ಪ್ರತಿ ವರ್ಷ ಒಂದಿಲ್ಲೊಂದು ಬದಲಾವಣೆ ಮತ್ತು ಹೊಸ ಅನ್ವೇಷಣೆಗೆ ಹೆಸರುವಾಸಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಮತ್ತೊಂದು ದೊಡ್ಡ ಬದಲಾವಣೆ ಕೈ ಹಾಕಿದೆ.
ಸ್ಯಾಂಡಲ್‌ವುಡ್ ಸ್ಟಾರ್ ನಟ ರಿಷಬ್ ಶೆಟ್ಟಿ ಇದಕ್ಕೆ ಕೈಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಖ್ಯಾತ ನಟ ರಿಷಬ್ ಶೆಟ್ಟಿ ಮತ್ತು ಮೂರು ಕಂಬಳದ ಕೋಣಗಳನ್ನು ಕಾಣಬಹುದು. ಸಿನಿಮಾ ಸ್ಟೈಲ್‌ನಲ್ಲೇ ಎಂಟ್ರಿ ಕೊಡಲಿರುವ ನಟ ರಿಷಬ್ ಶೆಟ್ಟಿ ಅವರು ಮೂರು ಕಂಬಳ ಕೋಣಗಳ ಮೇಲೆ Royal, Challengers, Bangalore ಎಂದು ಕೆಂಪು ಬಟ್ಟೆ ಹಾಕಲಾಗಿರುತ್ತದೆ. ಈ ವೇಳೆ Bangalore ಎಂದು ಇರುವ ಕೋಣವನ್ನು ‘ಇದು ಬ್ಯಾಡ, ಭಟ್ರೇ, ತಗೊಂಡು ಹೋಗಿ ಇದನ್ನು’ ಎಂದು ರಿಷಬ್ ಹೇಳಿದ್ದಾರೆ . ” ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ? “
ಇದು ಮುಂಬರುವ ಐಪಿಎಲ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೆಸರಿನ ಬದಲಾವಣೆಗೆ ಮುಂದಾಗಿರುವ ಸುಳಿವು ನೀಡಿದೆ. ಲಾಯಲ್ ಫ್ಯಾನ್ಸ್ ಕೂಗಿಗೆ ಮಣಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಫ್ರಾಂಚೈಸಿ ತನ್ನ ಹೆಸರು ಬದಲಾವಣೆ ಮುಂದಾಗಿದೆ. ಇಂಗ್ಲಿಷ್‌ನಲ್ಲಿ Royal Challengers Bangalore ಎಂದು ಫ್ರಾಂಚೈಸಿ ಹೆಸರು ಇದೆ. ಇದೀಗ Bangalore ಎಂಬ ಹಳೆಯ ಹೆಸರಿಗೆ ಕೊಕ್ ನೀಡಿ Bengaluru ಸೇರಿಸಲು ನಿರ್ಧರಿಸಿದೆ. 2014ರ ನವೆಂಬರ್ 1ರಂದು ಸರ್ಕಾರಿ ಕಡತ ಮತ್ತು ಸಾರ್ವಜನಿಕವಾಗಿ Bangalore (ಬ್ಯಾಂಗಲೋರ್) ಬದಲಾಗಿ Bengaluru (ಬೆಂಗಳೂರು) ಎಂದು ಬದಲಾವಣೆ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ದಶಕದ ಕೂಗಿಗೆ ಮಣಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಫ್ರಾಂಚೈಸಿ ತನ್ನ ಹೆಸರು ಬದಲಾವಣೆ ಮುಂದಾಗಿದೆ.
9 ವರ್ಷಗಳು ಕಳೆದರೂ ಆರ್‌ಸಿಬಿ ಫ್ರಾಂಚೈಸಿ Royal Challengers Bangalore ಎಂದೇ ಬಳಸುತ್ತಿತ್ತು. ಕಳೆದ 16 ವರ್ಷಗಳಲ್ಲಿ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ತಂಡಕ್ಕೆ ಇದೀಗ ಹೆಸರು ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಬಾರಿಯಾದರೂ ಆರ್‌ಸಿಬಿ ತಂಡಕ್ಕೆ ಅದೃಷ್ಟ ಬದಲಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಶ್ವದ ಶ್ರೀಮಂತ ಟಿ20 ಲೀಗ್ ಆರಂಭಕ್ಕಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ರೋಚಕ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.