13ನೇ ಕ್ರಿಕೆಟ್ ವಿಶ್ವಕಪ್ ಕೂಟಕ್ಕೆ ಭಾರತದ್ದೇ ಆತಿಥ್ಯ.‘ಗೆದ್ದು ಬಾ ಭಾರತ’ ಅನ್ನೋದೇ ನಮ್ಮ ಹೃದಯದ ಹಾರೈಕೆ.
—————————— —-
ಭಾರತವು ಆತಿಥ್ಯ ವಹಿಸಿದ 13ನೇ ವಿಶ್ವಕಪ್ ಕ್ರಿಕೆಟ್ ಕೂಟವು ಇಂದು ಸಂಜೆ ಉದ್ಘಾಟನೆ ಆಗಲಿದೆ. ಮುಂದಿನ ಒಂದೂವರೆ ತಿಂಗಳು ಭಾರತದ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಮಲಗುವ ಸಾಧ್ಯತೆಯೇ ಇಲ್ಲ!
1983 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದಿರುವ ಭಾರತ ಈ ಬಾರಿ ಟ್ರೋಫಿ ಎತ್ತಿ ಮೆರೆದಾಡಬೇಕು ಅನ್ನೋದು ಭಾರತೀಯರ ಮನದಾಳದ ಬಯಕೆ. ಆದರೆ ಸವಾಲುಗಳು ಬೆಟ್ಟದಷ್ಟು ಎತ್ತರ ಇವೆ ಅನ್ನೋದು ಅಷ್ಟೇ ನಿಜ. ಇಂಗ್ಲೆಂಡ್, ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಬಾರಿ ಬಲಿಷ್ಠ ಆಗಿವೆ.
ತುಂಬಿ ತುಳುಕಲಿವೆ ಭಾರತದ ಕ್ರಿಕೆಟ್ ಸ್ಟೇಡಿಯಂಗಳು.
—————————— —
ಈ ಕೂಟದಲ್ಲಿ ಈ ಬಾರಿ ಹತ್ತು ತಂಡಗಳು ಭಾಗವಹಿಸಲಿದ್ದು ಮೊದಲ ಹಂತದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪ್ರತೀ ತಂಡವೂ ಪ್ರತೀ ತಂಡವನ್ನು ಎದುರಿಸಬೇಕು. ಅಕ್ಟೋಬರ್ 5ರಿಂದ ನವೆಂಬರ್ 19ರತನಕ ನಡೆಯುವ ಒಟ್ಟು ಪಂದ್ಯಗಳು 48. ಒಟ್ಟು ಹತ್ತು ಕ್ರಿಕೆಟ್ ತಾಣಗಳು ಈ ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿ ಆಗಲಿವೆ. ಅದರಲ್ಲಿಯೂ ಅಹಮದಾಬಾದಿನ ಅತ್ಯಂತ ವೈಭವದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭದ ಪಂದ್ಯ, ಫೈನಲ್ ಪಂದ್ಯ ಮತ್ತು ಭಾರತ, ಪಾಕ್ ನಡುವೆ ಸ್ಫೋಟಕ ಆಗಬಹುದಾದ ಪಂದ್ಯಗಳು ಜರುಗಲಿವೆ. 1,35,000 ಪ್ರೇಕ್ಷಕರು ತುಂಬಿ ತುಳುಕುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ ಅದು. ಜಗತ್ತಿನಲ್ಲಿ ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಇರುವ ದೇಶ ಅದು ಭಾರತ. ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಇರುವ ರಾಷ್ಟ್ರ ಭಾರತ. ಇಲ್ಲಿ ಕ್ರಿಕೆಟ್ ಸ್ಟಾರ್ ಆಟಗಾರರು ಎಂದರೆ ನಡೆದಾಡುವ ಲೆಜೆಂಡ್ಸ್ ಎಂದೇ ಭಾವಿಸಲಾಗಿದೆ.
ಪ್ರೆಡಿಕ್ಷನ್ ನಡೆಯೋದೇ ಇಲ್ಲ ಇಲ್ಲಿ.
—————————— —–
ಈಗಾಗಲೇ ಐದು ಬಾರಿ ವಿಶ್ವಕಪ್ ಗೆದ್ದು ಬೀಗಿರುವ ಆಸ್ಟ್ರೇಲಿಯಾ, ಒಮ್ಮೆ ಗೆದ್ದಿರುವ ಪಾಕಿಸ್ಥಾನ ಮತ್ತು ಶ್ರೀಲಂಕಾ, ಕಳೆದ ಬಾರಿಯ ವಿನ್ನರ್ ಇಂಗ್ಲಾಂಡ್ ಈ ಬಾರಿಯೂ ಗೆಲ್ಲಲು ತುದಿಗಾಲಲ್ಲಿ ನಿಂತಿವೆ. ಎರಡು ಬಾರಿಯ ವಿನ್ನರ್ ಭಾರತ ಈ ಬಾರಿ ಅತ್ಯಂತ ಸ್ಟ್ರಾಂಗ್ ಟೀಮ್ ಸೆಟ್ ಮಾಡಿ ಯುದ್ಧಕ್ಕೆ ಅಣಿಯಾಗಿದೆ. ಒಮ್ಮೆಯೂ ವಿಶ್ವಕಪ್ ಗೆಲ್ಲದ ಸ್ಟ್ರಾಂಗ್ ಟೀಮ್ ನ್ಯೂಜಿಲ್ಯಾಂಡ್, ಅದೃಷ್ಟವೇ ಇಲ್ಲದ ದಕ್ಷಿಣ ಆಫ್ರಿಕ, ಅಚ್ಚರಿಯ ಫಲಿತಾಂಶವನ್ನು ತಂದುಕೊಡುವ ಶಕ್ತಿ ಇರುವ ಬಾಂಗ್ಲಾ ದೇಶ, ನೆದರ್ಲ್ಯಾಂಡ್, ಅಫ್ಘಾನಿಸ್ತಾನ್ ಇವುಗಳು ಇತರ ತಂಡಗಳು. ಎರಡು ಬಾರಿಯ ವಿನ್ನರ್ ವಿಂಡೀಸ್ ಈ ಬಾರಿ ಕೂಟದಲ್ಲಿ ಸ್ಥಾನ ಪಡೆದಿಲ್ಲ ಎಂಬ ಸಣ್ಣ ಒಂದು ಕೊರಗು ಕ್ರಿಕೆಟ್ ಪ್ರೇಮಿಗಳದ್ದು. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಕ್ರಿಕೆಟ್ ಲೆಕ್ಕಾಚಾರಗಳು, ಊಹೆಗಳು, ಪ್ರೆಡಿಕ್ಷನಗಳು ಯಾವುದೂ ನಡೆಯುವುದಿಲ್ಲ ಎಂದು ನೂರಾರು ಬಾರಿ ಸಾಬೀತಾಗಿದೆ. ಈ ಬಾರಿಯೂ ನಡೆಯುವುದಿಲ್ಲ.
ಆದ್ದರಿಂದ ಈ ಹತ್ತು ತಂಡಗಳಲ್ಲಿ ಯಾವ ತಂಡವು ನವೆಂಬರ್ 19ರ ರಾತ್ರಿ ಟ್ರೋಫಿ ಎತ್ತಿ ಹಿಡಿದು ಸೆಲೆಬ್ರೇಟ್ ಮಾಡಲಿದೆ ಎನ್ನುವುದನ್ನು ಪ್ರೆಡಿಕ್ಟ್ ಮಾಡುವುದು ಕ್ರಿಕೆಟ್ ಪಂಡಿತರಿಗೆ ಭಾರೀ ಕಷ್ಟ ಆಗಬಹುದು.
ಮೇಲ್ನೋಟಕ್ಕೆ ಭಾರತವೇ ಬಲಿಷ್ಠ!
—————————— —–
1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ, 2011ರಲ್ಲಿ ಧೋನಿ ನೇತೃತ್ವದಲ್ಲಿ ಭಾರತವು ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಈ ಬಾರಿ ಗೆಲ್ಲಲೇ ಬೇಕು ಎಂಬ ತೀವ್ರವಾದ ಹಂಬಲದಿಂದ ಕ್ರಿಕೆಟ್ ಆಡಳಿತ ಮಂಡಳಿ, ಆಯ್ಕೆ ಮಂಡಳಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಹೆಚ್ಚು ಕಡಿಮೆ ಒಂದೂವರೆ ವರ್ಷದಿಂದ ಅಳೆದು ತೂಗಿ ಅತ್ಯಂತ ಬಲಿಷ್ಠವಾದ ಟೀಮ್ ಸೆಲೆಕ್ಟ್ ಮಾಡಿದ್ದಾರೆ. ಈ ತಂಡ ಖಂಡಿತ ಕಪಿಲ್ ಟೀಮ್ ಮತ್ತು ಧೋನಿ ಟೀಂಗಳಿಗಿಂತ ಹೆಚ್ಚು ಬಲಿಷ್ಟವಾಗಿದೆ. ಒಂದು ತಿಂಗಳ ಹಿಂದೆ ಎಂಟನೇ ಏಷಿಯಾ ಕಪ್ ಗೆದ್ದು ಮೆರೆದ ಟೀಮ್ ಆತ್ಮವಿಶ್ವಾಸದ ಶಿಖರದಲ್ಲಿ ಇದೆ. ಹಾಗೆಯೇ ಮೊನ್ನೆ ಮೊನ್ನೆ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಸರಣಿ ಗೆದ್ದ ಹುರುಪು ತಂಡವನ್ನು ಚಾರ್ಜ್ ಮಾಡಿದೆ.
ಭಾರತದಲ್ಲಿ ಈ ಬಾರಿ ಸ್ಟಾರ್ ಆಟಗಾರರು.
—————————— —
248 ODI ಪಂದ್ಯಗಳ ಅನುಭವಿ ಮತ್ತು 10,000+ ರನ್ ಮಾಡಿರುವ ರೋಹಿತ್ ಶರ್ಮಾ ತಂಡದ ಕ್ಯಾಪ್ಟನ್ ಆಗಿ ಈ ವರ್ಷ ಭಾರೀ ಸಾಧನೆ ಮಾಡಿದ್ದಾರೆ. ಶುಭಮನ್ ಗಿಲ್ ಈ ವರ್ಷದ ಬಹಳ ದೊಡ್ಡ ಶೋಧ ಆಗಿದ್ದು ಅದ್ಭುತ ಫಾರ್ಮ್ ಹೊಂದಿದ್ದಾರೆ. ಅವರಿಬ್ಬರೂ ಆರಂಭಿಕ ಆಟಗಾರರಾಗಿ ನಿಂತರೆ ಯಾವ ಟಾರ್ಗೆಟ್ ಕೂಡ ತಲುಪುವ ಶಕ್ತಿಯು ಭಾರತಕ್ಕೆ ಇದೆ. ಎದುರಾಳಿಗಳ ಎದೆ ನಡುಗಿಸುವ ಓಪನರಗಳು ಭಾರತಕ್ಕೆ ಈ ಬಾರಿ ಸಿಕ್ಕಿರುವುದು ನಿಜಕ್ಕೂ ಶ್ಲಾಘನೀಯ. ಅದರ ನಂತರ ವಿಶ್ವ ದಾಖಲೆಗಳ ಸ್ಟಾರ್ ಆಟಗಾರ ವಿರಾಟ್ ಕೋಹ್ಲಿ ಖಂಡಿತ ಕೊನೆಯವರೆಗೆ ಫೈಟ್ ಮಾಡುವ ಪವರ್ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ODI ಪಂದ್ಯಗಳಲ್ಲಿ 12,500+ ಸ್ಕೋರ್ ಮಾಡಿದ ದಾಖಲೆ ಹೊಂದಿದ್ದಾರೆ. 2011ರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರನ್ನು ತನ್ನ ಬಲಿಷ್ಠ ಭುಜಗಳ ಮೇಲೆ ಕೂರಿಸಿ ಬೀಳ್ಕೊಟ್ಟ ವಿರಾಟ್ ಕೊಹ್ಲಿ ಈ ಬಾರಿ ತನ್ನ ಕೊನೆಯ ವಿಶ್ವಕಪ್ ಆಡಲಿದ್ದಾರೆ ಅನ್ನೋದು ಕೂಡ ನಮಗೆ ಗೊತ್ತಿದೆ. ಕೊಹ್ಲಿ ಅವರಿಗೆ ಈ ವಿಶ್ವ ಕಪ್ ಸ್ಮರಣೀಯವಾದ ಕೂಟ ಆಗಲಿದೆ.
ಸ್ಟ್ರಾಂಗ್ ಮಿಡ್ಲ್ ಆರ್ಡರ್ ಭಾರತದ ಶಕ್ತಿ.
—————————— —
ಭಾರತದ ಮಿಡಲ್ ಆರ್ಡರಿಗೆ ಶಕ್ತಿ ತುಂಬಲು ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಖಂಡಿತ ಇರುತ್ತಾರೆ. ಅವರಲ್ಲಿ ಯಾರಾದರೂ ಇಬ್ಬರು ಲಂಗರು ಹಾಕಿ ನಿಂತರೆ ಭಾರತವು ಸೋಲಲು ಸಾಧ್ಯವೇ ಇಲ್ಲ. ಅದರಲ್ಲಿ ಕೂಡ ರಾಹುಲ್ ಮತ್ತು ಸೂರ್ಯ ಕೊನೆಯ ಓವರಗಳಲ್ಲಿ ಅಬ್ಬರಿಸಿ ಹೊಡೆಯುವ ಶಕ್ತಿ ಹೊಂದಿದ್ದಾರೆ.
ತಂಡದ ವೈಸ್ ಕ್ಯಾಪ್ಟನ್ ಆಗಿರುವ ಹಾರ್ದಿಕ ಪಾಂಡ್ಯ ಅತ್ಯುತ್ತಮ ಆಲ್ರೌಂಡರ್. ಅವರಿಗೆ ಸಾಥ್ ನೀಡುವ ಇನ್ನೊಬ್ಬ ಆಲ್ರೌಂಡರ್ ಅಂದರೆ ರವೀಂದ್ರ ಜಡೇಜಾ. ಭಾರತದ ಗ್ರೌಂಡುಗಳು ಸ್ಪಿನ್ ಬೆಂಬಲ ಕೊಡುವ ಕಾರಣ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಹೆಚ್ಚು ಕ್ಲಿಕ್ ಆಗುತ್ತಾರೆ ಅನ್ನೋದು ನಿರೀಕ್ಷೆ.
ಇನ್ನು ವೇಗದ ಬೌಲಿಂಗನಲ್ಲಿ ಸರ್ಜರಿ ಮುಗಿಸಿ ಬಂದು ಕಮ್ ಬ್ಯಾಕ್ ಮಾಡಿರುವ ಜಸ್ಪ್ರೀತ್ ಬಮ್ರಾ, ದ ಫೈಟಿಂಗ್ ಸ್ಪಿರಿಟ್ ಮೊಹಮದ್ ಶಮಿ, ಏಷಿಯಾ ಕಪ್ ಹೀರೋ ಮೊಹಮದ್ ಸಿರಾಜ್ ಈ ಬಾರಿ ಮಿರಾಕಲ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಶಾರ್ದೂಲ್ ಮತ್ತು ರವಿಚಂದ್ರನ್ ಅಶ್ವಿನ್ ಕ್ಲಿಕ್ ಆದರೆ ಅದು ಭಾರತಕ್ಕೆ ಬೋನಸ್. ಏನಿದ್ದರೂ ಐವತ್ತು ಓವರಗಳ ಕೋಟಾ ಮುಗಿಸಲು ಭಾರತಕ್ಕೆ ಯಾವ ತೊಂದರೆ ಕೂಡ ಇಲ್ಲ.
ರೇ ರೇ ರೇ ರೇ…….. !
—————————— —-
ಹಾರ್ದಿಕ ಪಾಂಡ್ಯ ಹತ್ತು ಓವರ್ ಕೋಟಾ ಮುಗಿಸಲು ಸಾಧ್ಯವಾದರೆ, ಕೊನೆಯ 5-10 ಓವರ್ ಸೂರ್ಯ ಅವರ ಬ್ಯಾಟ್ ಮಿಂಚು ಹರಿಸಿದರೆ, ಶುಭಮನ್ ಗಿಲ್ ಈ ವರ್ಷದ ಫಾರ್ಮ್ ಮುಂದುವರೆಸಿದರೆ, ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಓಪನಿಂಗ್ ಜೋಡಿ ಬ್ಯಾಟಿಂಗ್ ಪವರ್ ಪ್ಲೇ ಲಾಭ ಪಡೆದರೆ, ವಿರಾಟ್ ಕೋಹ್ಲಿ ತನ್ನ ಕೊನೆಯ ವಿಶ್ವಕಪ್ ಎಂಬ ವಿಷಯವನ್ನು ಮನದಲ್ಲಿ ಇಟ್ಟು ಆಡಿದರೆ, ಕೋಚ್ ರಾಹುಲ್ ದ್ರಾವಿಡ್ ವಿಶ್ವಕಪ್ ಕೂಟದ ನಡುವೆ ಕೂಡ ಗ್ಯಾಂಬ್ಲಿಂಗ್ ಮಾಡದೆ ಹೋದರೆ ಭಾರತವು ಮೂರನೇ ಬಾರಿ ವಿಶ್ವಕಪ್ ಎತ್ತುವುದನ್ನು ಯಾವ ಶತ್ರುವೂ ತಡೆಯಲು ಸಾಧ್ಯವಿಲ್ಲ!
ಇನ್ನು ಮಳೆ, ಡಕವರ್ತ್ ಲೂಯಿಸ್ ಪೆಡಂಭೂತ, ಕ್ರಿಕೆಟಿನ ಭಾಗವಾದ ಇಂಜ್ಯೂರಿಗಳು ಭಾರತಕ್ಕೆ ತೊಂದರೆ ಕೊಡದೇ ಇರಲಿ ಎಂದು ದಿನವೂ ಪ್ರಾರ್ಥನೆ ಮಾಡೋಣ.
ಓವರ್ ಟು ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್!
ಇಂದು ಉದ್ಘಾಟನಾ ಸಮಾರಂಭದಲ್ಲಿ ಸೆನ್ಸೇಷನಲ್ ಸಿಂಗರ್ 90ರ ತರುಣಿ ಆಶಾ ಭೋಂಸ್ಲೆ ಹಾಡಲಿದ್ದಾರೆ ಅನ್ನೋದು ನನ್ನ ಭಾರೀ ಖುಷಿಗೆ ಇನ್ನೊಂದು ಕಾರಣ!