3.9 C
London
Wednesday, January 22, 2025
Homeಕ್ರಿಕೆಟ್ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..!

ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಹಾರ್ದಿಕ್ ಪಾಂಡ್ಯ ಇವತ್ತು ಏನೇ ಆಗಿದ್ದರೂ ಅದಕ್ಕೆ ಕಾರಣ ನಮ್ಮ Sanath Kumar
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತವನ್ನು ಎಸೆದ ಹಾರ್ದಿಕ್ ಪಾಂಡ್ಯ ಭಾರತ ಗೆಲ್ಲುತ್ತಿದ್ದಂತೆ ಪಿಚ್’ನಲ್ಲೇ ಕುಸಿದು ಕೂತಿದ್ದ.
ಅವತ್ತು ಭಾರತ ತಂಡದಲ್ಲಿ ಎಲ್ಲರಿಗಿಂತ ಹೆಚ್ಚು ಅತ್ತವನು, ಕಣ್ಣೀರು ಹಾಕಿದವನು ಹಾರ್ದಿಕ್ ಪಾಂಡ್ಯ. ಅದು ಕೇವಲ ಆನಂದಭಾಷ್ಪವಾಗಿರಲಿಲ್ಲ. ಅಲ್ಲಿ ಪಾಂಡ್ಯ ಒಂದಷ್ಟು ಪ್ರಶ್ನೆಗಳಿಗೆ, ಹೀಯಾಳಿಕೆಗಳಿಗೆ, ಅವಮಾನಗಳಿಗೆ ಉತ್ತರ ಕೊಟ್ಟಿದ್ದ.
ರೋಹಿತ್ ಶರ್ಮಾನನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದಾಗ ಆತನನ್ನು ಅತ್ಯಂತ ಹೆಚ್ಚು ದ್ವೇಷಿಸಿದವರು ಮುಂಬೈ ತಂಡದ ಅಭಿಮಾನಿಗಳು.
ರೋಹಿತ್ ಶರ್ಮಾನ ಪಟ್ಟವನ್ನು ಈತ ಕಿತ್ತುಕೊಂಡನೆಂಬ ಕೋಪ. ಆ ಕೋಪಕ್ಕೆ ಅತ್ಯಂತ ಕೆಟ್ಟ ರೀತಿಯಲ್ಲಿ ಪಾಂಡ್ಯ ಗುರಿಯಾಗಿದ್ದ. ವಾಂಖೆಡೆ ಕ್ರೀಡಾಂಗಣದಲ್ಲಿ ಪಾಂಡ್ಯ ಆಡಲಿಳಿದಾಗ ತವರು ಪ್ರೇಕ್ಷಕರೇ ಆತನನ್ನು ಹೀಯಾಳಿಸಿದರು, ನಿಂದಿಸಿದರು.
RCB ವಿರುದ್ಧದ ಪಂದ್ಯದಲ್ಲೂ ಇದು ನಡೆದಾಗ ‘’ಹಾಗೆ ಮಾಡದಿರಿ, ಆತ ಭಾರತ ತಂಡದ ಆಟಗಾರ’’ ಎಂದು ವಾಂಖೆಡೆ ಪ್ರೇಕ್ಷಕರಿಗೆ ವಿರಾಟ್ ಕೊಹ್ಲಿ ಕೈ ಸನ್ನೆಯಲ್ಲೇ ಬುದ್ಧಿಮಾತು ಹೇಳಿದ್ದ.
ಇನ್ನು ರೋಹಿತ್ ಶರ್ಮಾನಿಗೆ ಕೈ ತೋರಿಸಿ ಬೌಂಡರಿ ಗೆರೆಯ ಬಳಿ ಕ್ಷೇತ್ರರಕ್ಷಣೆಗೆ ನಿಲ್ಲಿಸಿದಾಗ ಇಡೀ ಕ್ರೀಡಾಂಗಣಕ್ಕೆ ಕ್ರೀಡಾಂಗಣವೇ ಪಾಂಡ್ಯ ವಿರುದ್ಧ ನಿಂತು ಬಿಟ್ಟಿತ್ತು.
ಅದನ್ನು ನೋಡಿದ್ದ ಇಂಗ್ಲೆಂಡ್ ತಂಡದ ವಿಶ್ವಕಪ್ ವಿಜೇತ ನಾಯಕ ಐಯನ್ ಮಾರ್ಗನ್ ‘’ತವರು ಪ್ರೇಕ್ಷಕರು ತಮ್ಮದೇ ತಂಡದ ನಾಯಕನೊಬ್ಬನನ್ನು ಆ ರೀತಿ ನಿಂದಿಸಿದ್ದನ್ನು ನಾನು ನನ್ನ ಜೀವನದಲ್ಲೇ ನೋಡಿಲ್ಲ’’ ಎಂದಿದ್ದ.
ಕಾಲಚಕ್ರ ಹೇಗೆ ತಿರುಗಿತು ನೋಡಿ..
ಯಾವ ನೆಲದಲ್ಲಿ ಹಾರ್ದಿಕ್ ಪಾಂಡ್ಯನನ್ನು ಹೀಯಾಳಿಸಲಾಗಿತ್ತೋ.. ಅದೇ ನೆಲಕ್ಕೆ ಪಾಂಡ್ಯ ವಿಶ್ವಕಪ್ ಟ್ರೋಫಿ ಹಿಡಿದು ಬಂದಿದ್ದಾನೆ.
ಕೊನೆಯ ಓವರ್’ನಲ್ಲಿ ಕೆಚ್ಚೆದೆಯಿಂದ ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿ ಕೈಯಲ್ಲಿ ಕಪ್ ಹಿಡಿದು ವಾಂಖೆಡೆ ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದಾನೆ. ಕೈಯಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ಇಡೀ ಕ್ರೀಡಾಂಗಣಕ್ಕೆ ತೋರಿಸಿದ್ದಾನೆ.
ಕ್ರೀಡೆಯ ಶಕ್ತಿ ಇದೇ.. ಅದು ಆಕಾಶದಲ್ಲಿ ಹಾರಾಡುತ್ತಿರುವವರು ಪಾತಾಳಕ್ಕೆ ಕುಸಿಯುವಂತೆ ಮಾಡಬಲ್ಲುದು, ಪಾತಾಳಕ್ಕೆ ಬಿದ್ದವನನ್ನು ಆಕಾಶಕ್ಕೆ ಏರಿಸಲೂ ಬಲ್ಲುದು.
ಅಂದ ಹಾಗೆ ಇವತ್ತಿಗೆ ಟಿ20 ಕ್ರಿಕೆಟ್’ನ ನಂ.1 ಆಲ್ರೌಂಡರ್ ಹಾರ್ದಿಕ್ ಪಾಂಡ್ಯನ ಯಶಸ್ಸಿನ ಹಿಂದಿನ ಮೂಲ ಶಕ್ತಿ ನಮ್ಮ ಕನ್ನಡಿಗ ಎಂದರೆ ನಂಬುತ್ತೀರಾ..? ನಂಬಲೇಬೇಕು.
ಬಹುತೇಕ ಜನರಿಗೆ ಇದು ಗೊತ್ತಿರಲಿಕ್ಕಿಲ್ಲ. ಸೀಮ್ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆರಂಭದ ದಿನಗಳಲ್ಲಿ ಲೆಗ್ ಸ್ಪಿನ್ನರ್ ಆಗಿದ್ದವನು. ಆತನನ್ನು ಫಾಸ್ಟ್ ಬೌಲರ್ ಮಾಡಿದ್ದೇ ನಮ್ಮ ಕರ್ನಾಟಕದವರು. ಹೆಸರು ಸನತ್ ಕುಮಾರ್.
ಸನತ್ ಕುಮಾರ್. ಡೊಮೆಸ್ಟಿಕ್ ಕ್ರಿಕೆಟ್’ನ ಅತ್ಯಂತ ಯಶಸ್ವಿ ಕೋಚ್. ಕರ್ನಾಟಕ ತಂಡ 2009ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ, ಮೈಸೂರಿನಲ್ಲಿ ನಡೆದ ಫೈನಲ್”ನಲ್ಲಿ 6 ರನ್ನಿಂದ ಮುಂಬೈ ವಿರುದ್ಧ ಸೋತಿತ್ತಲ್ಲಾ..  ಆ ಸಂದರ್ಭದಲ್ಲಿ ಕರ್ನಾಟಕ ತಂಡದ ಕೋಚ್ ಆಗಿದ್ದವರು ಇದೇ ಸನತ್ ಕುಮಾರ್.
ಕನ್ನಡಿಗ ಸನತ್ ಕುಮಾರ್, ಗುಜರಾತಿ ಪಾಂಡ್ಯನ ಯಶೋಶಕ್ತಿ ಆಗಿದ್ದು ಹೇಗೆ..? ನಿಜಕ್ಕೂ ಇದೊಂದು Untold Story.
ಸನತ್ ಕುಮಾರ್ 2011ರಿಂದ 2014ರವರೆಗೆ ಬರೋಡ ರಣಜಿ ತಂಡದ ಕೋಚ್ ಆಗಿದ್ದರು. ಆಗ ಹಾರ್ದಿಕ್ ಪಾಂಡ್ಯ ಎಂಬ ಹುಡುಗನ ಪ್ರತಿಭೆಯನ್ನು ಅವರಿಗೂ ಮೊದಲು ಗುರುತಿಸಿದ್ದು ಇವರೇ.. ಸನತ್ ಕುಮಾರ್.
ಲೆಗ್ ಸ್ಪಿನ್ನರ್ ಆಗಿದ್ದ ಹಾರ್ದಿಕ್ ಪಾಂಡ್ಯ ಫಾಸ್ಟ್ ಬೌಲಿಂಗ್ ಆರಂಭಿಸುವಂತೆ ಮಾಡಿದವರು ಸನತ್ ಕುಮಾರ್. ಹಿಂದೊಮ್ಮೆ ಸನತ್ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರೇ ಈ ವಿಚಾರವನ್ನು ಹೇಳಿದ್ದರು.
”ಒಂದು ದಿನ ಬರೋಡ ತಂಡದ ಅಭ್ಯಾಸ ನಡೆಯುತ್ತಿದ್ದ ವೇಳೆ ನೆಟ್ಸ್‌ನಲ್ಲಿ ವೇಗದ ಬೌಲರ್‌ಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲಿಯೇ ಇದ್ದ ಪಾಂಡ್ಯಗೆ ಫಾಸ್ಟ್ ಬೌಲಿಂಗ್‌ ಮಾಡುವಂತೆ ಸೂಚಿಸಿದೆ. ನೆಟ್ಸ್‌ನಲ್ಲಿ ಆತನ ಬೌಲಿಂಗ್‌ ವೇಗ ನನಗೆ ಅಚ್ಚರಿ ಮೂಡಿಸಿತ್ತು. ಆಗಲೇ ಗಂಟೆಗೆ ಸುಮಾರು 130 ಕಿ.ಮೀ. ವೇಗದಲ್ಲಿ ಬೌಲಿಂಗ್‌ ಮಾಡುತ್ತಿದ್ದ. ನನಗೆ ಅಚ್ಚರಿ.. ಲೆಗ್ ಸ್ಪಿನ್ ಬಿಟ್ಟು ಬಿಡು. ಇದನ್ನೇ ಮುಂದುವರಿಸಿತು ಎಂದೆ. ಲೆಗ್‌ ಸ್ಪಿನ್ನರ್‌ ಆಗಿದ್ದ ಪಾಂಡ್ಯ ವೇಗದ ಬೌಲರ್‌ ಆಗಿ ಬದಲಾಗಿದ್ದು ಹೀಗೆ’’ ಎಂದಿದ್ದರು ಸನತ್.
ಸನತ್ ಕುಮಾರ್ ಬರೋಡ ತಂಡದ ಕೋಚ್‌ ಆಗಿದ್ದಾಗ ಕಿರಿಯರ ಟೂರ್ನಿಗಳಲ್ಲಿ ಹಾರ್ದಿಕ್‌ ಆಟವನ್ನು ನೋಡಿದ್ದಂತೆ. ಟೂರ್ನಿಯೊಂದರಲ್ಲಿ ಶತಕ ಗಳಿಸಿದ ಪಾಂಡ್ಯ, ಸನತ್ ಕುಮಾರ್ ಗಮನ ಸೆಳೆದು ಬಿಟ್ಟಿದ್ದ.
‘’ಈ ಹುಡುಗನಿಗೆ ಪ್ರೋತ್ಸಾಹ ನೀಡಿದರೆ, ರಾಜ್ಯ ತಂಡಕ್ಕೆ ಉತ್ತಮ ಆಸ್ತಿಯಾಗಬಲ್ಲ ಎಂದು ಅನ್ನಿಸಿತು. ಬರೋಡದ ಏಕದಿನ ಹಾಗೂ ಟಿ20 ತಂಡದ ಆಯ್ಕೆಗೆ ಅಲ್ಲಿ 3 ತಂಡಗಳನ್ನು ರಚಿಸಿ ಟೂರ್ನಿಯೊಂದನ್ನು ಆಡಿಸುತ್ತಿದ್ದೆವು. ಆ ಟೂರ್ನಿಯಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಪಾಂಡ್ಯ ಕ್ರೀಡಾಂಗಣದಿಂದ ಬಹು ದೂರ ಬಾರಿಸಿಬಿಟ್ಟ. ತಡ ಮಾಡದೆ ಆತನನ್ನು ಟಿ20 ತಂಡಕ್ಕೆ ಸೇರಿಸಿಕೊಂಡೆ’’ ಎಂದು 8 ವರ್ಷಗಳ ಹಿಂದೆ ಸನತ್ ಹೇಳಿದ್ದ ನೆನಪು.
ಲೆಗ್‌ ಸ್ಪಿನ್ನರ್‌ ಆಗಿದ್ದ ಹಾರ್ದಿಕ್‌ ಪಾಂಡ್ಯ ವೇಗದ ಬೌಲಿಂಗ್‌ ಆರಂಭಿಸಿದಾಗ ಬರೋಡಾ ಕ್ರಿಕೆಟ್‌ ಸಂಸ್ಥೆಯ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ವೇಗದ ಬೌಲರ್‌ ಆಗಿದ್ದ ಅಲ್ಲಿನ ಕೋಚ್‌ ಒಬ್ಬರ ಪುತ್ರನಿಗಾಗಿ ಪಾಂಡ್ಯನನ್ನು ತುಳಿಯುವ  ಪ್ರಯತ್ನವೂ ನಡೆದಿತ್ತು.
‘’ಹಾರ್ದಿಕ್‌ ಪಾಂಡ್ಯ ವೇಗದ ಬೌಲಿಂಗ್‌ ಮಾಡುತ್ತಿದ್ದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಒಂದು ವರ್ಷ ಆತನಿಗೆ ಬೌಲಿಂಗ್‌ ಮಾಡುವುದಕ್ಕೇ ಬಿಡಲಿಲ್ಲ. ಒಂದು ಬಾರಿಯಂತೂ ವಿಶೇಷ ಸಭೆ ಕರೆದ ಬರೋಡ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಗಳು ಪಾಂಡ್ಯ ಕೈಯಲ್ಲಿ ಏಕೆ ವೇಗದ ಬೌಲಿಂಗ್‌ ಮಾಡಿಸುತ್ತಿರುವಿರಿ ಎಂದು ನನ್ನನ್ನು ಪ್ರಶ್ನಿಸಿದರು. ಅದಕ್ಕೆ ನಾನು ಸೂಕ್ತ ಸ್ಪಷ್ಟನೆ ನೀಡಿ, ಈತ ಭವಿಷ್ಯದ ತಾರೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿದೆ,” ಎಂದು ಅವತ್ತು ಸನತ್ ಕುಮಾರ್  ಹೇಳಿದ್ದು ಈಗ ಹಾರ್ದಿಕ್ ಪಾಂಡ್ಯ ಭಾರತ ತಂಡದ ಟಿ20 ವಿಶ್ವವಿಕ್ರಮದ ರೂವಾರಿಗಳಲ್ಲಿ ಒಬ್ಬನಾಗಿರುವ  ಸಂದರ್ಭದಲ್ಲಿ ನೆನಪಾಗುತ್ತಿದೆ.

Latest stories

LEAVE A REPLY

Please enter your comment!
Please enter your name here

fourteen + 14 =