ಕೊರೊನಾ ಹೊಡೆತದಿಂದ ಕಂಗೆಟ್ಟ ನಾಡಿನ ಜನತೆಗೆ ಅದರಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳ ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ.
ದಾವಣಗೆರೆ ಇಲೆವೆನ್ಸ್ ಹಾಗೂ ಜಿಲ್ಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ ದಾವಣಗೆರೆಯ ವಿಧಾನಸಭಾ ಸದಸ್ಯ ಶ್ಯಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿ||ಪಾರ್ವತಮ್ಮನವರ ಸವಿ ನೆನಪಿನ ಅಂಗವಾಗಿ,ದಾವಣಗೆರೆಯ ಕ್ರೀಡಾ ಪ್ರೋತ್ಸಾಹಕರಾದ ಜಯಪ್ರಕಾಶ್ ಗೌಡ ಯಾನೆ ಜೆ.ಪಿ ಹಾಗೂ ಶ್ರೀನಿವಾಸ್ ಶಿವಗಂಗಾ ಇವರೀರ್ವರ ದಕ್ಷ ಸಾರಥ್ಯದಲ್ಲಿ, ದಿನೇಶ್.ಕೆ.ಶೆಟ್ಟಿ,M.L.A ಆಪ್ತಕಾರ್ಯದರ್ಶಿ ಕುರುಡಿ ಗಿರೀಶ್ ರವರ ಸಹಕಾರದೊಂದಿಗೆ,ದಾಖಲೆಯ ಸತತ 13 ನೇ ಬಾರಿಗೆ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 25 ರಿಂದ 29 ರ ವರೆಗೆ 5 ದಿನಗಳ ಕಾಲ ಹೊನಲು ಬೆಳಕಿನ
“ಎಸ್.ಎಸ್.ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್-2020” ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಸತತ 13 ನೇ ಬಾರಿಗೆ ನಡೆಸಲ್ಪಡುವ ರಾಷ್ಟ್ರೀಯ ಮಟ್ಟದ ದಾವಣಗೆರೆಯ ಈ ಪಂದ್ಯಾವಳಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಅತ್ಯಂತ ಅದ್ಧೂರಿ ಹಾಗೂ ವ್ಯವಸ್ಥಿತ ಪಂದ್ಯಾವಳಿಯೆಂದು ಮನೆಮಾತಾಗಿದೆ.ಕಳೆದ ಒಂದೂವರೆ ತಿಂಗಳಿಂದ ಹಾಲಪ್ಪ ದಾವಣಗೆರೆ ತಂಡ ಸುಸಜ್ಜಿತ ಕ್ರೀಡಾಂಗಣ ಹಾಗೂ ಪಿಚ್ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾಜ್ಯದ ಬಲಿಷ್ಠ 32 ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದು,28 ಶನಿವಾರ ಸಂಜೆ 6 ಗಂಟೆಗೆ ವಿಶೇಷವಾಗಿ ಮುಂಬಯಿ ಇಲೆವೆನ್ ಹಾಗೂ ಕರ್ನಾಟಕ ಇಲೆವೆನ್ ತಂಡಗಳ ನಡುವಿನ ಪ್ರದರ್ಶನ ಪಂದ್ಯ ಕ್ರೀಡಾಭಿಮಾನಿಗಳ ಕುತೂಹಲವನ್ನು
ಇನ್ನಷ್ಟು ಹೆಚ್ಚಿಸಿದೆ.
ಶ್ಯಾಮನೂರು-ಶಿವಗಂಗಾ ಟ್ರೋಫಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 3.5 ಲಕ್ಷ ನಗದು,ದ್ವಿತೀಯ ಸ್ಥಾನಿ ತಂಡ 2.25 ಲಕ್ಷ ಹಾಗೂ ತೃತೀಯ ಸ್ಥಾನಿ 1.25 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡುವ ಆಟಗಾರರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಟೂರ್ನಮೆಂಟ್ ನ ನೇರ ಪ್ರಸಾರವನ್ನು M.Sports ಬಿತ್ತರಿಸಲಿದ್ದು,ಕಳೆದ 12 ವರ್ಷಗಳಿಂದ ದಾವಣಗೆರೆಯ ಜಿಲ್ಲೆಯ ಕ್ರೀಡಾ ಪ್ರೇಮಿಗಳ ಮನಸ್ಸನ್ನು ಗೆದ್ದ ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ ಹಿರಿಯ ಕಾಮೆಂಟೇಟರ್ ವಿನಯ್ ಉದ್ಯಾವರ ಭಾಗವಹಿಸಲಿದ್ದು,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.