ಐಪಿಎಲ್ ಕಣದಲ್ಲಿ ಚೆನ್ನೈ ತಂಡ ಈ ಬಾರಿ ಶಿಖರದಲ್ಲಿ!
—————————— —-
2023ರ ಐಪಿಎಲ್ ಕೂಟವು ಈಗ ರೋಮಾಂಚನದ ಶಿಖರ ಮುಟ್ಟಿದ್ದು ಸೋಮವಾರದ ಪಂದ್ಯ ಮುಗಿದಾಗ ಚೆನ್ನೈ ಸೂಪರ್ ಕಿಂಗ್ಸ್( CSK) ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಪ್ಲೇಸಲ್ಲಿ ಬಂದು ಕೂತಿದೆ! ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ‘ವಿಸಿಲ್ ಪೋಡು’ ತಂಡವು ಹತ್ತು ಅಂಕಗಳ ಜೊತೆಗೆ ಪಾಯಿಂಟ್ ಟೇಬಲಿನ ಟಾಪನಲ್ಲಿ ಬಂದು ಕೂತಿದೆ!
ಯಾವ ತಂಡವನ್ನು ಅಂಕಲ್ ಗಳ ತಂಡ ಎಂದು ಕ್ರಿಕೆಟ್ ಪಂಡಿತರು ಟೀಕೆ ಮಾಡಿದ್ದರೋ ಆ ತಂಡದಲ್ಲಿ ಈಗ ವಿದ್ಯುತ್ಸಂಚಾರ ಆರಂಭವಾದ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಲೆಜೆಂಡ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ!
ಚೆನ್ನೈ ತಂಡದಲ್ಲಿ ಯಾವ ಸ್ಟಾರ್ ಆಟಗಾರ ಕೂಡ ಇಲ್ಲ!
—————————— –
2008ರಿಂದಲೂ ಐಪಿಎಲ್ ಆಡುತ್ತ ಬಂದಿರುವ ಧೋನಿ ಇಂದು ಕ್ರಿಕೆಟಿನ ಆರಾಧ್ಯ ದೇವರಾಗಿ ರೂಪುಗೊಂಡಿದ್ದಾರೆ. ಯಾವುದೇ ದೊಡ್ಡ ಸ್ಟಾರ್ ಆಟಗಾರರು ಇಲ್ಲದ ಕೇವಲ ಸಾಮಾನ್ಯ ಆಟಗಾರರನ್ನು ಹೊಂದಿರುವ CSK ತಂಡವನ್ನು ಧೋನಿ ತನ್ನ ಮಾಂತ್ರಿಕ ಸ್ಪರ್ಶದ ಮೂಲಕ ಕಟ್ಟಿ ನಿಲ್ಲಿಸಿದ್ದು ಸಾಮಾನ್ಯ ಸಂಗತಿ ಅಲ್ಲ! ಇವತ್ತಿಗೂ ಆ ತಂಡಕ್ಕೆ ಧೋನಿಯೇ ಪ್ರೇರಣೆ ಮತ್ತು ಸ್ಫೂರ್ತಿ!
41 ವರ್ಷದ ಧೋನಿ ಇಂದಿಗೂ ಉಳಿಸಿಕೊಂಡಿರುವ ಕ್ರಿಯಾಶೀಲತೆ, ಚರಿಷ್ಮ, ಖದರು ಮತ್ತು ಫಿಟ್ನೆಸ್ ಯಾರಿಗೂ ಸಾಧ್ಯವಾಗದ ಮಾತು. ಧೋನಿಗೆ ಅದು ಸಾಧ್ಯವಾಗಿದೆ ಎಂದರೆ ಅದು ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಪ್ಯಾಶನ್ ಮತ್ತು ಬದ್ಧತೆಗಳ ಮೊತ್ತ ಎಂದು ನನ್ನ ಭಾವನೆ. ವಿಕೆಟಿನ ಹಿಂದೆ ತಾಳ್ಮೆಯ ಪರ್ವತವಾಗಿ ಧೋನಿ ನಿಂತಿದ್ದಾರೆ ಅಂದರೆ ಇಡೀ CSK ತಂಡದ ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ 200% ಕೊಡಲು ಸಿದ್ಧವಾಗುತ್ತಾರೆ!
ಐಪಿಎಲ್ ಇತಿಹಾಸದ ಲೆಜೆಂಡ್ ಆಟಗಾರ!
—————————— — ಇಷ್ಟೊಂದು ಪ್ರೀತಿ ಮತ್ತು ಗೌರವ ಪಡೆದುಕೊಂಡ ಇನ್ನೊಬ್ಬ ಕ್ರಿಕೆಟರ್ ನಿಮಗೆ, ನಮಗೆ ಸಿಗಲು ಸಾಧ್ಯವೇ ಇಲ್ಲ! ಭಾರತದ ಯಾವ ಸ್ಟೇಡಿಯಮನಲ್ಲಿ CSK ಆಡುತ್ತಿದೆ ಅಂತಾದರೂ ಇಡೀ ಸ್ಟೇಡಿಯಂ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಚೆನ್ನೈ ತಂಡದ ಬೆಂಬಲಕ್ಕೆ ನಿಲ್ಲುತ್ತದೆ. ಕೋಲ್ಕತ್ತಾದಲ್ಲಿ ಮೊನ್ನೆ ನಡೆದ ಪಂದ್ಯದಲ್ಲಿ ಸೇರಿದ ಬಹುಪಾಲು ಜನರು ತಮ್ಮದೇ KKR ತಂಡವನ್ನು ಮರೆತು CSK ತಂಡದ ಬೆಂಬಲಕ್ಕೆ ನಿಂತಿದ್ದರು! ಇದಕ್ಕೆ ಕಾರಣ ಧೋನಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಧೋನಿಯ ಈ ರೀತಿಯ ಜನಪ್ರಿಯತೆಗೆ ಕಾರಣವೇನು?
—————————— —
ಈ ಪ್ರಶ್ನೆಗೆ ನಾವು ನೂರಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತಕ್ಕಾಗಿ 2004ರಿಂದ 2019ರವರೆಗೆ ಧೋನಿ ಆಡಿದ ವೀರೋಚಿತವಾದ ಇನ್ನಿಂಗ್ಸಗಳನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಭಾರತ ಕಂಡ ಅತ್ಯಂತ ಯಶಸ್ವೀ ಕ್ಯಾಪ್ಟನ್ ಅಂದರೆ ಅದು ಧೋನಿ ಮತ್ತು ಧೋನಿ ಮಾತ್ರ! ಭಾರತಕ್ಕೆ ಮೂರು ವಿಶ್ವಮಟ್ಟದ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ಕ್ಯಾಪ್ಟನ್ ಆತ. 2007ರ T20 ವಿಶ್ವ ಕಪ್, 2011ರ ಸ್ಮರಣೀಯ ODI ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ ಇವುಗಳನ್ನು ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಧೋನಿ!
ಒಬ್ಬ ಕ್ಯಾಪ್ಟನ್ ಆಗಿ ಆತನು ತನ್ನ ತಂಡದಲ್ಲಿ ಟೀಮ್ ಸ್ಪಿರಿಟ್ ತುಂಬಿಸುವುದು, ಒತ್ತಡ ನಿರ್ವಹಣೆ ಮಾಡುವುದು, ಎಳೆಯರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಗೆಲ್ಲುವ ತಂತ್ರಗಾರಿಕೆ ರೂಪಿಸುವುದು, ಕೊನೆಯ ಚೆಂಡಿನವರೆಗೆ ಸೋಲನ್ನು ಒಪ್ಪಿಕೊಳ್ಳದೆ ಇರುವುದು, ಗ್ರೌಂಡಿನಲ್ಲಿ ಒಂದಿಷ್ಟೂ ತಾಳ್ಮೆ ಕೆಡದೇ ಪರ್ವತವಾಗಿ ನಿಲ್ಲುವುದು, ಎದುರಾಳಿ ಆಟಗಾರರನ್ನು ಕೂಡ ಗೌರವದಿಂದ ಕಾಣುವುದು… ಹೀಗೆ ಧೋನಿ ಬೇರೆ ಕ್ಯಾಪ್ಟನಗಳಿಗಿಂತ ಭಾರೀ ಎತ್ತರದಲ್ಲಿ ನಿಲ್ಲುತ್ತಾರೆ.
41ನೆಯ ವಯಸ್ಸಿನಲ್ಲಿ ಆತನ ಫಿಟ್ನೆಸ್ ಅದು ನಿಜಕ್ಕೂ ಅದ್ಭುತ! ವಿಕೇಟಿನ ಹಿಂದೆ ಚಿರತೆಯ ಚುರುಕುತನ ತೋರುವ ಧೋನಿ ರನ್ನಿಗಾಗಿ ವಿಕೆಟ್ ನಡುವೆ ಓಡುವಾಗ ಹದಿಹರೆಯದ ಆಟಗಾರರನ್ನು ನಾಚಿಸುತ್ತಾರೆ! ಅದು ಧೋನಿಯ ಸ್ಪೆಷಾಲಿಟಿ.
DSR ಸಕ್ಸಸ್ ರೇಟನಲ್ಲಿ CSK ತಂಡವು ( 85.15%) ಹೊಂದಿದೆ ಅಂದರೆ ಅದಕ್ಕೆ ಕಾರಣ ಧೋನಿಯೇ! ಯಾವ ಗ್ರೌಂಡಿನಲ್ಲಾದರೂ ಧೋನಿ ಒಂದೆರಡು ಬಾಲ್ ಆದರೂ ಆಡಲಿ, ಒಂದಾದರೂ ಹೆಲಿಕಾಪ್ಟರ್ ಶಾಟ್ ಹೊಡೆಯಲಿ ಎಂದು ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಾರೆ ಅಂದರೆ ಧೋನಿಯ ಜನಪ್ರಿಯತೆ ಯಾರಿಗಾದರೂ ಅರ್ಥ ಆಗುತ್ತದೆ. ಚೆನ್ನೈ ಆಡುವ ಪ್ರತೀ ಐಪಿಎಲ್ ಪಂದ್ಯದ ಆರಂಭದಿಂದ ಅಂತ್ಯದವರೆಗೆ ಸ್ಟೇಡಿಯಮನಲ್ಲಿ ಸಮುದ್ರದ ಘೋಷದ ಹಾಗೆ ಕೇಳಿ ಬರುವ ಉದ್ಘೋಷ ಅದೊಂದೇ ಧೋನಿ, ಧೋನಿ, ಧೋನಿ!
CSK ತಂಡದ ಕ್ರಿಕೆಟ್ ಯೋಧರು!
——————————
ಧೋನಿ 2008ರಿಂದಲೂ ಕ್ಯಾಪ್ಟನ್ ಆಗಿರುವ CSK ತಂಡದ (ಎರಡು ವರ್ಷ ಧೋನಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡದ ಪರವಾಗಿ ಆಡಬೇಕಾಯಿತು) ಆತ್ಮಬಲವನ್ನು ಹೆಚ್ಚಿಸುತ್ತ ಬಂದಿದ್ದಾರೆ. 2010, 2011, 2018, 2021ರಲ್ಲಿ ಹೀಗೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಅದು.
2023ರಲ್ಲಿ CSK ತಂಡದ ಸಾಮಾನ್ಯರಲ್ಲಿ ಸಾಮಾನ್ಯ ಆಟಗಾರರೂ ಮಿಂಚುತ್ತಿದ್ದಾರೆ. ಕೇವಲ 50 ಲಕ್ಷಕ್ಕೆ ಖರೀದಿ ಆಗಿದ್ದ ಅಜಿಂಕ್ಯ ರಹಾನೆ ರನ್ ಮಳೆಯನ್ನೇ ಸುರಿಸುತ್ತಿದ್ದಾರೆ! ಕ್ರಿಕೆಟಿನ ಮೂರೂ ಫಾರ್ಮ್ಯಾಟಗಳಲ್ಲಿ ವಿಫಲ ಆಟಗಾರ ಎಂದೇ ಬಿಂಬಿತವಾಗಿದ್ದ ರಹಾನೆ ಈ ಬಾರಿ ಕಿಚ್ಚು ಹಚ್ಚುವ ಆಟಗಾರ ಆಗಿದ್ದಾರೆ! ಧೋನಿಯ ನಂಬಿಕೆಯ ಓಪನರ್ ಋತುರಾಜ್ ಡ್ರೀಮ್ ಓಪನಿಂಗ್ ಕೊಡುತ್ತಿದ್ದಾರೆ. ಬೇರೆ ಫ್ರಾಂಚೈಸಿ ಟೀಮಗಳಲ್ಲಿ ವಿಫಲರಾಗುತ್ತಿದ್ದ ಶಿವಂ ದುಬೇ, ಅಂಬಾಟಿ ರಾಯುಡು ವಸ್ತುಶಃ ಸುಂಟರಗಾಳಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಮೋಯಿನ್ ಆಲಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ದೀಪಕ್ ಚಹರ್, ಪ್ರೀಟೋರಿಯಸ್, ಸಾನಟ್ನರ್, ತೀಕ್ಷಣ ಎಲ್ಲರೂ ಗೆಲ್ಲುವ ಇನ್ನಿಂಗ್ಸ್ ಆಡುತ್ತಿದ್ದಾರೆ. ತುಷಾರ್ ದೇಶಪಾಂಡೆ, ಪತಿರಾಣಾ ಮೊದಲಾದ ಹೊಸ ಮುಖಗಳು ಧೋನಿ ಕೊಟ್ಟ ಪ್ರತೀ ಒಂದು ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಎಲ್ಲೋ ಆರ್ಮಿಯ ಪ್ರತಿಯೊಬ್ಬ ಆಟಗಾರನೂ ಈ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದರ ಮೂಲಕ ಧೋನಿಗೆ ಗೆಲುವಿನ ವಿದಾಯ ಕೊಡಬೇಕು ಎನ್ನುವ ಸಂಕಲ್ಪದ ಜೊತೆಗೆ ಆಡುತ್ತಿದ್ದಾರೆ. ಹಾಗೆ ಈ ಬಾರಿಯ ಅದ್ಭುತ ಫಲಿತಾಂಶಗಳು ನಮ್ಮ ಕಣ್ಣ ಮುಂದಿವೆ.
ಮುಂದೆ ಎಷ್ಟು ವರ್ಷ ಐಪಿಎಲ್ ಕೂಟ ಇರುತ್ತದೆಯೋ ಅಲ್ಲಿಯವರೆಗೆ ಮಹೇಂದ್ರ ಸಿಂಗ್ ದೋನಿ ಹೆಸರು ಶಾಶ್ವತ ಆಗಿರುತ್ತದೆ ಅನ್ನೋದೇ ಭರತ ವಾಕ್ಯ!