ಹೆಬ್ರಿ : ವಿಶ್ವಕರ್ಮರು ಹುಟ್ಟಿನಲ್ಲೇ ಪ್ರತಿಭಾನ್ವಿತರು, ಹುಟ್ಟು ಎಂಜಿನಿಯರ್ ಗಳು,ವಿಶ್ವದ ಶಿಲ್ಪಿಗಳು, ಅದಕ್ಕಾಗಿ ನಾಡಿನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ವಿಶೇಷವಾದ ಸ್ಥಾನಮಾನವಿದೆ. ದೇಶದ ಅಭಿವೃದ್ಧಿಯಲ್ಲಿ ವಿಶ್ವಕರ್ಮರ ಅಪಾರವಾದ ಕೊಡುಗೆ ಇದೆ ಎಂದು ಹೆಬ್ರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು ಹೇಳಿದರು.
ಅವರು ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಭಾನುವಾರ ಆರಂಭಗೊಂಡ 2ದಿನಗಳ ವಿಶ್ವಕರ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣನಿಧಿ ಮತ್ತು ಅಶಕ್ತ ಕುಟುಂಬದ ಆರೋಗ್ಯ ನಿಧಿಯ ಸಲುವಾಗಿ ಸಾರ್ವಜನಿಕರ ಮತ್ತು ವಿಶ್ವಕರ್ಮ ಸಮಾಜದ ಬಾಂಧವರ ಜಿಲ್ಲಾ ಮಟ್ಟದ 60 ಗಜಗಳ ನಾಕೌಟ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮುದಾಯದ ಎಲ್ಲರೂ ವಿದ್ಯಾವಂರರಾಗುವ ಮೂಲಕ ಎಲ್ಲರೂ ಸೇರಿ ಸಮಾಜವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಬೇಕು, ಬ್ರಹ್ಮಶ್ರೀ ನಾರಾಯಣ ಗುರುಗಳ ಧ್ಯೇಯದಂತೆ ವಿದ್ಯೆಯಿಂದ ಸ್ವತಂತ್ರರಾಗಲು ಸಾಧ್ಯವಿದೆ ಎಂದು ಗಣೇಶ್ ಕುಮಾರ್ ಹೇಳಿದರು.
ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ ಎಡಿ ಮಾತನಾಡಿ ಪ್ರಪಂಚದ ಪ್ರಥಮ ವಾಸ್ತುಶಿಲ್ಪಿಗಳು ವಿಶ್ವಕರ್ಮರು. ಯುವಕರು ಅತ್ಯುತ್ತಮ ಶಿಕ್ಷಣ ಪಡೆದು ವಿಶ್ವಕರ್ಮರ ಕೌಶಲ್ಯದ ಪರಂಪರೆಯನ್ನು ಮುಂದುವರೆಸಿಕೊಂಡು ಸಮಾಜವನ್ನು ಇನ್ನಷ್ಟು ಪ್ರಬಲವಾಗಿ ಕಟ್ಟಬೇಕಿದೆ ಎಂದರು.
ಯುವ ವೃಂದದ ಅಧ್ಯಕ್ಷ ಭುವನೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಹೆಬ್ರಿ ಗ್ರಾಮ ಪಂಚಾಯತಿ ಸದಸ್ಯರಾದ ಚೈತನ್ಯ ಯುವ ವೃಂದದ ಗೌರವಾಧ್ಯಕ್ಷ ಎಚ್. ಜನಾರ್ಧನ್, ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪುರ ರತ್ನಾಕರ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿಯ ಲೀಲಾವತಿ ರಾಜೇಶ್ ಆಚಾರ್ಯ, ಮಠದಬೆಟ್ಟು ರಾಜೇಶ ಆಚಾರ್ಯ, ಯುವ ವೃಂದದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಶಿವಪುರ ಚಂದ್ರಶೇಖರ ಆಚಾರ್ಯ ನಿರೂಪಿಸಿ ಸ್ವಾಗತಿಸಿದರು. ಅರವಿಂದ ಆಚಾರ್ಯ ವಂದಿಸಿದರು.