ಬಹುಮುಖ ಪ್ರತಿಭೆಯ ವೀಕ್ಷಕ ವಿವರಣೆಕಾರ-ಪ್ರಶಾಂತ್ ಅಂಬಲಪಾಡಿ
ವಸಂತ ಋತುವಿನಲಿ ಕೋಗಿಲೆಯು ಇಂಪಾಗಿ ಹಾಡುವುದು ರೂಢಿ.ಹಾಗೆಯೇ ಮಳೆಗಾಲ ಕಳೆದು ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ “ಟೆನ್ನಿಸ್ ಕ್ರಿಕೆಟ್ ” ಋತು ಪ್ರಾರಂಭವಾಗುತ್ತದೆ.ಬಹುತೇಕ ರಾಜ್ಯ,ರಾಷ್ಟ್ರ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಗೆ ಉಡುಪಿಯ
ಪ್ರಶಾಂತ್ ಅಂಬಲಪಾಡಿಯವರ ಇಂಪಾದ ವೀಕ್ಷಕ ವಿವರಣೆ ಸೊಬಗು ಕ್ರಿಕೆಟ್ ಪ್ರೇಮಿಗಳ ಮನ ನಲಿಸದಿರದು,ಕುತೂಹಲ ಕಾವೇರದೆ ಇರದು.
ಪೊಡವಿಗೊಡೆಯ ಶ್ರೀ ಕೃಷ್ಣ ನ ನಾಡಾದ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿರುವ ಇವರು ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು,
ರಾಷ್ಟ್ರ,ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳ ವೀಕ್ಷಕ ವಿವರಣೆ ಜೊತೆ ನಾಟಕ,ಯಕ್ಷಗಾನ ಹಾಗೂ ನೃತ್ಯ ರಂಗದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
2000 ನೇ ರಾಜ್ಯದ ಪ್ರತಿಷ್ಟಿತ ತಂಡ “ಪಡುಬಿದ್ರಿ ಫ್ರೆಂಡ್ಸ್”
ಸಂಘಟಿಸಿದ್ದ ರಾಜ್ಯಮಟ್ಟದ ಪಂದ್ಯಾಟದಿಂದ ವೀಕ್ಷಕ ವಿವರಣೆಯ ಇವರ ಪಯಣ ಇಂದು ರಾಜ್ಯದಾದ್ಯಂತ 23 ಜಿಲ್ಲೆಗಳ ಕ್ರಿಕೆಟ್ ಪ್ರೇಮಿಗಳ ಮನೆ ಮನ ತಲುಪಿದೆ.
ಸುಮಾರು 600 ಕ್ಕೂ ಮಿಕ್ಕಿದ ಪಂದ್ಯಾಕೂಟಗಳಿಗೆ ಹಾಗೂ ಕೆ.ಪಿ.ಎಲ್ ಹಾಗೂ ಚಲನಚಿತ್ರ ಕಲಾವಿದರ ಸಿ.ಸಿ.ಎಲ್ ಪಂದ್ಯಾವಳಿ,
ಟೆನ್ನಿಸ್ ಬಾಲ್ ನ ಪ್ರತಿಷ್ಟಿತ ಪಡುಬಿದ್ರಿ,ಚಕ್ರವರ್ತಿ ಕುಂದಾಪುರ,ಜೈ ಕರ್ನಾಟಕ, ಸಾಂಗ್ಲಿಯಾನ,ರಂಗ ಕಪ್,ದಾವಣಗೆರೆ,ಇಲೆವೆನ್ ಅಪ್ ಕೋಟ ಹಾಗೂ D.H.P.L,ಚಾಂಪಿಯನ್ಸ್ ಲೀಗ್,ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ನಂತಹ ವೈಭವೋಪೇತ ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆಕಾರರಾಗಿ ಭಾಗವಹಿಸಿರುತ್ತಾರೆ.
ಅಲ್ಲದೆ ನಾಟಕ ಕಲಾವಿದರಾಗಿ,ಸುಮಾರು 75 ಕ್ಕೂ ಹೆಚ್ಚಿನ ನಾಟಕದಲ್ಲಿ ಭಾಗವಹಿಸಿದ್ದು ಜೊತೆಗೆ ಯಕ್ಷಗಾನ ರಂಗದಲ್ಲೂ ನೈಪುಣ್ಯತೆಯನ್ನು ಸಾಧಿಸಿದವರು.
ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಮೇಳಕ್ಕೆ ತನ್ನ ಪ್ರತಿಭೆಯನ್ನು ಓರೆ ಹಚ್ಚಿರುವ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾಮಂಡಳಿಯಂತಹ ಹವ್ಯಾಸಿ ಸಂಘಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೆಜ್ಜೆ ಕಟ್ಟಿದವರು.ಜೊತೆಗೆ ನಾಟ್ಯ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ 2012_13 ನೇ ಸಾಲಿನಲ್ಲಿ ವಿಶ್ವ ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ಬೆಂಗಳೂರು ಇವರು ಜಂಟಿಯಾಗಿ ಕೊಡಮಾಡಿದ “ಕ್ರೀಡಾರತ್ನ” ಪ್ರಶಸ್ತಿಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅನಿವಾಸಿ ಕನ್ನಡಿಗ ಅಬುಧಾಬಿಯ
ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರ ಮುಖಾಂತರ ಪಡೆದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.
ತಮ್ಮನ್ನು ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಸುಮಾರು 500 ಕ್ಕೂ ಮಿಕ್ಕಿರುವ ನೆನಪಿನ ಕಾಣಿಕೆಗಳು,ಸ್ಮರಣಿಕೆಗಳು,ಹಾರ ತುರಾಯಿಗಳು ಮನೆಯಲ್ಲಿ ಎಲ್ಲರನ್ನು ಆಕರ್ಷಿಸದಿರದು. ಇತಿಹಾಸ ಸೃಷ್ಟಿಸಿದ್ದ ಧಾರಾವಾಹಿ “ಗುಡ್ಡದ ಭೂತ” ದಲ್ಲಿ ಪ್ರಕಾಶ್ ರೈ ಅವರ ಜೊತೆಗೆ ಕಿರುಪಾತ್ರದಲ್ಲಿ ನಟಿಸಿರುವುದು ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು ,ಇತ್ತೀಚೆಗೆ ಉಡುಪಿಯ ಸ್ಥಳೀಯ
ಟಿ.ವಿ ಚಾನೆಲ್ ಪ್ರೈಮ್ ಟಿ.ವಿ ಯ ಮನದ ಮಾತು ಕಾರ್ಯ ಕ್ರಮದಲ್ಲಿ ಸಂದರ್ಶಿಸಿರುವದು ಇವರ ಬಹುಮುಖ ಪ್ರತಿಭೆಗೆ ಸಂದ ಗೌರವ.
ಆರ್.ಕೆ.ಆಚಾರ್ಯ ಕೋಟ.