14 C
London
Monday, September 9, 2024
HomeAction Replayಕಳಪೆ ಆಟಗಾರನೆಂದು ಅವನು ಟೀಕಿಸಿದ್ದ ಆಟಗಾರನೇ ಅವನ ಅತಿದೊಡ್ಡ ಪ್ರತಿಸ್ಪರ್ಧಿಯಾದ

ಕಳಪೆ ಆಟಗಾರನೆಂದು ಅವನು ಟೀಕಿಸಿದ್ದ ಆಟಗಾರನೇ ಅವನ ಅತಿದೊಡ್ಡ ಪ್ರತಿಸ್ಪರ್ಧಿಯಾದ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್‌ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ್ ಮಾಡುವ ಅವನ ರೀತಿ ದೇವರಿಗೆ ಪ್ರೀತಿ.ಪರಿಸ್ಥಿತಿ ಹೀಗಿರುವಾಗ ಅವನು ಅಂತರಾಷ್ಟ್ರೀಯ ಕ್ರೀಡಾಪಟುವಾಗುವ ಕನಸನ್ನು ಕೈ ಬಿಡುವುದೊಳಿತು.

        ಹೀಗೆ ತನ್ನ ಸಮಕಾಲೀನ ಕ್ರೀಡಾಪಟುವಿನ ಬಗ್ಗೆ ಕಟುವಾದ ವಿಮರ್ಶೆಯ ಮಾತುಗಳನ್ನಾಡಿದವನ ಹೆಸರು ಆಂಡ್ರೆ ಅಗಾಸ್ಸಿ.ಟೆನ್ನಿಸ್ ಲೋಕದ ಎಂಟು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದ ಅಮೇರಿಕಾದ ದಂತಕತೆ.ಟೆನ್ನಿಸ್‌ನ ಮುಕ್ತಯುಗದಲ್ಲಿ ಕರಿಯರ್ ಸ್ಲಾಮ್(ವೃತ್ತಿ ಜೀವನದಲ್ಲಿ ನಾಲ್ಕೂ ಗ್ರಾಂಡ್‌ಸ್ಲಾಮ್ ಗೆದ್ದ ಸಾಧನೆ) ಮಾಡಿದ ಕೇವಲ ಐದನೇಯ ಆಟಗಾರ.ಎದುರಾಳಿಯೊಬ್ಬನೊಂದಿಗೆ ಮೊದಲ ಬಾರಿ ಮುಖಾಮುಖಿಯಾದಾಗ ಅವನಾಡಿದ ಮಾತುಗಳಿವು.  ಎದುರಾಳಿ ತುಂಬ ಕಳಪೆ ಆಟಗಾರ ಎನ್ನುವುದು ಅವನ ಆವತ್ತಿನ ಅಭಿಪ್ರಾಯ.ಬಹುಶ: ಆವತ್ತಿಗೆ ಅಗಾಸ್ಸಿಯ ಮಾತುಗಳನ್ನು ಕೇಳಿ ಎದುರಾಳಿ ಸುಮ್ಮನಾಗಿದ್ದನೇನೋ. ಆದರೆ ಆಂಡ್ರೆಯ ಅದೊಂದು ಸಣ್ಣ ಕಿಡಿನುಡಿ ದಶಕಗಳ ಕಾಲ ಇವರಿಬ್ಬರ ನಡುವಿನ ಜಿದ್ದಾಜಿದ್ದಿಗೆ ನಾಂದಿಯಾಯಿತು ಎಂದರೆ ಸುಳ್ಳಲ್ಲ.ಇಷ್ಟಕ್ಕೂ ’ಕಳಪೆ ಆಟಗಾರ’ಎಂದು ಅಗಾಸ್ಸಿಯಿಂದ ಬಿರುದಾಂಕಿತನಾದ ಆ ಆಟಗಾರ ಯಾರು ಗೊತ್ತೇ..? ಮುಂದೆ ದಶಕಗಳ ಕಾಲ ಟೆನ್ನಿಸ್ ಜಗತ್ತನ್ನು ಅನಭಿಶಿಕ್ತ ರಾಜನಂತೆ ಆಳಿ ದಾಖಲೆಯ ಹದಿನಾಲ್ಕು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮತ್ತೊಬ್ಬ ಅಮೇರಿಕನ್ ದಂತಕತೆ ಪೀಟ್ ಸಾಂಪ್ರಾಸ್..!!

ಕ್ರೀಡಾ ಜಗತ್ತೇ ಹಾಗೆ.ಅವರವರ ಕ್ಷೇತ್ರದಲ್ಲಿ ಪಳಗಿದ ಆಟಗಾರರ ಕೊರತೆಯಿಲ್ಲ ಅಲ್ಲಿ.ಹಾಗೆ ಪಳಗಿದ ಆಟಗಾರರ ಪೈಕಿಯೇ ಒಂದಷ್ಟು ಶಿಸ್ತುಬದ್ಧ ಆಟಗಾರರು ದಂತಕತೆಯ ಪಟ್ಟಿ ಪಡೆದುಕೊಂಡು ಬಿಡುವುದು ಸಹ ಸಹಜವೇ.ಕ್ರಿಕೆಟ್ ಎಂದಾಗ ಸಚಿನ್ ತೆಂಡೂಲ್ಕರ್,ಬಾಸ್ಕೆಟ್ ಬಾಲ್ ಎಂದಾಗ ಮೈಕಲ್ ಜೋರ್ಡಾನ್,ಹಾಕಿ ಎಂದಾಗ ಧ್ಯಾನ್ ಚಂದ,ಸಮಕಾಲೀನ ಟೆನ್ನಿಸ್ ಎಂದಾಗ ರೋಜರ್ ಫೆಡರರ್ ಹೀಗೆ.ತುಂಬ ಸಲ ಇಂಥಹ ಮಹಾನ್ ಆಟಗಾರರನ್ನು ಮೀರಿಸುವವರೇ ಇಲ್ಲವೆನ್ನಿಸಿ,ಇವರಿಗೆ ಎದುರಾಳಿಯೇ ಇಲ್ಲವೆನ್ನಿಸುವಷ್ಟರಲ್ಲಿ ಇನ್ಯಾರೋ ಒಬ್ಬ ಇವರಷ್ಟೇ ಪ್ರತಿಭಾನ್ವಿತ ಇವರೊಟ್ಟಿಗೆ ಪೈಪೋಟಿಗೆ ನಿಲ್ಲುತ್ತಾನಲ್ಲ,ಆಗ ಶುರುವಾಗುತ್ತದೆ ಕ್ರೀಡೆಯ ಅಸಲಿ ಸ್ವಾರಸ್ಯ.ಅಭಿಮಾನಿಗಳಿಗೆ ರಸದೌತಣ. ಸಚಿನ್ ತೆಂಡೂಲ್ಕರ್ ಕಾಲದಲ್ಲಿ ಅವನೊಟ್ಟಿನ ಪೈಪೋಟಿಗೆ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ,ಪಾಕಿಸ್ತಾನದ ಇಂಜಮಾಮ್,ಸಯಿದ್ ಅನ್ವರ್‌ನಂಥಹ ಆಟಗಾರರಿದ್ದರು.ಆದರೆ ಪೈಪೋಟಿಯಲ್ಲಿ ಸ್ಪಷ್ಟವಾಗಿ ಗೆಲುವು ಕಂಡವನು ಸಚಿನ್.ಕ್ರಿಕೆಟ್ ಜಗತ್ತಿನ ಹೆಚ್ಚು ಕಡಿಮೆ ಎಲ್ಲ ದಾಖಲೆಗಳನ್ನೂ ತನ್ನ ಮುಡಿಗೇರಿಸಿಕೊಂಡು ಬಿಟ್ಟ ಸವ್ಯಸಾಚಿ.

      ಇಷ್ಟಾಗಿಯೂ ಶ್ರೇಷ್ಟತೆಯೆನ್ನುವುದು ಯಾವತ್ತಿಗೂ ಚರ್ಚಾರ್ಹವೇ.ಆಡಿದ ವಾತಾವರಣಕ್ಕೆ ಹೋಲಿಸಿದರೆ ಬ್ರಿಯನ್ ಲಾರಾ ತೆಂಡೂಲ್ಕರ್‌ಗಿಂತ ಶ್ರೇಷ್ಟವೆನ್ನುವುದು ಅನೇಕರ ಅಭಿಮತ.ಹೀಗೊಂದು ಪೈಪೋಟಿಯಿಂದ ಟೆನ್ನಿಸ ಜಗತ್ತು ಸಹ ಹೊರತೇನಲ್ಲ.In Fact ಉಳಿದೆಲ್ಲ ಕ್ರೀಡೆಗಳಿಗೆ ಹೋಲಿಸಿದರೆ ಟೆನ್ನಿಸ್ ಆಟದಲ್ಲಿ  ಇಬ್ಬರು ಪ್ರತಿಭಾನ್ವಿತರು ನೇರಾನೇರ ಎದುರಾಳಿಗಳಾಗಿ ನಿಲ್ಲುವುದು ಇನ್ಯಾವ ಆಟದಲ್ಲಿಯೂ ಸಾಧ್ಯವಿಲ್ಲ.ಗುಂಪು ಕ್ರೀಡೆಗಳಲ್ಲಿರುವಂತೆ ಸಾಧಕನ ಬೆನ್ನಿಗೆ ಇಲ್ಲೊಂದು ಬೆಂಬಲದ ಗುಂಪಿಲ್ಲ.ಇಲ್ಲೇನಿದ್ದರೂ ನೇರ ಮುಖಾಮುಖಿ.ಇಬ್ಬರ ನಡುವಿನ ಹಣಾಹಣಿ.ಹತ್ತಾರು ಅದ್ಬುತ ಪೈಪೋಟಿಗಳನ್ನು ಕಂಡಿದೆ ಟೆನ್ನಿಸ್ ಲೋಕ.ಇವುಗಳಲ್ಲಿ ಒಂದಷ್ಟು ರೋಚಕ ಸೆಣಸಾಟದ ಬಗ್ಗೆ ಬರೆಯೋಣವೆಂದುಕೊಂಡಾಗ ಮೊದಲು ನೆನಪಾಗಿದ್ದು ನಮ್ಮ ತಲೆಮಾರಿನ ಮೊದಲ ಹಣಾಹಣಿಯಾದ ಸಾಂಪ್ರಾಸ್ ಮತ್ತು ಅಗಾಸ್ಸಿಯ ನಡುವಣದ ಕಾದಾಟ.

       ಅಗಾಸ್ಸಿ ವೃತ್ತಿಪರ  ಟೆನ್ನಿಸ್ ಆಟಗಾರನಾಗಿ ಮೈದಾನಕ್ಕೆ ಇಳಿದದ್ದು 1986ರಲ್ಲಿ ತನ್ನ ಹದಿನಾರನೇಯ  ವಯಸ್ಸಿಗೆ.ಶ್ರೇಯಾಂಕರಹಿತನಾಗಿದ್ದವನು ವರ್ಷಾಂತ್ಯದ ವೇಳೆಗೆ 91ನೇ ಸ್ಥಾನದಲ್ಲಿ ನಿಂತಿದ್ದ.ಪ್ರತಿಭೆಗೆ ತಕ್ಕ ಬೆಳವಣಿಗೆಯಿತ್ತು ವೃತ್ತಿಜೀವನಕ್ಕೆ.ಮರುವರ್ಷವೇ ಎಟಿಪಿಯ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡವನ ರ‍್ಯಾಂಕಿಂಗ್ ಅಗ್ರಸ್ಥಾನಿಗಳ ಪೈಕಿ 25ನ್ನು ತಲುಪಿಕೊಂಡಿತ್ತು.88ರ ವೇಳೆಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದು ವರ್ಷಾಂತ್ಯಕ್ಕೆ ಅಗ್ರ ಮೂವರು ಆಟಗಾರರ ಸಾಲಿನಲ್ಲಿ ನಿಂತಿದ್ದ.ಇನ್ನೇನು ಟೆನ್ನಿಸ್‌ಲೋಕದ ಅಂದಿನ ದಿಗ್ಗಜರು ತಮ್ಮ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿದ್ದಾರೆನ್ನುವಾಗ ತನ್ನ ಆಳ್ವಿಕೆಯ ಪರ್ವ ಶುರುವಾಗಲಿದೆ ಎಂದುಕೊಂಡಿದ್ದ ಅಗಾಸ್ಸಿಗೆ,ಅಷ್ಟು ಸುಲಭವಲ್ಲ ಯಶಸ್ಸು ಎಂಬಂತೆ ಎದುರಿಗೆ ನಿಂತವನು ಪೀಟ್ ಸಾಂಪ್ರಾಸ್.1988ರಲ್ಲಿ ವೃತ್ತಿಪರನಾದ ಸಾಂಪ್ರಾಸ್‌ನ ಆಟದಲ್ಲಿ ಅದ್ಭುತವಾದ ಕಸುವಿತ್ತು.ಟೆನ್ನಿಸ್ ಜಗತ್ತು ಕಂಡ ವೇಗದ ಸರ್ವರ್‌ಗಳ ಪೈಕಿ ಪೀಟ್ ಸಹ ಒಬ್ಬ. ಅತಿಹೆಚ್ಚು ಖಚಿತಾಂಕ ಸರ್ವ್‌(ಏಸ್)ಗಳನ್ನು ಸಿಡಿಸಿದ ಆಟಗಾರರ ಪಟ್ಟಿಯ ಮೊದಲ ಹತ್ತು ಸ್ಥಾನಗಳ ಪೈಕಿ ಇಂದಿಗೂ ಸಾಂಪ್ರಾಸ್ ಹೆಸರಿದೆ. ಬೇಸ್ ಲೈನ್ ಹೊಡೆತಗಳನ್ನು ಉಗ್ರವಾಗಿ ಆಡುತ್ತಲೇ ಎದುರಾಳಿಗಳನ್ನು ರಕ್ಷಣಾತ್ಮಕವಾಗಿ ಆಡುವಂತೆ ಮಾಡಿ,ನೆಟ್ ಸಮೀಪದಲ್ಲಿ ಅಂಕಗಳನ್ನು ಗೆದ್ದುಬಿಡುತ್ತ ಚತುರನಿಗೆ ಅಗಾಸ್ಸಿಗಿಂತ ವೇಗದಲ್ಲಿ ಯಶಸ್ಸು ಕಾಣುವುದು ಕಷ್ಟವೆನ್ನಿಸಲಿಲ್ಲ.ಅದೇ ಜಗತ್ತಿನಲ್ಲಿಯೇ ಕೂತು ಸೂಕ್ಷ್ಮವಾಗಿ ಸಾಂಪ್ರಾಸ್‌ನ ಆಟವನ್ನು ಗಮನಿಸುತ್ತಿದ್ದ ಅಗಾಸ್ಸಿಗೆ ಸಣ್ಣದ್ದೊಂದು ಮಾತ್ಸರ್ಯದ ಭಾವ ಹುಟ್ಟಿಕೊಂಡಿರಬಹುದಾ..? ಅಂಥದ್ದೊಂದು ಹೊಟ್ಟೆಕಿಚ್ಚಿನ ಭಾವವೇ ಸಾಂಪ್ರಾಸ್ ಕುರಿತಾಗಿ ಕಟು ಟೀಕೆಗೆ ಕಾರಣವಾಗಿರಬಹುದಾ ..? ಗೊತ್ತಿಲ್ಲ.

ಮೊದಲ ಪಂದ್ಯದ ಮಾತಿನ ವಿವಾದದ ನಂತರ ದೊಡ್ಡದ್ದೊಂದು ವೇದಿಕೆಯಲ್ಲಿ ಇಬ್ಬರೂ ದಿಗ್ಗಜರು ಎದುರಾಗಿದ್ದು 1990ರ ಯು ಎಸ್ ಓಪನ್ನಿನ ಫೈನಲ್ಲಿನಲ್ಲಿ.ಮೊದಲ ಪಂದ್ಯವನ್ನು ಅಗಾಸ್ಸಿಯ ಎದುರು ಸೋತ ನಂತರ ಫಿಲಡೆಲ್ಪಿಯಾದ ಟೂರ್ನಿಯೊಂದರಲ್ಲಿ ಸಾಂಪ್ರಾಸ್ ಅಗಾಸ್ಸಿಯನ್ನು ಮಣಿಸಿದ್ದನಾದರೂ ಅದೂ ಪೂರ್ಣ ಪ್ರಮಾಣದ ಜಯವೆಂದು ಅಭಿಮಾನಿಗಳಿಗೆ ಎನ್ನಿಸಿರಲಿಲ್ಲ.ಪಂದ್ಯ ಸಮಬಲದ ಸ್ಥಿತಿಯಲ್ಲಿದ್ದಾಗ ಸ್ನಾಯು ಸೆಳೆತದ ಕಾರಣಕ್ಕೆ ಅಗಾಸ್ಸಿ ಹಿಂದೆ ಸರಿದು ಸಾಂಪ್ರಾಸ್ ವಿಜಯಿಯಾಗಿದ್ದು ಅಭಿಮಾನಿಗಳಿಗೆ ತೃಪ್ತಿ ತಂದಿರಲಿಲ್ಲ.ಆದರೆ ಯು ಎಸ್ ಓಪನ್ ಹಾಗಲ್ಲ.ಯುವ ಪ್ರತಿಭೆಗಳಿಬ್ಬರೂ ಭಯಂಕರ ಅಬ್ಬರದಲ್ಲಿದ್ದ ದಿನಗಳವು.ಘಟಾನುಘಟಿಗಳನ್ನು ಮಣಿಸಿ ಫೈನಲ್ ತಲುಪಿಕೊಂಡಿದ್ದ ಇಬ್ಬರ ನಡುವಣ ಮೊದಲ ಗ್ರಾಂಡ್ ಕಾದಾಟ.ಸೆಮಿಫೈನಲ್ಲಿನಲ್ಲಿ ಸಾಂಪ್ರಾಸ್ ಮತ್ತೊಬ್ಬ ದಂತಕತೆ ಮೆಕೆನ್ರೊರನ್ನು ಮಣಿಸಿದ್ದರೇ,ಅಗಾಸ್ಸಿ ಆವತ್ತಿಗೆ ದ್ವಿತೀಯ ಶ್ರೇಯಾಂಕಿತ ಬೋರಿಸ್ ಬೇಕರ್‌ನನ್ನು ಮಣಿಸಿದ್ದ.ನಿಜಕ್ಕೂ ರಂಗೇರಿದ್ದ ಅಂತಿಮ ಪಂದ್ಯವದು.ಪಂಡಿತರ ಪ್ರಕಾರ ಅಗಾಸ್ಸಿ ಗೆಲುವಿಗೆ ನೆಚ್ಚಿನ ಆಟಗಾರನಾಗಿದ್ದ.ಅವರ ಅಭಿಪ್ರಾಯಕ್ಕೆ ಪೂರಕವಾಗಿ ರ‍್ಯಾಂಕಿಂಗ್ ಪಟ್ಟಿಯಲ್ಲೂ ಅವನು ಪೀಟ್‌ಗಿಂತ ನಾಲ್ಕು ಸ್ಥಾನ ಮೇಲಿದ್ದ.ಹಾಗಾಗಿ ಅವನ ಮೊದಲ ಚಾಂಪಿಯನ್‌ಶಿಪ್ ಗೆಲುವದು ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು.ಆದರೆ ಫೈನಲ್ ಪಂದ್ಯದ್ದಲ್ಲಿ ನಡೆದದ್ದೇ ಬೇರೆ. ತನ್ನೆಡೆಗಿನ ಕಟು ಮಾತುಗಳಿಗೆ ಬೆಂಕಿಯಂಥಹ ಉತ್ತರ ಕೊಡಲೆಂದೇ ಕಾದು ಕುಳಿತಿದ್ದನೇನೋ ಎನ್ನುವಂತೆ ಆಟವಾಡಿದ್ದ ಪೀಟನದ್ದು ಅಕ್ಷರಶ: ರುದ್ರನರ್ತನ. ಕೊಂಚವೂ ಕಷ್ಟಪಡದೇ ನೇರ ಸೆಟ್ಟುಗಳಲ್ಲಿಅಗಾಸ್ಸಿಯನ್ನು ಸೋಲಿಸಿದ್ದ ಸಾಂಪ್ರಾಸ್ ಮೊದಲ ಗ್ರಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ. ಆ ಮೂಲಕ ಪರಸ್ಪರರ ಸೋಲು ಗೆಲುವಿನ ಪಟ್ಟಿಯಲ್ಲಿ 2 – 1ರ ಮುನ್ನಡೆ ಸಾಧಿಸಿದ್ದ ಪೀಟ್.

ಹಾಗೆಂದು ಅಗಾಸ್ಸಿಯೇನು ಬಡಪೆಟ್ಟಿಗೆ ಬಗ್ಗುವ ಆಸಾಮಿಯೇ.ಮರುಭೇಟಿಯಲ್ಲಿಯೇ ನೇರ ಸೆಟ್ಟುಗಳಲ್ಲಿ ಸಾಂಪ್ರಾಸ್‌ನನ್ನು ಸೋಲಿಸಿದ ಅಗಾಸ್ಸಿ,ಸೋಲುಗೆಲುವಿನ ಪಟ್ಟಿಯಲ್ಲಿ ಸಮಬಲ ಸಾಧಿಸಿದ.ನಾಲ್ಕು ಪಂದ್ಯಗಳು ಮುಗಿಯುವಷ್ಟರಲ್ಲಿ ,’ಇದು ಸುಲಭಕ್ಕೆ ಮುಗಿಯುವ ಪೈಪೋಟಿಯಲ್ಲ’ ಎಂದು ಅಭಿಮಾನಿಗಳಿಗೂ ಅನ್ನಿಸಿತ್ತು.ನಂತರ ನಡೆದದ್ದು ಇತಿಹಾಸ.ಮುಂದಿನ ಬಹುತೇಕ ಟೂರ್ನಿಯಲ್ಲಿ ಒಂದಿಲ್ಲೊಂದು ಹಂತದಲ್ಲಿ ಪೀಟ್ ಮತ್ತು ಅಗಾಸ್ಸಿ ಪರಸ್ಪರ ಭೇಟಿಯಾಗುತ್ತಿದ್ದರು.ಟೆನ್ನಿಸ್ ಅಂಕಣವೆನ್ನುವುದು ಅಕ್ಷರಶ: ರಣರಂಗ.ಅದ್ಯಾವ ಪರಿ ಕಾದಾಡುತ್ತಿದ್ದರು ಈ ಆಟಗಾರರೆಂದರೆ ಗೆಲುವನ್ನು ಊಹಿಸುವುದು ನಿಜಕ್ಕೂ ಕಷ್ಟವೆನ್ನಿಸುತ್ತಿತ್ತು.ಪೈಪೋಟಿಯ ಬರೋಬ್ಬರಿ ಹದಿನಾರನೇ ಪಂದ್ಯ ಮುಗಿದ ನಂತರವೂ  8 – 8ರಿಂದ ಪಟ್ಟಿ  ಸಮಬಲದಲ್ಲಿತ್ತೆಂದರೆ ಪೈಪೋಟಿಯ ಮಟ್ಟವನ್ನು ಊಹಿಸಿ.ಆದರೆ ಮುಂದೆ ಒಂದು ಹಂತದಲ್ಲಿ ನಿಧಾನವಾಗಿ ಸಾಂಪ್ರಾಸ್ ಅಗಾಸ್ಸಿಯ ಮೇಲೆ ಹಿಡಿತ ಸಾಧಿಸಲಾರಂಭಿಸಿದ್ದ.

   ಆಗೊಮ್ಮೆ ಈಗೊಮ್ಮೆ ಅಗಾಸಿ ಗೆಲ್ಲುತ್ತಿದ್ದದ್ದು ಹೌದಾದರೂ ಗೆಲುವಿನ ಪಟ್ಟಿಯಲ್ಲಿ ಸಾಂಪ್ರಾಸ್‌ನ ಸ್ಥಾನ ಮೇಲಕ್ಕೇರುತ್ತ ಹೋಯಿತು.ವಿಚಿತ್ರವೆಂದರೆ ಸಾಂಪ್ರಾಸ್ ತನ್ನ ಅಂತಿಮ ಪಂದ್ಯವನ್ನು ಅಗಾಸ್ಸಿಯ ಮೇಲೆಯೇ ಆಡಿದ್ದ.ಅಗಾಸ್ಸಿಯನ್ನು ಸೋಲಿಸಿ ಮೊದಲ ಯು ಎಸ್ ಓಪನ್ ಗೆದ್ದಿದ್ದ ಸಾಂಪ್ರಾಸ್,ತನ್ನ ಅಂತಿಮ ಪಂದ್ಯವನ್ನು ಸಹ ಅಗಾಸ್ಸಿಯ ಮೇಲೆ ಆಡಿ ಯು ಎಸ್ ಓಪನ್ನಿನ ಗೆಲುವಿನೊಂದಿಗೆ ವೃತ್ತಿಜೀವನವನ್ನು ಕೊನೆಗೊಳಿಸಿದ್ದು ಅದ್ಭುತ ಕಾಕತಾಳೀಯವೇ ಸರಿ.ಅಂತಿಮವಾಗಿ ಪೈಪೋಟಿಗಳ ಪಟ್ಟಿಯಲ್ಲಿಯೂ ಪೀಟ್ ಸಾಂಪ್ರಾಸ್ ಗೆಲುವು ಸಾಧಿಸಿದ್ದ.ಆಡಿದ್ದ ಒಟ್ಟು 34 ಪಂದ್ಯಗಳ ಪೈಕಿ ಪೀಟ್ 20ರಲ್ಲಿ ಜಯ ಸಾಧಿಸಿದ್ದರೆ 14 ಪಂದ್ಯಗಳಲ್ಲಿ ಅಗಾಸ್ಸಿ ಯುದ್ಧ ಗೆದ್ದಿದ್ದ.

ಅಗಾಸ್ಸಿಗೆ ಹೋಲಿಸಿದರೆ ಸಾಂಪ್ರಾಸ್ ಮೃದುಭಾಷಿ.ಆದರೆ ಅಗಾಸ್ಸಿ ಹಾಗಲ್ಲ.ವೃತ್ತಿ ಜೀವನದ ಆರಂಭದಿಂದಲೂ ಪೀಟ್‌ನೆಡೆಗೊಂದು ಸಣ್ಣ ಅಸೂಯೆ ಅವನಿಗೆ.ಅಗಾಸ್ಸಿಯ  ಆತ್ಮಕಥೆ ’ಓಪನ್’ ಓದುವಾಗ ಅವನ  ಅಸಹನೆ ಸ್ಪಷ್ಟವಾಗಿ ಗೋಚರಿಸುತ್ತದೆ.’ ಸಾಂಪ್ರಾಸ್‌ನೆದುರು ಸೋತಾಗಲೆಲ್ಲ ನನಗೆ ಅಪಾರ ದು:ಖವಾಗುತ್ತಿತ್ತು.ಪ್ರತಿಸಲವೂ ದಿನಗಟ್ಟಲೆಯ ಮ್ಲಾನತೆ.ಇವನೊಬ್ಬ ನನ್ನ ಸಮಕಾಲೀನನಾಗಿರದಿದ್ದರೇ ನಾನು ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಬಹುದಿತ್ತೇನೋ’ಎನ್ನುವ ಸಾಲುಗಳಲ್ಲಿ ಅವನ ಹತಾಶೆ ವ್ಯಕ್ತವಾಗುತ್ತದೆ.ಅವನ ಹತಾಶೆಯ ಮಟ್ಟ ಇಲ್ಲಿಗೆ ನಿಂತಿತೇನೋ ಎಂದುಕೊಂಡರೆ ತಪ್ಪಾದೀತು.ಅದೊಮ್ಮೆ ಚ್ಯಾರಿಟಿ ಪಂದ್ಯದಲ್ಲಿ ಡಬಲ್ಸ್ ಪಂದ್ಯದಲ್ಲಿ ಪರಸ್ಪರ ಎದುರಾದ ಅಗಾಸ್ಸಿ ಮತ್ತು ಸಾಂಪ್ರಾಸ್ ಒಬ್ಬರನ್ನೊಬ್ಬರು ಅಣಕಿಸಿಕೊಂಡಿದ್ದರು.ಅಗಾಸ್ಸಿಯ ನಡಿಗೆಯನ್ನು ಅನುಕರಿಸುತ್ತ ಅಗಾಸ್ಸಿಯನ್ನು ಪೀಟ್ ಕಿಚಾಯಿಸಿದ್ದರೆ,ಆ ಹೊತ್ತಿನಲ್ಲಿ ಅಗಾಸ್ಸಿಯಲ್ಲೊಂದು ಕುಹಕ ಜಾಗೃತವಾಗಿತ್ತು.

    ಪೀಟ್‌ನ ನಡೆಗೊಂದು  ಪ್ರತ್ಯುತ್ತರವೆನ್ನುವಂತೆ ತನ್ನ ಜೇಬನ್ನು ಹೊರಗೆಳೆದು ತೋರಿಸಿದ ಅಗಾಸ್ಸಿ’ನಿನಗೆ ಟಿಪ್ಸ್ ಬೇಕಾ ಪೀಟ್..ನನ್ನ ಬಳಿ ಹಣವೇ ಇಲ್ಲ…ಓಹ್ Wait..!! ನನ್ನ ಬಳಿ ಒಂದು ಡಾಲರ್ ಇದೆ’ಎನ್ನುತ್ತ ವ್ಯಂಗ್ಯದ ನಗೆ ಬೀರಿದ್ದ.ಹಿಂದೊಮ್ಮೆ ಹೊಟೆಲ್ಲೊಂದರಲ್ಲಿ ಸಾಂಪ್ರಾಸ್ ಕೇವಲ ಒಂದು ಡಾಲರ್ ಟಿಪ್ಸ್ ಕೊಟ್ಟಿದ್ದನ್ನು ಹಾಗೆ ಅಣುಕಿಸಿದ್ದ ಅಗಾಸ್ಸಿಯ ನಡೆ ಪೀಟ್‍ನನ್ನು ಕೆರಳಿಸಿತ್ತು.ತಮಾಷೆಗೆನ್ನುವಂತೆ ಸಾಂಪ್ರಾಸ್ ರಪ್ಪನೇ ಚೆಂಡನ್ನು ಅಗಾಸ್ಸಿಯತ್ತ ಎಸೆದನಾದರೂ ಅವನ ಮುಖಭಾವ ಪೀಟ್‍ನ ಅಸಮಾಧಾನವನ್ನು ಸ್ಪಷ್ಟವಾಗಿ ಸೂಚಿಸುತ್ತಿತ್ತು.ಹಿರಿಯ ಆಟಗಾರರ ವಿಲಕ್ಷಣ ವರ್ತನೆಯಿಂದಾಗಿ ಜೊತೆಯಲ್ಲಿ ಸಹ ಆಟಗಾರರಾಗಿ ನಿಂತಿದ್ದ ನಡಾಲ್ ಮತ್ತು ಫೆಡರರ್‌ಗೆ ಮುಜುಗರದ ಪರಿಸ್ಥಿತಿ.

ಗೆದ್ದ ಗ್ರಾಂಡ್‌ಸ್ಲಾಮ್‌ಗಳ ಲೆಕ್ಕದಲ್ಲಿ ಹೇಳುವುದಾದರೆ  ಹದಿನಾಲ್ಕು ಪ್ರಶಸ್ತಿಗಳನ್ನು ಗೆದ್ದುನಿಂತ ಪೀಟ್ ಇಬ್ಬರ ಪೈಕಿ ಮೇಲಿನವನು ಎನ್ನಿಸುತ್ತಾನೆ.ಆದರೆ ಗೆದ್ದಿದ್ದು ಎಂಟೇ ಪ್ರಶಸ್ತಿಗಳಾದರೂ ,ಸಾಂಪ್ರಾಸ್‌ನಿಗೆ ಸಾಧ್ಯವಾಗದ ಆವೆಮಣ್ಣಿನಂಕಣದ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದು ಕರಿಯರ್ ಸ್ಲಾಮ್ ಪೂರ್ತಿಗೊಳಿಸಿಕೊಂಡು ಒಲಂಪಿಕ್ಸ್‌ನ ಸ್ವರ್ಣ ಗೆದ್ದ ಅಗಾಸ್ಸಿ ಶ್ರೇಷ್ಠನೆನ್ನಿಸುತ್ತಾನೆ. ಸಾಂಪ್ರಾಸ್ ಅದ್ಭುತ್ ಸರ್ವಿಸ್‌ನ ಆಟಗಾರ.ಅಗಾಸ್ಸಿ ಟೆನ್ನಿಸ್ ಲೋಕ ಕಂಡ ಅತ್ಯದ್ಭುತ  ರಿಟರ್ನ್ ಸರ್ವಿಸ್ ಪರಿಣಿತ.ಇಬ್ಬರೂ ಟೆನ್ನಿಸ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಸ್ಥಾನ ಪಡೆದವರೇ.1989ರಿಂದ 2002ರ ಟೆನ್ನಿಸ್ ಆಟದ ರೋಚಕತೆ ಹೆಚ್ಚಿಸಿದ ಆಟಗಾರರ ನಡುವೆ ನಿಜಕ್ಕೂ ಒಂದು ತುಲನೆಯ ಅಗತ್ಯವಿದೆಯಾ ಎಂಬ ಪ್ರಶ್ನೆಗೆ ನನ್ನದು ನಕಾರಾತ್ಮಕ ಉತ್ತರವೇ.ಅಷ್ಟು ಅದ್ಭುತ ಪ್ರತಿಸ್ಪರ್ಧಿಗಳ ನಡುವಣದ ಬೆಂಕಿ ,ಈಗಲಾದರೂ ಕೊಂಚ ಕಡಿಮೆಯಾಗಿರಬಹುದಾ ಎಂಬ ಕುತೂಹಲಕ್ಕೆ ಸಣ್ಣದ್ದೊಂದು ಹುಡುಕಾಟ  ನಡೆಸಿದೆ.’ಸಾಂಪ್ರಾಸ್ ಒಬ್ಬ ಅದ್ಬುತ ಆಟಗಾರ. ಅವನಂತಹ ಪ್ರತಿಸ್ಪರ್ಧಿಯಿರದಿದ್ದರೆ  ಬಹುಶ: ನಾನು ಈ ಮಟ್ಟಕ್ಕೆ ಬೆಳೆಯುವುದು ಸಾಧ್ಯವಿರಲಿಲ್ಲ.ಆ ಮಟ್ಟಿಗೆ ನಾನು ಅವನಿಗೆ ಋಣಿ’ಎಂದು ಅಗಾಸ್ಸಿ ಹೇಳಿದ್ದು ಕಾಣಿಸಿತು.ಮನಸಿಗೇನೋ ಖುಷಿ. ನಮ್ಮ ತಲೆಮಾರಿನ ಮೊದಲ ಟೆನ್ನಿಸ್ ದಿಗ್ಗಜರ ನಡುವಣ ಹಣಾಹಣಿಯ ಕತೆಯಿದು.ಆನಂತರ ಈ ಬಗೆಯ ಜಿದ್ದಾಜಿದ್ದಿ ಬರಲೇ ಇಲ್ಲವಾ..? ಖಂಡಿತ ಬಂದಿದೆ.ನಿಜ ಹೇಳಬೇಕೆಂದರೆ ಇನ್ನೂ ಉತ್ಕಟ ಕಾದಾಟದ ಕತೆಗಳಿವೆ ಟೆನ್ನಿಸ್ ಲೋಕದಲ್ಲಿ.ಅದರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.


     ಗುರುರಾಜ ಕೊಡ್ಕಣಿ,ಯಲ್ಲಾಪುರ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

six + 7 =