14.6 C
London
Monday, September 9, 2024
Homeಕ್ರಿಕೆಟ್ಮುಂಬೈ 42 ರಣಜಿ ಟ್ರೋಫಿಗಳನ್ನು ಗೆದ್ದದ್ದು ಹೇಗೆ..? ಆ ಸತ್ಯವನ್ನು ಅರಿತುಕೊಂಡರೆ ಕರ್ನಾಟಕವೂ ಮತ್ತೆ ಮತ್ತೆ...

ಮುಂಬೈ 42 ರಣಜಿ ಟ್ರೋಫಿಗಳನ್ನು ಗೆದ್ದದ್ದು ಹೇಗೆ..? ಆ ಸತ್ಯವನ್ನು ಅರಿತುಕೊಂಡರೆ ಕರ್ನಾಟಕವೂ ಮತ್ತೆ ಮತ್ತೆ ರಣಜಿ ಟ್ರೋಫಿ ಗೆಲ್ಲಬಹುದು..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಮುಂಬೈ ಕ್ರಿಕೆಟ್ ಬಗ್ಗೆ ಮಾತನಾಡುವಾಗಲೆಲ್ಲಾ “ಮುಂಬೈ ಲಾಬಿ” ಎಂಬ ಪದ ಕಡ್ಡಾಯವಾಗಿ ಬರದಿದ್ದರೆ ಕೇಳಿ. ಅದನ್ನು ಬದಿಗಿಟ್ಟು ಅಲ್ಲಿನ ಕ್ರಿಕೆಟ್ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ.
ಆದರೆ ಇದನ್ನು ಪಕ್ಕಕ್ಕಿಟ್ಟು ನೋಡಿದರೆ, ಮುಂಬೈ ಕ್ರಿಕೆಟ್’ನಿಂದ ನಮ್ಮವರು ಕಲಿಯುವುದು ಬೇಕಾದಷ್ಟಿದೆ. ಮುಂಬೈ ತಂಡ 42 ಬಾರಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿದ್ದು ಯಾಕೆ..? ಉಳಿದ ತಂಡಗಳಿಗೆ ಅದರ ಅರ್ಧದಷ್ಟು ಟ್ರೋಫಿಗಳನ್ನೂ ಗೆಲ್ಲಲು ಆಗಿಲ್ಲ, ಯಾಕೆ..?
‘’Of course, ಮುಂಬೈ ತಂಡ 70, 80ರ ದಶಕಗಳಲ್ಲಿ ಹೇಗೆ ಆಡುತ್ತಿತ್ತು..? ಅಂಪೈರ್’ಗಳು ಹೇಗೆಲ್ಲಾ ತೀರ್ಪು ಕೊಡುತ್ತಿದ್ದರು” ಎಂಬ ಬಗ್ಗೆ ನಮ್ಮ ಕರ್ನಾಟಕದ ದೊಡ್ಡ ದೊಡ್ಡ ಕ್ರಿಕೆಟಿಗರೇ ಸಾಕಷ್ಟು ಬಾರಿ ರಸವತ್ತಾಗಿ ಹೇಳಿದ್ದಿದೆ.
ಆ ಮಾತು ಪಕ್ಕಕ್ಕಿರಲಿ.. ಮುಂಬೈ ತಂಡ 42 ರಣಜಿ ಟ್ರೋಫಿಗಳನ್ನು ಗೆಲ್ಲುತ್ತದೆ ಎಂದರೆ, ನಮ್ಮ ಕರ್ನಾಟಕ ತಂಡಕ್ಕೆ ಅದರ ಅರ್ಧದಷ್ಟು..? ಹೋಗಲಿ, 15 ಟ್ರೋಫಿಗಳನ್ನೂ ಗೆಲ್ಲಲು ಯಾಕೆ ಸಾಧ್ಯವಾಗಿಲ್ಲ..? ಕಾರಣ.., ಕ್ರಿಕೆಟ್ ಮೇಲೆ ಮುಂಬೈಕರ್”ಗಳಿಗೆ ಇರುವ ಪ್ರೀತಿ ನಮ್ಮವರಿಗಿಲ್ಲ. ಅವರು ಕ್ರಿಕೆಟನ್ನು ಅಕ್ಷರಶಃ ಪ್ರೀತಿಸುತ್ತಾರೆ, ಪೂಜಿಸುತ್ತಾರೆ, ಆರಾಧಿಸುತ್ತಾರೆ.
ಒಂದೇ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಮುಂಬೈನ iconic ವಾಂಖೆಡೆ ಮೈದಾನಕ್ಕೆ ಮೊನ್ನೆ ಮೊನ್ನೆಯಷ್ಟೇ 50 ವರ್ಷ ತುಂಬಿದೆ. ವಾಂಖೆಡೆಯ ಸುವರ್ಣ ಮಹೋತ್ಸವದ ಆ ಸಂಭ್ರಮವನ್ನು ಮುಂಬೈ ಕ್ರಿಕೆಟಿಗರೆಲ್ಲಾ ಸಂಭ್ರಮಿಸಿದ್ದರು. ಸ್ವತಃ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ  ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಂಥಾ ಸಂಭ್ರಮವನ್ನು ನಮ್ಮಲ್ಲಿ ಕಂಡಿದ್ದೀರಾ..? ಊಹೂಂ.. ಸಾಧ್ಯವೇ ಇಲ್ಲ. 2020ನೇ ಇಸವಿಗೆ ನಮ್ಮ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ 50 ವರ್ಷ ತುಂಬಿತ್ತು. ಆಗ ನಮ್ಮ ದಿಗ್ಗಜ ಕ್ರಿಕೆಟಿಗರಲ್ಲಿ ಯಾರಾದರೂ ಇದರ ಬಗ್ಗೆ ಮಾತಾಡಿದ್ದು, ಒಂದು ಟ್ವೀಟ್ ಮಾಡಿದ್ದನ್ನು ನೋಡಿದ್ದೀರಾ..? ಮಾಡೇ ಇಲ್ಲ ಎಂದ ಮೇಲೆ ನೋಡೋ ಮಾತೆಲ್ಲಿ..? ಅದು ಮುಂಬೈ ಕ್ರಿಕೆಟ್’ಗೂ ನಮಗೂ ಇರುವ ವ್ಯತ್ಯಾಸ.
ಮುಂಬೈ-ವಿದರ್ಭ ನಡುವಿನ ರಣಜಿ ಫೈನಲ್ ಪಂದ್ಯವನ್ನು ಸಚಿನ್ ತೆಂಡೂಲ್ಕರ್ ಮೈದಾನಕ್ಕೇ ಬಂದು ವೀಕ್ಷಿಸಿದ್ದರು. ರೋಹಿತ್ ಶರ್ಮಾ ಮುಂಬೈ ಡ್ರೆಸ್ಸಿಂಗ್ ರೂಮ್’ನಲ್ಲಿ ಕಾಣಿಸಿಕೊಂಡಿದ್ದರು. ಕರ್ನಾಟಕದ ರಣಜಿ ಪಂದ್ಯವನ್ನು ನಮ್ಮ ಕ್ರಿಕೆಟ್ ದಿಗ್ಗಜರು ಕೊನೆಯ ಬಾರಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದು ಯಾವಾಗ..? ಹೋಗಲಿ, ಕನಿಷ್ಠ ಪಕ್ಷ ಕರ್ನಾಟಕ ತಂಡದ ಏಳು-ಬೀಳಿನ ಬಗ್ಗೆ ಮಾತನಾಡಿದ್ದನ್ನೂ ಕೇಳಿಲ್ಲ. ಇದೇ ಕಾರಣಕ್ಕೆ ಮುಂಬೈ ಕ್ರಿಕೆಟ್’ನ legacy ಇವತ್ತಿಗೂ unmatchable.
ಒಬ್ಬ ಹುಡುಗ ಚೆನ್ನಾಗಿ ಆಡುತ್ತಿದ್ದಾನೆ ಎಂದರೆ ಸಾಕು, ಮುಂಬೈ ಕ್ರಿಕೆಟ್ ಸಂಸ್ಥೆ ಆತನನ್ನು ನೇರವಾಗಿ ರಣಜಿ ತಂಡಕ್ಕೇ ಆಯ್ಕೆ ಮಾಡಿ ಬಿಡುತ್ತದೆ. ಸಚಿನ್ ತೆಂಡೂಲ್ಕರ್ ಮುಂಬೈ ಪರ ರಣಜಿ ಟ್ರೋಫಿಗೆ debut ಮಾಡಿದಾಗ ಅವರ ವಯಸ್ಸು ಕೇವಲ 15 ವರ್ಷ, 232 ದಿನ. ಪೃಥ್ವಿ ಶಾ ಮೊದಲ ರಣಜಿ ಪಂದ್ಯವಾಡಿದ್ದು 17ನೇ ವಯಸ್ಸಿಗೆ. ಸರ್ಫರಾಜ್ ಖಾನ್ 15 ದಾಟಿ 16ಕ್ಕೆ ಕಾಲಿಡುವ ಮುನ್ನವೇ ಆತನ ತಲೆಯ ಮೇಲೆ ಮುಂಬೈ ರಣಜಿ ಕ್ಯಾಪ್ ಬಂದು ಕುಳಿತಿತ್ತು. ಸರ್ಫರಾಜನ ತಮ್ಮ ಮುಶೀರ್ ಖಾನ್ ಕೂಡ 17ನೇ ವರ್ಷದಲ್ಲೇ ರಣಜಿ ಕ್ರಿಕೆಟ್’ಗೆ debut ಮಾಡಿದ್ದ. ಆ ಅನುಭವ ಸಿಕ್ಕಿದ್ದರಿಂದಲೇ ಮುಶೀರ್ ಖಾನ್ ಈ ಬಾರಿ ರಣಜಿ ಕ್ವಾರ್ಟರ್ ಫೈನಲ್’ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದು, ಸೆಮಿಫೈನಲ್’ನಲ್ಲಿ ಅರ್ಧಶತಕ, ಫೈನಲ್’ನಲ್ಲಿ ಶತಕ ಸಿಡಿಸಿದ್ದು.
“ಹುಡುಗ ರೆಡಿ ಇದ್ದಾನೆ” ಎಂಬುದು ಗೊತ್ತಾದರೆ ಸಾಕು, ವಯಸ್ಸು ನೋಡದೆ ಅಲ್ಲಿ ನೇರವಾಗಿ ರಣಜಿ ತಂಡದ ಬಾಗಿಲು ತೆರೆದು ಬಿಡುತ್ತಾರೆ. ಆದರೆ ನಮ್ಮಲ್ಲಿ..? “ಇನ್ನೂ ಚಿಕ್ಕವನು, ಜ್ಯೂನಿಯರ್ ಕ್ರಿಕೆಟ್’ನಲ್ಲಿ ಆಡಿ ಪಳಗಲಿ, ಆಮೇಲೆ ನೋಡೋಣ” ಎಂಬ ಮನಸ್ಥಿತಿ.
ಕಿರಿಯರ ಕ್ರಿಕೆಟ್’ನಲ್ಲಿ ಟನ್’ಗಟ್ಟಲೆ ರನ್’ಗಳನ್ನು ರಾಶಿ ಹಾಕಿದ್ರೂ, ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ರಣಜಿ ಟ್ರೋಫಿ ಪದಾರ್ಪಣೆಗೆ 23ನೇ ವಯಸ್ಸಿನವರೆಗೆ ಕಾಯಬೇಕಾಗಿತ್ತು. ಕೆ.ಎಲ್ ರಾಹುಲ್ ಜೊತೆ ಈ ಹುಡುಗರನ್ನೂ 18-19ನೇ ವಯಸ್ಸಲ್ಲೇ ಆಡಿಸಿದ್ದಿದ್ದರೆ, ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
ನನಗಿನ್ನೂ ನೆನಪಿದೆ. 2011ರ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರ್ಯಾಣ ವಿರುದ್ಧ ಕರ್ನಾಟಕ ಮಕಾಡೆ ಮಲಗಿ ಬಿಟ್ಟಿತ್ತು. ಕರ್ನಾಟಕದ ಸೋಲಿನ ನಂತರ ಕೋಚ್ ಆಗಿದ್ದ ಕೆ.ಜಸ್ವಂತ್ ಅವರ ಬಳಿ ಒಂದು ಪ್ರಶ್ನೆ ಕೇಳಿದ್ದೆವು. “ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್’ರಂಥಾ ಹುಡುಗರಿಗೆ ರಣಜಿ ತಂಡದಲ್ಲಿ ಅವಕಾಶ ಕೊಡಲು ಇದು ಸರಿಯಾದ ಸಮಯವಲ್ಲವೇ” ಎಂದು. “Yes, ಅದು debatable subject” ಅಂದಿದ್ದರು ಜಸ್ವಂತ್.
ಆ ಸಮಯದಲ್ಲಿ ವಿವಿಎಸ್ ಲಕ್ಷ್ಮಣ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಾಗಿಕೊಂಡೇ ಇರುವ National Cricket Academyಯಲ್ಲಿದ್ದರು. ಕರ್ನಾಟಕದ ಬ್ಯಾಟ್ಸ್’ಮನ್’ಗಳ ಆಟ, ಸೋತ ರೀತಿಯನ್ನು ನೋಡಿದ ಲಕ್ಷ್ಮಣ್, ತಮ್ಮ ಪಕ್ಕದಲ್ಲಿದ್ದವರನ್ನು ಒಂದು ಪ್ರಶ್ನೆ ಕೇಳಿದ್ದರಂತೆ. “ರಾಹುಲ್, ಕರುಣ್ ನಾಯರ್ ಎಲ್ಲಿ..? ಆ ಹುಡುಗರನ್ನು ಆಡಿಸುವುದು ಬಿಟ್ಟು, ಇವರೇನು ಮಾಡುತ್ತಿದ್ದಾರೆ” ಎಂದು. ಹೈದರಾಬಾದ್’ನ ಲಕ್ಷ್ಮಣ್’ಗಿದ್ದ ನಮ್ಮ ಹುಡುಗರ ಸಾಮರ್ಥ್ಯದ ಅರಿವು ನಮ್ಮವರಿಗೆ ಇರಲಿಲ್ಲ..!
ಇದೇ ಮನಸ್ಥಿತಿಯಿಂದ ಅದೆಷ್ಟೋ ಪ್ರತಿಭಾವಂತರು ಕರ್ನಾಟಕ ಪರ ರಣಜಿ ಪಂದ್ಯಗಳನ್ನಾಡುವ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಜ್ಯೂನಿಯರ್ ಕ್ರಿಕೆಟ್’ನಲ್ಲಿ ಯಾರಾದರೂ ಒಬ್ಬ ಹುಡುಗ ಭರವಸೆ ಮೂಡಿಸಿದ್ದಾನೆ ಎಂದರೆ ಆತನನ್ನು ನೇರವಾಗಿ ರಣಜಿ ತಂಡಕ್ಕೆ ಆಡಿಸಿ ಬಿಡಬೇಕು.
ಕೆ.ಎಲ್ ರಾಹುಲ್’ನನ್ನು 19ನೇ ವಯಸ್ಸಿಗೆ ರಣಜಿ ಟ್ರೋಫಿ ಆಡಿಸಿದ್ದಕ್ಕೇ ಅವನು 2013-14ರಲ್ಲಿ ಸಾವಿರ ರನ್ ಗಳಿಸಿ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆಲ್ಲಿಸಿದ್ದು. ಅಭಿಮನ್ಯು ಮಿಥುನ್’ನೊಳಗೆ ಇದ್ದ ಕಿಚ್ಚನ್ನು ಗುರುತಿಸಿದ್ದಕ್ಕೇ 2009ರಲ್ಲಿ ಆತ ಇಡೀ ರಣಜಿ ಟೂರ್ನಿಯೇ ನಡುಗುವಂತೆ ಬೌಲಿಂಗ್ ಮಾಡಿದ್ದು.
ಕರ್ನಾಟಕ ತಂಡ ಮತ್ತೆ ರಣಜಿ ಟ್ರೋಫಿ ಗೆಲ್ಲಬೇಕು ಎಂದರೆ, ಇಂಥಾ ಮ್ಯಾಚ್ ವಿನ್ನರ್’ಗಳನ್ನು ಗುರುತಿಸಿ ಆಡಿಸಬೇಕು. ಕರ್ನಾಟಕ ಈ ಬಾರಿ U-19 ಕೂಚ್ ಬೆಹಾರ್ ಟ್ರೋಫಿ ಮತ್ತು U-23 ಕರ್ನಲ್ ಸಿ.ಕೆ ನಾಯ್ಡು ಟ್ರೋಫಿಗಳನ್ನು ಇತಿಹಾಸದಲ್ಲೇ ಮೊದಲ ಬಾರಿ ಗೆದ್ದಿದೆ. ಅಲ್ಲಿ ಚರಿತ್ರೆ ಸೃಷ್ಠಿಸಿದ, ಆಟದ ಹಸಿವಿರುವ ಹುಡುಗರನ್ನು ರಣಜಿ ತಂಡಕ್ಕೆ ಕರೆ ತನ್ನಿ. ಕರ್ನಾಟಕ ಮತ್ತೆ ರಣಜಿ ಟ್ರೋಫಿ ಗೆಲ್ಲದಿದ್ದರೆ ಕೇಳಿ..!
#RanjiTrophy #RanjiTrophyFinal #KarnatakaCricket Karnataka Ranji Team/ ಕರ್ನಾಟಕ ರಣಜಿ ತಂಡ #mumbaicricket Mumbai Cricket Association

Latest stories

LEAVE A REPLY

Please enter your comment!
Please enter your name here

two × 5 =