ಕೋಲ್ಕತ್ತ : ಬೆಂಗಳೂರು ಎಫ್‌ಸಿ ತಂಡದ ಹೊಸ ಆಟಗಾರ ಸುರೇಶ್ ವಾಂಗ್ಜಾಮ್ 81ನೇ ನಿಮಿಷ ‘ಪೆನಾಲ್ಟಿ’ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ತಮ್ಮ ತಂಡ ಡ್ಯುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆರ್ಮಿ ರೆಡ್ ವಿರುದ್ಧದ ಪಂದ್ಯವನ್ನು 1–1 ಗೋಲುಗಳಿಂದ ‘ಡ್ರಾ’ ಮಾಡಿಕೊಳ್ಳಲು ನೆರವಾದರು.
ಸೋಮವಾರ ಧಗೆಯ ವಾತಾವರಣವಿದ್ದು, ಸೂಪರ್ ಲೀಗ್ ಚಾಂಪಿಯನ್ನರಾದ ಬೆಂಗಳೂರು ಎಫ್‌ಸಿ ಇದಕ್ಕೆ ಹೊಂದಿಕೊಳ್ಳಲು ಪರದಾಡಿತು.
ಆರ್ಮಿ ತಂಡದ ಫಾರ್ವರ್ಡ್ ಆಟಗಾರ ಲಿಟೊನ್ ಶಿಲ್, ವಿರಾಮಕ್ಕೆ ಕೆಲವೇ ಸೆಕೆಂಡುಗಳಿರುವಾಗ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಉತ್ತಮ ಪಾಸ್‌ಗಳನ್ನು ಕಂಡ ಮೊದಲಾರ್ಧದ ಹೆಚ್ಚಿನ ಅವಧಿಯಲ್ಲಿ ಬೆಂಗಳೂರು ಎಫ್‌ಸಿ ಮೇಲುಗೈ ಸಾಧಿಸಿತ್ತು.
ಪಂದ್ಯ ಮುಗಿಯಲು 9 ನಿಮಿಷಗಳಿರುವಂತೆ, ರಕ್ಷಣೆ ಆಟಗಾರ ನಾಮ್‌ಗ್ಯಾಲ್ ಅವರನ್ನು ಎದುರಾಳಿ ತಂಡದ ಬದಲಿ ಆಟಗಾರ ಆಲ್ವಿನ್ ಇ. ಅವರು ಗೋಲಿನ ಹತ್ತಿರ ಕೆಡವಿ ಬೀಳಿಸಿದ ಪರಿಣಾಮ ಬೆಂಗಳೂರು ಎಫ್‌ಸಿಗೆ ‘ಪೆನಾಲ್ಟಿ’ ಅವಕಾಶ ದೊರೆಯಿತು. ಬೆಂಗಳೂರು ತಂಡಕ್ಕೆ ಮೊದಲ ಬಾರಿ ಆಡಿದ ಸುರೇಶ್, ಸಂಯಮದಿಂದ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ಈ ‘ಡ್ರಾ’ದಿಂದ ಒಂದು ಪಾಯಿಂಟ್ ಪಡೆದ ಬೆಂಗಳೂರು ಎಫ್‌ಸಿ ತಂಡ ಈಗ ‘ಎ’ ಗುಂಪಿನಲ್ಲಿ ಎರಡನೇ
ಸ್ಥಾನದಲ್ಲಿದೆ.