Categories
ಜಿಲ್ಲಾ ಸ್ಪೋರ್ಟ್ಸ್

ಅಕ್ಟೋಬರ್‌ 27ರದಂದು : ಟೊರ್ಪೆಡೋಸ್ ಸಂಸ್ಥೆಯಲ್ಲಿ ಬ್ಯಾಂಕರ್ಸ್ ಪ್ರೊಫೆಷನಲ್ಸ್ ಅಂತರ ಜಿಲ್ಲಾ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ

ಕ್ರೀಡಾ ಕೃಷಿಯಲ್ಲಿ ಸದಾ ತೊಡಗಿರುವ ಸಂಸ್ಥೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಎಲ್ಲಾ ವಯೋಮಾನದವರಿಗೂ, ಸರಕಾರಿ ಸೇವಾ ನಿರತರಿಗೂ, ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಿ ಯಶಸ್ಸು ಕಂಡಿದೆ ಈ ಸಂಸ್ಥೆ. ಇತ್ತೀಚೆಗಷ್ಟೇ ವೃತ್ತಿಪರ ಶಿಕ್ಷಕರು, ಇಂಜಿನಿಯರ್ಸ್,ವೈದ್ಯರಿಗಾಗಿ ಯಶಸ್ವಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಏರ್ಪಡಿಸಿತ್ತು.

ಟೊರ್ಪೆಡೋಸ್ ಸಂಸ್ಥೆ ಈ ಬಾರಿ ಬ್ಯಾಂಕ್ ನೌಕರರಿಗಾಗಿ ಅಂತರಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಅಕ್ಟೋಬರ್‌ 27 ರವಿವಾರದಂದು ಹಳೆಯಂಗಡಿಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪಂದ್ಯಾಕೂಟವು ಪುರುಷರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್, ಮಹಿಳೆಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ನಡೆಸಲಾಗುತ್ತಿದ್ದು ವಿಜೇತರು ಹಾಗೂ ರನ್ನರ್ಸ್ ಗಳನ್ನು ಆಕರ್ಷಕ ಬಹುಮಾನ ನೀಡಿ ಪುರಸ್ಕರಿಸಲಾಗುತ್ತಿದೆ.

ಈ ಪಂದ್ಯಾಕೂಟದ ನೇರ ಪ್ರಸಾರ “ಕ್ರಿಕ್ ಸೇ” ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

Categories
ಸ್ಪೋರ್ಟ್ಸ್

ಸ್ಟೇಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ಅಲೆವೂರಿನ ಧನ್ಯಾ ಆಚಾರ್ಯ

ಉಡುಪಿ : ಇತ್ತೀಚೆಗೆ ತಮಿಳುನಾಡಿನ ಚೆನ್ನೈಯ ನೆಹರೂ ಕ್ರೀಡಾಂಗಣದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಸ್ಟೇಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಧನ್ಯ ಆಚಾರ್ಯ ಮಹಿಳೆಯರ ಜೂನಿಯರ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕವನ್ನು ಜಯಿಸಿರುತ್ತಾರೆ.

ಉಡುಪಿ ಜಿಲ್ಲಾ ಅಮೆಚುರ್ ಬಾಕ್ಸಿಂಗ್‍ನ ಬಾಕ್ಸರ್ ಆಗಿದ್ದು, ಅಲೆವೂರಿನ ಸುಭೋದಿನಿ ಶಾಲೆಯಲ್ಲಿ ಶಿವಪ್ರಸಾದ್ ಆಚಾರ್ಯರಲ್ಲಿ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Categories
ರಾಜ್ಯ ಸ್ಪೋರ್ಟ್ಸ್

ದಸರಾ ಕ್ರೀಡಾಕೂಟ ಚಿನ್ನದ ಪದಕದೊಂದಿಗೆ ವಿನೂತನ ದಾಖಲೆ ನಿರ್ಮಿಸಿದ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರು…

ಅಕ್ಟೋಬರ್ 1 ರಿಂದ 4 ರ ವರೆಗೆ ಮೈಸೂರಿನ ಜೆ.ಸಿ.ಇ ಕಾಲೇಜಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾಕೂಟದಲ್ಲಿ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಈ ಮೂವರ ತಂಡ ಪ್ರಥಮ‌ ಪ್ರಶಸ್ತಿಯನ್ನು ಅಲಂಕರಿಸಿದ್ದಾರೆ.
ಪ್ರಾರಂಭಿಕ ಹಂತದಿಂದಲೇ ಭರ್ಜರಿ ಯಶಸ್ಸು ಸಾಧಿಸಿದ ಈ ಮೂವರು ಪ್ರಥಮ‌ ಸುತ್ತಿನಲ್ಲಿ ಬೆಂಗಳೂರು ಗ್ರಾಮಾಂತರ ತಂಡವನ್ನು 3-0 ಅಂತರದಲ್ಲಿ,ದ್ವಿತೀಯ ಸುತ್ತಿನಲ್ಲಿ ಬೆಂಗಳೂರು ನಗರ ತಂಡವನ್ನು 3-0 ಅಂತರದಲ್ಲಿ,ತೃತೀಯ ಸುತ್ತಿನಲ್ಲಿ ಕಲಬುರ್ಗಿ ತಂಡವನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಗೈದು ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಎದುರಾಳಿ ಬೆಳಗಾಂ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿ,ನಗದು ಬಹುಮಾನವನ್ನು ಪಡೆದರು. ದಸರಾ ಕ್ರೀಡಾ ಕೂಟದಲ್ಲಿ ಸತತ 5 ನೇ ಬಾರಿಗೆ ಚಿನ್ನದ ಪದಕವನ್ನು ಪಡೆದು ವಿನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.
ದಾಖಲೆಯ ಗೆಲುವು ಸಾಧಿಸಿದ ಈ ಮೂವರಲ್ಲಿ ಕುಮಾರಿ ಪ್ರಶಸ್ತಿ ಶೆಟ್ಟಿ,ಗೌತಮ್ ಶೆಟ್ಟಿಯವರ ಪುತ್ರಿ.
ಆರ್ನಾ ಸದೋತ್ರಾ,ಇಶಾನಿ ಹರೀಶ್ ಹಾಗೂ ಪ್ರಶಸ್ತಿ ಡೆಲ್ಲಿ ಪಬ್ಲಿಕ್ ಸ್ಕೂಲ್(MRPL) ಮಂಗಳೂರು ವಿದ್ಯಾರ್ಥಿನಿಯರು,ದೈಹಿಕ ನಿರ್ದೇಶಕರಾದ ಗೌತಮ್ ಶೆಟ್ಟಿಯವರ ಟೊರ್ಪೆಡೋಸ್ ಸಂಸ್ಥೆಯಲ್ಲಿ ಕಠಿಣ ತರಬೇತಿ ಪಡೆದು,ಭರ್ಜರಿ ಯಶಸ್ಸು ಸಾಧಿಸಿ
ವಿದ್ಯಾಸಂಸ್ಥೆಗೂ ಹಾಗೂ ಟೊರ್ಪೆಡೋಸ್ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಗೌತಮ್ ಶೆಟ್ಟಿಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.
          ಆರ್.ಕೆ.ಆಚಾರ್ಯ ಕೋಟ
Categories
ಕ್ರಿಕೆಟ್ ಸ್ಪೋರ್ಟ್ಸ್

ಚಕ್ರವರ್ತಿ ಗೆಳೆಯರ ಬಳಗ ತುಮಕೂರು-ಸರಕಾರಿ ನೌಕರರು ಹಾಗೂ ಸೇವಾರಂಗದ ವಿಶಿಷ್ಟ ಟೆನ್ನಿಸ್ ಕ್ರಿಕೆಟ್ ಪಂದ್ಯಾಕೂಟ

ಕಳೆದ 20 ವರ್ಷಗಳಿಂದ ಶ್ರೀ ಪ್ರಕಾಶ್ ಟಿ.ಸಿ ತುಮಕೂರು ನೇತೃತ್ವದಲ್ಲಿ ಟೆನ್ನಿಸ್ ಕ್ರಿಕೆಟ್ ನಲ್ಲಿ ಪಾದರಸದಂತಹ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಸಂಸ್ಥೆ “ಚಕ್ರವರ್ತಿ ಗೆಳೆಯರ ಬಳಗ” ತುಮಕೂರು. ಹಲವಾರುಪಂದ್ಯಾಕೂಟಗಳನ್ನು ಜಯಿಸಿ, ರಾಜ್ಯ, ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳು, ರಕ್ತದಾನ ಶಿಬಿರ ಹೀಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯಾದ್ಯಂತ ತನ್ನ ಛಾಪನ್ನು ಮೂಡಿಸಿದೆ.

20 ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜದ ಎಲ್ಲಾ ಸರಕಾರಿ ನೌಕರರು ಹಾಗೂ ಸೇವಾರಂಗದವರನ್ನು ಒಗ್ಗೂಡಿಸಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ವನ್ನು ದಿನಾಂಕ 29ರಂದು ತುಮಕೂರಿ‌ನ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಂಘಟಿಸಲಿದೆ.

ಗಡಿನಾಡ(ಪಾವಗಡ)ಶಿಕ್ಷಕರ ತಂಡ, ಜಿಲಾಧಿಕಾರಿಗಳ ತಂಡ, ಪತ್ರಕರ್ತರ ತಂಡ, ಬೆಸ್ಕಾಂ(ಕೆ.ಇ.ಬಿ)ತಂಡ, ವೈದ್ಯರ ತಂಡ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ತಂಡ,ತುಮಕೂರು ಹಾಲು ಒಕ್ಕೂಟ ತಂಡ,ಶಿಕ್ಷಣ ಇಲಾಖೆ ತಂಡ,ವಕೀಲರ ತಂಡ,ತುಮಕೂರು ಮಹಾನಗರ ಪಾಲಿಕೆ ತಂಡ ಹೀಗೆ 10 ಸಂಸ್ಥೆಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿಷ್ಟಿತ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಸಮಾರೋಪ ಸಮಾರಂಭದಲ್ಲಿ ತುಮಕೂರಿನ M.L.A  ಜ್ಯೋತಿ ಗಣೇಶ್,ಕೆ.ಪಿ‌.ಸಿ‌.ಸಿ ಸದಸ್ಯರಾದ ಕೃಷ್ಣಮೂರ್ತಿ ಪಿ.ಎನ್,ತುಮಕೂರಿನ ಜಿಲ್ಲಾಧಿಕಾರಿ,ಹಿರಿಯ ಪೋಲಿಸ್ ವರಿಷ್ಠರು ಭಾಗವಹಿಸಲಿದ್ದಾರೆ. ಹಾಗೂ ಹಲವು ವರ್ಷಗಳಿಂದ ತಂಡದಲ್ಲಿ ಸೇವೆ ಸಲ್ಲಿಸಿದ ಹಿರಿಯ ಆಟಗಾರರ ಸನ್ಮಾನ‌ ಕಾರ್ಯಕ್ರಮ ನಡೆಯಲಿದೆ.

ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಗಿರೀಶ್ ರಾವ್ ನೇತೃತ್ವದಲ್ಲಿ ಕ್ರಿಕ್ ಸೇ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆಯೆಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕಾಧ್ಯಕ್ಷ ಪ್ರಕಾಶ್ ಟಿ.ಸಿ. ತಿಳಿಸಿದರು.

ಈ ಸಂದರ್ಭ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಕೆ.ಶ್ರೀಧರ್, ಧನಿಯ ಕುಮಾರ್,ಚೇತನ್,ಮಂಜು ಹಾಗೂ ಭಾಗವಹಿಸುವ 10 ತಂಡಗಳ ಕಪ್ತಾನರು ಹಾಗೂ ಚಕ್ರವರ್ತಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

-ಆರ್.ಕೆ‌.ಆಚಾರ್ಯ ಕೋಟ

Categories
ಟೆನಿಸ್ ಸ್ಪೋರ್ಟ್ಸ್

ಟೊರ್ಪೆಡೋಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ಮೈಸೂರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಮಂಗಳೂರು : ವಿಜಯದಶಮಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಜಂಬೂ ಸವಾರಿಯ ಜೊತೆ ದಸರಾ ಸಂಭ್ರಮ ಜೋರಾಗಿ ಮೇಳೈಸಲಿದೆ. ಮೈಸೂರು ದಸರಾ ಪ್ರಯುಕ್ತ ಅಕ್ಟೋಬರ್ 1 ರಿಂದ 6 ರ ತನಕ ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾ ಕೂಟ ನಡೆಯಲಿದ್ದು.ಈ ಹಿನ್ನೆಲೆ ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಮಹಿಳಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಮಂಗಳೂರಿನ ಹಳೆಯಂಗಡಿಯಲ್ಲಿರೋ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರುಗಿದೆ.

ಸೆಪ್ಟೆಂಬರ್ 17 ರಂದು ನಡೆದಿದ್ದ ಯುವಜನ ಕ್ರೀಡಾ ಸೇವಾ ಇಲಾಖೆ ಮಂಗಳೂರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಜರುಗಿದ್ದು, ಟೊರ್ಪೆಡೋಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿಯರು 3-0 ಅಂತರದಲ್ಲಿ ಚೈತನ್ಯ ಟೆಕ್ನೋ ಪಾರ್ಕ್ ಶಾಲಾ ತಂಡವನ್ನು ಸೋಲಿಸಿ,ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅದೇ ರೀತಿ ವಿಭಾಗೀಯ ಮಟ್ಟದ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾಟ ಟೊರ್ಪೆಡೋಸ್ ಸಂಸ್ಥೆಯಲ್ಲಿ ಸೆಪ್ಟೆಂಬರ್ 22 ರಂದು ಜರುಗಿದ್ದು ಮಂಗಳೂರು, ಉಡುಪಿ, ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ, ಕೊಡಗು ಹಾಗೂ ಚಿಕ್ಕ ಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಯುವಜನ ಕ್ರೀಡಾ ಸೇವಾ ಇಲಾಖೆ ಮಂಗಳೂರಿನ ಜಿಲ್ಲಾ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜಾ ,ಅಸಿಸ್ಟೆಂಟ್ ಕ್ರೀಡಾಧಿಕಾರಿ ಲಿಲ್ಲಿ ಡಿಸೋಜಾ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಜರುಗಿದ್ದು ವಿಭಾಗೀಯ ಮಟ್ಟದ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಉಡುಪಿ ವಿರುದ್ಧ ಸೆಣಸಾಡಿದ ಮಂಗಳೂರು ಜಿಲ್ಲಾ ವಿದ್ಯಾರ್ಥಿನಿಯರು 3-0 ಅಂತರದಲ್ಲಿ ಉಡುಪಿಯನ್ನು ಸೋಲಿಸಿ ಮೈಸೂರು ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ತಂದೆಯೇ ಕೋಚ್ : ಕುಮಾರಿ ಪ್ರಶಸ್ತಿ ಶೆಟ್ಟಿ ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿಯವರ ಪುತ್ರಿಯಾಗಿದ್ದು,”ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಈಗಾಗಲೇ ಟೇಬಲ್ ಟೆನ್ನಿಸ್ ಪಂದ್ಯಾಕೂಟಗಳಲ್ಲಿ, ದಸರಾ ರಾಜ್ಯ ಮಟ್ಟದ 5 ಚಿನ್ನದ ಪದಕಗಳನ್ನು ಗೆದ್ದು, 4 ಬಾರಿ ಕ್ಲಸ್ಟರ್ ಮಟ್ಟದಲ್ಲಿ 8 ಬಾರಿ ರಾಜ್ಯಮಟ್ಟದಲ್ಲಿ ಪದಕಗಳಿಸಿದ್ದು, CBSE ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಲ್ಲಿ  ಹಲವಾರು ಪ್ರಶಸ್ತಿಗಳನ್ನು ಪಡೆದು ವಿದ್ಯಾ ಸಂಸ್ಥೆ ಹಾಗೂ ಟೊರ್ಪೆಡೋಸ್ ಸಂಸ್ಥೆಗೂ ಕೀರ್ತಿ ತಂದಿರುತ್ತಾಳೆ. ಈಕೆಗೆ ತಂದೆಯೇ ಕೋಚ್.

ಜೊತೆಯಾಗಿ ಪುತ್ರ ಪ್ರಥಮ್ ಕೂಡ ಟೇಬಲ್ ಟೆನ್ನಿಸ್ ನಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಶಾಲಾ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕರಿಸಲ್ಪಟ್ಟಿರುತ್ತಾನೆ. ಟೊರ್ಪೆಡೋಸ್ ಸಂಸ್ಥೆಯಲ್ಲಿ ದಿನ ಬೆಳಗಾದರೆ ಕಠಿಣ ಅಭ್ಯಾಸ ನಡೆಸಿ, ಹುರಿದುಂಬಿಸುವ ಕಾಯಕದಲ್ಲಿ ತಂದೆ ಕೋಚ್ ಹಾಗೂ ಮೆಂಟರ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಗೌತಮ್ ಶೆಟ್ಟಿಯವರು ಕ್ರಿಕೆಟ್, ಟೇಬಲ್ ಟೆನ್ನಿಸ್, ಷಟಲ್ ಹೀಗೆ ಹಲವಾರು ಕ್ರೀಡೆಗಳಲ್ಲಿ ಉನ್ನತ ಮಟ್ಟದ ಸಾಧನೆಗೈದಿದ್ದು,ತಂದೆಯ ಹಾದಿ ಹಿಡಿದಿರುವ ಮಗಳು ಮುಂದಿನ ದಿನಗಳಲ್ಲಿ ರಾಜ್ಯ,ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವ ಸೂಚನೆಯನ್ನು ನೀಡಿರುತ್ತಾರೆ.

ಮೈಸೂರು ರಾಜ್ಯ ಮಟ್ಟದ ಪಂದ್ಯಾಕೂಟಕ್ಕಾಗಿ ಮಂಗಳೂರು ವಿಭಾಗವನ್ನು ಪ್ರತಿನಿಧಿಸುತ್ತಿರುವ, ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಈ ಮೂವರಿಗೂ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ವತಿಯಿಂದ ಶುಭಾಶಯಗಳು.ಗೆದ್ದು ಬನ್ನಿ…

https://youtu.be/TMJ6rTjQbSM

https://youtu.be/TMJ6rTjQbSM

– ಆರ್.ಕೆ.ಆಚಾರ್ಯ ಕೋಟ

Categories
ಗ್ರಾಮೀಣ ಸ್ಪೋರ್ಟ್ಸ್

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಪವರ್‌ ಲಿಫ್ಟರ್‌ ವಿಶ್ವನಾಥ ಗಾಣಿಗ ಅವರಿಗೆ ಅದ್ಧೂರಿ ಸ್ವಾಗತ

ಕುಂದಾಪುರ : ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಭಾರ ಎತ್ತುವ ಸ್ಪರ್ಧೆಯಲ್ಲಿ ನೂತನ ದಾಖಲೆ ನಿರ್ಮಿಸಿ ಅಂತರರಾಷ್ಟ್ರೀಯ ಮಟ್ಟದ 2 ಚಿನ್ನ ಹಾಗೂ 2 ಬೆಳ್ಳಿ ಪದಕ ವಿಜೇತರಾಗಿ ಗುರುವಾರ ಹುಟ್ಟೂರಿಗೆ ಬಂದ ಪವರ್‌ ಲಿಫ್ಟರ್‌ ವಿಶ್ವನಾಥ ಗಾಣಿಗ ಅವರಿಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು.

ಮಧ್ಯಾಹ್ನ 3 ಗಂಟೆಗೆ ಸಾಲಿಗ್ರಾಮಕ್ಕೆ ಬಂದ ಅವರು, ಇಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರನ್ನು ಅಲಂಕೃತ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ತಂದೆ ಭಾಸ್ಕರ ಗಾಣಿಗ ಹಾಗೂ ತಾಯಿ ಪದ್ಮಾವತಿ ಗಾಣಿಗ ಪುತ್ರನಿಗೆ ಸಾಥ್‌ ನೀಡಿದರು. ಸಾಲಿಗ್ರಾಮದಿಂದ ಕುಂದಾಪುರದ ಕಡೆಗೆ ಬಂದ ಮೆರವಣಿಗೆಯನ್ನು ಕೋಟ, ತೆಕ್ಕಟ್ಟೆ ಹಾಗೂ ಬೀಜಾಡಿಯಲ್ಲಿ ಬರಮಾಡಿಕೊಂಡ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಾಣಿಗ ಸಮಾಜ ಬಂಧುಗಳು ಹಾಗೂ ಸಾರ್ವಜನಿಕರು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ತಾಲ್ಲೂಕು ಗಾಣಿಗ ಸಮಾಜ ಹಾಗೂ ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಪರವಾಗಿ ಅವರಿಗೆ 50,000 ನಗದು ಹಾಗೂ ಅಭಿನಂದನಾ ಪತ್ರವನ್ನು ನೀಡಲಾಯಿತು.

ಚೆಂಡೆ, ಪಟಾಕಿ, ವಾದ್ಯ ಮೇಳಗಳೊಂದಿಗೆ ಕುಂದಾಪುರ ನಗರದಲ್ಲಿ ಸಾಗಿ ಬಂದ ಪದಕವೀರನ ಮೆರವಣಿಗೆಯನ್ನು ಬರಮಾಡಿಕೊಂಡ ವಿವಿಧ ಸಂಘಟನೆಯ ಪ್ರತಿನಿಧಿಗಳು ಅಲಲ್ಲಿ ಸ್ವಾಗತ ನೀಡಿ, ಸನ್ಮಾನಿಸಿ ಸಂತಸ ವ್ಯಕ್ತಪಡಿಸಿದರು. ಹೂವಿನ ಮಾರಾಟಗಾರರು, ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ತಲ್ಲೂರು ಹಾಗೂ ಹೆಮ್ಮಾಡಿಯಲ್ಲಿಯೂ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಅದ್ದೂರಿಯ ಸ್ವಾಗತ ಕೋರಿದರು.

Categories
ಟೆನಿಸ್ ಸ್ಪೋರ್ಟ್ಸ್

“ಜರ್ಮನ್ ಸಿಂಹಿಣಿ ಸ್ಟೆಫಿಗ್ರಾಫ್ ಆರ್ಭಟ”

ಟೆನ್ನಿಸ್‌ ಟೂರ್ನಿಗಳ ಫೈನಲ್‌ಗಳು ಸಾಮಾನ್ಯವಾಗಿ ಜಿದ್ದಾಜಿದ್ದಿನ ಕಾದಾಟಗಳೇ. ಅದರಲ್ಲೂ ಅಗ್ರಶ್ರೇಯಾಂಕಿತ ಆಟಗಾರರಾದರೇ ಗಂಟೆಗಟ್ಟಲೆಗಳ ಕಾದಾಟ ಸಾಮಾನ್ಯ.ಆದರೆ ಆಟಗಾರರ ಪೈಕಿ ಒಬ್ಬರು ಅದ್ಭುತ ಫಾರ್ಮ‌ನಲ್ಲಿದ್ದು ಇನ್ನೊಬ್ಬರಿಗೆ ಅನುಭವ ಸಾಲದಾದರೇ ಏನಾಗುತ್ತದೆ..?

1988ರ ಮಹಿಳೆಯರ ಫ್ರಂಚ್ ಓಪನ್ ಫೈನಲ್ ಆಗುತ್ತದೆ.ಅಗ್ರಶ್ರೇಯಾಂಕಿತ ಜರ್ಮನಿಯ ಸ್ಟೆಫಿಗ್ರಾಫ್ ,ಆಗಷ್ಟೇ ವೃತ್ತಿಪರಳಾಗಿದ್ದ ಅನಿರೀಕ್ಷಿತವಾಗಿ ಫೈನಲ್ ಪ್ರವೇಶಿಸಿದ್ದ ಬೆಲಾರೂಸ್‌ನ ನತಾಶಾ ಜ್ವರೇವಾ ನಡುವಣದ ಕಾದಾಟವದು.ಎಲ್ಲ ಟೆನ್ನಿಸ್ ಪ್ರಿಯರಿಗೂ ಗೆಲುವು ಯಾರದೆನ್ನುವ ಕುತೂಹಲವಿತ್ತು. ಮತ್ತೊಬ್ಬ ದಂತಕತೆ ಮಾರ್ಟಿನಾ ನವ್ರಾಟಿಲೋವಾರನ್ನು ಸೋಲಿಸಿ ಫೈನಲ್‌ಗೇರಿದ್ದ ನತಾಶಾ ,ಅಗ್ರಶ್ರೇಯಾಂಕಿತಳಿಗೆ ಭಯಂಕರ ಪೈಪೋಟಿ ನೀಡಳಿದ್ದಾಳೆ ಎನ್ನುವುದು ಅನೇಕರ ಲೆಕ್ಕಾಚಾರವಾಗಿತ್ತು. ಆದರೆ ನಡೆದ ಕತೆಯೇ ಬೇರೆ.ಜರ್ಮನ್ ಸಿಂಹಿಣಿ ಸ್ಟೆಫಿಯದ್ದು ಅಕ್ಷರಶ ಜಿಂಕೆಬೇಟೆ.ನೇರವಾಗಿ 6 – 0,6-0ಯಿಂದ ನತಾಶಾಳನ್ನು ಮಣಿಸಲು ಗ್ರಾಫ್ ತೆಗೆದುಕೊಂಡ ಕಾಲಾವಧಿ ಕೇವಲ 34 ನಿಮಿಷಗಳು ಮಾತ್ರ. ಇವತ್ತಿಗೂ ಟೆನ್ನಿಸ್ ಲೋಕದ ಅತ್ಯಂತ ಕಡಿಮೆ ಕಾಲಾವಧಿಯ ಫೈನಲ್ ಎಂಬ ಕೀರ್ತಿ ಹೊಂದಿರುವ ಈ ದಾಖಲೆಯನ್ನು ಮುರಿಯುವುದು ಯಾರಿಗೂ ಸಾಧ್ಯವಾಗಲಿಲ್ಲ. ದುರದೃಷ್ಟವೆಂದರೆ ಅಂತದ್ದೊಂದು ಸೋಲು ನತಾಶಾಳ ಆತ್ಮವಿಶ್ವಾಸವನ್ನು ದಯನೀಯವಾಗಿ ನೆಲಕಚ್ಚಿಸಿಬಿಟ್ಟಿತ್ತು.

ಮುಂದೆ ಆಕ ಸಿಂಗಲ್ಸ್ ಆಡಲೇ ಇಲ್ಲ. ಅವತ್ತಿಗೆ ಸ್ಟೆಫಿ ಗ್ರಾಫ್ ಅದ್ಯಾವ ಪರಿಯ ವೃತ್ತಿಜೀವನದ ಉತ್ತುಂಗದಲ್ಲಿದ್ದರೆಂದರೆ 1988ರ ನಾಲ್ಕು ಗ್ರಾಂಡ್‌ಸ್ಲಾಮ್‌ ಗೆದ್ದಿದ್ದಲ್ಲದೇ ,ಅದೇ ವರ್ಷದ ಒಲಿಂಪಿಕ್ಸ್‌ನ ಚಿನ್ನದ ಪದಕ ಗೆದ್ದು ಏಕವಾರ್ಷಿಕ ಗೋಲ್ಡನ್ ಸ್ಲಾಮ್ ಸಾಧನೆಗೈದ ಟೆನ್ನಿಸ್ ಲೋಕದ ಏಕೈಕ ಕ್ರೀಡಾಳು ಎಂಬ ಕೀರ್ತಿ ಸಾಧಿಸಿದರು.ಇಂಥದ್ದೊಂದು ಸಾಧನೆಯನ್ನು ಪುರುಷರಲ್ಲಿಯೂ ಒಬ್ಬರು ಮಾಡಿಲ್ಲವೆನ್ನುವುದು ಗಮನಾರ್ಹ.


-ಗುರುರಾಜ್ ಕೊಡ್ಕಣಿ ಯಲ್ಲಾಪುರ

Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ವಿಜ್-2019, ರಾಷ್ಟ್ರೀಯ ಕ್ರೀಡಾದಿನಾಚರಣೆ ಸಂಭ್ರಮ

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನಾಚರಣೆಯ ಪ್ರಯುಕ್ತ ದೇಶದಾದ್ಯಂತ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾದಿನಾಚರಣೆಯ ಅಂಗವಾಗಿ, ಕಳೆದ 4 ದಶಕಗಳಿಂದ ಕ್ರೀಡಾ ಕೃಷಿಯಲ್ಲಿ ಸತತ ನಿರತವಾಗಿರುವ ಸಂಸ್ಥೆ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ಈ ಬಾರಿ DigFlick(Insurance) ಪ್ರಾಯೋಜಕತ್ವದಲ್ಲಿ,ಗುರುವಾರದಂದು ಹಳೆಯಂಗಡಿಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ವಿಜ್-2019″ಆಯೋಜಿಸಲಾಗಿತ್ತು.

ದೇಶದಾದ್ಯಂತ ಹಲವಾರು ಯಶಸ್ವಿ ಕ್ವಿಜ್ ಕಾರ್ಯಕ್ರಮಗಳನ್ನು ನೀಡಿದ ಪ್ರಸಿದ್ಧ ಕ್ವಿಜ್ ಮಾಸ್ಟರ್,ಪ್ರೇರಕ ಭಾಷಣಕಾರ,ತರಬೇತುದಾರ,ನುರಿತ‌ ಕ್ರೀಡಾತಜ್ಞ, ಮಿ‌‌.ರಂಜನ್ ನಗರಕಟ್ಟೆಯವರು‌ ದೂರದ‌ ಮುಂಬಯಿಯಿಂದ ಆಗಮಿಸಿದ್ದರು. ಕ್ರೀಡೆಗಳ ವೈವಿಧ್ಯತೆಯ ಪರಿಚಯ ನೀಡುತ್ತಾ, ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಮಾಜಿ ಕ್ರೀಡಾ ಸಚಿವ,ಮೂಡಬಿದಿರೆಯ ಶಾಸಕ ಅಭಯಚಂದ್ರ ಜೈನ್ ರವರಿಂದ ಉದ್ಘಾಟಿಸಲ್ಪಟ್ಟ ಈ ಕ್ವಿಜ್ ಕಾರ್ಯಕ್ರಮದಲ್ಲಿ 37 ಶಾಲಾ ತಂಡಗಳು ಭಾಗವಹಿಸಿದ್ದು ,ಅದರಲ್ಲಿ 10 ಬೆಸ್ಟ್ ತಂಡಗಳನ್ನು ಆಯ್ಕೆಯಾಗಿ,4 ತಂಡಗಳು ಫೈನಲ್ ಪ್ರವೇಶಿಸಿದವು.

ಲಿಖಿತ ರೌಂಡ್ಸ್ ನಲ್ಲಿ ಅತ್ಯಧಿಕ ಅಂಕಗಳಿಸಿದ 2 ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಿದವರು
ರಿಕಿ ರೋಜರ್ ಮತ್ತು ಮ್ಯಾಥ್ಯೂ (ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)
ಲಾರ್ಡ್ಸನ್ ಮತ್ತು ನಿಖಿಲ್ (ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)

ಮೊದಲ ಸೆಮಿಫೈನಲ್:

ಪ್ರಣಮ್ಯ ಹಾಗೂ ಕೃತಿ
(ಸೈಂಟ್ ಅ್ಯಾಗ್ನೆಸ್ ಸ್ಕೂಲ್)
ಅನಿಕೇತ್ ಹಾಗೂ ಚಿನ್ಮಯ್ ಎಚ್.ಜಿ
(ಲಿಟ್ಲ್‌ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ)
ಪ್ರಥಮೇಶ್ ಹಾಗೂ ಮೋಕ್ಷಿತ್
(ದಿಲ್ಲಿ ಪಬ್ಲಿಕ್ ಸ್ಕೂಲ್)
ಹಿಮಾಂಕ್ ಪಾಂಡೆ ಹಾಗೂ ಅನುಷ್ಕಾ ಸಿಂಗ್
(ದಿಲ್ಲಿ ಪಬ್ಲಿಕ್ ಸ್ಕೂಲ್)

ಎರಡನೇ ಸೆಮಿಫೈನಲ್:

ಸಮರ್ಥ್ ಹಾಗೂ ರೋಶ್
(ಸಿದ್ಧಿ ವಿನಾಯಕ ಸ್ಕೂಲ್ ಹಟ್ಟಿಯಂಗಡಿ)
ದಿವ್ಯಾ ಅಮೀನ್ ಹಾಗೂ ಶ್ರೀ ಲಕ್ಷ್ಮೀ
(ದಿಲ್ಲಿ ಪಬ್ಲಿಕ್ ಸ್ಕೂಲ್)
ರಕ್ಷಿತ್.ಜಿ.ಮಲ್ಯ ಹಾಗೂ ಅಂಕಿತ್ ಕಿಣಿ
(ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್)
ಮುರಳೀಧರ್ ರಾವ್ ಹಾಗೂ ಗಣೇಶ್ ಭಟ್
(ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ)

ಫೈನಲ್ ಫಲಿತಾಂಶ:
ಪ್ರಥಮ-
ಲಾರ್ಡ್ಸನ್ ಮತ್ತು ನಿಖಿಲ್
(ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)
ದ್ವಿತೀಯ-
ರಿಕಿ ರೋಜರ್ ಮತ್ತು ಮ್ಯಾಥ್ಯೂ
(ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)
ತೃತೀಯ-
ಪ್ರಣಮ್ಯ ಮತ್ತು ಕೃತಿ
(ಸೈಂಟ್ ಅ್ಯಾಗ್ನೆಸ್ ಸ್ಕೂಲ್ ಮಂಗಳೂರು)
ಚತುರ್ಥ ಸ್ಥಾನಿ-
ದಿವ್ಯಾ ಅಮೀನ್ ಹಾಗೂ ಶ್ರೀ ಲಕ್ಷ್ಮೀ
(ದಿಲ್ಲಿ ಪಬ್ಲಿಕ್ ಸ್ಕೂಲ್ M.R.P.L)

ಸೀನಿಯರ್ಸ್ ವಿಭಾಗದ ವಿಜೇತರು :
ಪ್ರಥಮ -5000,ದ್ವಿತೀಯ-3000,ತೃತೀಯ-2000 ನಗದು ಹಾಗೂ

ಜ್ಯೂನಿಯರ್ಸ್ ವಿಭಾಗದ ವಿಜೇತರು :
ಪ್ರಥಮ-3000,ದ್ವಿತೀಯ-2000 ತೃತೀಯ-1000 ನಗದು ಬಹುಮಾನ ಪಡೆದರು.

ವಿಜೇತರಿಗೆ ಕ್ವಿಜ್ ಮಾಸ್ಟರ್ ಮಿ.ರಂಜನ್ ನಗರಕಟ್ಟೆಯವರು ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ, ಪದಕಗಳನ್ನು ನೀಡಿ ಪುರಸ್ಕರಿಸಿ, ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ವಿತರಿಸಿದರು. ಕ್ವಿಜ್ ಕಾರ್ಯಕ್ರಮಕ್ಕೆ ಅಗತ್ಯ ಪರಿಕರಗಳನ್ನು ಗಣೇಶ್ ಕಾಮತ್ ನೇತೃತ್ವದ “ಸ್ಪೋರ್ಟ್ಸ್ ಡೆನ್ ಈವೆಂಟ್” ಸಂಸ್ಥೆ ಪೂರೈಸಿತ್ತು.

ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ವಿಜೇತರನ್ನು ಅಭಿನಂದಿಸಿದರು, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ,ಸಂಸ್ಥೆಯ ಉಪಾಧ್ಯಕ್ಷ ನಾಗಭೂಷಣ್ ರೆಡ್ಡಿ ಉಪಸ್ಥಿತರಿದ್ದರು.

ಅಶ್ವಿನ್ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರೆ,ಮೆನೇಜರ್ ಕೆ.ಪಿ.ಸತೀಶ್,ಕೋಚ್ ಸಂತೋಷ್ ಖಾರ್ವಿ,ಭಾಗ್ಯರಾಜ್,ಪ್ರಜ್ವಲ್ ಕುಳಾಯಿ,ದೀಪಕ್ ಕೋಟ್ಯಾನ್, ಕಾರ್ತಿಕ್,ಸಂಪತ್,ಚರಣ್, ನವನೀತ್,ತೇಜಸ್ ಹಾಗೂ ರಾಘವೇಂದ್ರ ಸಹಕರಿಸಿದರು.

ಕಾರ್ಯಕ್ರಮದ ನೇರ ಪ್ರಸಾರವನ್ನು ಕ್ರಿಕ್ ಸೇ ಯೂಟ್ಯೂಬ್ ಚಾನೆಲ್ ಬಿತ್ತರಿಸಿತ್ತು.

ಆರ್.ಕೆ‌.ಆಚಾರ್ಯ ಕೋಟ

Categories
ಸ್ಪೋರ್ಟ್ಸ್

ಕ್ರೀಡೆಯಿಂದ ಮಾನಸಿಕ ಸಧೃಡತೆ ಸಾಧ್ಯ ಜೊತೆಗೆ ಕ್ರೀಡಾ ಜ್ಞಾನವನ್ನು ಬೆಳೆಸಿಕೊಳ್ಳಬೇಕು : ಮಾಜಿ ಶಾಸಕ ಅಭಯಚಂದ್ರ ಜೈನ್

ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕ್ಲಬ್ ಇವರ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಡಿಗ್ ಫ್ಲಿಕ್ (ವಿಮೆ) ಪ್ರಾಯೋಜಕತ್ವದಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ವಿಜ್-2019 ಸಮಾರಂಭ ಹಳೆಯಂಗಡಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕ್ವಿಜ್-2019 ಸಮಾರಂಭವನ್ನು ಮೂಡಬಿದಿರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ಉದ್ಘಾಟಿಸಿ, ಕ್ರೀಡೆಯಿಂದ ಮಾನಸಿಕ ಸಧೃಡತೆ ಸಾಧ್ಯ ಜೊತೆಗೆ ಕ್ರೀಡಾ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ದಿನದ ಮಹತ್ವವನ್ನು ವಿವರಿಸಿದರು. ಪ್ರಧಾನಿಯವರು ಕರೆ ಕೊಟ್ಟ “ಫಿಟ್ ಇಂಡಿಯಾ” ಅಭಿಯಾನದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು.ಈ ನಿಟ್ಟಿನಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಸಾಧನೆ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಮುಖ್ಯಸ್ಥ ಗೌತಮ್ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು.

ಮುಖ್ಯಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀಮತಿ ಪ್ರತಿಭಾ ಕುಳಾಯಿ, ಟೊರ್ಪೆಡೋಸ್ ಕ್ಲಬ್ಉಪಾಧ್ಯಕ್ಷರು ನಾಗಭೂಷಣ್ ರೆಡ್ಡಿ ಉಪಸ್ಥಿತರಿದ್ದರು.

ಈ ಸ್ಪರ್ಧೆಯಲ್ಲಿ ವಿವಿಧ ಶಾಲಾ,ಕಾಲೇಜುಗಳಿಂದ ಜ್ಯೂನಿಯರ್ಸ್ (ಎಸ್.ಎಸ್.ಎಲ್.ಸಿ ವರೆಗಿನ ವಿದ್ಯಾರ್ಥಿಗಳು) ಸೀನಿಯರ್ಸ್(ಪದವೀಧರರು) ಹೀಗೆ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಮುಂಬಯಿಯ ಪ್ರಸಿದ್ಧ ಕ್ವಿಜ್ ಮಾಸ್ಟರ್ ಒಡಿ.ರಂಜನ್ ನಗರಕಟ್ಟೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಟೊರ್ಪೆಡೋಸ್ ಕ್ಲಬ್ ಮ್ಯಾನೇಜರ್ ಕೆ.ಪಿ.ಸತೀಶ್ ಸ್ವಾಗತಿಸಿದರು. ಅಶ್ವಿನ್ ಪಡುಕೋಣೆ ಕಾರ್ಯಕ್ರಮವನ್ನು ನಿರ್ವವಹಿಸಿ, ವಂದಿಸಿದರು.

ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ, ಭಾಗ್ಯರಾಜ್, ಪ್ರಜ್ವಲ್ ಕುಳಾಯಿ, ದೀಪಕ್ ಕೋಟ್ಯಾನ್, ಕಾರ್ತಿಕ್,ಸಂಪತ್ ಚರಣ್, ನವನೀತ್, ತೇಜಸ್, ರಾಘವೇಂದ್ರ ಸಹಕರಿಸಿದರು.

ಕ್ರಿಕ್ ಸೇ ಯೂಟ್ಯೂಬ್ ಚಾನೆಲ್ ಈ ಕಾರ್ಯಕ್ರಮದ ನೇರ ಪ್ರಸಾರ ಬಿತ್ತರಿಸಿತ್ತು.

ವರದಿ : ಆರ್.ಕೆ.ಆಚಾರ್ಯ ಕೋಟ

Categories
ಸ್ಪೋರ್ಟ್ಸ್

ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ವೃತ್ತಿಪರ ಶಿಕ್ಷಕರ ಯಶಸ್ವಿ‌ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಫಲಿತಾಂಶ

ಹಳೆಯಂಗಡಿ : ಕ್ರೀಡೆ ಹಾಗೂ ಕ್ರೀಡಾಭಿಮಾನಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಅತಿ ಹೆಚ್ಚು ಮುತುವರ್ಜಿ ವಹಿಸುತ್ತಿರುವ ಸಂಸ್ಥೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ.

ಟೆನ್ನಿಸ್ ಕ್ರಿಕೆಟ್ ನಲ್ಲಿ ಎರಡೂವರೆ ದಶಕಗಳ ಅದ್ವಿತೀಯ ಇತಿಹಾಸ ಬರೆದ ಈ ಸಂಸ್ಥೆ,ಬಳಿಕ ಲೆದರ್ ಬಾಲ್ ಕ್ರಿಕೆಟ್,ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್,ಷಟಲ್ ಬ್ಯಾಡ್ಮಿಂಟನ್ ಹೀಗೆ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತ ಬಂದಿರುತ್ತದೆ.

ಶಾಲಾ ಕಾಲೇಜುಗಳಿಂದ ಪ್ರಾರಂಭವಾಗಿ ವೃತ್ತಿಪರ ಕ್ರೀಡಾಪಟುಗಳನ್ನು ಗುರುತಿಸುತ್ತಿರುವ ಸಂಸ್ಥೆ ಆಗಸ್ಟ್ 18 ರಂದು ವೃತ್ತಿಪರ ಶಿಕ್ಷಕರಿಗಾಗಿ ಅಂತರ್ ಜಿಲ್ಲಾ ವೃತ್ತಿಪರ ಶಿಕ್ಷಕರಿಗಾಗಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಆಯೋಜಿಸಿತ್ತು.ವಿವಿಧ ಶಾಲಾ,ಕಾಲೇಜುಗಳಿಂದ 48 ಸ್ಪರ್ಧಿಗಳು ಭಾಗವಹಿಸಿದ್ದರು.

ಫಲಿತಾಂಶದ ವಿವರ. :
ಪುರುಷರ ಡಬಲ್ಸ್ ವಿಜೇತರು ಪ್ರಥಮ-ದೀಕ್ಷಿತ್ ಹಾಗೂ ಪ್ರಜ್ನೇಶ್, ದ್ವಿತೀಯ-ಕುಮಾರ್ ಹಾಗೂ ಅರುಣ್ ಬ್ಯಾಪ್ಟಿಸ್ಟ್.

ಮಹಿಳೆಯರ ಸಿಂಗಲ್ಸ್ ವಿಜೇತರು : ಪ್ರಥಮ-ರಶ್ಮಿ, ದ್ವಿತೀಯ-ಬಬಿತಾ.

ಪುರುಷರ ಸಿಂಗಲ್ಸ್ ವಿಜೇತರು ಪ್ರಥಮ-ಪ್ರಜ್ನೇಶ್, ದ್ವಿತೀಯ-ದೀಕ್ಷಿತ್.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ನಿರ್ದೇಕರಾದ ಡಾ.ಕಿಶೋರ್ ಕುಮಾರ್,ವಿದ್ಯಾರಶ್ಮಿ ಪಬ್ಲಿಕ್ ಸ್ಕೂಲ್ ಸವಣೂರಿನ ಮೆನೇಜಿಂಗ್ ಡೈರೆಕ್ಟರ್ ಅಶ್ವಿನ್ ಶೆಟ್ಟಿ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ,ಸ್ಪೋರ್ಟ್ಸ್ ಡೆನ್ ಈವೆಂಟ್ ನ ಪ್ರಧಾನ ರೂವಾರಿ ಗಣೇಶ್ ಕಾಮತ್,ಟೊರ್ಪೆಡೋಸ್ ಕ್ಲಬ್ ನ ಉಪಾಧ್ಯಕ್ಷ ನಾಗಭೂಷಣ್ ರೆಡ್ಡಿ,ಮೆನೇಜರ್ ಕೆ.ಪಿ.ಸತೀಶ್,ರಾಘವೇಂದ್ರ,ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ,ಕಾರ್ತಿಕ್ ಹಾಗೂ ಸಂಪತ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.

ಆರ್.ಕೆ.ಆಚಾರ್ಯ ಕೋಟ