ಪಟ್ನಾ : ಅಮೋಘ ಆಟವಾಡಿದ ದಬಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು. ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ದಬಂಗ್ 35–24ರಲ್ಲಿ ಗೆದ್ದಿತು. ಇದರೊಂದಿಗೆ ತಂಡದ ಖಾತೆಗೆ 21 ಪಾಯಿಂಟ್‌ಗಳು ಸೇರಿದವು. 20 ಪಾಯಿಂಟ್‌ಗಳೊಂದಿಗೆ ಪಿಂಕ್ ಪ್ಯಾಂಥರ್ಸ್ ಎರಡನೇ ಸ್ಥಾನದಲ್ಲಿ ಉಳಿಯಿತು.
ಆರಂಭದಲ್ಲಿ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಗಳಿಸಿತ್ತು. ಆದರೆ ‘ಸೂಪರ್ ಟೆನ್’ ಸಾಧನೆ ಮಾಡಿದ ನವೀನ್ ಕುಮಾರ್ ಮತ್ತು ರಂಜಿತ್ ಚಂದ್ರನ್ ಅವರ ಆಟದ ಬಲದಿಂದ ದಬಂಗ್ ಡೆಲ್ಲಿ ಹಿಡಿತ ಸಾಧಿಸಿತು. ನವೀನ್ ಒಟ್ಟು 12 ಪಾಯಿಂಟ್ ತುಂದುಕೊಟ್ಟರು. ಚಂದ್ರನ್ 10 ಪಾಯಿಂಟ್ ಗಳಿಸಿದರು.
ಜೈಪುರ ಪರ ದೀಪಕ್ ಹೂಡಾ ‘ಸೂಪರ್ 10’ ಗಳಿಸಿದರು. 11 ಪಾಯಿಂಟ್ ಅವರ ಖಾತೆಗೆ ಸೇರಿದವು. ದೀಪಕ್ ನರ್ವಾಲ್ ಐದು ಪಾಯಿಂಟ್ ಕಲೆ ಹಾಕಿದರು.
ಪುಣೇರಿ ಪಲ್ಟನ್ ಜಯಭೇರಿ: ರೋಚಕ ಪಂದ್ಯದಲ್ಲಿ ಪುಣೇರಿ ಪಲ್ಟನ್ 33–31ರಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರು ಗೆದ್ದಿತು. ಪವನ್ ಕಾಡಿಯನ್, ಅಮಿತ್ ಕುಮಾರ್ ಮತ್ತು ಗಿರೀಶ್ ಮಾರುತಿ ಎರ್ನಕ್ ಪುಣೇರಿ ಪರ ತಲಾ ಆರು ಪಾಯಿಂಟ್ಸ್ ಗಳಿಸಿದರು. ಫಾರ್ಚೂನ್‌ಜೈಂಟ್ಸ್‌ಗೆ ಸಚಿನ್ 9 ಮತ್ತು ಜಿ.ಬಿ.ಮೋರೆ 6 ಪಾಯಿಂಟ್ಸ್ ಗಳಿಸಿಕೊಟ್ಟರು.