ಬರ್ಮಿಂಗ್‌ಹ್ಯಾಮ್: ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವಕಾಶ ಪಡೆದಿರುವ ಕ್ರಿಕೆಟ್‌ನಲ್ಲಿ ಭಾರತದ ವನಿತೆಯರ ತಂಡ ಅತಿಥೇಯ ಇಂಗ್ಲೆಂಡ್ ತಂಡವನ್ನು ನಾಲ್ಕುರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದೆ.
ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು ಕೊನೆಯ ಓವರ್ ಬೌಲಿಂಗ್ ಮಾಡುವಾಗ ಇಂಗ್ಲೆಂಡ್ ತಂಡಕ್ಕೆ ಗೆಲುವಿಗೆ 14 ರನ್ ಬೇಕಾಗಿತ್ತು ಅದರೆ ಇಂಗ್ಲೆಂಡ್ ತಂಡ ಹತ್ತು ರನ್ ಗಳಿಸಲಷ್ಟೆ ಶಕ್ತವಾಯಿತು ಅಂತಿಮ ಹಣಹಣಿಯಲ್ಲಿ ಭಾರತ ತಂಡದ ವನಿತೆಯರು 4 ರನ್‌ಗಳ ರೋಚಕ ಜಯ ಸಾಧಿಸಿ ಚಿನ್ನದ ಸುತ್ತಿಗೆ ತೇರ್ಗಡೆಯಾದರು.
ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕುವುದರ ಮೂಲಕ ಬಲಿಷ್ಠ ಇಂಗ್ಲೆಂಡ್ ವನಿತೆಯರಿಗೆ 165 ರನ್‌ಗಳ ಸವಾಲಿನ ಮೊತ್ತದ ಗುರಿಯನ್ನು ನೀಡಿದರು. ನಂತರ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಲಷ್ಟೇ ಶಕ್ತವಾಯಿತು.ಒಂದು ಹಂತದಲ್ಲಿ 32 ಎಸೆತದಲ್ಲಿ 48 ರನ್ ಗಳಿಸಬೇಕಾಗಿದ್ದ ಇಂಗ್ಲೆಂಡ್ ತಂಡ ಕೇವಲ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಗೆಲ್ಲುವ ಸಾಧ್ಯತೆ ಹೆಚ್ಚಿತ್ತು ಈ ಹಂತದಲ್ಲಿ ಭಾರತೀಯ ಹರ್ಮನ್ ಪ್ರೀತ್ ಬಳಗ ಉತ್ತಮ ಬೌಲಿಂಗ್ ಮಾಡಿ ಅಂತಿಮವಾಗಿ 4 ರನ್‌ಗಳ ರೋಚಕ ಜಯ ಸಾಧಿಸಿದ್ದು ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಚೊಚ್ಚಲ ಕ್ರಿಕೆಟ್ ಆವೃತ್ತಿಯಲ್ಲಿಯೇ ಫೈನಲ್ ಲಗ್ಗೆಯಿಡುವ ಮೂಲಕ ಇತಿಹಾಸ ನಿರ್ಮಿಸಿ ಪದಕ ಖಚಿತಪಡಿಸಿಕೊಂಡಿತು.
ಭಾರತದ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 32 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿ ಭರ್ಜರಿ 61 ರನ್ ಕಲೆ ಹಾಕಿದರು. ಜೆಮಿಮಾ ರೋಟ್ರಿಗಸ್ 31 ಎಸೆತಗಳಲ್ಲಿ44, ನಾಯಕಿ ಹರ್ಮನ್ ಪ್ರೀತ್ ಕೌರ್ 20 ಎಸೆತಗಳಲ್ಲಿ 20, ದೀಪ್ತಿ ಶರ್ಮಾ 20 ಎಸೆತಗಳಲ್ಲಿ 22 ರನ್‌ಗಳಿಸಿ ಒಟ್ಟು 160 ರನ್ ಗಳ ಉತ್ತಮ ಮೊತ್ತವನ್ನು ದಾಖಲಿಸಿದರು.
160 ರನ್ ಗಳ ಬೆನ್ನು ಹತ್ತಿದ ಇಂಗ್ಲೆಂಡ್ ಪರ ನ್ಯಾಟ್ ಸೀವರ್ 41 ರನ್, ಡ್ಯಾನಿಯಲ್ ವೇಟ್ 35 ಹಾಗೂ ಆಮಿ ಜೋನ್ಸ್ 31 ರನ್‌ಗಳಿಸಿ ಗೆಲುವಿಗಾಗಿ ಹೋರಾಟ ನಡೆಸಿದರು ಅಂತಿಮ ಕ್ಷಣದಲ್ಲಿ ವಿಫಲರಾಗಿ ಭಾರತದ ಎದುರು 4 ರನ್ ಗಳ ಸೋಲನ್ನು ಒಪ್ಪಿ ಕೊಳ್ಳಬೇಕಾಯಿತು.
ಭಾರತದ ಪರ ಸ್ನೇಹ್ ರಾಣಾ 28ಕ್ಕೆ2, ದೀಪ್ತಿ ಶರ್ಮಾ 18ಕ್ಕೆ1 ವಿಕೆಟ್ ಪಡೆದರು. ಕ್ಷೇತ್ರ ರಕ್ಷಣೆಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ಆಟಗಾರ್ತಿಯರು ಇಂಗ್ಲೆಂಡ್ ತಂಡದ ಮೂವರೂ ಆಟಗಾರ್ತಿಯರನ್ನು ರನ್‌ಔಟ್ ಮಾಡಿ ನಿರ್ಣಾಯಕ ಬ್ಯಾಟ್ಸ್‌ಮನ್ ಗಳನ್ನು ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾಗಿ ಗೆಲುವು ತಮ್ಮದಾಗಿಸಿಕೊಂಡು ಫೈನಲ್ ಗೆ ಲಗ್ಗೆಹಾಕಿದ್ದಾರೆ.
2ನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯಲಿದೆ. ಈ ಪೈಪೋಟಿಯಲ್ಲಿ ಗೆದ್ದ ತಂಡ ಭಾರತದ ವಿರುದ್ಧ ಭಾನುವಾರ ಚಿನ್ನಕ್ಕಾಗಿ ಪೈಪೋಟಿ ನಡೆಸಲಿವೆ.
ಇನ್ನೂ ಭಾರತೀಯ ವನಿತಾ ತಂಡ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನೂ ಭಾರತೀಯ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್, ಮಾಜಿ ಮಹಿಳಾ ಕ್ರಿಕೆಟರ್ ಅಂಜುಮ್ ಚೊಪ್ರಾ, ಮಾಜಿ ವಿಂಡೀಸ್ ಕ್ರಿಕೆಟರ್ ಇಯಾನ್ ಬಿಷಪ್ , ಮಾಜಿ ಕ್ರಿಕೆಟಿಗ ವಸೀಂ ಜಾಫರ್, ಆಕಾಶ್ ಚೋಪ್ರಾ, ಪಾರ್ಥೀವ್ ಪಟೇಲ್ , ಅಮಿತ್ ಮಿಶ್ರಾ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು ಭಾರತೀಯ ವನಿತೆಯರಿಗೆ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಲು ಶುಭಕೋರಿದ್ದಾರೆ.