ಅವನಿಗೆ ಆಗ ಹದಿನೇಳನೇ ವಯಸ್ಸು. ವೃತ್ತಿಪರ ಆಟಗಾರನಾಗಿ ತನ್ನ ವೃತ್ತಿಜೀವನ ಶುರು ಮಾಡಿದ್ದ ಆದಿಕಾಲ. ಅಷ್ಟರಲ್ಲಾಗಲೇ ಆಘಾತವೊಂದು ಅವನಿಗೆ ಕಾದಿತ್ತು. ಅಪರೂಪದ ಕಾಯಿಲೆಯಾಗಿರುವ ಆದರೆ ಕ್ರೀಡಾಪಟುಗಳಿಗೆ ಕಂಟಕವೆನ್ನಿಸುವ ಕೋಹ್ಲರ್ಸ್ ಫುಟ್ ಎನ್ನುವ ಪಾದದ ಸಮಸ್ಯೆ ಅವನಿಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಆದರೆ ಸರಿಯಾದ ಸಮಯಕ್ಕೆ ಅದು ತನ್ನ ಪ್ರಭಾವವನ್ನು ತೋರಿತ್ತು. ಅವನ ಎಡಪಾದದ ಮೂಳೆಯ ಅಸ್ಥಿಮಜ್ಜೆಯ ಅಭಾವ ಅವನಿಗೆ ತೀವ್ರ ಭಾದೆಯನ್ನುಂಟು ಮಾಡುತ್ತಿತ್ತು. ವೈದ್ಯರನ್ನು ಸಂಪರ್ಕಿಸಿದರೆ ವೈದ್ಯರಿಂದ ನಕಾರಾತ್ಮಕ ಉತ್ತರ. ನೀನಿನ್ನು ಟೆನ್ನಿಸ್ ಆಡುವುದು ಸಾಧ್ಯವಿಲ್ಲ ಎಂಬ ನಿರಾಸೆಯ ಮಾತುಗಳು.
ಆದರೆ ಅವನ ಕನಸುಗಳು ದೊಡ್ಡವಿದ್ದವು. ಟೆನ್ನಿಸ್ ಲೋಕದ ಮಹಾನ್ ಆಟಗಾರನಾಗಬೇಕೆನ್ನುವ ದೊಡ್ಡ ಮಹತ್ವಾಕಾಂಕ್ಷೆ ಅವನದಾಗಿತ್ತು. ತೀರ ಆಸೆಯಿಂದ ಆರನೇಯ ವಯಸ್ಸಿಗೆ ಟೆನ್ನಿಸ್ ರ‌್ಯಾಕೆಟ್ ಕೈಗೆತ್ತಿಕೊಂಡವನಿಗೆ ಕಾಲು ನೋವಿಗಿಂತ, ಬದುಕಿನ ಸೋಲಿನ ವೇದನೆ ದೊಡ್ಡದೆನ್ನಿಸಿತ್ತು. ಮನೆಯವರ ಹಿಂಜರಿಕೆಯ ಹೊರತಾಗಿಯೂ ಆತ ಆಟದಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದ. ಅವನ ಕೆಚ್ಚಿಗೆ ಮೆಚ್ಚಿದ ಅವನ ತರಬೇತಿಯ ತಂಡವೂ ಅವನ ಸಹಾಯಕ್ಕೆ ನಿರ್ಧರಿಸಿತ್ತು. ಅವನಪ್ಪ ಅವನ ಬೆಂಬಲಕ್ಕೆ ನಿಂತಿದ್ದ. ಮತ್ತೊಬ್ಬ ವೈದ್ಯರ ಸಲಹೆಯ ಮೇರೆಗೆ ಒರ್ಥೋಡಿಕ್ಸ್ ತಂತ್ರಜ್ಞಾನದಡಿ ತಯಾರಾದ ವಿಶೇಷ ಶೂ ಬಳಸಿ ತನ್ನ ಟೆನ್ನಿಸ್ ಜೀವನ ಮುಂದುವರೆಸಲು ನಿರ್ಧರಿಸಿದ.
2004ರ ವೇಳೆಗೆ ತನ್ನ ಮೊದಲ ಪ್ರತಿಷ್ಠಿತ ಟೆನ್ನಿಸ್ ಟೂರ್ನಿಯನ್ನಾಡಿದ್ದ ಅವನಾಗಲೇ ಒಂದು ಬಾರಿ ಎಟಿಪಿಯ ಟೂರ್ನಿಯೊಂದರಲ್ಲಿ ಅಗ್ರಶ್ರೇಯಾಂಕಿತ ಫೆಡರರ್‌ನನ್ನು ಸೋಲಿಸಿದ್ದ. ಅಷ್ಟಾಗಿಯೂ ಗ್ರಾಂಡಸ್ಲಾಮ್‌ನಲ್ಲಿ ಮೊದಲ ಯಶಸ್ಸು ಅವನಿಗೆ ದೊರಕಿದ್ದು 2005ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ. ಉಪಾಂತ್ಯದಲ್ಲಿ ಫೆಡರರ್‌ನನ್ನು ಮಣಿಸಿ ಫೈನಲ್ಲಿನಲ್ಲಿ ಮರಿಯಾನೋ ಪುಯೆರ್ಟಾನನ್ನು ಸೋಲಿಸಿ ಚೊಚ್ಚಲ ಗ್ರಾಂಡಸ್ಲಾಮ್ ಪ್ರಶಸ್ತಿ ಗೆದ್ದುಕೊಂಡ. ಮುಕ್ತ ಯುಗದಲ್ಲಿ ತನ್ನ ಮೊದಲ ಟೊರ್ನಿಯಲ್ಲಿಯೇ ಪಂದ್ಯಾವಳಿ ಗೆದ್ದುಕೊಂಡ ಎರಡನೇ ಆಟಗಾರ ಎನ್ನಿಸಿಕೊಂಡ. ಮುಂದೆ ನಾಲ್ಕು ಬಾರಿ ಕೇವಲ ಫ್ರೆಂಚ್ ಓಪನ್ ಮಾತ್ರ ಗೆದ್ದಾಗ ಟೆನ್ನಿಸ್ಪಂಡಿತರಿಂದ,’ಇವನು ಮಣ್ಣಿಗೆ ಮಾತ್ರ ಸೈ’ ಎನ್ನುವ ಟೀಕೆಗೆ ಗುರಿಯಾದ.ಆದರೆ ಅಷ್ಟರಲ್ಲಾಗಲೇ ಪಂಡಿತರ ಲೆಕ್ಕಾಚಾರವನ್ನು ಅವನು ತಲೆಕೆಳಗಾಗಿಸಿದ್ದ.
ಸತತ ಐದು ಬಾರಿ ವಿಂಬಲ್ಡನ್ ಗೆದ್ದು ತನ್ನೆದುರೇ ಸತತ ಎರಡು ಬಾರಿ ಫೈನಲ್ ಗೆದ್ದಿದ್ದ ಫೆಡರರ್‌ನನ್ನು ಹುಲ್ಲಿನಂಕಣದಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದ.ಮುಂದೆ ಎರಡೇ ವರ್ಷಗಳ ಅವಧಿಯಲ್ಲಿ ಕರಿಯರ್ ಗ್ರಾಂಡ್‌ಸ್ಲಾಮ್ ಪೂರ್ತಿಗೊಳಿಸಿ ಟೀಕಾಕಾರರ ಬಾಯಿಮುಚ್ಚಿಸಿದ್ದ.
ಹಿಂತಿರುಗಿ ನೋಡಿದರೇ ರಾಫೆಲ್ ನಡಾಲ್ ಎನ್ನುವ ಟೆನ್ನಿಸ್ ಗಾರುಡಿಗ ಗೆದ್ದಿರುವ ಒಟ್ಟು ಗ್ರಾಂಡ್‌ಸ್ಲಾಮ್‌ಗಳು ಹದಿನೆಂಟು. ಒಟ್ಟು ಫ್ರೆಂಚ್ ಓಪನ್‌ಗಳ ಸಂಖ್ಯೆಯೇ ಹನ್ನೆರಡು.ಟೆನ್ನಿಸ್ ಲೋಕದ ಅವನ ಸಾಧನೆಯ ಗೌರವಾರ್ಥ 2008ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಮಂಗಳ ಮತ್ತು ಗುರುಗ್ರಹದ ನಡುವಣ ಆಕಾಶಕಾಯವೊಂದಕ್ಕೆ ‘ರಾಫಾಲ್ ನಡಾಲ್’ ಎಂದು ನಾಮಕರಣ ಮಾಡಿತು. ಸಾರ್ವಕಾಲಿಕ ಶ್ರೇಷ್ಠ ಆಟಗಾರನೆಂದೇ ಗುರುತಿಸಲ್ಪಟ್ಟಿರುವ ಫೆಡರರ್‌ನ ಬೆನ್ನಟ್ಟಿರುವ ಈ ಸ್ಪೇನ್ ಗೂಳಿ ಫೆಡರರ್‌ನನ್ನು ಮೀರಿ ನಡೆಯುವ ಸಾಧ್ಯತೆಗಳು ಇಲ್ಲದಿಲ್ಲ. ಮೀರದಿದ್ದರೂ ಟೆನ್ನಿಸ್ ಲೋಕ ಕಂಡ ಮಹಾನ್ ದಂತಕತೆಗಳ ಪೈಕಿ ನಡಾಲ್ ಕೂಡ ಒಬ್ಬ ಎನ್ನುವುದು ಸುಳ್ಳಲ್ಲ.
ನೋವಿಗೆ ಸೋತು ಕೈ ಚೆಲ್ಲಿದ್ದರೆ ಬಹುಶ: ನಡಾಲ್ ಎನ್ನುವ ದಂತಕತೆಯ ಹುಟ್ಟು ಸಾಧ್ಯವಿರಲಿಲ್ಲ.ಬದುಕಿನ ಅಡೆತಡೆಗಳನ್ನು ಮೀರಿ ನಡೆಯುವ ಕಿಚ್ಚಿರದಿದ್ದರೆ ಸಾಧನೆ ಅಸಾಧ್ಯವೆನ್ನುವುದನ್ನು ಬದುಕಿ ತೋರಿಸಿದ ಆವೆಮಣ್ಣಿನಂಕಣದ ರಾಜ. ಇಷ್ಟಾಗಿಯೂ ಅವನನ್ನು ಟೀಕಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಅವನಂತೆಯೇ ಸಾಧಕರ ಸಾಧನೆಯೆಡೆಗೆ ಕುಹಕವಾಡುವವರ, ಸಾಧಕರ ಗುಂಪೆನ್ನುವುದು ಅದೃಷ್ಟವಂತ ಜನಾಂಗ ಎಂದು ನಿಟ್ಟುಸಿರಾಗುವವರ ಲೆಕ್ಕವೂ ದೊಡ್ಡದಿದೆ. ಹಾಗೆ ಬಡಬಡಿಸುವ ಮುನ್ನ ಇಂಥಹ ಸಾಧಕರ ಸಾಧನೆಯ ಹಿಂದಿನ ಬೆವರಗಾಥೆಯನ್ನರಿತುಕೊಳ್ಳಲು ಪ್ರಯತ್ನಿಸಿದರೆ ಒಂದಷ್ಟು ಹಳಹಳಿಕೆಗಳು ಕಡಿಮೆಯಾಗಿ, ಸಾಧಿಸುವ ಛಲವಿಲ್ಲದೇ ಗೆಲುವಿನ ರುಚಿಯಿಲ್ಲ ಬದುಕಿನಲ್ಲಿ ಎಂಬ ವಾಸ್ತವದ ಅರಿವು ಮೂಡಬಹುದೇನೋ ಅಲ್ಲವೇ..?
– ಗುರುರಾಜ ಕೊಡ್ಕಣಿ ಯಲ್ಲಾಪುರ