ಕೋವಿಡ್ ನಿಂದ ಮಂಕಾಗಿದ್ದ ಕ್ರೀಡಾಲೋಕಕ್ಕೆ ಪುನಶ್ಚೇತನದ ತುಂಬುವ ಪ್ರಯತ್ನದಲ್ಲಿ ಶಿವಮೊಗ್ಗದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಯಶಸ್ವಿಯಾಗಿದೆ.
ಶಿವಮೊಗ್ಗದ ಗೋಪಾಲ ಬಡಾವಣೆಯ ಸಹನಾ ಕ್ರಿಕೆಟ್ ಕ್ಲಬ್ ಇವರು ಆಯೋಜಿಸಿದ 2021-22 ರ ಋತುವಿನ ಮೊದಲ ರಾಜ್ಯಮಟ್ಟದ ಪಂದ್ಯಾಕೂಟ “ಸಹನಾ ಕಪ್-2021” ಪ್ರಶಸ್ತಿಯನ್ನು ರೇಣು ಗೌಡ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಜಯಿಸಿದೆ.
ರಾಜ್ಯದ ನಾನಾಭಾಗಗಳಿಂದ ಒಟ್ಟು 16 ತಂಡಗಳು ಭಾಗವಹಿಸಿದ್ದು,ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ ಅಂತಿಮವಾಗಿ ಕುಮಾರ್ ಫ್ರೆಂಡ್ಸ್ ತಂಡ ನ್ಯಾಶ್ ಬೆಂಗಳೂರು ತಂಡವನ್ನು ಹಾಗೂ ಆರ್.ಕೆ ಸ್ಪೋರ್ಟ್ಸ್ ತೀರ್ಥಹಳ್ಳಿ N.K ಲಯನ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫ್ರೆಂಡ್ಸ್ ಬೆಂಗಳೂರು ಸೀನ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 6 ಓವರ್ ಗಳಲ್ಲಿ 48 ರನ್ ಗಳಿಸಿದರೆ,ಇದಕ್ಕುತ್ತರವಾಗಿ ಆರ್.ಕೆ.ತೀರ್ಥಹಳ್ಳಿ 30 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿಜಯಿ ಫ್ರೆಂಡ್ಸ್ ಬೆಂಗಳೂರು ತಂಡ 1.5 ಲಕ್ಷ ನಗದು,ದ್ವಿತೀಯ ಸ್ಥಾನಿ ಆರ್.ಕೆ.ತೀರ್ಥಹಳ್ಳಿ 75 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರೆ,ಪಂದ್ಯಾವಳಿಯುದ್ ದಕ್ಕೂ ಶ್ರೇಷ್ಠ ಸವ್ಯಸಾಚಿ ಪ್ರದರ್ಶನ ನೀಡಿದ ಕವಿರಾಜ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು,ಫ್ರೆಂಡ್ಸ್ ನ ನವೀನ್ ಉತ್ತಮ ದಾಂಡಿಗ,ತೀರ್ಥಹಳ್ಳಿಯ ನಿತಿನ್ ಹಾಗೂ ಸುಜಿತ್ ಉತ್ತಮ ಬೌಲರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಪದವೀಧರ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಪಿ.ದಿನೇಶ್,ಶಿವ ಟಯರ್ಸ್ ನ ಮಾಲೀಕರಾದ ಶಿವಕುಮಾರ್,ಉದ್ಯಮಿ ಹೆವನ್-ಇನ್ ಹಬೀಬ್,
ಟೂರ್ನಮೆಂಟ್ ನ ಪ್ರಮುಖ ಆಯೋಜಕರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಎನ್.ಎಸ್.ಮಂಜುನಾಥ್,ಸಹನಾ ಕ್ರಿಕೆಟರ್ಸ್ ನ ಸಂಸ್ಥಾಪಕ ಬಸವೇ ಗೌಡ,ಅಧ್ಯಕ್ಷ ಇಂದ್ರೇಶ್,ಉಪಾಧ್ಯಕ್ಷ ಫೈರೋಜ್ ಭಾಷಾ,ಖಜಾಂಚಿ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.ರೋಹನ್ ಡಿಕೋಸ್ಟ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.