ಭಾನುವಾರದ ವಿಶೇಷ ವರದಿ : 1973 ಜೂನ್ 30ರಂದು ಬೆಂಗಳೂರಿನಲ್ಲಿ ಜನಿಸಿದ ದೊಡ್ಡ ಗಣೇಶ್ ಅವರು 1990ರ ದಶಕದಲ್ಲಿ ಬೌಲಿಂಗ್ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಮುಖ್ಯ ಆಧಾರ ಸ್ತಂಭ ಆಗಿದ್ದರು. ಟೆನ್ನಿಸ್ ಕ್ರಿಕೆಟ್ನ ಹಿರಿಯ ತಂಡಗಳಾದ ಬೆಂಗಳೂರಿನ ಜೈ ಕರ್ನಾಟಕ ಹಾಗೂ ಜನಪ್ರಿಯ ಕರ್ನಾಟಕ ತಂಡಗಳ ಮೂಲಕ ಕ್ರಿಕೆಟ್ ಜೀವನ ಪ್ರಾರಂಭ.
ದೊಡ್ಡ ಗಣೇಶ್ ವಿಕೆಟ್ ಕೀಪರ್ ಮತ್ತು ಆರಂಭಿಕ ದಾಂಡಿಗರಾಗಿ ತಮ್ಮ ಕ್ರಿಕೆಟ್ ಜೀವನವನ್ನು ಆರಂಭಿಸಿದರು. ಸಯ್ಯದ್ ಕಿರ್ಮಾನಿ ಮತ್ತು ಗುಂಡಪ್ಪ ವಿಶ್ವನಾಥ್ ಅವರು ದೊಡ್ಡ ಗಣೇಶ್ ಅವರಲ್ಲಿದ್ದ ಅಗಾಧ ಬೌಲಿಂಗ್ ಶಕ್ತಿಯನ್ನು ಗುರುತಿಸಿ ಕರ್ನಾಟಕ ತಂಡಕ್ಕೆ ಒಬ್ಬ ಯಶಸ್ವಿ ಬೌಲರ್ ನ್ನು ನೀಡಲು ನೆರವಾದರು.
1990ರ ದಶಕದಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಮತ್ತು ಸುನಿಲ್ ಜೋಶಿ ಅವರ ಅನುಪಸ್ಥಿತಿಯಲ್ಲಿ ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದ ದೊಡ್ಡ ಗಣೇಶ್ ಬೌಲಿಂಗ್ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಬೆನ್ನೆಲೆಬಾದರು.
1994ರಲ್ಲಿ ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದ ದೊಡ್ಡ ಗಣೇಶ್ ಮತ್ತೆಂದಿಗೂ ಹಿಂದಿರುಗಿ ನೋಡಲೇ ಇಲ್ಲಾ. 1996-97ರಲ್ಲಿ ಇರಾನಿ ಟ್ರೋಫಿಯಲ್ಲಿ ದೊಡ್ಡ ಗಣೇಶ್ ಅವರು ಬಿರುಸಿನ ಬೌಲಿಂಗ್ ದಾಳಿಗೆ 11 ವಿಕೆಟ್ ಗಳನ್ನು ನೆಲಕ್ಕುರುಳಿಸಿದರು. ಆ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದ ಭಾರತ ತಂಡದಲ್ಲಿ ಅವಕಾಶ ಪಡೆಯಲು ಸಫಲರಾದರು.
ಕರ್ನಾಟಕ ರಾಜ್ಯ ಪರ ದೊಡ್ಡಣ್ಣನ ಆಟ : ದೊಡ್ಡ ಗಣೇಶ್ ಅವರು 1994-95ರಲ್ಲಿ ಕರ್ನಾಟಕ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. 104 ಪಂದ್ಯಗಳನ್ನು ಆಡಿದ ದೊಡ್ಡ ಗಣೇಶ್ 2023 ರನ್‍ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಅರ್ಧ ಶತಕಗಳು ಒಳಗೊಂಡಿದೆ. 119 ಇವರು ಗಳಿಸಿದ ಅಧಿಕ ಮೊತ್ತವಾಗಿದೆ. 104 ಪಂದ್ಯಗಳಿಂದ 365 ವಿಕೆಟ್ ಗಳನ್ನು ಕಬಳಿಸಿದ ದೊಡ್ಡ ಗಣೇಶ್ ಪ್ರಥಮ ದರ್ಜೆ ಪಂದ್ಯಗಳಲ್ಲಿ 20 ಬಾರಿ 5 ವಿಕೆಟ್ ಗಳನ್ನು ಮತ್ತು 6 ಬಾರಿ 10 ವಿಕೆಟ್ ಗಳನ್ನು ಗಳಿಸಿದ್ದಾರೆ. ಒಂದೇ ಇನ್ನಿಂಗ್ಸ್ ನಲ್ಲಿ 36 ರನ್ ನೀಡಿ 8 ವಿಕೆಟ್ ಗಳನ್ನು ಪಡೆದುಕೊಂಡಿದ್ದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೀಡಿದ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ. 2002-03ರಲ್ಲಿ ಹರಿಯಾಣ ವಿರುದ್ಧ ಪಂದ್ಯದಲ್ಲಿ 2 ಇನ್ನಿಂಗ್ಸ್ ಗಳಿಂದ 89ರನ್ ನೀಡಿ 12 ವಿಕೆಟ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. 2005ರ ಡಿಸೆಂಬರ್ ನಲ್ಲಿ ದೊಡ್ಡ ಗಣೇಶ್ ಅವರು ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ದೊಡ್ಡ ಗಣೇಶ್ ಅವರು 89 ಲಿಸ್ಟ್ ಆ ಪಂದ್ಯವನ್ನು ಆಡಿದ್ದು ಅದರಲ್ಲಿ 128 ವಿಕೆಟ್ ಗಳನ್ನೂ ಕಬಳಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ : 1997ರ ಜನವರಿಗೆ 2 ರಂದು ದಕ್ಷಿಣ ಆಫ್ರಿಕಾದ ವಿರುದ್ದ ನಡೆದ ಟೆಸ್ಟ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. 4 ಟೆಸ್ಟ್ ಪಂದ್ಯಗಳಿಂದ 5 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. 98 ರನ್ ನೀಡಿ 3 ವಿಕೆಟ್ ಗಳನ್ನು ಪಡೆದುಕೊಂಡಿದ್ದು ಅವರ ಶ್ರೇಷ್ಠ ಬೌಲಿಂಗ್ ನಿರ್ವಹಣೆ ಆಗಿದೆ. ದೊಡ್ಡ ಗಣೇಶ್ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.
1997 ಫೆಬ್ರವರಿ 15ರಂದು ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ ದೊಡ್ಡ ಗಣೇಶ್ ಕೇವಲ 20 ರನ್ ನೀಡ ಒಂದು ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.
ಕೋಚ್ ಹುದ್ದೆ : ದೊಡ್ಡ ಗಣೇಶ್ ಅವರು 2012-13ರಲ್ಲಿ ಗೋವಾ ರಾಜ್ಯ ತಂಡದ ಕೋಚ್ ಆಗಿ ಜವಾಬ್ದಾರಿ ನಿಭಾಯಿಸಿದರು. ಪ್ರಸ್ತುತ ತಮಿಳುನಾಡು ಪ್ರೀಮಿಯರ್ ಲೀಗ್ ಅಲ್ಲಿ ಮದುರೈ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದಾರೆ.
ರಾಜಕೀಯ ಮತ್ತು ವಾಹಿನಿ : ದೊಡ್ಡ ಗಣೇಶ್ ಅವರು ಪ್ರಸ್ತುತ ಜನತಾದಳ (ಜಾತ್ಯತೀತ)ದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ದೊಡ್ಡ ಗಣೇಶ್ ಅವರ ಮುಂದಿನ ಜೀವನ ಸುಖಮಯವಾಗಿರಲೆಂದು ಸ್ಪೋರ್ಟ್ಸ್ ಕನ್ನಡ ತಂಡವರು ಹಾರೈಸುತ್ತೇವೆ.
ಲೇಖನೆ : ಪ್ರೀತಮ್ ಹೆಬ್ಬಾರ್