ಪಟ್ಟಿಯಲ್ಲಿ ರೋಜರ್ ಫೆಡರರ್‌ನೊಟ್ಟಿಗೆ ಜಂಟಿಯಾಗಿ ಅಗ್ರಸ್ಥಾನಕ್ಕೇರಿದರು.
ನಡಾಲ್ ಗೆದ್ದು ಫೆಡರರ್ ದಾಖಲೆ ಸಮಗಟ್ಟಿದ ಸಂತೋಷ ಒಂದೆಡೆಯಾದರೆ,ಸಧ್ಯದ ಮಹಾನ್ ಆಟಗಾರರ ನಿವೃತ್ತಿಯ ನಂತರ ಟೆನ್ನಿಸ್ ಲೋಕ ತನ್ನ ಮೊದಲಿನ ಹೊಳಪು ಉಳಿಸಿಕೊಂಡಿತಾ ಎನ್ನುವ ಆತಂಕವಂತೂ ಟೆನ್ನಿಸ್ ಅಭಿಮಾನಿಗಳನ್ನು ಕಾಡುವುದು ಸುಳ್ಳಲ್ಲ.ಸುಮ್ಮನೇ ಟೆನ್ನಿಸ್ ಲೋಕದ ಬೆಳವಣಿಗೆಗಳನ್ನು ಕಳೆದ ಎರಡು ದಶಕಗಳಿಂದ ಗಮನಿಸಿದವರಿಗೆ ಇದು ಗೊತ್ತಿರುತ್ತದೆ.2003 – 04ರ ಹೊತ್ತಿಗೆ ಟೆನ್ನಿಸ್ ಲೋಕವನ್ನು ಮೊದಲು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡವನು ರೋಜರ್ ಫೆಡರರ್.ಆತ ಇನ್ನೇನು ಟೆನ್ನಿಸ್ ಲೋಕದ ಸೋಲಿಲ್ಲದ ಸಾರ್ವಭೌಮನಾಗಿ ಮೆರೆದು ಬಿಡುತ್ತಾನೆನ್ನುವ ಕಾಲಕ್ಕೆ ಅದೇ ಒಂದೆರಡು ವರ್ಷಗಳಲ್ಲಿ ಅವನೆದುರು ನಿಂತವನು ರಫೆಲ್ ನಡಾಲ್.ಇವರಿಬ್ಬರ ಜುಗಲ್‌ಬಂದಿಯಲ್ಲಿಯೇ ಟೆನ್ನಿಸ್ ಲೋಕ ಕಳೆದು ಹೋಗುವುದೇನೋ ಎನ್ನಿಸುವಷ್ಟರಲ್ಲಿ ಲಯ ಕಂಡುಕೊಂಡವನು ನೋವಾಕ್ ಜೋಕೊವಿಚ್.
ಆದರೆ ಅದ್ಯಾಕೊ ಗೊತ್ತಿಲ್ಲ. ಪುರುಷರ ಟೆನ್ನಿಸ್ ಲೋಕಕ್ಕೆ ಈ ಮೂವರ ನಂತರ ಮತ್ತೊಬ್ಬ ದೈತ್ಯ ಪ್ರತಿಭೆಯನ್ನು ಕಂಡುಕೊಳ್ಳುವುದು ಸಾಧ್ಯವೇ ಆಗಲಿಲ್ಲ.ಬಹುತೇಕ ಸಮಕಾಲೀನರಾದರೂ ಮೂವರು ಸಹ ಹೆಚ್ಚು ಕಡಿಮೆ ಟೆನ್ನಿಸ್ ಲೋಕದಲ್ಲಿ ತಮ್ಮ ಪಾರಮ್ಯ ಮೆರೆದಿರುವುದು ಸುಳ್ಳಲ್ಲ.ಅಂಕಿಅಂಶಗಳನ್ನು ಗಮನಿಸಿದರೆ ಮೂವರ ನಡುವಿನ ಪರಸ್ಪರ ಸೆಣದಾಟದ ಎಲ್ಲ ಲೆಕ್ಕಾಚಾರವೂ ಬಹಳ ಆಸಕ್ತಿಕರ.ಅದೇ ಕಾರಣಕ್ಕೋ ಏನೋ,ಟೆನ್ನಿಸ್ ಲೋಕದಲ್ಲಿ ಕಳೆದ ಹದಿನೈದು ವರ್ಷಗಳ ಗ್ರಾಂಡ್‌ಸ್ಲಾಮ್ ಇತಿಹಾಸ ದಲ್ಲಿ ಮುಕ್ಕಾಲು ಪಾಲು ಈ ಮೂವರದ್ದೇ ಹೆಸರು.
2004ರಿಂದ ಇಲ್ಲಿಯವರೆಗಿನ ಅಂಕಿಅಂಶಗಳನ್ನು ಗಮನಿಸುವುದಾದರೆ ನಡೆದ ಒಟ್ಟು 63 ಗ್ರಾಂಡ್‌ಸ್ಲಾಮ್‌ಗಳ ಪೈಕಿ 57 ಟ್ರೋಫಿಗಳನ್ನು ಈ ತ್ರಿಮೂರ್ತಿಗಳೇ ಜಯಿಸಿದ್ದಾರೆ.ಪ್ರತಿಶತದ ಲೆಕ್ಕಾಚಾರದಲ್ಲಿ ಹೇಳುವುದಾದರೆ 88%ದಷ್ಟು ಗೆಲುವಿನ ಲೆಕ್ಕಾಚಾರ ಇವರದ್ದೇ.2006ರಿಂದ ಇಲ್ಲಿಯವರೆಗಿನ ಹದಿನಾಲ್ಕು ವರ್ಷಗಳ ಒಟ್ಟು ಟೂರ್ನಿಗಳ ಪೈಕಿ ಎಂಟು ವರ್ಷಗಳ ಕಾಲ ವರ್ಷದ ಅಷ್ಟೂ ಗ್ರಾಂಡಸ್ಲಾಮ್ ಪಂದ್ಯಾವಳಿಗಳನ್ನು ಈ ಮೂವರೇ ಗೆದ್ದುಕೊಂಡಿರುವುದು ವಿಶೇಷ.ಉಳಿದಂತೆ ಒಂದೇ ಒಂದು ವರ್ಷವೂ ಇವರಲ್ಲೊಬ್ಬನಾದರೂ ಒಂದು ಗ್ರಾಂಡ್‌ಸ್ಲಾಮ್ ಗೆಲ್ಲದೇ ಉಳಿದಿಲ್ಲವೆನ್ನುವುದು ಮತ್ತೊಂದು ಗಮನಾರ್ಹ ಸಂಗತಿ.
ಒಟ್ಟಾರೆಯಾಗಿ ಕಳೆದ ಎರಡು ದಶಕಗಳನ್ನು ಟೆನ್ನಿಸ್ ಲೋಕದ ಸ್ವರ್ಣಯುಗವೆಂದು ಕರೆಯಲು ಅಡ್ಡಿಯಿಲ್ಲವಾದರೂ ಮುಂದೆನು ಎಂಬ ಪ್ರಶ್ನೆ ಎದುರಾದಾಗ ಒಂದು ಖಾಲಿತನ ಕಾಡುವುದಂತೂ ಸತ್ಯ.ಇನ್ನೆನು ಒಂದೆರಡು ವರ್ಷಗಳಲ್ಲಿ ಈ ದಿಗ್ಗಜರು ನಿವೃತ್ತರಾಗಲಿದ್ದಾರೆನ್ನುವುದು ನಿರೀಕ್ಷಿತ.ದೈತ್ಯರ ನಿರ್ಗಮದ ಹೊಸ್ತಿಲಲ್ಲಿ ಟೆನ್ನಿಸ್ ಲೋಕದ ಮೇಲೆ ವಿಜೃಂಭಿಸುವ ಹೊಸ ಪ್ರತಿಭೆಗಳ ಕೊರತೆಯಂತೂ ಎದ್ದು ಕಾಣುತ್ತಿದೆಯೆನ್ನುವುದು ಸುಳ್ಳಲ್ಲ.ಇತ್ತೀಚಿನ ಆಟಗಾರರಲ್ಲಿ ಕನ್ಸಿಸ್ಟನ್ಸಿಯ ತೀವೃ ಕೊರತೆಯಿದೆ ಎನ್ನವುದಂತೂ ಸತ್ಯ.ಒಂದು ಪಂದ್ಯಾವಳಿಗೆ ವಿಜೃಂಭಿಸುವ ಆಟಗಾರ ಮತ್ತೊಂದು ಪಂದ್ಯಾವಳಿಯ ಹೊತ್ತಿಗೆ ಮಂಕಾಗಿರುತ್ತಾನೆ.ಹೊಸಬರ ಪೈಕಿ ಡಾಮಿನಿಕ್ ಥೀಮ್,ಸ್ಟಿಫಾನೋಸ್, ಸಿಟ್ಸಿಫಾಸ್‌ರಂಥವರು ,ಜ್ವರೇವ್‌ನಂಥವರು ಕೊಂಚ ಭರವಸೆ ಮೂಡಿಸಿದ್ದಾರಾದರೂ ಧೀರ್ಘ ರೇಸಿನ ಕುದುರೆ ಯಾರೆನ್ನುವುದು ಖಚಿತವಾಗದು.ಇವರ ನಡುವೆ ಇಟಲಿಯ ಹೊಸ ಹುಡುಗ ಹತ್ತೊಂಬತ್ತರ ಹರೆಯದ ಜಾನಿಕ್ ಸಿನ್ನರ್ ಕೊಂಚ ಭರವಸೆ ಹುಟ್ಟಿಸಿರುವುದು ಟೆನ್ನಿಸ್ ಪ್ರಿಯರಿಗೆ ಶುಭ ಸುದ್ದಿ.
ಏನೇ ಆದರೂ ಇಂಥದ್ದೊಂದು ತ್ರಿಮೂರ್ತಿಗಳ ವೈಭವೋಪೇತ ಸ್ವರ್ಣಯುಗ ಟೆನ್ನಿಸ್‌ನಂತಹ ರೋಚಕ ಕ್ರೀಡಾ ಜಗತ್ತಿಗೆ ಮತ್ತೊಮ್ಮೆ ಕಾಣಸಿಗುವುದಾ ಎಂಬ ಪ್ರಶ್ನೆಗೆ ಕಾಲವೇ ಉತ್ತರವಾಗಬೇಕಷ್ಟೇ.
ಗುರುರಾಜ್ ಕೊಡ್ಕಣಿ ಯಲ್ಲಾಪುರ.