ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸಿದವು.
ಚಿನ್ನಸ್ವಾಮಿಯ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಮಹಾ ಫೈನಲ್ ನ ಸೆಣಸಾಟದಲ್ಲಿ ಮೈಸೂರ್ ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡ ಗೆದ್ದು ಜಯಭೇರಿ ಬಾರಿಸಿದೆ. ದಿಟ್ಟ ಹೋರಾಟ ತೋರಿಸಿದ ಮೈಸೂರ್ ವಾರಿಯರ್ಸ್ 8 ರನ್‌ಗಳ ಅಂತರದಿಂದ ಸೋಲನ್ನೊಪ್ಪಿ ರನ್ನರ್ ಅಪ್ ಗೆ ತೃಪ್ತಿಪಡಬೇಕಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 204 ರನ್‌ಗಳ ಗುರಿ ಮೈಸೂರ್ ವಾರಿಯರ್ಸ್ ಗೆ ನೀಡಿತು. ಈ ಗುರಿ ಬೆನ್ನಟ್ಟಿದ ಮೈಸೂರ್ ವಾರಿಯರ್ಸ್ ಉತ್ತಮ ಆರಂಭವನ್ನು ಪಡಕೊಂಡು ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಬಂದಿತ್ತು. ಆರಂಭಿಕ ಆಟಗಾರ ಆರ್ ಸಮರ್ಥ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 63 ರನ್‌ಗಳನ್ನುಗಳಿಸಿದರು. ನಾಯಕ ಕರುಣ್ ನಾಯರ್ ಮತ್ತೊಮ್ಮೆ ಆರ್ಭಟ ತೋರುವ ಸೂಚನೆ ನೀಡಿದ್ದರು. ಆದರೆ 20 ಎಸೆತಗಳ ಮುಂದೆ 37 ರನ್‌ಗಳಿಸಿದ್ದ ಸಂದರ್ಭ ಕರಿಯಪ್ಪ ಔಟ್ ಮಾಡುವಲ್ಲಿ ಯಶಸ್ವಿಯಾದರು. ಕೆಳ ಕ್ರಮಾಂಕದ ಬ್ಯಾಟರ್ಸ್ ಗಳಿಂದ ನಿರೀಕ್ಷಿತ ಪ್ರದರ್ಶನ ಬಾರದೇ ಇದ್ದ ಕಾರಣ ವಾರಿಯರ್ಸ್ ದಾಂಡಿಗರು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬೇಕಾಯಿತು. ಅಂತಿಮವಾಗಿ ಕೊನೆಯ ಓವರ್‌ವರೆಗೂ ಸಾಗಿದ ರಣರೋಚಕ ಕದನದಲ್ಲಿ ಮೈಸೂರ್ ವಾರಿಯರ್ಸ್ 8 ರನ್‌ಗಳ ಹಿನ್ನಡೆಯಿಂದಾಗಿ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿ 2023ರ ಚಾಂಪಿಯನ್ ಆಗಿ ಹೊರಹೊಮ್ಮುವಂತಾಯಿತು.
ಕರುಣ್ ನಾಯರ್ ನೇತೃತ್ವದ ಮೈಸೂರ್ ವಾರಿಯರ್ಸ್ ತಂಡ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 36 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಕರುಣ್ ನಾಯರ್ ಅವರ ಸ್ಪೋಟಕ ಶತಕದಿಂದಾಗಿ ಸೆಮಿಫೈನಲ್‌ನಲ್ಲಿ ಭಾರೀ ಅಂತರದಿಂದ ಜಯಗಳಿಸಿತ್ತು. ಮತ್ತೊಂದೆಡೆ ಹುಬ್ಬಳ್ಳಿ ಟೈಗರ್ಸ್ ತಂಡ ಶಿವಮೊಗ್ಗ ತಂಡದ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು ಫೈನಲ್ ಕಣಕ್ಕಿಳಿದಿದ್ದಎರಡೂ ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ ತಂಡಗಳಾಗಿದ್ದರಿಂದ ಕೊನೆಯ ಓವರ್‌ವರೆಗೂ ಜಿದ್ದಾಜಿದ್ದಿನ ಕದನ ನಡೆದಿತ್ತು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ತಂಡ 8 ರನ್‌ಗಳ ಅಂತರದಿಂದ ಗೆದ್ದು ಚಾಂಪಿಯನ್ ಅನಿಸಿಕೊಂಡಿತು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ