ಕುಂದಾಪುರ-ಇಲ್ಲಿನ ಗಾಂಧಿ ಮೈದಾನ ಕ್ರಿಕೆಟ್ ಕಾಶಿ ಎಂದೇ ಹೆಸರುವಾಸಿಯಾದಂತ ತಾಣ. ಇಲ್ಲಿ ಆಗಸ್ಟ್ 20, 2023 ರ ಭಾನುವಾರ ಗಾಂಧಿ ಮೈದಾನದಲ್ಲಿ ಪ್ರತಿ ದಿನ ಆಡುವ ಆಟಗಾರರಿಗೆ ಮೀಸಲಾದ ಕ್ರಿಕೆಟ್ ಪಂದ್ಯಾಕೂಟವು ನಡೆಯಿತು.ಭಾರತದ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಲ್ಕನೇಯ ಆವೃತ್ತಿಯ “ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4” ಆಯೋಜಿಸಲಾಗಿತ್ತು.
ಲೀಗ್ ಕಮ್ ನಾಕೌಟ್ ಮಾದರಿಯ 6 ಓವರುಗಳ ಈ ಪಂದ್ಯಾಕೂಟದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಒಟ್ಟು 5 ತಂಡಗಳಿದ್ದವು. ಭಗತ್ ಸಿಂಗ್ ವಾರಿಯರ್ಸ್,ನೇತಾಜಿ ವಾರಿಯರ್ಸ್, ರಾಯಣ್ಣ ವಾರಿಯರ್ಸ್, ಬೋಸ್ ಆರ್ಮಿ ಮತ್ತು ಸುಖದೇವ್ ವಾರಿಯರ್ ಎನ್ನುವ ಐದು ತಂಡಗಳನ್ನು ಈ ಟೂರ್ನಮೆಂಟ್ ಕೂಡಿತ್ತು. ಆಯಾ ತಂಡಗಳನ್ನು ಹುರಿದುಂಬಿಸಲು ಆಟದ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.ಬೋಸ್ ಆರ್ಮಿ ಹಾಗೂ ರಾಯಣ್ಣ ವಾರಿಯರ್ಸ್ ಈ ಎರಡು ತಂಡಗಳ ನಡುವಿನ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದ್ದರಿಂದ ಪಂದ್ಯಾವಳಿಯ ವಿಜೇತರನ್ನು ನಾಣ್ಯ ಟಾಸ್ ಮೂಲಕ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಸಂದರ್ಭ ಚಾಂಪಿಯನ್ ಎಂದು ಘೋಷಿಸಲಾದ ದಿನೇಶ್ ಮದ್ದುಗುಡ್ಡೆ ಸಾರಥ್ಯದ ಬೋಸ್ ಆರ್ಮಿ ತಂಡಕ್ಕೆ ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4 ನ್ನು ಹಸ್ತಾಂತರಿಸಲಾಯಿತು.

ಫೈನಲ್‌ನಲ್ಲಿ ಅಕ್ಷಯ್ ಆಚಾರ್ ಪಂದ್ಯಶ್ರೇಷ್ಠ ಪ್ರಶಸ್ತಿ, ರಾಘು (ರಾಘವೇಂದ್ರ) ಗೋಲ್ಡನ್ ಮಿಲ್ಲರ್ ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್‌ಮನ್, ದಿನೇಶ್ ಮದ್ದುಗುಡ್ಡೆ ಪಂದ್ಯಾವಳಿಯ ಬೆಸ್ಟ್ ಬೌಲರ್, ನಾಗೇಶ ನಾವಡ ಬೆಸ್ಟ್ ಫೀಲ್ಡರ್, ಯೋಗೀಶ್ ಗೋಲ್ಡನ್ ಮಿಲ್ಲರ್ ಬೆಸ್ಟ್ ವಿಕೆಟ್ ಕೀಪರ್ ಮತ್ತು ಸರಣಿ ಶ್ರೇಷ್ಠ ಆಟಗಾರನಾಗಿ ಅಕ್ಷಯ್ ಆಚಾರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರೆ,ನೋಲನ್ ಭರವಸೆಯ ಯುವ ಆಟಗಾರನಾಗಿ ಮೂಡಿ ಬಂದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸ್ಪೋರ್ಟ್ಸ್ ಕನ್ನಡ ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್ “ಯುವಕರು ಕ್ರೀಡಾಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕಾದರೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ” ಎಂದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಅತಿಥಿಗಳಾಗಿ ಮನೋಜ್ ನಾಯರ್, ಸಂತೋಷ್ ಪೂಜಾರಿ ಮೂಡ್ಲಕಟ್ಟೆ,ನಾಗೇಶ ನಾವಡ, ಶ್ರೀಧರ್ ಸುವರ್ಣ ,ರಾಜು ಬನ್ಸಾಲೆ,ವಿಶ್ವಾಸ್ ಶೆಟ್ಟಿ ಭಾಗವಹಿಸಿದ್ದರು.
ನಿತೇಶ್ ಗೋಲ್ಡನ್ ಮಿಲ್ಲರ್ ಕಾರ್ಯಕ್ರಮ ನಿರೂಪಿಸಿದರು.

ಸತತ ನಾಲ್ಕನೇ ವರ್ಷ ಸನತ್ ಆಚಾರ್ಯ ಮತ್ತು ಅಕ್ಷಯ್ ಅವರ ಮುಂದಾಳುತ್ವದಲ್ಲಿ ಅವರ ಸ್ನೇಹಿತರ ಬಳಗ ಮತ್ತು ಗಾಂಧಿ ಮೈದಾನದ ಆಟಗಾರರ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಟೂರ್ನಮೆಂಟ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಎಲ್ಲಾ ತಂಡಗಳ ಆಟಗಾರರು ಕ್ರೀಡಾ ಸ್ಫೂರ್ತಿಯನ್ನು ಮೆರೆದು ಗಾಂಧಿ ಮೈದಾನದ ಕ್ರಿಕೆಟನ್ನು ಶಾಶ್ವತವಾಗಿ ಚಿರಕಾಲ ಇರುವಂತೆ ಮಾಡಿದರು. ನೆರೆದಿದ್ದವರೆಲ್ಲರೂ ಈ ಕ್ರಿಕೆಟ್ ಪಂದ್ಯಾವಳಿಯನ್ನು ಅತ್ಯಂತ ಉತ್ಸಾಹದಿಂದ ಆನಂದಿಸಿದರು.

ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ಪಂದ್ಯಾವಳಿಯ ನೇರ ಪ್ರಸಾರವನ್ನು ಪ್ರಸ್ತುತಪಡಿಸಿತು. ನೇರಪ್ರಸಾರ ಕಾರ್ಯಕ್ರಮ ಕಣ್ಮನ ಸೆಳೆಯುವಂತಿದ್ದು ಎಲ್ಲರೂ ಉತ್ಸಾಹದಿಂದ ಕಾಣುವಂತಾಯಿತು. ಕುಂದಾಪುರದ ಗಾಂಧಿ ಮೈದಾನದಲ್ಲಿ ಮೊದಲ ಬಾರಿಗೆ ಸ್ಪೋರ್ಟ್ಸ್ ಕನ್ನಡಕ್ಕೆ ನೇರಪ್ರಸಾರ ಮಾಡಲು ಅವಕಾಶ ನೀಡಿದ ಪಂದ್ಯಾವಳಿಯ ಆಯೋಜಕರಿಗೆ ಟೀಮ್ ಸ್ಪೋರ್ಟ್ಸ್ ಕನ್ನಡ ಧನ್ಯವಾದಗಳನ್ನು ಅರ್ಪಿಸುತ್ತದೆ.