ಭಾರತದಲ್ಲಿ ಬಹಳಷ್ಟು ಮಂದಿ ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ಗೆಲುವನ್ನು ತಮ್ಮದಾಗಿಸಿ ತಾವು ಎತ್ತರಕ್ಕೇರಿದ್ದಲ್ಲದೇ ಈ ದೇಶದ ಧ್ವಜವನ್ನು ಕೂಡ ದಿಗಂತದೆತ್ತರಕ್ಕೆ ಹಾರಿಸಿ ನಮ್ಮನ್ನು ಪುಳಕಿತಗೊಳಿಸಿದ್ದಾರೆ.
ಅಂತವರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು “ಹಾರುವ ಸಿಖ್” ಎಂದೇ ಖ್ಯಾತಿ ಪಡೆದ “ಮಿಲ್ಖಾ ಸಿಂಗ್”. ಆ ಹೆಸರು ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ,ಕಾರಣ
ಓಟದ ಸ್ಪರ್ಧೆಯ ವಿಭಾಗದಲ್ಲಿ ಅವರು ಅದ್ವಿತೀಯ ಸಾಧಕ.ಭಾರತಕ್ಕೆ ಟ್ರ್ಯಾಕ್ & ಫೀಲ್ಡ್ ಸ್ಪರ್ಧೆಯಲ್ಲಿ ಪ್ರಥಮಬಾರಿಗೆ ಚಿನ್ನದ ಪದಕ ತಂದುಕೊಟ್ಟ ಕ್ರೀಡಾಪಟು,ಐದು ದಶಕಗಳ ಕಾಲ ಒಂದಷ್ಟು ರಾಷ್ಟ್ರೀಯ ದಾಖಲೆಗಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಮಹಾನ್ ಕ್ರೀಡಾಳು.
ಮಿಲ್ಖಾ ಈಗಿನವರಂತೆ ಕ್ರೀಡೆಯನ್ನು ವೃತ್ತಿ ಯಾಗಿ ಸ್ವೀಕರಿಸಿ ಕ್ರೀಡಾಕ್ಷೇತ್ರಕ್ಕೆ ಬಂದವರಲ್ಲ.ಪರಿಸ್ಥಿತಿ ಪರಿಸರ ಅವರನ್ನು ಅನಿವಾರ್ಯವಾಗಿ ಈ ವಿಭಾಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು.ಭಾರತ ಪಾಕ್ ವಿಭಜನೆಯ ಕಾಲದಲ್ಲಿ ಈಗಿನ ಪಾಕಿಸ್ತಾನ ಭಾಗದಲ್ಲಿ ವಾಸ್ತವ್ಯವಿದ್ದ ತನ್ನ ಕುಟುಂಬದ ಹಿರಿಯರನ್ನು ಕಳೆದುಕೊಂಡು ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಓಟ ಪ್ರಾರಂಭಿಸಿದ ಮಿಲ್ಖಾರ ಆನಂತರದ ಪ್ರತಿ ಓಟಗಳಲ್ಲಿ ಆ ನೋವು,ಅಸಹನೆ,ರೋಷ ಎಲ್ಲವೂ ಕೂಡ ಕಾಣಲಿಕ್ಕೆ ಸಿಗುತ್ತದೆ.
ಅದು 1958 ರ ಟೋಕಿಯೋ ಏಷ್ಯನ್ ಗೇಮ್ಸ್. ಆ ವರೆಗೆ ಪಾಕಿಸ್ತಾನದ ಅಬ್ದುಲ್ ಕಾಲೀಖ್ ಏಷ್ಯಾದ ವೇಗದ ಓಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದ ಓಟಗಾರರಾಗಿದ್ದರು. ಭಾರತದ ದಂಡಿನಲ್ಲಿ ಓಟಗಾರರಾಗಿ ಒಂದಷ್ಟು ಸಿದ್ಧಿಯೊಂದಿಗೆ ಪ್ರಸಿದ್ಧಿಯನ್ನು ಪಡೆದು ಆಗಷ್ಟೇ ಅಂತರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ತನ್ನ ಹೆಸರು ಸ್ಥಾಪಿತಗೊಳ್ಳಬೇಕು ಎಂಬ ಮಹಾದಾಸೆಯುಳ್ಳ ಓಟಗಾರ ಮಿಲ್ಖಾ. ಸರಿ ಮೊದಲು 100 ಮೀಟರ್ ನಲ್ಲಿ ಪಾಕಿಸ್ಥಾನದ ಕಾಲೀಖ್ ದಾಖಲೆಯ ವೇಗದಲ್ಲಿ ಚಿನ್ನದ ಪಡೆದು ಸಂಭ್ರಮಿಸಿದರು. ಆ ಸ್ಪರ್ಧೆಯಲ್ಲಿ ಮಿಲ್ಖಾ ಇರಲಿಲ್ಲ. ನಂತರ 400 ಮೀಟರ್ ವಿಭಾಗದಲ್ಲಿ ಮಿಲ್ಖಾ ಏಷ್ಯಾದ ದಾಖಲೆಯೊಂದಿಗೇ ಚಿನ್ನದ ಪದಕ ಗಳಿಸಿಕೊಟ್ಟರು.ಇದು ಆ ವರೆಗೆ ಟ್ರ್ಯಾಕ್ & ಫೀಲ್ಡ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಎಂಬುದು ವಿಶೇಷ. ಆ ಏಷ್ಯನ್ ಗೇಮ್ಸ್ ನ ನಂತರದ ಸ್ಫರ್ಧೆ ಬಹುನಿರೀಕ್ಷಿತ 200 ಮೀಟರ್ ಓಟದ ಸ್ಪರ್ಧೆ. ನಿರೀಕ್ಷೆ ,ಕಾತರತೆ ಜಾಸ್ತಿ ಆಗಲು ಕಾರಣ ಏಷ್ಯಾದ ವೇಗದ ಓಟಗಾರ ಕಾಲೀಖ್ ಮತ್ತು ಮಿಲ್ಖಾ ಇಬ್ಬರೂ ಭಾಗವಹಿಸುವ ಸ್ಪರ್ಧೆ ಅದಾದಕಾರಣ ಕುತೂಹಲ ತೀವ್ರಗೊಂಡಿತ್ತು.ಸ್ಪರ್ಧೆ ಆರಂಭವಾಗಿ ಕೊನೆಯ ಹಂತದ ವರೆಗೆ ಇಬ್ಬರೂ ಸಮಬಲದಲ್ಲೇ ಓಡುತ್ತಿದ್ದರು.ಯಾರು ಗೆಲ್ಲಬಹುದು ಎಂದು ಯಾರಿಗೂ ನಿರ್ಣಯಿಸಲಿಕ್ಕೆ ಸಾದ್ಯವಿರಲಿಲ್ಲ. ಇನ್ನೇನು ಮುಕ್ತಾಯ ಹಂತ ಕಾಣುವಾಗ ಕಾಲೀಖ್ ರ ಎದೆ ಮುಕ್ತಾಯದ ಹಗ್ಗವನ್ನು ಮುಟ್ಟಿತ್ತು ಅದೇ ಸಮಯಕ್ಕೆ ನೆಲಬಿಟ್ಟು ನೆಗೆತ ಕಂಡು ಹಾರಿದ ಮಿಲ್ಖಾ ರ ಮುಂಗಾಲು ಕೂಡ ಹಗ್ಗದ ಸ್ಪರ್ಶ ಕಂಡಿತ್ತು. ಬಹಳಷ್ಟು ಸಲ ವಿಡಿಯೋ ಗಳ ತುಣುಕು ಕಂಡ ನಿರ್ಣಾಯಕರು ಮಿಲ್ಖಾ ರನ್ನು “ವಿಜಯೀ” ಎಂದು ಘೋಷಿಸಿದರು. ಇಡೀ ದೇಶ ಅಂದು ಸಂಭ್ರಮದಿಂದ ಕುಣಿದಾಡಿತ್ತು. ಮಿಲ್ಖಾ ತನ್ನ ಕುಟುಂಬದವರ ಹತ್ಯೆಗೆ ಒಂದುರೀತಿಯಲ್ಲಿ ಪ್ರತಿಕಾರ ತೆಗೆದುಕೊಂಡಂತಿತ್ತು ಆ ಓಟ. ಅಂದಿನ ಆ ನಿರ್ಣಾಯಕ ಕೊನೆಹಂತದ ಹಾರಿ ಗೆರೆಮುಟ್ಟುವ ಮಿಲ್ಖಾರ ತಂತ್ರ ಅವರಿಗೆ “ಹಾರುವ ಸಿಖ್”ಎಂಬ ಹೆಸರನ್ನು ಶಾಶ್ವತವಾಗಿ ತಂದುಕೊಟ್ಟಿತು.
ಭಾರತದ ಪರ ಮೂರು (1956,1960,1964) ಒಲಪಿಂಕ್ಸ್ ನಲ್ಲಿ ಭಾಗವಹಿಸಿದ ಮಿಲ್ಖಾರಿಗೆ ಒಲಪಿಂಕ್ಸ್ ಪದಕ ಕೊನೆಗೂ ಮರೀಚಿಕೆಯಾಗಿಯೇ ಉಳಿಯಿತು. ಅದರಲ್ಲೂ 1960 ರ ರೋಮ್ ಒಲಪಿಂಕ್ಸ್ ನಲ್ಲಿ ಪದಕದ ಹತ್ತಿರ ಬಂದು ಸೋತದ್ದು ಕ್ರೀಡಾಪ್ರೇಮಿಗಳ ಹೃದಯದಲ್ಲಿ ಇನ್ನೂ ಹಸಿರಾಗಿದೆ.ಅದೂ ಕೂಡ ಸೆಕೆಂಡ್ ನ ನೂರನೇ ಒಂದು ಭಾಗದಷ್ಟು ಅಂತರದಲ್ಲಿ ಭಾರತಕ್ಕೆ ಪದಕ ತಪ್ಪಿತ್ತು.ಇನ್ನೂ ಏಷ್ಯಮಟ್ಟದಲ್ಲಿ ಅವರ ಸಾಧನೆಯನ್ನು ಈ ವರೆಗೆ ಯಾರೂ ಮುರಿದಿಲ್ಲ. ನಾಲ್ಕು ಸಲ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕವಿಜೇತರು ಮಿಲ್ಖಾ.
1958 ರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಮಿಲ್ಖಾ ಸಾಧನೆ ಮೊನ್ನೆ ಮೊನ್ನೆ 2010 ರಲ್ಲಿ ಕೃಷ್ಣ ಪೂನಿಯಾ “ಡಿಸ್ಕಸ್ ತ್ರೋ” ನಲ್ಲಿ ಪದಕ ಪಡೆಯುವ ವರೆಗೆ ಅರ್ಥಾತ್ ಐದು ದಶಕಗಳ ವರೆಗೆ ಟ್ರ್ಯಾಕ್ & ಫೀಲ್ಡ್ ಪದಕಗಳ ಮಟ್ಟಿಗೆ ದಾಖಲೆಯಾಗಿಯೇ ಉಳಿದಿತ್ತು.
“Life has given me more than what I have deserved” ಬದುಕು ನಾನು ಎಣಿಸಿದ್ದಕ್ಕಿಂತ ಹೆಚ್ಚಿನದ್ದನ್ನೇ ನನಗೆ ನೀಡಿದೆ ಎಂದು ಪ್ರಾಂಜಲ ಮನಸ್ಸಿನಿಂದ ಹೇಳುತ್ತಿದ್ದ ಮಿಲ್ಖಾ ಇಂದು ನಮ್ಮೊಂದಿಗಿಲ್ಲ. ಬೇರೆ ಆಟಗಳಲ್ಲಿ ಉಳಿದವರ ಪ್ರದರ್ಶನ ದಿಂದ ಫಲಿತಾಂಶ ನಿರ್ಣಯಗೊಳ್ಳುತ್ತದೆ.
ಆದರೇ ಓಟದ ಸ್ಪರ್ಧೆ ಹಾಗಲ್ಲ ಅವನೇ ನಿರ್ಣಾಯಕ. ಬೇರೆಯವರು ಅವನ ಓಟವನ್ನು ಓಡಲಾರರು. ಸೋಲು ಗೆಲುವುಗಳಿಗೆ ಅವನೇ ಕಾರಣೀಕರ್ತ ಎಂಬ ಬದುಕಿನ ಸತ್ಯವನ್ನು ಅರುಹಿ ಹೋದ ಮಿಲ್ಖಾ ಇನ್ನೂ ನೆನಪು ಮಾತ್ರ..
ಸಾಧ್ಯವಾದರೆ ಮತ್ತೆ ಈ ಮಣ್ಣಿನಲ್ಲಿಯೇ ಹುಟ್ಟಿಬನ್ನಿ ಮಿಲ್ಖಾ ..