ಬೆಂಗಳೂರು-ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ) ಅಧ್ಯಕ್ಷರು ಎಸ್.ಆರ್.ವಿಶ್ವನಾಥ್ ರವರ ಜನ್ಮದಿನದ ಪ್ರಯುಕ್ತ ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಎಸ್.ಆರ್.ವಿ ಕಪ್-2022 ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ತಂಡ ತನ್ನ ಮುಡಿಗೇರಿಸಿಕೊಂಡಿದೆ.
ಹೊರರಾಜ್ಯದ ಬಲಿಷ್ಠ ತಂಡಗಳಾದ ಕುಮ್ಮಳ್ಳಿ ಇಲೆವೆನ್ ಛತ್ತೀಸ್ಗಢ, ರಾಯಘಡ್,ಶಶಿ ಇಲೆವೆನ್ ಚೆನ್ನೈ, ಹಿಂದೂ ಮುಸ್ಲಿಂ ಏಕತಾ ಮಧ್ಯಪ್ರದೇಶ ಈ 4 ತಂಡಗಳು ಮತ್ತು ಕರ್ನಾಟಕದ 12 ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಪ್ರಬಲ ಪೈಪೋಟಿ ನಡೆದಿತ್ತು.
ಲೀಗ್ ಹಂತದ ರೋಚಕ ಸೆಣಸಾಟದ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ಜೈ ಕರ್ನಾಟಕ ಬೆಂಗಳೂರು-ನ್ಯಾಶ್ ಬೆಂಗಳೂರು ತಂಡವನ್ನು ಮತ್ತು ಅವಿಘ್ನ ಸೃಷ್ಟಿ ಜಾನ್ಸನ್-ಕುಮ್ಮಳ್ಳಿ ಇಲೆವೆನ್ ಛತ್ತೀಸ್ಗಢದ ತಂಡವನ್ನು ಸೋಲಿಸಿ ಫೈನಲ್ ಎಂಟ್ರಿ ಪಡೆದಿದ್ದರು.
ಫೈನಲ್ ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಜೈಕರ್ನಾಟಕ ಬೆಂಗಳೂರು ತಂಡದ ಆರಂಭಿಕ ಆಟಗಾರ ಡೇವಿಡ್ ಅರಸೀಕೆರೆ ಬಿರುಸಿನ ಹೊಡೆತಗಳ 22 ರನ್ ಸಹಿತ ಎದುರಾಳಿ ತಂಡಕ್ಕೆ 6 ಓವರ್ ಗಳಲ್ಲಿ 72 ರನ್ ಗಳ ಕಠಿಣ ಸವಾಲನ್ನು ನೀಡಿತ್ತು.
ಇದಕ್ಕುತ್ತರವಾಗಿ ಅವಿಘ್ನ ಸೃಷ್ಟಿ ಜಾನ್ಸನ್ ತಂಡ ಜೈ ಕರ್ನಾಟಕದ ದರ್ಶನ್ ಕರಾರುವಾಕ್ಕಾದ ಬೌಲಿಂಗ್ ದಾಳಿ(2 ಓವರ್ 15 ರನ್ 3 ವಿಕೆಟ್) ಗೆ ಕುಸಿತ ಕಂಡು 7 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಈ ಋತುವಿನಲ್ಲಿ ಅತ್ಯುತ್ತಮ ಸಂಯೋಜಿತ ತಂಡವಾಗಿ ಜೈ ಕರ್ನಾಟಕ ಬಹುತೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಜಯಿಸಿ ದಾಖಲೆ ಬರೆದಿದೆ.
ವಿಶೇಷವಾಗಿ ಈ ಪಂದ್ಯಾಟದಲ್ಲಿ ಒಟ್ಟು 5 ಅರ್ಧ ಶತಕ ದಾಖಲಾಗಿದ್ದು ಜಾನ್ ನ್ಯಾಶ್,ಅಮಿತ್ ಛತ್ತೀಸ್ಗಢ, ವಿನೋದ್ ಜೈ ಕರ್ನಾಟಕ, ನಸ್ರುದ್ದೀನ್(ಫ್ರೆಂಡ್ಸ್ ಬೆಂಗಳೂರು), ಮ್ಯಾಡಿ(ಫ್ರೆಂಡ್ಸ್ ಬೆಂಗಳೂರು) ಇವರ ಬ್ಯಾಟ್ ನಿಂದ ಸಿಡಿದಿದ್ದವು.
ಪ್ರಥಮ ಪ್ರಶಸ್ತಿ ವಿಜೇತ ಜೈ ಕರ್ನಾಟಕ ತಂಡ 5 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಬೆಳ್ಳಿಯ ಟ್ರೋಫಿ,ದ್ವಿತೀಯ ಸ್ಥಾನಿ ಅವಿಘ್ನ ಸೃಷ್ಟಿ ಜಾನ್ಸನ್ 3 ಲಕ್ಷ ನಗದು ಸಹಿತ ಆಕರ್ಷಕ ಬೆಳ್ಳಿಯ ಟ್ರೋಫಿಗಳನ್ನು ಪಡೆದಕೊಂಡರು.ಫೈನಲ್ ನ ಪಂದ್ಯಶ್ರೇಷ್ಟ ದರ್ಶನ್ ಸ್ಮಾರ್ಟ್ ಫೋನ್ ಮತ್ತು 1 ಸ್ಪೋಟಕ ಅರ್ಧ ಶತಕ ಸಹಿತ ಸರಣಿ ಯುದ್ದಕ್ಕೂ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೈ ಕರ್ನಾಟಕದ ವಿನೋದ್ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉಡುಗೊರೆ ರೂಪದಲ್ಲಿ ಪಡೆದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕರ್ನಾಟಕ ಸರಕಾರದ ಗೃಹ ಸಚಿವರಾದ ಶ್ರೀಯುತ ಅರಗ ಜ್ಞಾನೇಂದ್ರ,ಶಾಸಕರು,ಬಿ.ಡಿ.ಎ ಅಧ್ಯಕ್ಷರಾದ ಶ್ರೀಯುತ ಎಸ್.ಆರ್.ವಿಶ್ವನಾಥ್,ರಣಜಿ ಆಟಗಾರ ಕೌಶಿಕ್,ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಬಾಬು ರಾಜೇಂದ್ರ ಪ್ರಸಾದ್ ಸಹಿತ ಬಿ.ಜೆ.ಪಿ ಯುವಮೋರ್ಚಾದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎಸ್.ಆರ್.ಬಿ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲಕ್ಷಾಂತರ ಕ್ರೀಡಾಪ್ರೇಮಿಗಳು ಪಂದ್ಯಾಟದ ನೇರ ಪ್ರಸಾರವನ್ನು ವೀಕ್ಷಿಸಿದರು.