Categories
ಕ್ರಿಕೆಟ್ ಸಂತಾಪ

ಭಾರತೀಯ ಕ್ರಿಕೆಟ್‌ನಲ್ಲಿ ಶೋಕದ ಅಲೆ; ಇಹಲೋಕ ತ್ಯಜಿಸಿದ ದಿಗ್ಗಜ

SAD NEWS! ಭಾರತದ ‌ಲೆಜೆಂಡರಿ‌ ಕ್ರಿಕೆಟಿಗ ಬೇಡಿ ಇನ್ನಿಲ್ಲ! ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ತಮ್ಮ 77ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು
ಬಿಷನ್ ಸಿಂಗ್ ಬೇಡಿ ನಿಧನ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅದ್ಭುತ ಪ್ರದರ್ಶನವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ, ಆದರೆ ಈ ನಡುವೆ ತಂಡಕ್ಕೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡದ ಮಾಜಿ ಅನುಭವಿ ಸ್ಪಿನ್ನರ್ ನಿಧನರಾಗಿದ್ದಾರೆ. ಅದ್ಭುತ ಎಡಗೈ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಇದೀಗ ಜಗತ್ತಿಗೆ ವಿದಾಯ ಹೇಳಿದ್ದಾರೆ. ಬಿಷನ್ ಸಿಂಗ್ ಬೇಡಿ ಅವರ ನಿಧನ ಭಾರತೀಯ ಕ್ರಿಕೆಟ್ ಜಗತ್ತಿಗೆ ದೊಡ್ಡ ಹೊಡೆತ ಎನ್ನಬಹುದು. ಬಿಶನ್ ಸಿಂಗ್ ಬೇಡಿ 70ರ ದಶಕದಲ್ಲಿ ಪ್ರಬಲ ಸ್ಪಿನ್ನರ್ ಆಗಿದ್ದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಬಿಶನ್ ಸಿಂಗ್ ಬೇಡಿ ಭಾರತ ತಂಡಕ್ಕಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ.
ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ತಂಡದ ನಾಯಕರೂ ಆಗಿದ್ದರು. 1946ರಲ್ಲಿ ಅಮೃತಸರದಲ್ಲಿ ಜನಿಸಿದ ಬೇಡಿ ಅವರು 22 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಬಿಶನ್ ಸಿಂಗ್ ಬೇಡಿ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ಪರ ಆಡುತ್ತಿದ್ದರು. ಬೇಡಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಹೆಸರಿನಲ್ಲಿ 266 ವಿಕೆಟ್ ಪಡೆದ್ದಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1560 ವಿಕೆಟ್‌ಗಳನ್ನು ತಮ್ಮ ಹೆಸರಿಗೆ ಹೊಂದಿದ್ದರು.
ಬೇಡಿ ಅವರು ಭಾರತ ತಂಡಕ್ಕಾಗಿ ಏಕದಿನ ಕ್ರಿಕೆಟ್ ಆಡಿದ್ದರು ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. 10 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಮಾತ್ರ ಕಬಳಿಸಲು ಸಾಧ್ಯವಾಯಿತು. ಅವರನ್ನು ಪ್ರಥಮ ದರ್ಜೆ ಕ್ರಿಕೆಟ್‌ನ ರಾಜ ಎಂದು ಪರಿಗಣಿಸಲಾಗಿತ್ತು. ಬಿಶನ್ ಸಿಂಗ್ ಬೇಡಿ ತಮ್ಮ ಲಿಸ್ಟ್ ಎ ವೃತ್ತಿಜೀವನದಲ್ಲಿ 72 ಪಂದ್ಯಗಳಲ್ಲಿ 71 ವಿಕೆಟ್ ಗಳಿಸಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಸಂತಾಪ

ಬ್ಲೂ ಸ್ಟಾರ್ ಶಿರ್ವದ ಮಾಜಿ ಆಟಗಾರ ಡೇವಿಡ್ ಮಥಾಯಸ್ ದುಃಖದ ನಿಧನಕ್ಕೆ ಸಂತಾಪ ಸೂಚಿಸಿದ ಟಿ.ಸಿ.ಎ ಉಡುಪಿ

ಉಡುಪಿ: ಬ್ಲೂ ಸ್ಟಾರ್ ಶಿರ್ವ ಕ್ರಿಕೆಟ್ ಕ್ಲಬ್‌ನ ಸಕ್ರಿಯ, ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ  ಡೇವಿಡ್ ಮಥಾಯಸ್ ನಿನ್ನೆ ನಿಧನರಾದರು. 1979 ರಿಂದ, ಸುಮಾರು 13-14 ವರ್ಷಗಳಿಂದ,  ಬ್ಲೂ ಸ್ಟಾರ್ ಶಿರ್ವ ತಂಡದ ಆಡುವ ತಂಡದಲ್ಲಿ ಕಾಣಿಸಿಕೊಂಡ, ಡೇವಿಡ್ ಯಾವಾಗಲೂ ಉತ್ತಮ ಆಟಗಾರ ಎಂದು ಗುರುತಿಸಲ್ಪಟ್ಟಿದ್ದರು.  ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಉಡುಪಿ ಪರಿಸರದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು.
ಭಾನುವಾರ ಅವರ ಸಾವಿನ ಸುದ್ದಿ ಹೊರಬಂದ ನಂತರ, ರಾಜ್ಯ ಟೆನಿಸ್ ಕ್ರಿಕೆಟ್ ನ ಕ್ರಿಕೆಟ್ ಬಂಧುಗಳು ಸಾಮಾಜಿಕ ಮಾಧ್ಯಮದಲ್ಲಿ ಗೌರವ ಸಲ್ಲಿಸಿದರು.
ಡೇವಿಡ್ ಮಥಾಯಸ್ ದುಃಖದ ನಿಧನಕ್ಕೆ ಇಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಂತಾಪ ಸೂಚಿಸಿದ್ದು, ಡೇವಿಡ್ ಮಥಾಯಸ್ ಅವರ ನಿಧನದ ಬಗ್ಗೆ ಕೇಳಲು ನಿಜವಾಗಿಯೂ ದುಃಖವಾಗಿದೆ. ಕ್ರಿಕೆಟ್ ಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲೆಂದು ಉಡುಪಿ ಜಿಲ್ಲಾ ಟಿ.ಸಿ.ಎ  ಕೋರುತ್ತದೆ. ಅವರ ಕುಟುಂಬ ವರ್ಗ ಮತ್ತು ಸ್ನೇಹಿತರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು
ಟಿ.ಸಿ.ಎ ಉಡುಪಿ ಸಂಸ್ಥೆ ಪ್ರಾರ್ಥಿಸುತ್ತದೆ.
ಬ್ಲೂ ಸ್ಟಾರ್ ಶಿರ್ವದ  ಕ್ರಿಕೆಟಿಗ ಡೇವಿಡ್ ಮಥಾಯಸ್ ಅವರ ನಿಧನಕ್ಕೆ ಹಲವಾರು  ಗಣ್ಯರು ಪ್ರತಿಕ್ರಿಯಿಸಿದ್ದಾರೆ.
Categories
ಸಂತಾಪ

ಬ್ಲೂ ಸ್ಟಾರ್ ಶಿರ್ವ ಸ್ಥಾಪಕ ಸದಸ್ಯ-ನಿವೃತ್ತ ದೈಹಿಕ ಶಿಕ್ಷಕ ಡೇವಿಡ್ ಮಥಾಯಸ್ ನಿಧನ

ಉಡುಪಿ-1978-79 ರಲ್ಲಿ ಶಿರ್ವದಲ್ಲಿ ಸ್ಥಾಪನೆಯಾದ ಬ್ಲೂ ಸ್ಟಾರ್ ಕ್ರಿಕೆಟ್ ಕ್ಲಬ್ ನ ಸಕ್ರಿಯ, ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಸುಮಾರು 40 ವರ್ಷದ ಸುಧೀರ್ಘ ಅವಧಿಗೆ, ಉಡುಪಿಯ ಸೈಂಟ್ ಮೇರೀಸ್ ಕನ್ನಡ ಮೀಡಿಯಂ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜನಪ್ರಿಯರಾಗಿದ್ದ ಡೇವಿಡ್ ಮಥಾಯಸ್ ರವರು ನಿನ್ನೆ ನಮ್ಮನ್ನು ಅಗಲಿದ್ದಾರೆ.
1979 ರಿಂದ ಸರಿ ಸುಮಾರು 13,14 ವರುಷ, ಶಿರ್ವ ಬ್ಲೂ ಸ್ಟಾರ್ ತಂಡದ ಆಡುವ ಬಳಗದಲ್ಲಿ, ಸದಾ ಗುರುತಿಸಿಕೊಂಡಿದ್ದ ,ಒಬ್ಬ ಉತ್ತಮ ಸವ್ಯಸಾಚಿ ಡೇವಿಡ್. ಒಂದೇ ಶೈಲಿಯಲ್ಲಿ ಆಫ್ ಮತ್ತು ಲೆಗ್ ಸ್ಪಿನ್ನರ್ ಬೌಲರ್ ಆಗಿದ್ದ ಡೇವಿಡ್, ಎರಡೂ ಕೈಗಳಿಂದ ಏಕ ರೀತಿಯಲ್ಲಿ ಬೌಲಿಂಗ್ ನಡೆಸುವ, ಅಪರೂಪದ ಪ್ರಾವಿಣ್ಯತೆ ಅವರು ಹೊಂದಿದ್ದರು.ಉತ್ತಮ ಬ್ಯಾಟಿಂಗ್ ನಿಂದ, ತಂಡದಲ್ಲಿ ಆಲ್ ರೌಂಡರ್ ಆಗಿಯೂ ಗುರುತಿಸಿ ಕೊಂಡಿದ್ದರು. ದಿನಾ 7-8 ಕಿಲೋಮೀಟರ್ ಸೈಕಲ್ ತುಳಿದು ಪ್ರಾಕ್ಟೀಸ್ ಗೆ ಬರುತ್ತಿದ್ದ, ಒಬ್ಬ ಅಪ್ಪಟ ಕ್ರಿಕೆಟ್ ಪಟು, ಪ್ರೇಮಿ.
ದೈಹಿಕ ಶಿಕ್ಷಕರಾಗಿಯೂ ಅವರು ಉಡುಪಿ ಪರಿಸರದಲ್ಲಿ ಜನಪ್ರಿಯತೆ ಗಳಿಸಿದ್ದರು.
ಪಾರ್ಥಿವ ಶರೀರದ ಅಂತಿಮ ಯಾತ್ರೆ ಮೃತರ  ಕುತ್ಯಾರ್ ನಿವಾಸದಿಂದ   ಮಧ್ಯಾಹ್ನ 3:30 ಗಂಟೆಗೆ     ಪ್ರಾರಂಭವಾಗಿ ಲೇಡಿ ಆಫ್ ಹೆಲ್ತ್ ಚರ್ಚ್ ಶಿರ್ವಕ್ಕೆ ಅಂತ್ಯಕ್ರಿಯೆ ಗಾಗಿ  ತೆರಳುತ್ತದೆ.
ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಪ್ರಾರ್ಥಿಸುತ್ತೇವೆ‌.
ಮಾಹಿತಿ ಕೃಪೆ-ಸದಾನಂದ ಶಿರ್ವ(ಬ್ಲೂಸ್ಟಾರ್ ಶಿರ್ವ
Categories
ಸಂತಾಪ

ಮಂಗಳೂರಿನ ಮಾಜಿ ಕ್ರಿಕೆಟ್ ವಿಮರ್ಶಕ ಝಾಕಿರ್ ಹುಸೇನ್ ನಿಧನಕ್ಕೆ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಜಗತ್ತು ಸಂತಾಪ

ಮಂಗಳೂರು:  90 ರ ದಶಕದಿಂದ ರಾಜ್ಯ ಹಾಗೂ  ರಾಷ್ಟ್ರ ಮಟ್ಟದ ಟೆನಿಸ್ ಕ್ರಿಕೆಟ್ ವಲಯಗಳಲ್ಲಿ ತಮ್ಮ ಸೊಗಸಾದ ಹಿಂದಿ ಕಾಮೆಂಟರಿ ಹಾಗೂ ವಿಶಿಷ್ಟ ಹಿಂದಿ ಧ್ವನಿ ಪ್ರಯೋಗದಿಂದ ಕ್ರೀಡಾಭಿಮಾನಿಗಳನ್ನು ಆಕರ್ಷಿಸುತ್ತಿದ್ದ ಖ್ಯಾತ ಹಿಂದಿ ವೀಕ್ಷಕ ವಿವರಣೆಗಾರ ಜಾಕೀರ್ ಹುಸೇನ್ (50) ಗುರುವಾರ ನಿಧನರಾದರು. ಮೃತ ಝಾಕಿರ್ ಹುಸೇನ್ ಬಜ್ಪೆ ಪೆರ್ಮುದೆ ಬಳಿಯ ತಮ್ಮ ನಿವಾಸದ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಬಜ್ಪೆಯ ಹಿರಿಯ ಕಾಮೆಂಟೇಟರ್ ಜಾಕೀರ್ ಹುಸೇನ್ ಅವರು ಕ್ರಿಕೆಟ್ ವಿಶ್ಲೇಷಣೆಯನ್ನು ಹಿಂದಿ ಭಾಷೆಯೊಂದಿಗೆ ಕೇಳುಗರ ಹೃದಯವನ್ನು ಮುಟ್ಟುವಂತೆ ವಿವರಿಸುತ್ತಿದ್ದರು. ಝಾಕಿರ್ ಹುಸೇನ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಕಾಮೆಂಟರಿಗೆ ಗಮನಾರ್ಹ ಕೊಡುಗೆ ನೀಡಿದ್ದರು. ಝಾಕಿರ್ ಹುಸೇನ್ ಬಜ್ಪೆ ಅವರು 30 ವರ್ಷಗಳಿಂದ ಕ್ರಿಕೆಟ್ ಕಾಮೆಂಟೇಟರ್ ಆಗಿದ್ದು, ರಾಜ್ಯ ಮಟ್ಟದ ಕ್ರಿಕೆಟ್ ಸ್ಪರ್ಧೆಗಳ ಬಗ್ಗೆ ವಿಶಿಷ್ಟ ಶೈಲಿಯಲ್ಲಿ ಕಾಮೆಂಟ್ರಿ ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಕಾಮೆಂಟರಿ ನೀಡಿದ ಜಿಲ್ಲೆಯ ಮೊದಲಿಗ ಎಂಬ ಹೆಗ್ಗಳಿಕೆ ಅವರದು. “ಕ್ಯಾಚ್ ಪಕಡೋ ಮ್ಯಾಚ್ ಪಕಡೋ.  ಕ್ಯಾಚಸ್ ವಿನ್ಸ್ ಮ್ಯಾಚಸ್” ಎಂದು ಅವರು ಹೇಳುತ್ತಿದ್ದ ರೀತಿ ಇಂದಿಗೂ ಎಲ್ಲರ ಮನದಲ್ಲಿ ಇದೆ. ಅವರ ವ್ಯಾಖ್ಯಾನ ಬಹುತೇಕ ರೇಡಿಯೋ ಕಾಮೆಂಟರಿಯಂತಿತ್ತು. “ಸಭೀ ದರ್ಶಕೊಂಕೋ ಜಾಕೀರ್ ಹುಸೇನ್ ಕಾ ನಮಷ್ಕಾರ್. ನೆಹರೂ ಮೈದಾನ್ ಪರ್ ಮ್ಯಾಚ್ ಖೇಲಾ ಜಾರಹಾ ಹೈ. ಮಾರುತಿ ಕ್ರಿಕೆಟರ್ಸ್ ನೇ ಇಸ್ ಮ್ಯಾಚ್ ಕೋ ಕಿಯಾ  ಹೈ, ನ್ಯಾಷನಲ್ ಲೆವೆಲ್ ಮ್ಯಾಚ್ ಕೋ. ರಾಮಾಂಜನೇಯ ಕ್ರಿಕೆಟರ್ಸ್ ಜೋಕಿ ಫೈನಲ್ ಮೇ ಪಹುಂನ್ಚ್ ಚುಕೆ ಹೈ. ಥಂಡೀ ಹವಾ ಜೋಕಿ ಇಸ್ ಸಮಯ್ ಚಲ್ ರಹೀ ಹೇ. ಆಕಾಶ್ ಬಿಲ್ಕುಲ್ ಸಾಫ್. ಸೂರಜ್  ಕೀ  ಕಿರನೇ  ಪೂರಿ ಥರಹ್ ಮೈದಾನ್ ಪರ್ ಜೋಕಿ ಛಾಹೀ ಹುಯಿ ಹೇ. ಆಟ್  ಟವರ್ಸ್ ಜೋಕಿ ಕೋಲ್ಕತ್ತಾಕೇ  ಈಡನ್ ಗಾರ್ಡನ್ಸ್ ಕೇ ತರಹ ಸಜಾವಾ ಮೈದಾನ್ ಹೈ” ಈ ರೀತಿಯಾಗಿ ಮೈದಾನದ ಮತ್ತು ವಾತಾವರಣದ ಬಗ್ಗೆ ಬಣ್ಣಿಸುತ್ತಿದ್ದರು.
ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನದ  ಧಿಗ್ಗಜ ಆಟಗಾರರ ಹೆಸರು ಹಾಗೂ ಅವರ ಧಾಖಲೆಗಳನ್ನು ಪ್ರತಿಯೊಂದು ಪಂದ್ಯದಲ್ಲೂ ನೆನಪಿಸಿಕೊಳ್ಳುತ್ತಿದ್ದರು.  ಅದೇ ರೀತಿ ಚಕ್ರವರ್ತಿ ಕುಂದಾಪುರ, ಟಾರ್ಪಡೋಸ್ ಕುಂದಾಪುರ, ಜೈ ಕರ್ನಾಟಕ ಬೆಂಗಳೂರು, ಗುರುಬ್ರಹ್ಮ ಬೆಂಗಳೂರು, ಚಮಕ್ ಬೆಂಗಳೂರು, ವೀರ ಕೇಸರಿ ಸುರತ್ಕಲ್,  ಸನ್ನಿ ಉಡುಪಿ , ಎ ಕೆ ಸ್ಪೋರ್ಟ್ಸ್ , ಜಾನ್ಸನ್ ಕುಂದಾಪುರ ಹೀಗೆ ಹಲವಾರು ತಂಡಗಳ ಆಟಗಾರರ ಕ್ರಿಕೆಟ್ ಕೌಶಲ್ಯಗಳು, ಸಾಮರ್ಥ್ಯಗಳು ಹಾಗೂ ಸಾಧನೆಗಳ ಕುರಿತು ವಿವರಿಸುತ್ತಿದ್ದರು. ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಾಮೆಂಟೇಟರ್ ಆಗಿ ಕೆಲಸ ಮಾಡಿದ ಜಾಕೀರ್ ಹುಸೇನ್  ರಾಜ್ಯದ ಎಲ್ಲರ ಮನ ಗೆದ್ದಿದ್ದರು.  ಕ್ರಿಕೆಟ್ ಪಂದ್ಯವನ್ನು ಕಣ್ಣಿಗೆ ಕಟ್ಟುವಂತೆ ಕಾಮೆಂಟರಿ ನೀಡುವ ಮೂಲಕ ಜನಪ್ರಿಯರಾಗಿದ್ದರು. ಕುಂದಾಪುರದ ಗಾಂಧೀ ಮೈದಾನ ಮತ್ತು ಸ್ವಾಮಿ ಗಂಗೊಳ್ಳಿಯವರು ನಡೆಸುತ್ತಿದ್ದ ಪ್ರತಿಯೊಂದು ಟೂರ್ನಮೆಂಟ್ ನಲ್ಲೂ ಇವರ ಕಾಮೆಂಟ್ರಿ ಇರುತಿತ್ತು.  ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ವಿದ್ಯಾರ್ಥಿ -ವಿಧ್ಯಾರ್ಥಿನಿಯರಂತೂ ಇವರ ನಿರರ್ಗಳ ಹಿಂದಿ ಕಾಮೆಂಟ್ರಿ ಆಲಿಸುವ ಸಲುವಾಗಿ ಸಾಲು ಸಾಲಾಗಿ ಮೈದಾನದತ್ತ ಬರುತ್ತಿದ್ದರು.
50 ವರ್ಷದ ಜಾಕೀರ್ ಗುರುವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಜಾಕೀರ್ ಹುಸೇನ್ ನಿಧನಕ್ಕೆ ಕರ್ನಾಟಕ ರಾಜ್ಯದ ಪ್ರಮುಖ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅವರ ನಿಧನಕ್ಕೆ ಕರ್ನಾಟಕ ರಾಜ್ಯದ ಮಾಜಿ ಹಾಗೂ ಹಾಲಿ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರರು ಹಾಗೂ ದುಬೈ ಸೇರಿದಂತೆ ಇತರ ದೇಶಗಳ ಆಟಗಾರರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು, ಕೋಟ ರಾಮಕೃಷ್ಣ ಆಚಾರ್ಯ “ಜಾಕೀರ್ ಹುಸೇನ್ ಅವರ ನಿಧನದ ಬಗ್ಗೆ ಕೇಳಿ ಆಘಾತವಾಯಿತು. ಆಡುವ ದಿನಗಳಲ್ಲಿ ಮೈದಾನಕ್ಕೆ ರಂಗು ತುಂಬುತ್ತಿದ್ದರು. ಅವರ ನಿಧನ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು” ಎಂದು ಸಂತಾಪ ಸೂಚಿಸಿದ್ದಾರೆ
ಜಾಕೀರ್ ಹುಸೇನ್  ನಿಧನ ನಮಗೆಲ್ಲರಿಗೂ ದುಃಖದ ಸುದ್ದಿಯಾಗಿದೆ. ಅವರು ಶ್ರೇಷ್ಠ ಕಾಮೆಂಟೇಟರ್ ಆಗಿದ್ದಲ್ಲದೆ, ಮೈದಾನದಲ್ಲಿ ಶಕ್ತಿ ತುಂಬಿದ್ದರು. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ನಾವು ಅವರೊಂದಿಗೆ ಹಿಂದೆ ಅನೇಕ ಉತ್ತಮ ನೆನಪುಗಳನ್ನು ಹೊಂದಿದ್ದೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಸದಸ್ಯರಿಗೆ ನಮ್ಮ ಸ್ಪೋರ್ಟ್ಸ್ ಕನ್ನಡದ ಸಂತಾಪಗಳು.
ಟೀಮ್ ಸ್ಪೋರ್ಟ್ಸ್ ಕನ್ನಡ
Categories
ಸಂತಾಪ

ಪ್ರಖ್ಯಾತ ಹಿಂದಿ ವೀಕ್ಷಕ ವಿವರಣೆಕಾರ ಜಾಕಿರ್ ಹುಸೇನ್ ನಿಧನ

ಮಂಗಳೂರು- 90 ರ ದಶಕದಿಂದ ರಾಜ್ಯ,ರಾಷ್ಟ್ರೀಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ವಲಯದಲ್ಲಿ ಸೊಗಸಾದ ಹಿಂದಿ ವೀಕ್ಷಕ ವಿವರಣೆ ಮತ್ತು ವಿಶಿಷ್ಟ ಹಿಂದಿ ಶಬ್ದ ಪ್ರಯೋಗದ ಮೂಲಕ ಕ್ರೀಡಾಪ್ರೇಮಿಗಳನ್ನು ಮೈದಾನದತ್ತ ಸೆಳೆಯುತ್ತಿದ್ದ ಖ್ಯಾತ ಹಿಂದಿ ಕಾಮೆಂಟೇಟರ್ ಜಾಕಿರ್ ಹುಸೇನ್(50) ನಿನ್ನೆ ರಾತ್ರಿ ನಿಧನರಾದರು.
ಮೃತ ದುರ್ದೈವಿ ಜಾಕಿರ್ ಹುಸೇನ್ ಬಜ್ಪೆ ಪೆರ್ಮುದೆ ಬಳಿಯಲ್ಲಿರುವ ನಿವಾಸದ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಗಲಿದ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ ಮತ್ತು ರಾಜ್ಯ ಟೆನಿಸ್ ಕ್ರಿಕೆಟ್ ವತಿಯಿಂದ ಪ್ರಾರ್ಥಿಸುತ್ತೇವೆ….
Categories
ಸಂತಾಪ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಯ ಗ್ರೌಂಡ್ಸ್ ಮನ್ ರಾಮಣ್ಣ ಇನ್ನಿಲ್ಲ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌಂಡ್ಸ್ ಮನ್ ರಾಮಣ್ಣ (75) ಇಂದು ವಿಧಿವಶರಾಗಿದ್ದಾರೆ. ನಿಷ್ಠಾವಂತ ಕೆಲಸಗಾರರಾಗಿ ಗುರುತಿಸಿಕೊಂಡಿದ್ದ ರಾಮಣ್ಣನವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ.

ತಮ್ಮ ಇಡೀ ಜೀವನವನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದು  ಕ್ರಿಕೆಟ್‌ಗಾಗಿ ಮುಡಿಪಾಗಿಟ್ಟಿದ್ದ ರಾಮಣ್ಣ, 53 ವರ್ಷಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌಂಡ್ಸ್‌ಮನ್ ಆಗಿ ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ರಾಮಣ್ಣ, ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ಜೊತೆ ಉತಮ ಬಾಂಧವ್ಯ ಹೊಂದಿದ್ದರು.

ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ…💐💐💐🙏
Categories
ಸಂತಾಪ

ವೆಂಕಟರಮಣ ಪಿತ್ರೋಡಿ ಸಂಸ್ಥೆಯ ಮಾಜಿ ಅಧ್ಯಕ್ಷ,ಕ್ರಿಕೆಟ್ ಪಟು CA ಮಲ್ಲೇಶ್ ಕುಮಾರ್ ನಿಧನ

ಉಡುಪಿ-ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ಇದರ ಮಾಜಿ ಅಧ್ಯಕ್ಷರು,CA ಅಸೋಸಿಯೇಷನ್ ಕಾರ್ಯದರ್ಶಿಯಾಗಿದ್ದ ಮಲ್ಲೇಶ್ ಕುಮಾರ್ ಪಿತ್ರೋಡಿ(40) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅತ್ಯಂತ ಸರಳ ಸಜ್ಜನಿಕೆಯ ಸ್ವಭಾವದ ಮಲ್ಲೇಶ್ ಕುಮಾರ್ ಪಿತ್ರೋಡಿ ಇವರು ವೆಂಕಟರಮಣ ಪಿತ್ರೋಡಿ ತಂಡದ ಪ್ರಮುಖ ಆಟಗಾರರಾಗಿ ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿ ತನ್ನ ತಂಡಕ್ಕೆ ಪ್ರಶಸ್ತಿಯ ಗರಿ ಮೂಡಿಸಿದ್ದರು.ರಾಜ್ಯದ ಅತ್ಯಂತ ಶಿಸ್ತುಬದ್ಧ ತಂಡವಾಗಿ ಗುರುತಿಸಿಕೊಂಡ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡ ಮಲ್ಲೇಶ್ ರವರು ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನ ಸಂಘದ ಸದಸ್ಯರಾಗಿ ಹಲವು ಬಾರಿ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದ್ದರು.
ಮಲ್ಲೇಶ್ ರವರು ಸಿ.ಎ ಉದ್ಯೋಗಿಯಾಗಿದ್ದು ಉಡುಪಿಯ ಬನ್ನಂಜೆಯಲ್ಲಿ ಕಛೇರಿಯನ್ನು ಹೊಂದಿದ್ದರು.ಸಿ.ಎ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ಮೃತರು ತಂದೆ,ತಾಯಿ,ಸೋದರಿ,ಪತ್ನಿ,ಪುತ್ರ ಹಾಗೂ ಇಬ್ಬರು ಪುಟ್ಟ ಮಕ್ಕಳ‌ ಸಹಿತ ಅಪಾರ ಬಂಧುಬಳಗ ಮತ್ತು ಸ್ನೇಹಿತ ವರ್ಗವನ್ನು ಅಗಲಿದ್ದಾರೆ.
ಅಗಲಿದ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬ ವರ್ಗಕ್ಕೆ ಅಗಲಿಕೆಯ ನೋವನ್ನು ಮರೆಸುವ ಶಕ್ತಿ ನೀಡಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಪ್ರಾರ್ಥಿಸುತ್ತೇವೆ…
Categories
ಚಿರಸ್ಮರಣೆ ಸಂತಾಪ

ಸಾಮಾಜಿಕ ಕಾರ್ಯಕರ್ತ,ಮಾಜಿ ಕ್ರಿಕೆಟ್ ಪಟು ಸಾಯಿದತ್ತ ಭಟ್ ಬೈಂದೂರು ನಿಧನ

ಬೈಂದೂರು-ವಿಕ್ರಮ್ ಸ್ಪೋರ್ಟ್ಸ್ ಕ್ಲಬ್ ಬೈಂದೂರು ತಂಡದ ಪರವಾಗಿ 80 ರ ದಶಕದಲ್ಲಿ ಮಿಂಚಿದ್ದ ಆಲ್ ರೌಂಡರ್, ಉದ್ಯಾನ ನಗರಿ ಬೆಂಗಳೂರನ್ನು ಫ್ಲೆಕ್ಸ್ ಮುಕ್ತ ನಗರಿಯನ್ನಾಗಿಸುವಲ್ಲಿ ಹಾಗೂ ಕಾನೂನಾತ್ಮಕ ಹೋರಾಟದ ಮೂಲಕ ಬಿ‌.ಡಿ.ಎ ಗೆ ಕೋಟ್ಯಾಂತರ ಮೌಲ್ಯದ ಭೂಮಿಯನ್ನು ಉಳಿಸಿಕೊಟ್ಟ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಭಟ್ ಬೈಂದೂರು ಇಂದು ಹೃದಯಾಘಾತದಿಂದ ನಿಧನರಾದರು.
80 ರ ದಶಕದಲ್ಲಿ ಆಲ್ ರೌಂಡರ್ ಆಟಗಾರರ ರೂಪದಲ್ಲಿ ವಿಕ್ರಮ್ ತಂಡದಲ್ಲಿ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದ ಸಾಯಿದತ್ತ ಭಟ್ ಗಂಗೊಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯವೊಂದರಲ್ಲಿ ರಾಯಲ್ ಗಂಗೊಳ್ಳಿ ತಂಡದೆದುರು ಹ್ಯಾಟ್ರಿಕ್ ವಿಕೆಟ್ ಗಳಿಸಿ ಮಿಂಚಿದ್ದರು.ಹಲವಾರು ಪಂದ್ಯಗಳಲ್ಲಿ ವಿಕ್ರಮ್ ಪರ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು‌.ಇದಲ್ಲದೇ ಕರಾವಳಿ ಕುಂದಾಪುರ ಹಾಗೂ ಶ್ರೀಲತಾ ಕುಂದಾಪುರ ತಂಡದ ಪರವಾಗಿ ನೇತಾಜಿ ಪರ್ಕಳ ಪಂದ್ಯದಲ್ಲಿ ಹಾಗೂ ಪಯೋನೀರ್ ಬೀಡಿನಗುಡ್ಡೆ ಪಂದ್ಯಾವಳಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು‌.
ಕುಂದಾಪುರದ ಮೈಲಾರೇಶ್ವರ ಯುವಕ ಸಂಘ ತಂಡವನ್ನು ಪ್ರತಿನಿಧಿಸಿ ಕೋಣಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯದಲ್ಲಿ ಸರಣಿಶ್ರೇಷ್ಟ ಪ್ರಶಸ್ತಿಯೂ ತನ್ನದಾಗಿಸಿಕೊಂಡಿದ್ದರು.
ಹಲವಾರು ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆಕಾರರಾಗಿ ಹಾಗೂ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.ವಿಕ್ರಮ್ ಬೈಂದೂರು ತಂಡದ ಜನರಲ್ ಸೆಕ್ರೆಟರಿಯಾಗಿ,ಪ್ರಸಿದ್ಧ “ಲಾವಣ್ಯ ಕಲಾವೃಂದದ ಪೋಷಕರಾಗಿ ಹಾಗೂ ಬೈಂದೂರು ಜೇಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ‌.ಕಾಲೇಜು ವ್ಯಾಸಂಗದ ವೇಳೆ ಹಲವಾರು ಡಿಬೇಟ್ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು.
1993 ರ ಬಳಿಕ ಹೊಟ್ಟೆಪಾಡಿಗಾಗಿ ಬೆಂಗಳೂರು ಪ್ರವೇಶಿಸಿದ ಇವರು ಸಾಮಾಜಿಕ ಕಾರ್ಯಕರ್ತರಾಗಿ ಹೈಕೋರ್ಟ್ ನಲ್ಲಿ 16 ಸಾರ್ವಜನಿಕ ದಾವೆಗಳಿಗಾಗಿ ಹೋರಾಟ, 25 ಕ್ಕೂ ಹೆಚ್ಚಿನ ಲೋಕಾಯುಕ್ತ ಸಂಬಂಧಿಸಿದಂತೆ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಅಲ್ಲದೆ ACB ದೂರುಗಳ ಬಗ್ಗೆ ತನಿಖೆ ಮಾಡಿದವರು. ಬೆಂಗಳೂರು ನಗರವನ್ನು ಫ್ಲೆಕ್ಸ್ ಮುಕ್ತ ಮಾಡುವಲ್ಲಿ ಯಶಸ್ವಿಯಾದರು.ಜಾಗಕ್ಕೆ ಸಂಬಂಧಿಸಿದಂತೆ ಇರುವ ದೂರುಗಳ ವಿಚಾರಣೆ ಅಲ್ಲದೆ ಬಿಡಿಎ ಲ್ಯಾಂಡ್ ಗಳ ಬಗ್ಗೆ ತನಿಖೆ ನಡೆಸಲು ಯಶಸ್ವಿ ಹೋರಾಟ ನಡೆಸಿದ ಕಾರ್ಯಕರ್ತ ಎಂದು ಹೆಸರು ಮಾಡಿರುವ ಇವರು ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸೋರಾಂ ಬಾಪೂ ಆಶ್ರಮದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿ ಗೆದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಬಿ.ಡಿ.ಎ ಗೆ ಉಳಿಸಿಕೊಟ್ಟ ಆಪತ್ಬಾಂಧವ. ಅನೇಕ ಬಾರಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.ಇವರ ಸಾಮಾಜಿಕ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿದ್ದು ಇವುಗಳಲ್ಲಿ ಬಿ.ಬಿ.ಎಮ್.ಪಿ ಕೊಡಮಾಡಿದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಹಾಗೂ ಶಿರ್ಕೆ ಗ್ರೂಪ್ ಪ್ರಶಸ್ತಿಗಳು ಪ್ರಮುಖವಾದುದು…
ಅಗಲಿದ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಕ್ರಿಕೆಟಿಗರಾದ ಸಾಯಿದತ್ತ ಭಟ್ ಬೈಂದೂರು ಇವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಪ್ರಾರ್ಥಿಸುತ್ತೇವೆ.
Categories
ಸಂತಾಪ

ಕಿರಿ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಗೆ ಬಲಿಯಾದ ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ…!

ಸಾವು ಅನ್ನೋದು ಅನಿರೀಕ್ಷಿತ. ಯಾರು? ಯಾವಾಗ? ಎಲ್ಲಿ? ಹೇಗೆ? ಸಾವಿನಮನೆ ಸೇರುತ್ತಾರೆಂದು ಊಹಿಸಲು ಸಾಧ್ಯವಿಲ್ಲ..! ಯಾವ ರೂಪದಲ್ಲಾದರು ಸಾವು ಎದುರಾಗಬಹುದು. ಈ ರೀತಿಯ ಸಾವಿಗೆ ಉಸಿರು ಚೆಲ್ಲಿದವರು ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಬುಕ್ಕಿಗುಡ್ಡೆಯ ಯುವ ಕ್ರಿಕೆಟಿಗ ರಕ್ಷಿತ್ ಶೆಟ್ಟಿ..!!
ಸಾವು ಬಹುಬೇಗನೆ ಬಂದು ಆತನ ಉಸಿರನ್ನು ಕಸಿದುಕೊಂಡು ಹೋಗಿದೆ ವಿಧಿ..?
 30 ವರ್ಷದ ಗಡಿ ದಾಟುವ ಮುನ್ನವೆ ಬ್ರೈನ್ ಟ್ಯೂಮರ್ ಗೆ ಬಲಿಯಾದ ಯುವಕನನ್ನು ಕಂಡು ಆತನ ಆಪ್ತ ವಲಯ ಬೆಚ್ಚಿ ಬಿದ್ದಿದೆ.ಈತನ ಸಾವಿನ ಸುದ್ದಿ ತಿಳಿದು  ಆತನ ಹೆತ್ತವರಿಗೂ ಸಂಬಂಧಿಕರಿಗೂ ಮತ್ತು ಮಿತ್ರವೃಂದಕ್ಕೂ ಇನ್ನೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿಧಿ ನಿನೇಷ್ಟು ಕ್ರೂರಿ ಬದುಕಿನ ಹಾದಿಯಲ್ಲಿ ನೆಮ್ಮದಿಯ ಪಯಣ ಮಾಡುತ್ತಿದ್ದ  ಹುಡುಗನ ಉಸಿರು ನಿಲ್ಲಿಸಿ ನಿನ್ನ ಕ್ರೂರ ತನವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಿಯಾ..! ಬೆಟ್ಟದಷ್ಟು ಕನಸುಗಳನ್ನು ತನ್ನ ಜೋಳಿಗೆಯಲ್ಲಿ ಹೊತ್ತು ತನ್ನಿಚ್ಚೆಯ ಗುರಿತಲುಪಲು ಹಗಲಿರುಳು ಶ್ರಮಿಸುತ್ತಿದ್ದ  ಯುವಕ  ರಕ್ಷಿತ್ ಶೆಟ್ಟಿ.
ರಕ್ಷಿತ್ ಶೆಟ್ಟಿಗೆ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ಆಟವೆಂದರೆ ಪಂಚಪ್ರಾಣ. ತಾನು ಕೂಡ ಒಳ್ಳೆಯ ಕ್ರಿಕೆಟಿಗನಾಗಬೇಕೆಂದು ಕನಸು ಕಂಡವನು ಸುಮ್ಮನೆ ಕೂರಲಿಲ್ಲಿ. ಕರಾವಳಿ ಮೂಲದ ಪ್ರಸಿದ್ದ ತಂಡಗಳಲ್ಲಿ ಒಂದಾದ ಪೆರ್ಡೂರಿನ *”ಗೆಳೆಯರ ಬಳಗ”* ತಂಡದ ಮುಖಾಂತರ ಕ್ರಿಕೆಟ್ ಆಟವನ್ನು ಆರಂಭಿಸಿದ *”ರಕ್ಷಿತ್ ಶೆಟ್ಟಿ”* ತಿರುಗಿ ನೋಡಲಿಲ್ಲ ಉತ್ತಮ ಆಟಗಾರನಾಗಿ ಹೊರಹೊಮ್ಮಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.  ತಾಲ್ಲೂಕು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಗಳಲ್ಲಿ ತನ್ನ ಆಕರ್ಷಕ ಬೌಲಿಂಗ್ ನಿಂದ ಸಾಕಷ್ಟು ಹೆಸರು ಮಾಡಿದ್ದ ರಕ್ಷಿತ್ ಶೆಟ್ಟಿ ರಾಜ್ಯದ ಹೆಸರಾಂತ ತಂಡಗಳನ್ನು ಪ್ರತಿನಿಧಿಸುವ ಮೂಲಕ ಕರಾವಳಿಯ ಹೆಸರಾಂತ ಬೌಲರ್ ಸಾಲಿನಲ್ಲಿ ತನ್ನ ಹೆಸರನ್ನು ನಮೂದಿಸಿದ್ದರು.
ಸೌಮ್ಯ ಸ್ವಭಾವದ ಆಕರ್ಷಕ ಮೈಕಟ್ಟಿನ ಸುಂದರ ಯುವಕ ರಕ್ಷಿತ್ ಶೆಟ್ಟಿ ತನ್ನ 29 ನೇ ವಯಸ್ಸಿನಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
 ಮನೆಯ ಮುದ್ದಿನ ಮಗನಾಗಿದ್ದ ರಕ್ಷಿತ್ ಶೆಟ್ಟಿಗೆ ಮನೆಯ ಜವಾಬ್ದಾರಿಯು ಕೂಡ ಹೆಗಲ ಮೇಲಿತ್ತು ಎಲ್ಲವನ್ನೂ ನಿಭಾಯಿಸುವ ಶಕ್ತಿಕೂಡ ಅವನಲ್ಲಿತ್ತು. ಎಲ್ಲವನ್ನೂ ಸರಿದೂಗಿಸಿಕೊಂಡು ಹೆಜ್ಜೆ ಹಾಕುತ್ತಿದ್ದ ಸಮಯದಲ್ಲಿಯೇ  ರಕ್ಷಿತ್ ಶೆಟ್ಟಿಯ ಮೇಲೆ ಆ ದೇವರಿಗೂ ಜಲಸ್ಸಿರ ಬೇಕು..! ಕಳೆದ ಜನವರಿ ಎಂಟನೇ ತಾರೀಖು ಯಾರು ಊಹಿಸಲು ಸಾಧ್ಯವಿಲ್ಲದಂತಹ ಸುದ್ದಿಯೊಂದು ಸುನಾಮಿಯಂತೆ ಕರಾವಳಿಯ ಮಂದಿಯ ಕಿವಿಗೆ  ಅಪ್ಪಳಿಸಿತ್ತು..! ಇನ್ನೂ ಬಾಳಿ ಬದುಕಬೇಕಾಗಿದ್ದ 29 ವಯಸ್ಸಿನ ಯುವಕ ರಕ್ಷಿತ್ ಶೆಟ್ಟಿ ಇನ್ನಿಲ್ಲ ಎನ್ನುವ ಸಾವಿನ ಸುದ್ದಿ..!
ತನ್ನ ಬದುಕಿಗೆ ಅಂತ್ಯವಾಡಿ ಒಲ್ಲದ ಮನಸ್ಸಿನಿಂದಲೆ ಈ ನೆಲದ ಋಣ ಮುಗಿಸಿ ಹೊರಟ ಶ್ರೇಷ್ಠ ಕ್ರಿಕೆಟಿಗನ ಸಾವಿನ ಸುದ್ಧಿ ಕರಾವಳಿಯ ಕ್ರಿಕೆಟ್ ಅಂಗಳದ ಅಸಂಖ್ಯಾತ ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು  ಒಮ್ಮೆ ದುಃಖಿಸುವಂತೆ ಮಾಡಿತ್ತು. ರಕ್ಷಿತ್ ಶೆಟ್ಟಿಯ ಸಾವಿನ ಸುದ್ಧಿ ಕೇಳಿದ ಕುಟುಂಬಸ್ಥರು ಮತ್ತು ಮಿತ್ರರು ಕ್ರಿಕೆಟ್ ಅಂಗಳದ ಸ್ನೇಹಿತರ ದುಃಖ ಮುಗಿಲು ಮುಟ್ಟಿತ್ತು. ಚಿಕ್ಕ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಎಂಬ ಮಾರಕ ರೋಗಕ್ಕೆ ಬಲಿಯಾದ ರಕ್ಷಿತ್ ಶೆಟ್ಟಿಯ ಅಂತಿಮ ದರ್ಶನಕ್ಕೆ ಆತನ ಸ್ನೇಹಿತರು ಕ್ರಿಕೆಟ್ ಅಭಿಮಾನಿಗಳು.ಸಹ ಆಟಗಾರರು ಮತ್ತು ಕುಟುಂಬಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಅಂತಿಮ ಯಾತ್ರೆಯೊಂದಿಗೆ ಯುವ ಕ್ರಿಕೆಟಿಗನನ್ನು ಬಿಳ್ಕೋಟ್ಟರು….
ಒಟ್ಟಿನಲ್ಲಿ ಮಾರಕ ರೋಗವೊಂದು ಹರೆಯದ ಯುವಕನನ್ನು ಬಲಿಪಡೆದಿದ್ದು ಮಾತ್ರ ದುರಂತವೆ ಹೌದು..!
 ಮೃತ ರಕ್ಷಿತ್ ಶೆಟ್ಟಿಯ ಆತ್ಮಕ್ಕೆ ಚಿರಶಾಂತಿ ದೊರಕಲಿ ದೇವರು ಅವರ ಅಭಿಮಾನಿಗಳು. ಮಿತ್ರರು ಮತ್ತು ಕುಟುಂಬ ವರ್ಗದರಿಗೆ  ದುಃಖ ಭರಿಸುವ ಶಕ್ತಿ ನೀಡಲಿ
Categories
ಸಂತಾಪ

ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ ಪೆರ್ಡೂರು ನಿಧನ

ಉಡುಪಿ-ರಾಜ್ಯ,ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಮಿಂಚಿದ್ದ ವೇಗಿ,ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ ಪೆರ್ಡೂರು(29 ವರ್ಷ) ಬ್ರೈನ್ ಟ್ಯೂಮರ್ ನಿಂದ ಇಂದು ನಿಧನರಾದರು.
ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ಕ್ರಿಕೆಟ್ ಜೀವನ ಪ್ರಾರಂಭಿಸಿದ ರಕ್ಷಿತ್ ಶೆಟ್ಟಿ ಯಂಗ್ ಸ್ಟಾರ್ ಪೆರ್ಡೂರು,ದುರ್ಗಾ ಆತ್ರಾಡಿ ತಂಡಗಳ ಪರವಾಗಿ ಜಿಲ್ಲಾಮಟ್ಟದ ಪಂದ್ಯಗಳನ್ನಾಡಿದ್ದರು‌.ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ ರಕ್ಷಿತ್ ಶೆಟ್ಟಿ ಎಸ್.ಝಡ್‌‌.ಸಿ.ಸಿ ಮತ್ತು ಎಮ್‌.ಬಿ.ಸಿ.ಸಿ ತಂಡಗಳ ಪರವಾಗಿ ತನ್ನ ಆಕರ್ಷಕ ಶೈಲಿಯ ಬೌಲಿಂಗ್ ಶೈಲಿಯ ಮೂಲಕ ಯಶಸ್ಸು ಸಾಧಿಸಿದ್ದರು.ತನ್ನ ಸರಳ ಸಜ್ಜನಿಕೆಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
ಮೃತರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪರವಾಗಿ ಪ್ರಾರ್ಥಿಸುತ್ತೇವೆ.