ಹೌದು ಪಡುವಣ ಕಡಲಿನ ಬಡಗಣ ಮಡಿಲಿನಲಿ ಮೆರೆದ ಅರಬ್ಬಿ ಸಮುದ್ರ ತೀರದ ಕಡಲತಡಿಯ ಭಾಗವೇ ಕುಂದಾಪುರ.ಕುಂದಾಪುರ ಎಲ್ಲಾ ಕ್ಷೇತ್ರಗಳಂತೆ ಕ್ರಿಕೆಟ್ ಕ್ಷೇತ್ರದಲ್ಲೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಮೆರೆದು ತನ್ನವರನ್ನು ಅಂತಾರಾಷ್ಟ್ರೀಯ ಮಟ್ಟದವರೆಗೂ ಗುರುತಿಸುವಂತೆ ಮಾಡಿದೆ.
ಆ ವಿಚಾರದಲ್ಲಿ ಕುಂದಾಪುರದ ಪರಿಸರದಲ್ಲಿ ನಡೆಯುವ ದಾಂಡು ಚೆಂಡಿನ ಆಟ ಕ್ರಿಕೆಟ್ ಎನ್ನುವ ಕ್ರೀಡೆಗೆ ತನ್ನದೇ ಆದ ವಿಶಿಷ್ಟ ಸ್ಥಾನ ಮಾನಗಳಿದೆ.
ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡ ಕುಂದಾಪುರ ಗಾಂಧಿ ಮೈದಾನ ಅತ್ಯಂತ ಶಿಸ್ತು ಬದ್ಧವಾಗಿ ಪಂದ್ಯಾಟ ಅಯೋಜಿಸಿ ಕ್ರಿಕೆಟ್ ಅಭಿಮಾನಿಗಳನ್ನು ಗಾಂಧಿ ಮೈದಾನದತ್ತ ಸೆಳೆಯುವ ಚಮತ್ಕಾರ ಆ ಮಣ್ಣಿಗಿದೆ.
ಇದೇ ಗಾಂಧಿ ಮೈದಾನ ಮೊದಲ ಬಾರಿಗೆ ಚಕ್ರವರ್ತಿ ತಂಡ ನಡೆಸಿಕೊಟ್ಟ ರಾಜ್ಯಮಟ್ಟದ ಹೊನಲುಬೆಳಕಿನ ಪಂದ್ಯಾಟದಿಂದ ಹಿಡಿದು ಮೊನ್ನೆ ನಡೆದ ರಾಷ್ಟ್ರೀಯ ಮಟ್ಟದ ಜೊನ್ಸನ್ ಟ್ರೋಫಿವರೆಗೆ ಕುಂದಾಪುರ ಗಾಂಧಿ ಮೈದಾನದ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.ಅತೀ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಹೆಗ್ಗಳಿಕೆ ಕುಂದಾಪುರದ ಗಾಂಧಿ ಮೈದಾನಕ್ಕೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ಪಂದ್ಯಾಟವನ್ನು ಬಹಳಷ್ಟು ಸುಸಜ್ಜಿತವಾಗಿ ವರ್ಣರಂಜಿತ ಮತ್ತು ಶಿಸ್ತು ಬದ್ಧವಾಗಿ ನಡೆಸುವಲ್ಲಿ ನಮ್ಮೂರ ಮೈದಾನ ಮುಂಚೂಣಿಯಲ್ಲಿ ನಿಲ್ಲುತ್ತದೆ.
ರಾಷ್ಟ್ರೀಯ ಹೆದ್ದಾರಿಗೆ ಚಾಚಿಕೊಂಡಿರುವ ಈ ಮೈದಾನ ಕ್ರಿಕೆಟ್ ಪಂದ್ಯಾಟಗಳು ನಡೆದರೆ ಮೈದಾನದ ಸುತ್ತ ಸುತ್ತೊರೆವ ಸಾವಿರಾರು ಅಭಿಮಾನಿಗಳು ಬಸೂರ್ ಮೂರಕೈಯಿಂದ ಶಾಸ್ತ್ರಿ ಸರ್ಕಲ್ ವರೆಗೆ ನಿಲ್ಲೂವ ವಾಹನಗಳು ತಿಂಡಿತಿನಿಸುಗಳ ಅಂಗಡಿ ವರ್ಣರಂಜಿತವಾಗಿ ನಡೆಯುವ ಪಂದ್ಯಾಟ ಶಿಳ್ಳೆ ಚಪ್ಪಾಳೆ ಇವೆಲ್ಲವೂ ನೋಡುವಾಗ ಜಾತ್ರೆಯಂತೆ ಕಂಗೊಳಿಸುವುದು ಸುಳ್ಳಲ್ಲ.
ಆದರೆ ಅದ್ಯಾಕೋ ಗೊತ್ತಿಲ್ಲ ಈಗ ಡಿಜಿಟಲ್ ಯುಗ ಕುಳಿತಲ್ಲಿಯೇ ಪ್ರೇಕ್ಷಕನ ಕೈಯಲ್ಲಿ ಪಂದ್ಯಾಟದ ವೀಕ್ಷಣೆ ಮತ್ತು ಈಗಿನ ಯುವ ಜನಾಂಗ ಉದ್ಯೋಗ ಅರಸಿ ಪರ ಊರಿನಲ್ಲಿ ನಲೆಸುದರಿಂದ ಕ್ರಿಕೆಟ್ ಗೆ ಆಟಗಾರರ ಮತ್ತು ಮೈದಾನದಲ್ಲಿ ಅಭಿಮಾನಿಗಳ ಸಂಖ್ಯೆಯು ಕೂಡ ಕಡಿಮೆಯಾಗುತ್ತಿದ್ದು ಆಗಿನ ಕುಂದಾಪುರ ಗಾಂಧಿ ಮೈದಾನದ ಗತಕಾಲದ ವೈಭವ ಈಗ ಕಾಣಸಿಗುವುದು ತುಂಬಾ ಕಡಿಮೆ ಎನ್ನುವುದೇ ಬೇಸರದ ವಿಷಯ.
ಆದರೆ ಈ ಗತಕಾಲದ ಆ ಮಣ್ಣಿನ ವೈಭವ ವೈಭವೋಪೇತವಾಗಿ ಮತ್ತೆ ಮರುಕಳಿಸುವಂತೆ ಮಾಡಿದ್ದು ಮೊನ್ನೆ ನಡೆದ ರಾಷ್ಟ್ರೀಯ ಮಟ್ಟದ ಜಾನ್ಸನ್ ಟ್ರೋಫಿ. ವಾವ್ ಅತ್ಯುತ್ತಮ ಮತ್ತು ವರ್ಣರಂಜಿತ ಆಯೋಜನೆ, 25ಕ್ಕೂ ಹೆಚ್ಚು ತಂಡಗಳ ಭಾಗವಹಿಸುವಿಕೆ, 10000 ಕ್ಕೂ ಹೆಚ್ಚು ಕ್ಕಿಕ್ಕಿರಿದು ಮೈದಾನದ ಸುತ್ತ ಸುತ್ತೊರೆದ ಕ್ರಿಕೆಟ್ ಅಭಿಮಾನಿಗಳು, ಅದೇ ಶಿಳ್ಳೆ ಚಪ್ಪಾಳೆ ತಂಡಕ್ಕಾಗಿ ಹಾಗೂ ತಂಡದ ನೆಚ್ಚಿನ ಆಟಗಾರನಿಗೆ ನೀಡುವ ಬೆಂಬಲ ಪ್ರೋತ್ಸಾಹ ಎಲ್ಲವೂ ಮರುಕಳಿಸಿತು. ಕುಂದಾಪುರ ಗಾಂಧಿ ಮೈದಾನದ ಮತ್ತೆ ಕ್ರಿಕೆಟ್ ಜಾತ್ರೆಯಂತೆ ಕಂಗೊಳಿಸಿತು. ಈ ಯಶಸ್ಸಿಗೆ ಕಾರಣವಾಗಿದ್ದು ಜಾನ್ಸನ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಹೆಗ್ಡೆ,ಗೌರವಾಧ್ಯಕ್ಷರಾದ ಉಮೇಶ್ ಶೆಟ್ಟಿ ಕಲ್ಗದ್ದೆ, ನಾಯಕ ರಾಜಾ ಸಾಲಿಗ್ರಾಮ ಮತ್ತು ತಂಡದ ಎಲ್ಲಾ ಸದಸ್ಯರ ಅದೆಷ್ಟೋ ಹಗಲಿರುಳ ಪರಿಶ್ರಮ ನಿಮ್ಮ ಈ ಸಾಧನೆಗೆ ದೊಡ್ಡ ಸಲಾಂ. ನೀವು ನಡೆಸಿದ ವಿಭಿನ್ನ ಮತ್ತು ವಿಶಿಷ್ಟ ಮಾದರಿಯಲ್ಲಿ ಶಿಸ್ತು ಬದ್ಧವಾಗಿ ಸಮಯನ್ನು ಪಾಲಿಸಿ ಯಶಸ್ವಿಯಾಗಿ ನಡೆಸಿಕೊಟ್ಟ ಪಂದ್ಯಾಟ ಇಡೀ ರಾಜ್ಯ ರಾಷ್ಟ್ರಕ್ಕೆ ಮಾದರಿಯಾಗಿದೆ. ಇನ್ನಷ್ಟು ಇನ್ನಷ್ಟು ಪಂದ್ಯಾಟಗಳು ಈ ಮೈದಾನದಲ್ಲಿ ಸಾಗಿ ಕ್ರಿಕೆಟ್ ಪ್ರತಿಭೆಗಳು ಬೆಳಕಿಗೆ ಬರುವಂತೆ ಆಗಲಿ ಎಂದು ಆಶಿಸೋಣ.
ಜೈ ಕುಂದಾಪುರ
ವಿಘ್ನೇಶ್ ಕುಂದಾಪುರ
ಸ್ಪೋರ್ಟ್ಸ್ ಕನ್ನಡ ಗಲ್ಫ್ ಪ್ರತಿನಿಧಿ
ಸ್ಪೋರ್ಟ್ಸ್ ಕನ್ನಡ ಗಲ್ಫ್ ಪ್ರತಿನಿಧಿ