Categories
ಟೆನಿಸ್ ಬ್ಯಾಡ್ಮಿಂಟನ್

15/30/40/ಗೇಮ್ ಟೆನ್ನಿಸ್ ಅಂಕಿ-ಅಂಶಗಳ ಸ್ವಾರಸ್ಯ

ನೀವು ಟೆನ್ನಿಸ್ ಆಟದ ಅಭಿಮಾನಿಯಾಗಿದ್ದರೆ ಅಥವಾ ಕನಿಷ್ಟ ಒಂದೆರಡು ಬಾರಿ ಟೆನ್ನಿಸ್ ನೋಡಿದ್ದರೆ ನೀವಿದನ್ನು ಗಮನಿಸಿರುತ್ತೀರಿ.ಆಟಗಾರನೊಬ್ಬ ಅಂಕ ಪಡೆದಾಗ ಅದನ್ನು ಒಂದು ಪಾಯಿಂಟ್ ಎನ್ನದೇ 15 ಎನ್ನಲಾಗುತ್ತದೆ. ಅದೇ ಆಟಗಾರ ಪಡೆಯುವ ಎರಡನೇ ಅಂಕವನ್ನು 30 ಎಂದು ಮತ್ತು ಮೂರನೆ ಅಂಕವನ್ನು 40 ಎಂದು ಘೋಷಿಸಲಾಗುತ್ತದೆ.ನಂತರದ್ದು ಕೊನೆಯ ಅಂಕವಾಗಿದ್ದರೆ ಆಟಗಾರ ಒಂದು ಗೇಮ್ ಗೆದ್ದುಕೊಳ್ಳುತ್ತಾನೆ.

ವಿಚಿತ್ರವೆಂದರೆ ಹೀಗೆ ಗೇಮ್‌ಗಳನ್ನು ನಿರ್ಧರಿಸುವ ಅಂಕಗಳನ್ನೇಕೆ 15,30 40 ಎಂದು ಗುರುತಿಸಲಾಗುತ್ತದೆ,ಯಾಕೆ ನೇರವಾಗಿ ಒಂದು ಎರಡು ಮೂರು ಎಂಬ ಅಂಕಿಗಳಲ್ಲಿ ಗುರುತಿಸಲಾಗುವುದಿಲ್ಲ ಎನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಟೆನ್ನಿಸ್ ಪಂಡಿತರ ಬಳಿಯೂ ಇಲ್ಲದಿರುವುದು ವಿಶೇಷ.ಈ ಕುರಿತು ತುಂಬ ಚಾಲ್ತಿಯಲ್ಲಿರುವ ಒಂದು ಪ್ರಸಿದ್ದ ಕತೆಯೆಂದರೆ ಹೀಗೆ ಅಂಕ ಕೊಡುವ ಪದ್ದತಿ ಮೊದಲು ಶುರುವಾಗಿದ್ದು ಮಧ್ಯಕಾಲೀನ ಫ್ರಾನ್ಸ್‌ನಲ್ಲಿ.ಟೆನ್ನಿಸ್ ಪಂದ್ಯಗಳ ವೇಳೆ ಅಂಕಗಳನ್ನು ದಾಖಲಿಸಲು ಕೃತಕ ಗಡಿಯಾರದಂತಹ ಮಾಪಕವೊಂದನ್ನು ಇರಿಸಿಕೊಳ್ಳಲಾಗುತ್ತಿತ್ತು.

ಮೊದಲ ಅಂಕ ಗಳಿಸಿದಾಗ ಗಡಿಯಾರದ ಮುಳ್ಳನ್ನು ಕಾಲುಗಂಟೆಗೆ ತಿರುಗಿಸಲಾಗುತ್ತಿತ್ತು.ಎರಡನೇ ಅಂಕ ಗಳಿಸಿದಾಗ ಅರ್ಧಗಂಟೆಗೂ ಮೂರನೇ ಅಂಕಗಳಿಸಿದಾಗ ಮುಕ್ಕಾಲುಗಂಟೆಗೂ ಮತ್ತು ನಾಲ್ಕನೆ ಮತ್ತು ಕೊನೆಯ ಅಂಕಕ್ಕೆ ಪೂರ್ತಿ ಒಂದು ಸುತ್ತು ಸುತ್ತಿ ಒಂದು’ ಗೇಮ್’ ಎಂದು ಗುರುತಿಸಲಾಗುತ್ತಿತ್ತು.ಇದು ಸರಿಯಾಗಿತ್ತಾದರೂ ಸಮಸ್ಯೆಯಾಗಿದ್ದು ಮೂರನೇ ಅಂದರೆ 45 ಎಂಬ ಅಂಕ ಗಳಿಕೆಯ ಸಮಯದಲ್ಲಿ.

ಟೆನ್ನಿಸ್ ಆಟದ ನಿಯಮಗಳ ಪ್ರಕಾರ ಎದುರಾಳಿಯೊಬ್ಬ ಒಂದು ಗೇಮ್ ಅಥವಾ ಒಂದು ಸೆಟ್ ಎನ್ನುವುದನ್ನು ಕೇವಲ ಒಂದೇ ಒಂದು ಅಂಕಗಳ ವ್ಯತ್ಯಾಸದಲ್ಲಿ ಗೆಲ್ಲುವುದು ಸಾಧ್ಯವಿಲ್ಲ.ಕನಿಷ್ಟ ಎರಡು ಅಂಕಗಳ ವ್ಯತ್ಯಾಸವಿರದೇ ಜಯ ಅಸಾಧ್ಯ.ಆ ಕಾರಣಕ್ಕೆ ಪರಸ್ಪರ ಎದುರಾಳಿಗಳು 45 – 45 ಅಂಕಗಳನ್ನು ಗಳಿಸಿದಾಗ ಗಡಿಯಾರವನ್ನು ಮುಂದೆ ಎರಡು ಬಾರಿ ತಿರುಗಿಸಲೇಬೇಕು.ಅಲ್ಲಿ ಶುರುವಾಗಿತ್ತು ಅಸಲಿ ಸಮಸ್ಯೆ.45 ರ ನಂತರ ಉಳಿದ 15 ನಿಮಿಷವನ್ನು ಎರಡು ಸಮಭಾಗಗಳನ್ನಾಗಿ ಸುಲಭಕ್ಕೆ ವಿಭಾಗಿಸುವುದು ಕಷ್ಟವೆನ್ನಿಸಿತ್ತು.

ಹಾಗಾಗಿ ಕೊಂಚ ಯೋಚಿಸಿ ತಲೆಯೋಡಿಸಿದ ಅಂದಿನ ಪಂಡಿತರು ಅಂಕ ಪದ್ದತಿಯಲ್ಲಿ ಸಣ್ಣದ್ದೊಂದು ಮಾರ್ಪಾಡು ತಂದರು.ಮೂರನೇಯ ಅಂಕದ ವೇಳೆಗೆ ಗಡಿಯಾರದ ಮುಳ್ಳನ್ನು 40ಕ್ಕೆ ತಂದು ನಿಲ್ಲಿಸುವ ಹೊಸ ಕ್ರಮ ಜಾರಿಗೆ ತಂದುಬಿಟ್ಟರು.ಮುಂದಿನ ಅಂಕದ ವೇಳೆಗೆ ಮುಳ್ಳನ್ನು 50ಕ್ಕೆ ತಂದು ನಿಲ್ಲಿಸಿ ಅಂತಿಮವಾಗಿ ಕೊನೆಯ ಅಂಕಕ್ಕೆ 60ಕ್ಕೆ ಮುಳ್ಳನ್ನು ತರುವ ಪದ್ದತಿ ಹಾಗೆ ಮುಂದುವರೆಯಿತು.

ಬಹುಶ: ಈ ಪದ್ದತಿಯೇ ಇಂದಿಗೂ ಮುಂದುವರೆದಿರಲಿಕ್ಕೆ ಸಾಕು.ಹಾಗಾಗಿಯೇ ಪಂದ್ಯವೊಂದರಲ್ಲಿ ಅಂಕಗಳು 40 – 40ರ ಸಮಬಲದಲ್ಲಿದ್ದಾಗ ಮುಂದಿನ ಅಂಕಕ್ಕೆ advantage ಎಂದು ಕರೆದು ನಂತರದ ಅಂಕವನ್ನು ಆ ಗೇಮ್‌ನ ಕೊನೆಯ ಅಂಕವಾಗಿ ಪರಿಗಣಿಸಲಾಗುತ್ತದೆ.

Categories
Action Replay ಬ್ಯಾಡ್ಮಿಂಟನ್

ಅಪಮಾನದ ಕಿಚ್ಚಿಗೆ ಗೆಲುವಿನುತ್ತರ ನೀಡಿದ ಡಾನಿಲ್ ಮಡ್ವಡೇವ್

ಪಂದ್ಯವೊಂದರ ವೇಳೆ ಸಣ್ಣದ್ದೊಂದು ಒರಟು ವರ್ತನೆಗೆ ಜನ ಛಿಮಾರಿ ಹಾಕಿದ್ದರು ಈ ಹುಡುಗನಿಗೆ.ಪಂದ್ಯ ಪೂರ್ತಿ ಕೂಗುತ್ತಲೇ ಇವನನ್ನು ಅಪಹಾಸ್ಯ ಮಾಡಿದ್ದರು ಪ್ರೇಕ್ಷಕರು.ಅಷ್ಟಾಗಿಯೂ ಧೃತಿಗೆಡದೇ ಪಂದ್ಯವನ್ನು ಗೆದ್ದು ಮುಗಿಸಿದ ಈತ,’ನನ್ನನ್ನು ಅಪಹಾಸ್ಯ ಮಾಡುತ್ತಿರುವ ನಿಮಗೆ ಧನ್ಯವಾದಗಳು.ನಿಮ್ಮ ಈ ಅಪಹಾಸ್ಯದ ಧ್ವನಿಯೇ ನನ್ನನ್ನು ಅವುಡುಗಚ್ಚಿ ಆಡುವಂತೆ ಪ್ರೋತ್ಸಾಹಿಸುತ್ತದೆ.

ಇದೊಂದು ಪಂದ್ಯದಲ್ಲಿನ ನಿಮ್ಮ ತಿರಸ್ಕಾರದಿಂದ ನನ್ನಲ್ಲಿ ಹುಟ್ಟಿಕೊಂಡಿರುವ ಕಿಚ್ಚು ಕನಿಷ್ಟ ಮುಂದಿನ ಐದು ಪಂದ್ಯಗಳನ್ನು ಗೆಲ್ಲುವ ಶಕ್ತಿ ಕೊಟ್ಟಿದೆ’ ಎಂದಿದ್ದ.ಮಾತಿಗೆ ತಕ್ಕ ಹಾಗೆ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಬಂದವನು ಪ್ರಶಸ್ತಿ ಗೆಲ್ಲುವ ಕೊನೆಯ ಹಂತದಲ್ಲಿ ವಿಶ್ವ ಶ್ರೇಷ್ಠ ಎದುರಾಳಿಗೆ ಸಂಪೂರ್ಣ ಬೆವರಿಳಿಸಿ ವೀರೋಚಿತ ಸೋಲು ಕಂಡ .ಆವತ್ತಿನ ಮಾತುಗಳನ್ನೇ ಇವತ್ತಿಗೂ ಪುನರಾವರ್ತಿಸಿದವನ ಧಾಟಿ ಕೊಂಚಬದಲಾಗಿತ್ತು.’ನಿಮ್ಮ ಅಪಹಾಸ್ಯದ ಕೂಗು ನನ್ನನ್ನ ಗೆಲ್ಲಿಸುತ್ತಿದೆ ಎಂದು ಆವತ್ತು ಕೊಂಚ ಕೋಪದಲ್ಲಿ ನುಡಿದಿದ್ದೆ.ಇವತ್ತಿಗೂ ಅದೇ ಮಾತನ್ನ ಹೇಳುತ್ತೇನಾದರೂ ಕೋಪದಲ್ಲಿ ಅಲ್ಲ,ನಿಮ್ಮ ಪ್ರೋತ್ಸಾಹವೇ ನನ್ನನ್ನು ಇಲ್ಲಿಯವರೆಗೂ ಎಳೆದುತಂದಿದ್ದು’ ಎಂದು ನುಡಿದವನ ಧ್ವನಿಯಲ್ಲಿ ಪ್ರಾಮಾಣಿಕತೆ ಇತ್ತು.ಅಂದು ಅಪಹಾಸ್ಯದ ಕೂಗಿದ್ದ ಪ್ರೇಕ್ಷಕರ ಧ್ವನಿಯಲ್ಲಿಂದು ಮೆಚ್ಚುಗೆಯ ಹರ್ಷೋಧ್ಘಾರವಿತ್ತು.

ಇಪ್ಪತ್ಮೂರರ ಹರೆಯದ ಹುಡುಗನ ಆಟದಲ್ಲಿ ಅದ್ಭುತ ಶಾಸ್ತ್ತಿಯತೆಯಿದೆ,ಗೆಲ್ಲುವ ಛಲವಿದೆ.ಸಧ್ಯಕ್ಕಂತೂ ಎಟಿಪಿ ರ‌್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನದಲ್ಲಿರುವ ರಷ್ಯಾದ ಡಾನಿಲ್ ಮಡ್ವಡೇವ್ ಭವಿಷ್ಯದ ಟೆನ್ನಿಸ್ ಭರವಸೆಯ ಆಟಗಾರನೇನೋ ಎನ್ನಿಸುತ್ತದೆ.ಹೌದಾ ಅಲ್ಲವಾ ಎಂಬ ಪ್ರಶ್ನೆಗೆ ಕಾಲವೇ ಉತ್ತರವಾದೀತು.

-ಗುರುರಾಜ್ ಕೊಡ್ಕಣಿ ಯಲ್ಲಾಪುರ

Categories
ಬ್ಯಾಡ್ಮಿಂಟನ್

ವಿಶ್ವ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನದ ಪದಕ ಜಯಿಸುವ ಕನಸು : ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು

ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಸೋಮವಾರದಿಂದ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನದ ಪದಕ ಜಯಿಸುವ ಕನಸು ಹೊಂದಿದ್ದಾರೆ.41 ವರ್ಷಗಳ ಇತಿಹಾಸವಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಎಂಟು ಪದಕಗಳನ್ನು ಗೆದ್ದಿದೆ. ಆದರೆ ಚಿನ್ನ ಮಾತ್ರ ಕೈಗೆಟುಕದಾಗಿದೆ.

ಈ ಕೊರಗನ್ನು ಸಿಂಧು ದೂರ ಮಾಡುವ ನಿರೀಕ್ಷೆ ಗರಿಗೆದರಿದೆ. 24ರ ಹರೆಯದ ಈ ಆಟಗಾರ್ತಿ ಹಿಂದಿನ ಎರಡು ಆವೃತ್ತಿಗಳಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಚಾಂಪಿಯನ್‌ಷಿಪ್‌ನಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ. ಎರಡನೇ ಸುತ್ತಿನಲ್ಲಿ ಸಿಂಧು, ಚೀನಾ  ತೈಪೆಯ ಪಾಯಿ ಯು ಪೊ ಅಥವಾ ಬಲ್ಗೇರಿಯಾದ ಲಿಂಡಾ ಜೆತ್‌ಚಿರಿ ಎದುರು ಸೆಣಸಲಿದ್ದಾರೆ.

ಎಂಟನೇ ಶ್ರೇಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್‌ ಕೂಡ ಪದಕದ ವಿಶ್ವಾಸದಲ್ಲಿದ್ದಾರೆ. ಸೈನಾ, ಚಾಂಪಿಯನ್‌ ಷಿಪ್‌ನಲ್ಲಿ ಒಂದು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಅವರಿಗೂ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಅವರು ಫೈನಲ್‌ ಪ್ರವೇಶಿಸಿದ್ದರು.

ಮೊದಲ ಸುತ್ತಿನಲ್ಲಿ ಶ್ರೀಕಾಂತ್‌ಗೆ ಐರ್ಲೆಂಡ್‌ನ ನಾಹಟ್‌ ನಜುಯೆನ್‌ ಸವಾಲು ಎದುರಾಗಲಿದೆ. ಸಮೀರ್‌ ವರ್ಮಾ ಅವರು ಸಿಂಗಪುರದ ಲೊಹ್‌ ಕೀನ್‌ ಯೀವ್‌ ಎದುರು ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಬಿ.ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರೂ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರ ಮೇಲೆ ವಿಶ್ವಾಸ ಇಡಲಾಗಿದೆ. ಕನ್ನಡತಿ ಅಶ್ವಿನಿ, ಮಿಶ್ರ ಡಬಲ್ಸ್‌ನಲ್ಲೂ ಆಡುತ್ತಿದ್ದಾರೆ.

Categories
Action Replay ಬ್ಯಾಡ್ಮಿಂಟನ್

ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್

ವೃತ್ತಿಪರ ಇಂಜಿನಿಯರ್ಸ್ ಗಳಿಗಾಗಿ ಏರ್ಪಡಿಸಲಾಗಿದ್ದ ಅಂತರ್ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಉದ್ಘಾಟನಾ ಸಮಾರಂಭ ರವಿವಾರ ನಡೆಯಿತು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಇಂಜಿನಿಯರ್ಸ್ ಅಸೋಷಿಯೇಶನ್ ಅಧ್ಯಕ್ಷರು ಹಾಗೂ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಗುರುರಾಜ್ ಭಟ್,ಹಿಮಾಲಯ ಪ್ರಾಡಕ್ಟ್ ನ ಸೀನಿಯರ್ ಸೇಲ್ಸ್ ಆಫೀಸರ್ ದಿನೇಶ್ ಆಚಾರ್ಯ,ಉದ್ಯಮಿ ನಾಗಭೂಷಣ್ ರೆಡ್ಡಿ ಹಾಗೂ ಸ್ಪೋರ್ಟ್ಸ್ ಡೆನ್ ಈವೆಂಟ್ ಪ್ರಮುಖ ರೂವಾರಿ ಗಣೇಶ್ ಕಾಮತ್ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ‌ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲೆಯ 62 ವೃತ್ತಿಪರ ಇಂಜಿನಿಯರ್ಸ್ ಆಟಗಾರರು ಷಟಲ್ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದು,

ಬ್ಯಾಡ್ಮಿಂಟನ್ ಕೋಚ್ ಸಂತೋಷ್,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಮೆನೇಜರ್ ಕೆ.ಪಿ.ಸತೀಶ್,ಕಾರ್ತಿಕ್,ನವನೀತ್ ಪಂದ್ಯಾಕೂಟವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.

  • ಆರ್.ಕೆ‌.ಆಚಾರ್ಯ ಕೋಟ
Categories
Action Replay ಬ್ಯಾಡ್ಮಿಂಟನ್

ಅಡೆತಡೆಗಳ ಮೀರಿ ನಡೆಯದಿದ್ದರೆ ಸಾಧನೆ ಅಸಾಧ್ಯವೆಂದು ತೋರಿಸಿದವನೀತ.

ಅವನಿಗೆ ಆಗ ಹದಿನೇಳನೇ ವಯಸ್ಸು. ವೃತ್ತಿಪರ ಆಟಗಾರನಾಗಿ ತನ್ನ ವೃತ್ತಿಜೀವನ ಶುರು ಮಾಡಿದ್ದ ಆದಿಕಾಲ. ಅಷ್ಟರಲ್ಲಾಗಲೇ ಆಘಾತವೊಂದು ಅವನಿಗೆ ಕಾದಿತ್ತು. ಅಪರೂಪದ ಕಾಯಿಲೆಯಾಗಿರುವ ಆದರೆ ಕ್ರೀಡಾಪಟುಗಳಿಗೆ ಕಂಟಕವೆನ್ನಿಸುವ ಕೋಹ್ಲರ್ಸ್ ಫುಟ್ ಎನ್ನುವ ಪಾದದ ಸಮಸ್ಯೆ ಅವನಿಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಆದರೆ ಸರಿಯಾದ ಸಮಯಕ್ಕೆ ಅದು ತನ್ನ ಪ್ರಭಾವವನ್ನು ತೋರಿತ್ತು. ಅವನ ಎಡಪಾದದ ಮೂಳೆಯ ಅಸ್ಥಿಮಜ್ಜೆಯ ಅಭಾವ ಅವನಿಗೆ ತೀವ್ರ ಭಾದೆಯನ್ನುಂಟು ಮಾಡುತ್ತಿತ್ತು. ವೈದ್ಯರನ್ನು ಸಂಪರ್ಕಿಸಿದರೆ ವೈದ್ಯರಿಂದ ನಕಾರಾತ್ಮಕ ಉತ್ತರ. ನೀನಿನ್ನು ಟೆನ್ನಿಸ್ ಆಡುವುದು ಸಾಧ್ಯವಿಲ್ಲ ಎಂಬ ನಿರಾಸೆಯ ಮಾತುಗಳು.

ಆದರೆ ಅವನ ಕನಸುಗಳು ದೊಡ್ಡವಿದ್ದವು. ಟೆನ್ನಿಸ್ ಲೋಕದ ಮಹಾನ್ ಆಟಗಾರನಾಗಬೇಕೆನ್ನುವ ದೊಡ್ಡ ಮಹತ್ವಾಕಾಂಕ್ಷೆ ಅವನದಾಗಿತ್ತು. ತೀರ ಆಸೆಯಿಂದ ಆರನೇಯ ವಯಸ್ಸಿಗೆ ಟೆನ್ನಿಸ್ ರ‌್ಯಾಕೆಟ್ ಕೈಗೆತ್ತಿಕೊಂಡವನಿಗೆ ಕಾಲು ನೋವಿಗಿಂತ, ಬದುಕಿನ ಸೋಲಿನ ವೇದನೆ ದೊಡ್ಡದೆನ್ನಿಸಿತ್ತು. ಮನೆಯವರ ಹಿಂಜರಿಕೆಯ ಹೊರತಾಗಿಯೂ ಆತ ಆಟದಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದ. ಅವನ ಕೆಚ್ಚಿಗೆ ಮೆಚ್ಚಿದ ಅವನ ತರಬೇತಿಯ ತಂಡವೂ ಅವನ ಸಹಾಯಕ್ಕೆ ನಿರ್ಧರಿಸಿತ್ತು. ಅವನಪ್ಪ ಅವನ ಬೆಂಬಲಕ್ಕೆ ನಿಂತಿದ್ದ. ಮತ್ತೊಬ್ಬ ವೈದ್ಯರ ಸಲಹೆಯ ಮೇರೆಗೆ ಒರ್ಥೋಡಿಕ್ಸ್ ತಂತ್ರಜ್ಞಾನದಡಿ ತಯಾರಾದ ವಿಶೇಷ ಶೂ ಬಳಸಿ ತನ್ನ ಟೆನ್ನಿಸ್ ಜೀವನ ಮುಂದುವರೆಸಲು ನಿರ್ಧರಿಸಿದ.

2004ರ ವೇಳೆಗೆ ತನ್ನ ಮೊದಲ ಪ್ರತಿಷ್ಠಿತ ಟೆನ್ನಿಸ್ ಟೂರ್ನಿಯನ್ನಾಡಿದ್ದ ಅವನಾಗಲೇ ಒಂದು ಬಾರಿ ಎಟಿಪಿಯ ಟೂರ್ನಿಯೊಂದರಲ್ಲಿ ಅಗ್ರಶ್ರೇಯಾಂಕಿತ ಫೆಡರರ್‌ನನ್ನು ಸೋಲಿಸಿದ್ದ. ಅಷ್ಟಾಗಿಯೂ ಗ್ರಾಂಡಸ್ಲಾಮ್‌ನಲ್ಲಿ ಮೊದಲ ಯಶಸ್ಸು ಅವನಿಗೆ ದೊರಕಿದ್ದು 2005ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ. ಉಪಾಂತ್ಯದಲ್ಲಿ ಫೆಡರರ್‌ನನ್ನು ಮಣಿಸಿ ಫೈನಲ್ಲಿನಲ್ಲಿ ಮರಿಯಾನೋ ಪುಯೆರ್ಟಾನನ್ನು ಸೋಲಿಸಿ ಚೊಚ್ಚಲ ಗ್ರಾಂಡಸ್ಲಾಮ್ ಪ್ರಶಸ್ತಿ ಗೆದ್ದುಕೊಂಡ. ಮುಕ್ತ ಯುಗದಲ್ಲಿ ತನ್ನ ಮೊದಲ ಟೊರ್ನಿಯಲ್ಲಿಯೇ ಪಂದ್ಯಾವಳಿ ಗೆದ್ದುಕೊಂಡ ಎರಡನೇ ಆಟಗಾರ ಎನ್ನಿಸಿಕೊಂಡ. ಮುಂದೆ ನಾಲ್ಕು ಬಾರಿ ಕೇವಲ ಫ್ರೆಂಚ್ ಓಪನ್ ಮಾತ್ರ ಗೆದ್ದಾಗ ಟೆನ್ನಿಸ್ಪಂಡಿತರಿಂದ,’ಇವನು ಮಣ್ಣಿಗೆ ಮಾತ್ರ ಸೈ’ ಎನ್ನುವ ಟೀಕೆಗೆ ಗುರಿಯಾದ.ಆದರೆ ಅಷ್ಟರಲ್ಲಾಗಲೇ ಪಂಡಿತರ ಲೆಕ್ಕಾಚಾರವನ್ನು ಅವನು ತಲೆಕೆಳಗಾಗಿಸಿದ್ದ.

ಸತತ ಐದು ಬಾರಿ ವಿಂಬಲ್ಡನ್ ‌ಗೆದ್ದು ತನ್ನೆದುರೇ ಸತತ ಎರಡು ಬಾರಿ ಫೈನಲ್ ಗೆದ್ದಿದ್ದ ಫೆಡರರ್‌ನನ್ನು ಹುಲ್ಲಿನಂಕಣದಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದ.ಮುಂದೆ ಎರಡೇ ವರ್ಷಗಳ ಅವಧಿಯಲ್ಲಿ ಕರಿಯರ್ ಗ್ರಾಂಡ್‌ಸ್ಲಾಮ್ ಪೂರ್ತಿಗೊಳಿಸಿ ಟೀಕಾಕಾರರ ಬಾಯಿಮುಚ್ಚಿಸಿದ್ದ.

ಹಿಂತಿರುಗಿ ನೋಡಿದರೇ ರಾಫೆಲ್ ನಡಾಲ್ ಎನ್ನುವ ಟೆನ್ನಿಸ್ ಗಾರುಡಿಗ ಗೆದ್ದಿರುವ ಒಟ್ಟು ಗ್ರಾಂಡ್‌ಸ್ಲಾಮ್‌ಗಳು ಹದಿನೆಂಟು. ಒಟ್ಟು ಫ್ರೆಂಚ್ ಓಪನ್‌ಗಳ ಸಂಖ್ಯೆಯೇ ಹನ್ನೆರಡು.ಟೆನ್ನಿಸ್ ಲೋಕದ ಅವನ ಸಾಧನೆಯ ಗೌರವಾರ್ಥ 2008ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಮಂಗಳ ಮತ್ತು ಗುರುಗ್ರಹದ ನಡುವಣ ಆಕಾಶಕಾಯವೊಂದಕ್ಕೆ ‘ರಾಫಾಲ್ ನಡಾಲ್’ ಎಂದು ನಾಮಕರಣ ಮಾಡಿತು. ಸಾರ್ವಕಾಲಿಕ ಶ್ರೇಷ್ಠ ಆಟಗಾರನೆಂದೇ ಗುರುತಿಸಲ್ಪಟ್ಟಿರುವ ಫೆಡರರ್‌ನ ಬೆನ್ನಟ್ಟಿರುವ ಈ ಸ್ಪೇನ್ ಗೂಳಿ ಫೆಡರರ್‌ನನ್ನು ಮೀರಿ ನಡೆಯುವ ಸಾಧ್ಯತೆಗಳು ಇಲ್ಲದಿಲ್ಲ. ಮೀರದಿದ್ದರೂ ಟೆನ್ನಿಸ್ ಲೋಕ ಕಂಡ ಮಹಾನ್ ದಂತಕತೆಗಳ ಪೈಕಿ ನಡಾಲ್ ಕೂಡ ಒಬ್ಬ ಎನ್ನುವುದು ಸುಳ್ಳಲ್ಲ.

ನೋವಿಗೆ ಸೋತು ಕೈ ಚೆಲ್ಲಿದ್ದರೆ ಬಹುಶ: ನಡಾಲ್ ಎನ್ನುವ ದಂತಕತೆಯ ಹುಟ್ಟು ಸಾಧ್ಯವಿರಲಿಲ್ಲ.ಬದುಕಿನ ಅಡೆತಡೆಗಳನ್ನು ಮೀರಿ ನಡೆಯುವ ಕಿಚ್ಚಿರದಿದ್ದರೆ ಸಾಧನೆ ಅಸಾಧ್ಯವೆನ್ನುವುದನ್ನು ಬದುಕಿ ತೋರಿಸಿದ ಆವೆಮಣ್ಣಿನಂಕಣದ ರಾಜ. ಇಷ್ಟಾಗಿಯೂ ಅವನನ್ನು ಟೀಕಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಅವನಂತೆಯೇ ಸಾಧಕರ ಸಾಧನೆಯೆಡೆಗೆ ಕುಹಕವಾಡುವವರ, ಸಾಧಕರ ಗುಂಪೆನ್ನುವುದು ಅದೃಷ್ಟವಂತ ಜನಾಂಗ ಎಂದು ನಿಟ್ಟುಸಿರಾಗುವವರ ಲೆಕ್ಕವೂ ದೊಡ್ಡದಿದೆ. ಹಾಗೆ ಬಡಬಡಿಸುವ ಮುನ್ನ ಇಂಥಹ ಸಾಧಕರ ಸಾಧನೆಯ ಹಿಂದಿನ ಬೆವರಗಾಥೆಯನ್ನರಿತುಕೊಳ್ಳಲು ಪ್ರಯತ್ನಿಸಿದರೆ ಒಂದಷ್ಟು ಹಳಹಳಿಕೆಗಳು ಕಡಿಮೆಯಾಗಿ, ಸಾಧಿಸುವ ಛಲವಿಲ್ಲದೇ ಗೆಲುವಿನ ರುಚಿಯಿಲ್ಲ ಬದುಕಿನಲ್ಲಿ ಎಂಬ ವಾಸ್ತವದ ಅರಿವು ಮೂಡಬಹುದೇನೋ ಅಲ್ಲವೇ..?

                                                                                                                              – ಗುರುರಾಜ ಕೊಡ್ಕಣಿ ಯಲ್ಲಾಪುರ

Categories
ಬ್ಯಾಡ್ಮಿಂಟನ್

ದೇಹದ ಅಲಸ್ಯವನ್ನು ಕ್ರೀಡೆಯಿಂದ ನಿಯಂತ್ರಿಸಿ : ಶಂಕರನಾರಾಯಣ

ಹಳೆಯಂಗಡಿ : ಟಾರ್ಪೋಡಸ್ ಸ್ಪೋರ್ಟ್ಸ್ ಕ್ಲಬ್‍ನ ಸಂಯೋಜನೆಯಲ್ಲಿ ಕ್ಲಬ್ ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ ಶಾಲಾ ಮಟ್ಟದ ಶಟ್ಲ ಬಾಡ್ಮಿಂಟನ್ ಸ್ಪರ್ಧೆಯ ಸಮಾರೋಪ ನಡೆಯಿತು.

ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಶಂಕರನಾರಾಯಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಿಂದ ಮನೋಬಲ ಹೆಚ್ಚಾಗಿದ್ದು, ಸೂಕ್ತ ವಯೋಮಾನದವರೆಗೂ ಕ್ರೀಡೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿರಿ. ದೇಹದ ಅಲಸ್ಯವನ್ನು ಕ್ರೀಡೆಯಿಂದ ನಿಯಂತ್ರಿಸಬಹುವುದು ಎಂದರು.

ಎನ್.ಎಂ.ಪಿ.ಟಿ.ಯ ವಾಲಿಬಾಲ್ ಕ್ರೀಡಾಪಟು ಭರತ್ ಅವರ ಕ್ರೀಡಾ ಜೀವನದ ಅನುಭವಗಳನ್ನು ಮಕ್ಕಳ ಜೊತೆಗೆ ಹಂಚಿಕೊಂಡದರು.

ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಸ್ಪರ್ಧೆಯಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ರಿವಸ್ರ್ಸ್ ಸಿಂಗಲ್ಸ್ ವಿಭಾಗದಲ್ಲಿ ಒಟ್ಟು 16 ವಿವಿಧ ಶಾಲೆಯ 235 ಮಕ್ಕಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದಾಮೋದರ, ಎ.ಎನ್.ಎಂ.ಪಿ.ಟಿ, ಟಾರ್ಪೋಡೇಸ್ ಸ್ಪೋಟ್ರ್ಸ್ ಕ್ಲಬ್‍ನ ನಿರ್ದೇಶಕ ನಾಗಭೂಷಣ್ ಮತ್ತು ರೆಡ್ಡಿ, ಚಂದ್ರಶೇಖರ ಸಜ್ಚಾ, ಸ್ಪರ್ಧಾ ಸಹ ಸಂಯೋಜಕ ಗಣೇಶ್ ಕಾಮತ್, ಬಾಡ್ಮಿಂಟನ್ ತರಬೇತಿದಾರ ಸಂತೋಷ್ ಖಾರ್ವಿ, ಟೇಬಲ್ ಟೆನ್ನಿಸ್ ತರಬೇತಿದಾರ ಅಶ್ವಿನ್ ಪಡುಕೋಣೆ, ಕೆ.ಪಿ. ಸತೀಶ್, ದೀಪಕ್ ಕೋಟ್ಯಾನ್, ಭಾಗ್ಯರಾಜ್, ನವನೀತ್, ಕಾರ್ತಿಕ್ ಹಾಗೂ ಮೊದಲಾದವರು ಇದ್ದರು.

ಟಾರ್ಪೋಡಸ್ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಫಲಿತಾಂಶ

ಬಾಲಕರ ವಿಭಾಗ – ಮಿಲಾಗ್ರಸ್ ಕಲ್ಯಾಣಪುರ ಉಡುಪಿ ಪ್ರಥಮ ಸ್ಥಾನ , ಸೈ ಅಲೋಶಿಯಸ್ ಮಂಗಳೂರು ದ್ವಿತೀಯ ಸ್ಥಾನ, ವಿದ್ಯಾದಯ ಪಬ್ಲಿಕ್ ಸ್ಕೂಲ್ ಹಾಗೂ ಅಮೃತಾ ವಿದ್ಯಾಲಯ ಮಂಗಳೂರು ತೃತೀಯಾ ಸ್ಥಾನ.

ಬಾಲಕಿಯರ ವಿಭಾಗ : ಹೋಲಿ ರೋಜಾರಿಯೋ ಕುಂದಾಪುರ ಪ್ರಥಮ ಸ್ಥಾನ, ಡಾ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತೋಕೂರು, ತಪೋವನ ದ್ವಿತೀಯ ಸ್ಥಾನ, ಮಣಿಪಾಲ ಸ್ಕೂಲ್ ಅತ್ತಾವರ, ಮೇರಿವೆಲ್ ಪ್ರೌಢಶಾಲೆ ಕಿನ್ನಿಗೊಳಿ ತೃತೀಯ ಸ್ಥಾನ