ಎಲ್ಲಾ ಫಾರ್ಮಾಟ್ ಗಳಲ್ಲೂ ಸೈ ಎನ್ನಿಸಿಕೊಂಡ ಕಡಲೂರಿನ ಕ್ರಿಕೆಟಿಗ ರಾಹುಲ್ ಭಾರತ ತಂಡದ ಭವಿಷ್ಯ.
ಭರ್ತಿ ಆರು ಅಡಿಯ, ಸ್ಫುರದ್ರೂಪಿ,
ಶುದ್ಧ ತಾಳ್ಮೆಯ, ವಿನಮ್ರ ನಡವಳಿಕೆಯ ಹುಡುಗನನ್ನ 2010 ರಿಂದೀಚೆಗೆ ನೋಡುತ್ತಲೇ ಬಂದಿದ್ದೇನೆ.
ಕ್ರಿಕೆಟ್ ಅನ್ನ ಮಂಗಳೂರು ದಿನಗಳಲ್ಲೇ ಕರಗತ ಮಾಡಿಕೊಂಡವನು. ಹಾಗೆ ನೋಡಿದರೆ ಸ್ವಲ್ಪ ಲೇಟ್ ಆಗಿಯೇ ಕ್ರಿಕೆಟ್ ಬ್ಯಾಟ್ ಹಿಡಿದ ಹುಡುಗ ಇವನು. ಅವನಿಗಾಗ ಜಸ್ಟ್ 9 ವರ್ಷ. ಆಡಲು ಶುರು ಮಾಡಿದ್ದ. ಗುರು ಸ್ಯಾಮ್ಯುಯೆಲ್ ಜಯರಾಜ್. ಮಂಗಳೂರಿನ ಸ್ಟೇಟ್ ಬ್ಯಾಂಕ್ ಹತ್ತಿರ ಇರೋ ನೆಹರು ಮೈದಾನ. ಅಲ್ಲೇ ಕ್ರಿಕೆಟ್ ನಲ್ಲಿ ಅಂಬೆಗಾಲಿಟ್ಟ.
ಇದಕ್ಕೂ ಮುಂಚೆ ಮಂಗಳೂರು ಹುಡುಗರ ಕ್ರಿಕೆಟ್ ಬಗ್ಗೆ ಸ್ವಲ್ಪ ಹೇಳಬೇಕು.
ಮಂಗಳೂರಿನ ಹುಡುಗರು ಕ್ರಿಕೆಟ್ ಅನ್ನ ಇಷ್ಟ ಪಡುತ್ತಾರೆ. ಸಿಂಗಲ್ ಪೀಸ್ ಬ್ಯಾಟ್ ಮತ್ತು ಟೆನಿಸ್ ಬಾಲ್. ಅಂಡರ್ ಆರ್ಮ್ ಬೌಲಿಂಗ್ , ಸಣ್ಣ ಪುಟ್ಟ ಬೆಟ್ಟಿಂಗ್. ದಿನಾಂತ್ಯಕ್ಕೆ ಜೀವನ ಸ್ವರ್ಗ. ಅದರ ಮುಂದಕ್ಕೆ ಕ್ರಿಕೆಟ್ ನಲ್ಲಿ ಅಷ್ಟು ಮುಂದುವರೆಯೋದಿಲ್ಲ. ಈ ವಿಷಯದಲ್ಲಿ ರಾಹುಲ್ ಅಲ್ಪ ತೃಪ್ತನಾಗಿರಲಿಲ್ಲ. ಅವನಿಗೆ ಕನಸುಗಳಿದ್ದವು.
ಸ್ಯಾಮ್ಯುಯೆಲ್ ಜಯರಾಜ್ ಗೆ ಈ ಹುಡುಗ ಸ್ವಲ್ಪ ಭಿನ್ನವಾಗೇ ಕಂಡಿದ್ದ. ನಾಲ್ಕು ಗಂಟೆಗೆ ಪ್ರಾಕ್ಟೀಸ್ ಗೆ ಬಾರೋ ಎಂದರೆ ಹುಡುಗ ಎರಡು ಗಂಟೆಗೆ ಗ್ರೌಂಡ್ ಗುಡಿಸಿ, ಮ್ಯಾಟ್ ಗೆ ಮೊಳೆ ಬಡಿದು, ನೆಟ್ ಕಟ್ಟಿ ಸಜ್ಜಾಗುತ್ತಿದ್ದ. ದೇವರು ನೋಡಿದರೂ ಹರಸ ಬೇಕು ಅಂತ ಪರಿಶ್ರಮ ಅವನದು. ಜಯರಾಜ್ ಆಗಲೇ ನಿರ್ಧರಿಸಿದ್ದರು ನನ್ನ ಪಾಲಿನ ಅರ್ಜುನ ಇವನೇ ಎಂದು. ಇದ್ದಬದ್ದ ವಿದ್ಯೆಯೆಲ್ಲಾ ಧಾರೆಯೆರೆದರು. ಹುಡುಗ 12 ವರ್ಷಕ್ಕೆ ಕೆಎಸ್ ಸಿಎ ಅಂಡರ್ 13 ಟೂರ್ನಿಯಲ್ಲಿ ಎರಡು ಡಬಲ್ ಸೆಂಚುರಿ ಹೊಡೆದಿದ್ದ.
ಅದರಲ್ಲಿ ಒಂದು ಬೆಂಗಳೂರು ವಲಯದ ವಿರುದ್ಧ. ದೇವರು ಅವತ್ತು ದ್ರಾವಿಡ್ ರೂಪದಲ್ಲಿ ನಿಂತಿದ್ದ!
ಚಿನ್ನಸ್ವಾಮಿ ಗ್ರೌಂಡ್ ನಲ್ಲಿ ಈ ಹುಡುಗ ಆಡುತ್ತಿದ್ದಾಗ ಟೀಂ ಇಂಡಿಯಾದ ವಾಲ್ ಆಗಷ್ಟೇ NCA ನಲ್ಲಿ ಪ್ರಾಕ್ಟೀಸ್ ಮಾಡಿ Club house ಕಡೆ ಹೆಜ್ಜೆ ಹಾಕುತ್ತಿದ್ದರು. ಹಾಗೆಯ ಮ್ಯಾಚ್ ನ ಕಡೆ ಕಣ್ಣು ಹಾಯಿಸಿದ್ದರು.
ಕೆಎಲ್ ರಾಹುಲ್ ಚಚ್ಚುತ್ತಿದ್ದ. ದ್ರಾವಿಡ್ ಅಂತ ದ್ರಾವಿಡ್ ಒಂದೂವರೆ ಗಂಟೆ ನಿಂತು ಹುಡುಗನ ಆಟ ಕಣ್ತುಂಬಿಕೊಂಡರು. ನೇರ ದ್ರಾವಿಡ್ ಹೋಗಿದ್ದು ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬಳಿ. ಹುಡುಗ ಬೇಕಾಗುತ್ತಾನೆ. ಭಾರತಕ್ಕೆ ಆಡುತ್ತಾನೆ. ಕಣ್ಣಿಡಿ. ಮಾತು ಮುಗಿದಿತ್ತು.
ಅದೊಂದು ನಿಯಮ ಇವನನ್ನ ಕರ್ನಾಟಕ ಕ್ರಿಕೆಟ್ ಅಕಾಡೆಮಿಗೆ ಸೇರಿಸುವಲ್ಲಿ ಅಡ್ಡಿಯಾಗಿತ್ತು. ಇವನಿಗೆ ಆಗಷ್ಟೇ ಹನ್ನೊಂದು. ಅಕಾಡೆಮಿಗೆ ಸೇರಲು ಬೇಕಿದ್ದದ್ದು ಮಿನಿಮಮ್ 13 ವರ್ಷ . ಸನತ್ ಕುಮಾರ್ ಕೋಚ್. ರಾಹುಲ್ ದ್ರಾವಿಡ್, ಬ್ರಿಜೇಶ್ ಪಟೇಲ್ ದೇವರಂತೆ ನಿಂತು ನಿಯಮ ಸಡಿಲಿಸಿದ್ದರು. ರಾಹುಲ್ ಅಕಾಡೆಮಿ ಸೇರಿ ಬಿಟ್ಟ.
ಕನಿಷ್ಟ 10 ವರ್ಷ ಮಂಗಳೂರಿಂದ ಬೆಂಗಳೂರಿಗೆ ಅಪ್ ಅಂಡ್ ಡೌನ್ ಮಾಡಿದ್ದಾನೆ ಈ ಹುಡುಗ. ತಮಾಷೆ ಮಾತಾ. ಬಸ್ ನಲ್ಲೇ ನಿದ್ರೆ. ಬೆಳಿಗ್ಗೆ ಎದ್ದರೆ ಮ್ಯಾಚ್, ಪ್ರಾಕ್ಟೀಸ್. ವರ್ಷಗಳ ವರೆಗೆ ಕೆಎಸ್ ಸಿಎ ನಲ್ಲೇ ಉಳಿದುಕೊಂಡಿದ್ದೂ ಇದೆ. ಕ್ರಿಕೆಟ್ ಬ್ಯಾಟ್ ಪಕ್ಕದಲ್ಲಿರದಿದ್ದರೆ ನಿದ್ರೆ ಮಾಡಿದರೆ ಕೇಳಿ. ಅವನು ಶುದ್ಧ ತಪಸ್ವಿ. ಕಣಕಣದಲ್ಲೂ ಕ್ರಿಕೆಟ್ ತುಂಬಿಸಿಕೊಂಡಿದ್ದ. ಕ್ರಿಕೆಟ್ ತನ್ನ ಜೊತೆಗೆ ಹುಟ್ಟಿದ್ದೆಂಬಂತ ಪ್ರೀತಿ.
ನಿಮಗೆ ಗೊತ್ತಿರಲಿ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಕೆಎಲ್ ರಾಹುಲ್ ಮೂರೂ ಜನ ಅಂಡರ್ 13 ಕರ್ನಾಟಕ ತಂಡಕ್ಕೆ ಒಂದೇ ದಿನ ಪದಾರ್ಪಣೆ ಮಾಡಿದವರು. ಗ್ರೌಂಡ್ ಯಾವುದು ಗೊತ್ತಾ. ಐಎಎಫ್. ಅವತ್ತೇ ಭಾರತ ತಂಡದಲ್ಲಿ ಈ ಮೂವರೂ ಹೆಸರು ಬರೆಸಿದ್ದರಾ? ಗೊತ್ತಿಲ್ಲ.
2010 ರ ರಣಜಿ ಸೀಸನ್ ಅದು. ರಾಹುಲ್ ಚೆನ್ನಾಗಿಯೇ ಆಡಿದ್ದ. 2011 ರ ರಣಜಿಗೆ ರಾಹುಲ್ ಹೆಸರೇ ಅಡ್ರೆಸ್ ಗೆ ಇರಲ್ಲ. ಇವತ್ತು ಕಮೆಂಟರಿ ಬಾಕ್ಸ್ ನಲ್ಲಿ ಕುಳಿತು ರಾಹುಲ್ ಆಟವನ್ನ ಮನಸಾರೆ ಹೊಗಳುವ ಮಹಾನುಭಾವ ಅವತ್ತು ಟೀಂ ನಿಂದ ರಾಹುಲ್ ರನ್ನ ಆಚೆ ಇರಿಸಿದ್ದ.
ಉಮ್ಮಳಿಸಿ ಬರುವಂತ ದುಃಖ ಅದು. ಸಂತನಂತೆ ಕಾಯುತ್ತಾನೆ ರಾಹುಲ್. 2012 ರ ರಣಜಿ ಋತು ಅದು. ಆಗಲೂ ಅವಕಾಶ ಸಿಕ್ಕಿರುವುದಿಲ್ಲ. ರಾಹುಲ್ ಹಸಿದಿದ್ದ. ಅದೃಷ್ಟಕ್ಕೋ ಏನೋ. ಪವನ್ , ಭರತ್ ಚಿಪ್ಲಿ ಇದ್ದಂತ ತಂಡ ಚಿನ್ನಸ್ವಾಮಿಯಲ್ಲೇ ಹರ್ಯಾಣ ವಿರುದ್ಧ ಮಕಾಡೆ ಬಿದ್ದಿರುತ್ತೆ. ಒಂದು ಭರ್ಜರಿ ಸರ್ಜರಿ ಬಳಿಕ ಅದೇ ಋತುವಿಗೆ ವಸಂತನಂತೆ ಬಂದ ರಾಹುಲ್. ವಿದರ್ಭದ ಮೇಲೆ 158. ರಾಹುಲ್‌ಗೆ ಅವನು ಹಾಕಿದ್ದ ಶ್ರಮ ಆಶೀರ್ವಾದದಂತೆ ನಿಂತಿತ್ತು.
ಅದು 2013. ಹರ್ಯಾಣದ ರೋಹ್ಟಕ್ ನ ಲಾಹ್ಲಿ ಮೈದಾನ. ಅಪ್ರತಿಮ ಬ್ಯಾಟ್ಸ್ ಮನ್ ಗಳನ್ನ ಮಕಾಡೆ ಮಲಗಿಸಿದ್ದ ಹಿಸ್ಟರಿ ಇದ್ದ ಗ್ರೌಂಡ್ ಅದು. ಕರ್ನಾಟಕದ ಕೋಚ್ ಅರುಣ್ ಕುಮಾರ್, ರಾಹುಲ್ ಗೆ ಏನು ಹೇಳಿದರು ಗೊತ್ತಾ? ನೋಡೋ ಈ ಗ್ರೌಂಡ್ ನಲ್ಲಿ ಸೆಂಚುರಿ ಹೊಡೆಯೋ. ಟೀಂ ಇಂಡಿಯಾಗೆ ನೀನಾಡುವುದನ್ನ ದೇವರು ತಪ್ಪಿಸಲಾರ ಎಂದಿದ್ದರು. ಹುಡುಗ ಚಚ್ಚಿದ್ದ, ಮೈಮೇಲೆ ದೇವರೇ ಬಂದಂತೆ. ಖಾತೆಯಲ್ಲಿ 98 ರನ್. ಕಡಿಮೆ ಸಾಧನೆಯಾ ಅದು. No way.
ಹೀಗೆ ಆಡಿಕೊಂಡು ಬಂದ ರಾಹುಲ್ 2013 ರ ರಣಜಿಯಲ್ಲಿ ಸಾವಿರ ರನ್ ಗಳಿಗೆ ಸರದಾರನಾಗುತ್ತಾನೆ.
ಇದೆಲ್ಲಾ ಯಾವುದರ ಫಲ ಗೊತ್ತಾ. ಮಂಗಳೂರು ವಲಯಕ್ಕೆ ಇವನು ಆಡಬೇಕಾದರೆ ಕನಿಷ್ಟ 45 ಓವರ್ ಇವನೇ ಆಡಬೇಕಿತ್ತು. ಐದು ಬಾಲ್ ಬ್ಯಾಟಿಂಗ್, ಕಡೆಯ ಬಾಲ್ ಸಿಂಗಲ್ಸ್ . ತಂಡ ಅಷ್ಟರ ಮಟ್ಟಿಗೆ ನಂಬಿಕೊಂಡಿತ್ತು. ತಂಡಕ್ಕೆ ಇವನ ಆಟ ಅನಿವಾರ್ಯವೆನ್ನುವ ಹಾಗೆ ಬೆಳೆದುಬಿಟ್ಟಿದ್ದ. ಗುರುವಿನ ಸಲಹೆಯೂ ಅದೇ ಅಗಿತ್ತು. ಮ್ಯಾಚ್ ರಕ್ಷಕನಾಗಿ ನಿಂತುಬಿಡುತ್ತಿದ್ದ.
ಮುಂದೆ ಅಂಡರ್ 19 ನಲ್ಲಿ ರಾಹುಲ್ ಚೆನ್ನಾಗಿ ಆಡಿಯೂ ಟೀಂ ಇಂಡಿಯಾದ ಅಂಡರ್ 19 ಆಸ್ಟ್ರೇಲಿಯಾ ಪ್ರವಾಸಕ್ಕೆ ಸೆಲೆಕ್ಟ್ ಆಗಲ್ಲ. ಬದಲಿಗೆ ಕರುಣ್ ನಾಯರ್ ಆಯ್ಕೆಯಾಗಿರುತ್ತಾನೆ. ಸಂತೋಷ್ ಮೆನನ್ ಆಗ ಅಸಿಸ್ಟೆಂಟ್ ಸೆಕ್ರೆಟರಿ.
ಗಾಡ್ ಫಾದರ್ ಗಳಿಲ್ಲದೇ ಯಾರಿಗೂ ಸಲಾಮ್ ಹೊಡೆಯದ ಹುಡುಗನಾಗಿ ಬೆಳೆದವನು ರಾಹುಲ್. ಕ್ರಿಕೆಟ್ ಜೀವನವೇ ಸಾಕೆಂದುಕೊಳ್ಳುತ್ತಾನೆ.
ರಾಹುಲ್ಗೆ ಅನೇಕರು ಧೈರ್ಯ ತುಂಬುತ್ತಾರೆ. ಮತ್ತೆ ಕಣಕ್ಕಿಳಿಯುತ್ತಾನೆ. ರಾಹುಲ್ ಆಟ ಅವನನ್ನ ಅಂಡರ್ 19 ವರ್ಲ್ಡ್ ಕಪ್ ಗೆ ಆಡಿಸುತ್ತದೆ.
2013-14 ರ ಹೊತ್ತಿಗೆ ಕರ್ನಾಟಕ ರಣಜಿ ಗೆದ್ದು 14 ವರ್ಷದ ವನವಾಸಗಳೇ ಕಳೆದಿರುತ್ತವೆ. ಹುಡುಗ ತಪಸ್ಸು ಮಾಡಿ ಗೆದ್ದು ಬಂದವನಂತೆ ಆಡುತ್ತಾನೆ. ರಣಜಿ ಕಿರೀಟ ಮುಡಿಗೇರುತ್ತದೆ. ದುಲೀಪ್ ಟ್ರೋಫಿ ದಕ್ಷಿಣ ವಲಯದ ಪರ ಸೆಂಚುರಿ ಮೇಲೆ ಸೆಂಚುರಿ.
ಮುಂದೆ ಆಸ್ಟ್ರೇಲಿಯಾ ಟೂರ್. ಮೊದಲ ಪಂದ್ಯದಲ್ಲಿ ಇವನೇನಾ ರಣಜಿ ಶೂರ ಎನ್ನುವಂತ ಕಳಪೆ ಆಟ. ಎರಡನೇ ಮ್ಯಾಚ್ ನಲ್ಲಿ ಸೆಂಚುರಿ. 254 ಬಾಲ್ ಆಡಿರುತ್ತಾನೆ. ಸಿಡ್ನಿ ಗ್ರೌಂಡ್ ಅದು. ಅಲ್ಲಿಯವರೆಗೆ ರವಿಶಾಸ್ತ್ರಿ ಬಿಟ್ಟರೆ ಅಷ್ಟು ಎಸೆತಗಳನ್ನ ಆ ಮೈದಾನದಲ್ಲಿ ಆಡಿದ ಇನ್ನೊಬ್ಬ ಗಟ್ಟಿಗನಿಲ್ಲ. ಅದು ರಾಹುಲ್ ಎನ್ನುವ ಪ್ರತಿಭೆಯನ್ನ ಪುಟಕ್ಕಿಟ್ಟ ಪಂದ್ಯ.
ಈಗ ರಾಹುಲ್ ಆಟ ತುಂಬಾ ಮಾಗಿದೆ. ಎಲ್ಲ ಫಾರ್ಮಾಟ್ ಗಳಿಗೂ ಕುದುರಿದ್ದಾನೆ. ಕೀಪಿಂಗ್ ಗೂ ಸೈ. ಕ್ರಿಕೆಟ್ ಜೀವನಕ್ಕೆ ಬೇಕಾಗುವಷ್ಟು fitness ಎತ್ತಿಟ್ಟಿದ್ದಾನೆ. ಹುಡುಗ ಭಾರತ ತಂಡಕ್ಕೆ ಭವಿಷ್ಯವೇ ಆಗುತ್ತಾನೆ. Good going Rahul….Keep it Up..