*ಕೆ.ಆರ್.ಕೆ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ*
ಮಂಗಳೂರು-ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಾ ನಿರತ ಸಂಸ್ಥೆ “ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್(ರಿ) ಮೊಗವೀರ ಪಟ್ಣ ಉಳ್ಳಾಲ ಇವರ ಆಶ್ರಯದಲ್ಲಿ,ಅಗಲಿದ ಮಿತ್ರರ ಸ್ಮರಣಾರ್ಥ ಮತ್ತು 35 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ಅಖಿಲ ಭಾರತ ಮಟ್ಟದ ಹೊನಲು ಬೆಳಕಿನ “ಮಾರುತಿ ಟ್ರೋಫಿ-2023” ಪ್ರಶಸ್ತಿ ಪ್ರಕೃತಿ ನ್ಯಾಶ್ ತಂಡ ಜಯಿಸಿದೆ.
ಫೈನಲ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಾನ್ಸನ್ ಕುಂದಾಪುರ-ಪ್ರಕೃತಿ ನ್ಯಾಶ್ ತಂಡದ ಬೌಲರ್ ಗಳ ಎದುರು ರನ್ ಗಳಿಸಲು ಪರದಾಡಿ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕುತ್ತರವಾಗಿ ಪ್ರಕೃತಿ ನ್ಯಾಶ್ ಕೇವಲ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದರು.ಪ್ರಥಮ ಸ್ಥಾನಿ ಪ್ರಕೃತಿ ನ್ಯಾಶ್ 4 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿ ಮತ್ತು ದ್ವಿತೀಯ ಸ್ಥಾನಿ ಜಾನ್ಸನ್ ಕುಂದಾಪುರ 2 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಪ್ರಕೃತಿ ನ್ಯಾಶ್-ರಾಮಾಂಜನೇಯ ಗುಡ್ಡೆಕೊಪ್ಲ ತಂಡವನ್ನು ಹಾಗೂ ಜಾನ್ಸನ್ ಕುಂದಾಪುರ-ಫ್ರೆಂಡ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಫೈನಲ್ ನಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ನ್ಯಾಶ್ ನ ಪ್ರವೀಣ್ ಗೌಡ ಪಂದ್ಯಶ್ರೇಷ್ಟ ಮತ್ತು ಟೂರ್ನಮೆಂಟ್ ನ ಬೆಸ್ಟ್ ಬೌಲರ್,ಪ್ರಕೃತಿ ನ್ಯಾಶ್ ನ ಮಹೇಶ್ ಬೆಸ್ಟ್ ಬ್ಯಾಟರ್ ಮತ್ತು ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್ರೌಂಡರ್ ಪ್ರದರ್ಶನ ನೀಡಿದ ರಾಜಾ ಸಾಲಿಗ್ರಾಮ ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ದ್ವಿಚಕ್ರ ವಾಹನವನ್ನು ಉಡುಗೊರೆ ರೂಪದಲ್ಲಿ ಪಡೆದುಕೊಂಡರು.
*ರಿಯಲ್ ಫೈಟರ್ಸ್-ಮೊಗವೀರ ಪ್ರೀಮಿಯರ್ ಲೀಗ್ ಚಾಂಪಿಯನ್ಸ್*
ಪಂದ್ಯಾಟದ ಮೊದಲೆರಡು ದಿನಗಳ ಕಾಲ ನಡೆದ,ಮೊಗವೀರ ಸಮುದಾಯದ 8 ಪ್ರತಿಷ್ಠಿತ ಫ್ರಾಂಚೈಸಿಗಳ ನಡುವೆ ನಡೆದ ಮೊಗವೀರ
ಪ್ರೀಮಿಯರ್ ಪಂದ್ಯಾಟದಲ್ಲಿ ರಿಯಲ್ ಫೈಟರ್ಸ್ ಮಲ್ಪೆ-ಮೊಗವೀರ ಉಳ್ಳಾಲ ಇಲೆವೆನ್ ತಂಡವನ್ನು ಮಣಿಸಿ ಪ್ರಥಮ ಪ್ರಶಸ್ತಿ 2 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಯನ್ನು ಹಾಗೂ ದ್ವಿತೀಯ ಸ್ಥಾನದ ಮೊಗವೀರ ಇಲೆವೆನ್ ಉಳ್ಳಾಲ 1 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ ಕಿರಣ್ ಮಟ್ಟು,ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಚರಣ್ ರಾಜ್,ಬೆಸ್ಟ್ ಬ್ಯಾಟರ್ ಸುಮಿತ್ ಮತ್ತು ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್ರೌಂಡರ್ ಪ್ರದರ್ಶನ ನೀಡಿದ ರಿಯಲ್ ಫೈಟರ್ಸ್ ಮಲ್ಪೆ ತಂಡದ ಪ್ರದೀಪ್ ಕಿದಿಯೂರು ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ದ್ವಿಚಕ್ರ ವಾಹನವನ್ನು ಪಡೆದುಕೊಂಡರು.
*ಬಹುಮಾನ ವಿತರಿಸಿದ 1983 ವಿಶ್ವಕಪ್ ವಿಜೇತ ತಂಡದ ವಿಕೆಟ್ ಕೀಪರ್ ಸೈಯದ್ ಕೀರ್ಮಾನಿ*
ಸಮಾರೋಪ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಅಂತರಾಷ್ಟ್ರೀಯ ಕ್ರಿಕೆಟ್ ಪಟು,1983 ವಿಶ್ವಕಪ್ ವಿಜೇತ ತಂಡದ ಕೀಪರ್ ಮಾತನಾಡಿ *”ಅಂತರಾಷ್ಟ್ರೀಯ ಪಂದ್ಯಾಟದಲ್ಲೂ ನೋಡಿರದ ವೈಭವ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ನೋಡಿರದ ಕಿಕ್ಕಿರಿದ ಜನಸಂದಣಿಯನ್ನು ಮಂಗಳೂರಿನಲ್ಲಿ ನೋಡುವ ಭಾಗ್ಯ ನನ್ನದಾಯಿತು,ಮಾರುತಿ ಉಳ್ಳಾಲ ಸಂಸ್ಥೆಯ ಕ್ರೀಡೆಯ ಮೇಲಿನ ಪ್ರೀತಿ ಗೌರವ,ಸಾಮಾಜಿಕ ಕಾಳಜಿ ಅತ್ಯಂತ ಪ್ರಶಂಸನೀಯ ಹಾಗೂ ನೀವು ತೋರಿಸಿದ ಪ್ರೀತಿ ಆದರಕ್ಕೆ ಚಿರರುಣಿ ಎಂದರು.”*
*ಹಿರಿಯ ಕ್ರೀಡಾಪಟುಗಳು ಮತ್ತು ಸಾಧಕರಿಗೆ ಗೌರವ*
ಹಲವಾರು ವರ್ಷಗಳಿಂದ ಅನೇಕ ಕ್ರೀಡಾಪಟುಗಳ ಭವಿಷ್ಯವನ್ನು ರೂಪಿಸಿದ ಕ್ರಿಕೆಟ್ ಆಟಗಾರರಾದ ದಿನೇಶ್ ಕರ್ಕೇರ,ಮಾರುತಿ ಸಂಸ್ಥೆಯ ಗೌರವಾಧ್ಯಕ್ಷರಾದ ಸುಧೀರ್ ವಿ. ಅಮೀನ್,ಈಜುಪಟು, ಮಹಮ್ಮದ್ ಬಾಸಿತ್ ,ನಾಟಕಕಾರ ದೇವದಾಸ್ ಕಾಪಿಕಾಡ್,80-90 ರ ದಶಕದ ಹಿರಿಯ ಆಟಗಾರರು,ಅಲ್ಲದೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 60 ಜನರನ್ನು ಸನ್ಮಾನಿಸಲಾಯಿತು.
*ಸಹಾಯ ಧನ ವಿತರಿಸಿದ ಮಾರುತಿ ಸಂಸ್ಥೆ*
ದಿವಂಗತರಾದ ನಝೀರ್ ಉಳ್ಳಾಲ್, ಅಶ್ವಥ್ ಪುತ್ರನ್, ವಿನೋದ್ ಪುತ್ರನ್, ಶರತ್ ತಿಂಗಳಾಯ, ಕುಟುಂಬದವರಿಗೆ ತಲಾ ಒಂದುಲಕ್ಷ ಹಾಗೂ ವಿಕಲಾಂಗ ವಿದ್ಯಾರ್ಥಿನಿ ಕೊಣಾಜೆಯ ಫಾತಿಮಾ ನಿಶಾ ರವರ ವಿದ್ಯಾಭ್ಯಾಸಕ್ಕಾಗಿ 25000 ಅಲ್ಲದೇ ಇತರರಿಗೆ ಸಹಾಯಧನ ನೀಡಲಾಯಿತು.
*ಹಬ್ಬದ ವಾತಾವರಣ ಸೃಷ್ಟಿ-ಗ್ಯಾಲರಿ ತುಂಬಿ ಕಿಕ್ಕಿರಿದ ಕ್ರೀಡಾಭಿಮಾನಿಗಳ ದಂಡು*
ಮಂಗಳೂರು ನೆಹರೂ ಮೈದಾನದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ ಮಾರುತಿ ಉಳ್ಳಾಲ ಸಂಸ್ಥೆ ವಿಶೇಷವಾಗಿ ಕಲ್ಲಡ್ಕದ ಗೊಂಬೆ,ಕೊಂಬು(ನಗಾರಿ),
ಮಂಗಳೂರು ವಿಶೇಷ ಚಂಡೆ ವಾದ್ಯ ಸಿಡಿಮದ್ದುಗಳ ಪ್ರದರ್ಶನ ಕ್ರೀಡಾಪ್ರೇಮಿಗಳ ಕಣ್ಮನ ಸೆಳೆಯಿತು.
ಆಟಗಾರರಿಗೆ ವಿಶೇಷ ಊಟೋಪಚಾರ,ಎಳನೀರು ಮತ್ತು ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ವಿ.ಕೆ ಫರ್ನಿಚರ್ ಮಂಗಳೂರು ಕೊಡಮಾಡಿದ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.
ಸಾವಿರಾರು ಮಂದಿ ಗ್ಯಾಲರಿಯಲ್ಲಿ ಕುಳಿತು ಪಂದ್ಯಾಟವನ್ನು ಸವಿಯನ್ನು ಸವಿದರೆ,ಲಕ್ಷಾಂತರ ಮಂದಿ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನ ಮೂಲಕ ನೇರ ಪ್ರಸಾರವನ್ನು ವೀಕ್ಷಿಸಿದರು.ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಐಪಿಎಸ್,ಯಶಪಾಲ ಸುವರ್ಣ್, ವೇದವ್ಯಾಸ ಕಾಮತ್, ಕೀರ್ಮಾನಿ, ಆನಂದ ಲೋಭೋ, ಶರತ್ ಶೆಟ್ಟಿ,ಗೌತಮ್ ಶೆಟ್ಟಿ, ಕಾರ್ಫೋರೇಟರ್ ಅಬ್ದುಲ್ ಲತೀಫ್, ಡಾ| ಸುಮನ, ರಣಜಿ ಆಟಗಾರ ನಿಹಾಲ್ ಉಳ್ಳಾಲ್, ನಿವೃತ್ತ ಎಸ್ ಪಿ ಜಯಂತ್ ಶೆಟ್ಟಿ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಪುಂಡಲೀಕ ಹೊಸಬೆಟ್ಟು, ಯತೀಶ್ ಬೈಕಂಪಾಡಿ, ಉದ್ಯಮಿಗಳಾದ ಮೋಹನ್ ಬೆಂಗ್ರೆ, ಸುಲೈಮಾನ್, ಚೇತನ್ ಬೆಂಗ್ರೆ, ದಯಾನಂದ ಪುತ್ರನ್ ದ.ಕ ಮೊಗವೀರ ಸಂಯುಕ್ತ ಸಭೆ ಹಾಗೂ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್,ಜನನಿ ಟೂರ್ಸ್ &ರೆಸಾರ್ಟ್ ನ ಮಾಲೀಕ ಜಗದೀಶ್ ಕೋಟ್ಯಾನ್,ದ.ಕ ಮಹಾಜನ ಸಂಘದ ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳ್, ಯುವಕ ಮಂಡಲದ ಅಧ್ಯಕ್ಷ ವರದರಾಜ್ ಬಂಗೇರ, ಸಂಚಾಲಕರಾದ ಸಂದೀಪ್ ಪುತ್ರನ್, ಅನಿಲ್ ಚರಣ್ ಮತ್ತಿತರರು ಉಪಸ್ಥಿತರಿದ್ದರು…
ಪ್ರಶಾಂತ್ ಅಂಬಲಪಾಡಿ ಮತ್ತು ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.