ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ದಿಗ್ಗಜ ಅನುಭವಿ ಆಟಗಾರ ಹೀತ್ ಸ್ಟ್ರೀಕ್ ತಮ್ಮ 49 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಭಾನುವಾರ ಅವರ ಸಾವಿನ ಸುದ್ದಿಯಲ್ಲಿ ಅಭಿಮಾನಿಗಳು ಮುಳುಗಿದ್ದಾರೆ. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಬೌಲರ್, ಆಲ್ ರೌಂಡರ್ ಆಗಿ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿದ್ದ ಹೀತ್ ಸ್ಟ್ರೀಕ್ ಜಿಂಬಾಬ್ವೆಗಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಪಂದ್ಯ-ವಿಜೇತ ಪ್ರದರ್ಶನಗಳನ್ನು ಗೆಲ್ಲಲು ಶ್ರಮಿಸಿದ್ದರು.
2000 ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಚೆಂಡು ಮತ್ತು ಬ್ಯಾಟಿಂಗ್‌ನಲ್ಲಿ ಪ್ರಬಲ ಪ್ರದರ್ಶನ ನೀಡುತ್ತಿದ್ದ ಹೀತ್ ಸ್ಟ್ರೀಕ್ ಅವರನ್ನು ಟೆಸ್ಟ್ ಮತ್ತು ODI ಎರಡೂ ತಂಡಗಳಿಗೂ ನಾಯಕನನ್ನಾಗಿ ಮಾಡಿತ್ತು. 2000-2004ರ ಅವಧಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಉತ್ತಮವಾಗಿತ್ತು. ಹೀತ್ ಸ್ಟ್ರೀಕ್ ಜಿಂಬಾಬ್ವೆಗೆ ಸುದೀರ್ಘ ಕಾಲ ನಾಯಕತ್ವ ವಹಿಸಿದ್ದರು. ಈ ಸಮಯದಲ್ಲಿ, ಅವರು ಅನೇಕ ದೊಡ್ಡ ಪಂದ್ಯಗಳಲ್ಲಿ ತಂಡವನ್ನು ಗೆದ್ದ ಸಾಧನೆ ಮಾಡಿದ್ದರು. ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬಂಟಿಯಾಗಿ ಮೇಲಕ್ಕೆತ್ತುವ ಪ್ರಯತ್ನ ಹೀತ್ ಸ್ಟ್ರೀಕ್ ನಡೆಸಿದ್ದರು. ಹೀತ್ ಸ್ಟ್ರೀಕ್ ಬೌಲಿಂಗ್ ಮೂಲಕ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಸಾಕಷ್ಟು ಕೊಡುಗೆ ನೀಡಿ ಗಮನಸೆಳೆದಿದ್ದರು. ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ.
ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನು ಕೂಡ ಬರೆದುಕೊಂಡಿರುವ ಇವರು ಜಿಂಬಾಬ್ವೆ ಪರ ಹಲವು ವಿಶೇಷ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಜಿಂಬಾಬ್ವೆ ತಂಡದ ಪರವಾಗಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2005ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಅಂತ್ಯವಾಗಿತ್ತು. ಇನ್ನು ನಿವೃತ್ತಿಯ ಬಳಿಕವೂ ಹೀತ್ ಸ್ಟ್ರೀಕ್ ಕ್ರಿಕೆಟ್ ಅಂಗಳದಲ್ಲಿ ಕೋಚ್ ಆಗಿ ಸಕ್ರಿಯವಾಗಿದ್ದರು. ಜಿಂಬಾಬ್ವೆ ಸೇರಿದಂತೆ ಸ್ಕಾಟ್ಲೆಂಡ್, ಬಾಂಗ್ಲಾದೇಶ ಹಾಗೂ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೂ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಹೀತ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿರುವ ಕಾರಣ, ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೀತ್ ಸ್ಟ್ರೀಕ್ ಅವರ ಆರೋಗ್ಯವು ನಿರಂತರವಾಗಿ ಕ್ಷೀಣಿಸುತ್ತಿತ್ತು. ಹೀತ್ ಸ್ಟ್ರೀಕ್ ಸಾವಿನಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ.
ಸುರೇಶ ಭಟ್, ಮುಲ್ಕಿ
ಸ್ಪೋರ್ಟ್ಸ್ ಕನ್ನಡ