ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಈವರೆಗೆ ಸೋತದ್ದೇ ಇಲ್ಲ!
—————————— —–
2013ರಿಂದ ಭಾಗವಹಿಸಿದ ಪ್ರತೀಯೊಂದು ವಿಶ್ವಮಟ್ಟದ ಕೂಟಗಳಲ್ಲಿ ಅಮೆರಿಕಾದ ಈ ಜಿಮ್ನಾಸ್ಟಿಕ್ ಮಹಾರಾಣಿಯು ಒಂದಲ್ಲ ಒಂದು ಪದಕವನ್ನು ಪಡೆಯದೇ ಹಿಂದೆ ಬಂದಿರುವ ಒಂದು ಉದಾಹರಣೆಯೂ ದೊರೆಯುವುದಿಲ್ಲ! ಆಕೆ ಇದ್ದಾಳೆ ಅಂದರೆ ಯಾವುದೇ ಜಿಮ್ನಾಸ್ಟಿಕ್ ಕೂಟದಲ್ಲಿ ಚಿನ್ನದ ಪದಕದ ಆಸೆ ಬೇರೆ ಯಾರೂ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ!
ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಸಿಮೋನ್ ಇದುವರೆಗೆ ಗೆದ್ದಿರುವ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ 34! ಅದರಲ್ಲಿ 25 ಚಿನ್ನದ ಪದಕಗಳೇ ಆಗಿವೆ! ಅದರಲ್ಲಿ ಕೂಡ ಒಲಿಂಪಿಕ್ಸ್ ಪದಕಗಳ ಸಂಖ್ಯೆ ಒಟ್ಟು 7!
ವರ್ತಮಾನದ ಜಿಮ್ನಾಸ್ಟಿಕ್ ರಂಗದ ಎಲ್ಲಾ ದಾಖಲೆಗಳು ಆಕೆಯ ಹೆಸರಿನಲ್ಲಿ ಇವೆ! ಆಕೆಯ ಬದುಕೇ ಒಂದು ಅದ್ಭುತ ಯಶೋಗಾಥೆ!
ಅಜ್ಜ ಸಾಕಿದ ಮೊಮ್ಮಗಳು ಸಿಮೋನ್.
—————————— —–
ಈ ವಿಶ್ವದಾಖಲೆಯ ಹುಡುಗಿಯ ಬಾಲ್ಯವು ದಾರುಣವೆ ಆಗಿತ್ತು. ಅಪ್ಪ ತಾನು ಹುಟ್ಟಿಸಿದ ನಾಲ್ಕು ಮಕ್ಕಳನ್ನು ತನ್ನ ಹೆಂಡತಿಯ ಮಡಿಲಲ್ಲಿ ಹಾಕಿ ಬೇರೆ ಯಾರೋ ಮಹಿಳೆಯ ಸೆರಗು ಹಿಡಿದು ಹೊರಟುಹೋಗಿದ್ದರು! ತಾಯಿಗೆ ತನ್ನ ನಾಲ್ಕು ಸಣ್ಣ ಮಕ್ಕಳನ್ನು ಸಾಕುವುದು ತುಂಬಾ ಕಷ್ಟ ಆದಾಗ ಅವರನ್ನು ಬೇರೆ ಬೇರೆ ಚರ್ಚಿನ ವಶಕ್ಕೆ ಒಪ್ಪಿಸಿದರು.
ಆಗ ಆಕೆಯ ಅಪ್ಪ(ಅಂದರೆ ಮಕ್ಕಳ ಅಜ್ಜ) ತನ್ನ ಎರಡು ಮೊಮ್ಮಕ್ಕಳನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಹಾಗೆ ಅಜ್ಜ ರಾನ್ ಬೈಲ್ಸ್ ಅವರ ವಶಕ್ಕೆ ಬಂದ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬಳು ಸಿಮೋನ್. ಮತ್ತೊಬ್ಬಳು ತಂಗಿ ಆಂಡ್ರಿ.
ಆರನೇ ವರ್ಷಕ್ಕೆ ಜಿಮ್ನಾಸ್ಟಿಕ್ ಆಸಕ್ತಿ!
—————————— —-
ಅಜ್ಜನ ಕೃಪೆಯಿಂದ ಶಾಲೆಗೆ ಸೇರಿದ ಸಿಮೋನಗೆ ಆರನೇ ವರ್ಷಕ್ಕೆ ಜಿಮ್ನಾಸ್ಟಿಕ್ ಆಸಕ್ತಿ ಉಂಟಾಯಿತು. ಒಳ್ಳೆಯ ಕೋಚ್ ದೊರೆತರು. ಹೇಳಿ ಕೇಳಿ ಜಿಮ್ನಾಸ್ಟಿಕ್ ತುಂಬಾ ಕಠಿಣವಾದ ಗೇಮ್. ದೇಹವನ್ನು ಯಾವ ಕೋನದಲ್ಲಾದರು ಬಗ್ಗಿಸುವ ಸವಾಲು ಒಂದೆಡೆ. ಅದರ ಜೊತೆ ವೇಗ, ನಿಖರತೆ, ಟೈಮಿಂಗ್, ಜಂಪ್, ಬ್ಯಾಲೆನ್ಸ್, ಓಟ, ಏಕಾಗ್ರತೆ, ದೃಢವಾದ ಮಾನಸಿಕ ಶಕ್ತಿ… ಹೀಗೆ ಎಲ್ಲವೂ ಇದ್ದರೆ ಮಾತ್ರ ಜಿಮ್ನಾಸ್ಟಿಕ್ ಒಲಿಯುತ್ತದೆ.
ಕಠಿಣವಾದ ತರಬೇತು – ದುರ್ಗಮವಾದ ಹಾದಿ!
—————————— —–
ಹಾಗೆ ಕಲಿಕೆಯ ಜೊತೆಗೆ ದಿನಕ್ಕೆ 4-6 ಘಂಟೆಗಳ ತರಬೇತು ಆಕೆ ಪಡೆಯುತ್ತಾರೆ. ಕೇವಲ ನಾಲ್ಕು ಅಡಿ ಎಂಟು ಇಂಚು ಎತ್ತರ ಇರುವ ಆಕೆಗೆ ಎಲುಬು ಮುರಿತ ಮತ್ತು ಸರ್ಜರಿಗಳು ಕಾಮನ್ ಆದವು. ಆಗೆಲ್ಲ 15 ದಿನ ವಿಶ್ರಾಂತಿ ಪಡೆಯುತ್ತಿದ್ದ ಸಿಮೋನ್ ಮತ್ತೆ ಮತ್ತೆ ಎದ್ದು ಬರುತ್ತಿದರು.
ಜಿಮ್ನಾಸ್ಟಿಕ್ ಎಂದರೆ ಮಕ್ಕಳ ಆಟವಲ್ಲ!
—————————— —-
ಜಿಮ್ನಾಸ್ಟಿಕನ ಬೇರೆ ಬೇರೆ ವಿಭಾಗಗಳಾದ ವಾಲ್ಟ್, ಪೋಲ್ ವಾಲ್ಟ್, ಫ್ಲೋರ್, ಬ್ಯಾಲೆನ್ಸಿಂಗ್ ಬೀಮ್, ಅನ್ ಈವನ್ ಬೀಮ್ ಮತ್ತು ಸರ್ವಾಂಗೀಣ ಇವೆಲ್ಲಾ ವಿಭಾಗಗಳಲ್ಲಿಯು ಪಾರಮ್ಯವನ್ನು ಪಡೆಯಲು ಸಿಮೋನಗೆ ಆರೇಳು ವರ್ಷಗಳು ಬೇಕಾದವು. ಅದರ ಜೊತೆಗೆ ಪೀಪಲ್ ಯುನಿವರ್ಸಿಟಿಯ ಮೂಲಕ MBA ಪದವಿಯನ್ನು ಆಕೆ ಪಡೆಯುತ್ತಾರೆ. ತನ್ನ ಹದಿನಾರನೇ ವರ್ಷದಲ್ಲಿ ಸಿಮೋನ್ ಬೈಲ್ಸ್ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಅಲ್ಲಿಂದ ಆಕೆ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ!
ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಸೋಲು ಕಂಡದ್ದೇ ಇಲ್ಲ!
———————-:——- ——2013ರ ಇಸವಿಯಿಂದ ಇಂದಿನವರೆಗೆ ಭಾಗವಹಿಸಿದ ಎಲ್ಲ ಅಮೆರಿಕಾ ಮತ್ತು ವಿಶ್ವಮಟ್ಟದ ಕೂಟಗಳಲ್ಲಿ ಆಕೆ ಒಂದಲ್ಲ ಒಂದು ದಾಖಲೆಯನ್ನು ಬರೆಯುತ್ತ ಇದ್ದಾರೆ. ಇದುವರೆಗೆ ಆಕೆ ಪಡೆದ ಒಟ್ಟು 34 ಅಂತಾರಾಷ್ಟ್ರೀಯ ಪದಕಗಳಲ್ಲಿ 25 ಹೊಳೆಯುವ ಚಿನ್ನದ ಪದಕಗಳೇ ಇವೆ! ಅವುಗಳಲ್ಲಿ ಬರೋಬ್ಬರಿ ಏಳು ಒಲಿಂಪಿಕ್ ಪದಕಗಳು!
ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್ ಕೂಟದಲ್ಲಿ ಆಕೆಗೆ 25 ಪದಕಗಳು ದೊರೆತಿವೆ. ಅದರಲ್ಲಿ 19 ಚಿನ್ನದ ಪದಕಗಳು!
ಇದುವರೆಗೆ ಆಕೆ ಪಡೆದ ಪದಕಗಳ ಟ್ಯಾಲಿ ಈ ರೀತಿ ಇದೆ – ಚಿನ್ನ 25, ಬೆಳ್ಳಿ 4 ಮತ್ತು ಕಂಚು 5!
ಆಕೆಯ ಎಲ್ಲಾ ದಾಖಲೆಗಳು ಅನನ್ಯ, ಅಭಾದಿತ!
——————————
ಜಿಮ್ನಾಸ್ಟಿಕ್ ಸ್ಪರ್ಧೆಯ ಎಲ್ಲ ವಿಭಾಗಗಳಲ್ಲಿಯು ಅಂದರೆ ವಾಲ್ಟ್, ಫ್ಲೋರ್, ಬ್ಯಾಲೆನ್ಸಿಂಗ್ ಬೀಮ್, ಅನ್ ಈವನ್ ಬೀಮ್, ಆಲ್ರೌಂಡ್ ಸ್ಪರ್ಧೆ ಇವೆಲ್ಲಾ ಸ್ಪರ್ಧಾ ವಿಭಾಗಗಳಲ್ಲಿ ಕೂಡ ಆಕೆ ರಾಶಿ ಪದಕವನ್ನು ಗೆದ್ದಿದ್ದಾರೆ! ಜಗತ್ತಿನ ಯಾವ ಜಿಮ್ನಾಸ್ಟ್ ಕೂಡ ಆಕೆಯ ದಾಖಲೆಗಳ ಹತ್ತಿರ ಕೂಡ ಬರಲು ಸಾಧ್ಯವೇ ಇಲ್ಲ! ಇನ್ನೂ ಐದಾರು ವರ್ಷ ಅವರು ನಿವೃತ್ತಿ ಆಗುವುದಿಲ್ಲ ಅಂದರೆ ಈ ಅನನ್ಯ ದಾಖಲೆಗಳು ಎಲ್ಲಿಯವರೆಗೆ ತಲುಪಬಹುದು ಎಂದು ಒಮ್ಮೆ ಯೋಚನೆ ಮಾಡಿ.
ಆಕೆ ಈ ಬಾರಿ ಸುದ್ದಿಯಾಗಿದ್ದು ಬೇರೆ ಕಾರಣಕ್ಕೆ!
—————————— —-
ಇಷ್ಟೆಲ್ಲ ಸಾಧನೆಯನ್ನು ಮಾಡಿದ ಸಿಮೋನ್ ಈ ಬಾರಿ ಸುದ್ದಿ ಮಾಡಿದ್ದು ಬೇರೆಯೇ ಕಾರಣಕ್ಕೆ! ಅದೂ ಒಳ್ಳೆಯ ಕಾರಣಕ್ಕೆ!
ಅಮೆರಿಕದ ಜಿಮ್ನಾಸ್ಟಿಕ್ ಟೀಮಿನ ವೈದ್ಯರಾದ ಡಾ.ಲಾರಿ ನಾಸರ್ ಎಂಬಾತನು ತನ್ನ ಮೇಲೆ ಮತ್ತು ಇತರ ಮಹಿಳಾ ಜಿಮ್ನಾಸ್ಟ್ ಪಟುಗಳ ಮೇಲೆ ತರಬೇತಿಯ ಹೆಸರಿನಲ್ಲಿ ಅತ್ಯಾಚಾರವನ್ನು ಮಾಡಿದ್ದಾನೆ ಎಂದಾಕೆ ಮೊದಲು ತನ್ನ ಟ್ವಿಟರ್ ಮೂಲಕ ಜಗತ್ತಿಗೆ ತಿಳಿಸುತ್ತಾರೆ!
ಆಗ ಇಡೀ ಅಮೆರಿಕಾ ದೇಶವು ಆಕೆಯ ನೆರವಿಗೆ ನಿಲ್ಲುತ್ತದೆ. ಆ ಸಂತ್ರಸ್ತ ಮಹಿಳಾ ಪಟುಗಳು ಕೂಡ ತಮಗಾದ ದೌರ್ಜನ್ಯ ಒಪ್ಪಿಕೊಂಡು ಆಕೆಯ ನೆರವಿಗೆ ನಿಲ್ಲುತ್ತಾರೆ. ಅಮೆರಿಕದ ಕೋರ್ಟಲ್ಲಿ ದೀರ್ಘ ವಿಚಾರಣೆಯು ನಡೆಯುತ್ತದೆ. ತನ್ನ ನಿಬಿಡ ಕ್ರೀಡಾ ಚಟುವಟಿಕೆಗಳ ನಡುವೆ ಆಕೆ ಕೋರ್ಟಿಗೆ ಬಂದು ದಿಟ್ಟವಾಗಿ ಸಾಕ್ಷಿ ಹೇಳುತ್ತಾರೆ. ಆಮಿಷಗಳಿಗೆ, ಒತ್ತಡಗಳಿಗೆ ಮಣಿಯುವುದಿಲ್ಲ. ಕೊನೆಗೆ ಆಕೆ ಆ ಕೇಸನ್ನು ಗೆಲ್ಲುತ್ತಾರೆ!
ಇಷ್ಟೆಲ್ಲ ಆದರೂ ಅಮೆರಿಕನ್ FBI ಸಂಸ್ಥೆಯು ಆ ವೈದ್ಯನ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಿಡಿದು ನಿಲ್ಲುತ್ತಾರೆ. ಆ ಸಂಸ್ಥೆಯ ಮೇಲೆ ಆಕೆ ಒಂದು ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ!
ಈ ಕಾರಣಕ್ಕೂ ಸಿಮೋನ್ ಬೈಲ್ಸ್ ನಮಗೆ ತುಂಬಾನೇ ಇಷ್ಟ ಆಗುತ್ತಾರೆ! ಆಕೆಗೆ ಜಿಮ್ನಾಸ್ಟಿಕ್ ಮಹಾರಾಣಿ ಎಂಬ ಬಿರುದು ಸುಮ್ಮನೆ ಬಂದದ್ದು ಅಲ್ಲವೇ ಅಲ್ಲ.