ಅದು ಮುಂಬಯಿಯ ಪ್ರಸಿದ್ದ ಕ್ರಿಕೆಟ್ ಪಂದ್ಯ ಭಂಡಾರಿ ಕಪ್‌ನ ಸಂದರ್ಭ.ಆರ್ಯಾ ಗುರುಕುಲ್ ಶಿಕ್ಷಣ ಸಂಸ್ಥೆಯ ಹದಿನಾರರ ವಯೋಮಿತಿಯ ಕ್ರಿಕೆಟ್ ತಂಡಕ್ಕೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಇಕ್ಕಟ್ಟಿನ ಪರಿಸ್ಥಿತಿ.
ಸಂಸ್ಥೆಯ ಆ ವಯಸ್ಸಿನ ಹುಡುಗರಿಗೆ ಪರೀಕ್ಷೆಗಳ ಸಂದರ್ಭ.ಹಾಗೆಂದು ಪಂದ್ಯಾವಳಿಗಳಲ್ಲಿ ಭಾಗವಹಿಸದೇ ಹೋದರೇ ಪಂದ್ಯಾಟಕ್ಕೆ ಭವಿಷ್ಯದಲ್ಲಿ ಸಂಸ್ಥೆಯ ಭಾಗವಹಿಸುವಿಕೆಯ ಬಗ್ಗೆ ನಿರ್ಭಂದಗಳ ಹೇರುವಿಕೆಯ ಸಾಧ್ಯತೆ.ಹಾಗಾಗಿ ತಕ್ಷಣಕ್ಕೆ ನಿರ್ಧರಿಸಿದ ಶಿಕ್ಷಣ ಮಂಡಳಿ,ಹದಿನಾರರ ಬದಲು ಹನ್ನೆರಡರ ಪೋರರ ತಂಡವೊಂದನ್ನು ಟೂರ್ನಿಗೆ ಕಳುಹಿಸಲು ನಿರ್ಧರಿಸುತ್ತದೆ.ಟೆನ್ನಿಸ್ ಬಾಲ್‌ನಲ್ಲಿ ಮಾತ್ರವೇ ಆಡಿ ಅಭ್ಯಾಸವಿದ್ದ ತಂಡದ ಬಹುಪಾಲು ಗುರುಕುಲ್ ಆಟಗಾರರಿಗೆ ಅದು ಮೊದಲ ಲೆದರ್ ಬಾಲ್ ಪಂದ್ಯ.
ಎದುರಿಗಿದ್ದದ್ದು ಕೆ.ಸಿ ಗಾಂಧಿ ಪ್ರೌಢಶಾಲೆಯ ಬಲಿಷ್ಠ ತಂಡ.ತಮ್ಮೆದುರಿಗೆ ಕಂಡ ಪುಟ್ಟ ಬಾಲಕರ ತಂಡ ಕಂಡಾಗಲೇ ಅವರಿಗೆ ಮಾನಸಿಕ ಜಯ.ನಿರೀಕ್ಷೆಯಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಅನನುಭವಿ ಆರ್ಯ ಗುರುಕುಲ್ ಕೇವಲ ಮೂವತ್ತು ಚಿಲ್ಲರೆ ರನ್ನುಗಳಿಗೆ ಆಲೌಟ್. ನಂತರ ಶುರುವಾಗಿದ್ದು ಕೆ.ಸಿ ಗಾಂಧಿಯ ಆಟಗಾರರ ಆರ್ಭಟ.
ಕೆ ಸಿ ಗಾಂಧಿಯ ಸಂಸ್ಥೆಯ ಆರಂಭಿಕ ಹುಡುಗನೊಬ್ಬ ಎದುರಾಳಿ ತಂಡದ ಹುಡುಗರ ಮೇಲೆ ಅಟ್ಟಹಾಸ ಮೆರೆದುಬಿಟ್ಟಿದ್ದ.ಕೇವಲ ಮೂನ್ನುರು ಚಿಲ್ಲರೇ ಎಸೆತಗಳಲ್ಲಿ 59 ಸಿಕ್ಸರ್‌ಗಳು ಮತ್ತು 128 ಬೌಂಡರಿಗಳ ನೆರವಿನಿಂದ ಸಾವಿರ ರನ್ನುಗಳನ್ನು ಬಡಿದು ಸಾರ್ವಕಾಲಿಕ ಅತಿಹೆಚ್ಚು ರನ್ನಿನ ಇನ್ನಿಂಗ್ಸ್ ಎನ್ನುವ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ.
ನಿಜಕ್ಕೂ ಸಾವಿರ ರನ್ನುಗಳನ್ನು ಹೊಡೆಯುವುದು ಅದ್ಭುತ ದಾಖಲೆಯೆನ್ನುವುದರಲ್ಲಿ ಸುಳ್ಳೇನೂ ಇಲ್ಲ.ಆದರೆ ಈ ದಾಖಲೆಗೆ ಎದುರಾಳಿ ತಂಡದ ಕೊಡುಗೆಯೂ ಕಡಿಮೆಯೆನೂ ಇರಲಿಲ್ಲ.ಅತಿ ದುರ್ಬಲ ಎದುರಾಳಿ ತಂಡ ಸಾವಿರ ರನ್ನುಗಳ ಸರದಾರನ ಒಟ್ಟು ಇಪ್ಪತ್ತೆರಡು ಕ್ಯಾಚುಗಳನ್ನು ಕೈಚೆಲ್ಲಿದ್ದರೆ,ಮೂರು ಸ್ಟಂಪಿಂಗ್ ಅವಕಾಶಗಳನ್ನು ತಪ್ಪಿಸಿಕೊಂಡಿದ್ದರು. ಅದರ ಹೊರತಾಗಿ ಮೈದಾನದ ಒಂದು ಪಕ್ಕದ ಬೌಂಡರಿ ಸಹ ಕೇವಲ ಮೂವತ್ತು ಯಾರ್ಡ್‌ಗಳಷ್ಟಿದ್ದಿದ್ದು ಸಹಸ್ರವೀರನಿಗೆ ಇನ್ನಷ್ಟು ಸಹಾಯಕವಾಗಿತ್ತು.ಗುರುಕುಲ್ ತಂಡದ
ಹನ್ನೆರಡರ ವಯೋಮಿತಿಯ ಮುಕ್ಕಾಲು ಪಾಲು ಹುಡುಗರಿಗೆ ಒಂಬತ್ತು ಓವರ್‌ಗಳಿಗಿಂತ ಹೆಚ್ಚು ಓವರ್‌ಗಳಷ್ಟು ಬೌಲಿಂಗ್ ಮಾಡಿ ಅಭ್ಯಾಸವಿರಲಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಹದಿನಾರು ಯಾರ್ಡ್‌ನ ಪಿಚ್‌ನಲ್ಲಿ ಚೆಂಡೆಸೆದು ಮಾತ್ರವೇ ಅಭ್ಯಾಸವಿದ್ದ ಹುಡುಗರು ಮೊದಲ ಬಾರಿಗೆ ಇಪ್ಪತ್ತೆರಡು ಗಜದ ಪಿಚ್‌ನಲ್ಲಿ ಚೆಂಡೆಸೆದಿದ್ದರು…!!
ಇಷ್ಟಾಗಿ ಆತನ ಸಾಧನೆಯೇನೂ ಕಡಿಮೆಯದಲ್ಲ ಎನ್ನುವುದು ಸತ್ಯ.ಆವತ್ತಿನ ಮಹಾರಾಷ್ಟ್ರ ದ ಕ್ರೀಡಾ ಮಂತ್ರಿ ವಿನೋದ್ ತಾವ್ಡೆ,ಆ ಹುಡುಗನ ಭವಿಷ್ಯದ ಕೋಚಿಂಗ್ ಮತ್ತು ಶಾಲಾ ಖರ್ಚುವೆಚ್ಚಗಳನ್ನು ರಾಜ್ಯ ಸರಕಾರವೇ ಭರಿಸುವುದಾಗಿ ಭರವಸೆ ನೀಡಿದ್ದರು.ಸಚಿನ್ ತೆಂಡೂಲ್ಕರ್ ,ಧೋನಿಯಂಥಹ ಆಟಗಾರರು ಅವನ ಆಟವನ್ನು ಕೊಂಡಾಡಿದ್ದರು.
ಅದಾದ ನಂತರ ಏನಾಯಿತು..? ಬಹುಶಃ ಬಹುತೇಕರಿಗೆ ಗೊತ್ತಿಲ್ಲ.ಆತ ಮುಂದೆ ತುಂಬ ಅದ್ಭುತವಾದ ಆಟವೇನೂ ಆಡಲಿಲ್ಲ.ತೀರ ಸಾವಿರ ಅಲ್ಲದಿದ್ದರೂ ಸಾಲು ಸಾಲು ಶತಕಗಳು ,ಪಂದ್ಯ ಗೆಲ್ಲಿಸುವ ಪ್ರದರ್ಶನಗಳು ಆತನಿಂದ ಕಂಡುಬರಲಿಲ್ಲ.ಮಹಾರಾಷ್ಟ್ರ ಸರಕಾರದ ಮಾಸಿಕ ಹತ್ತು ತಿಂಗಳ ಪ್ರೋತ್ಸಾಹ ಧನದ ಹೊರತಾಗಿಯೂ ಆತನ ಆಟದಲ್ಲಿ ವಿಶೇಷ ಬೆಳವಣಿಗೆ ಏನೂ ಕಂಡು ಬರಲಿಲ್ಲ. ಸತ್ಯಾಸತ್ಯತೆಗಳ ಅರಿವಿಲ್ಲವಾದರೂ ಪ್ರಣವ್ ಧನಾವಡೆ ಎನ್ನುವ ಸಾವಿರ ರನ್ನುಗಳ ಸರದಾರ ತೀರ ಇತ್ತೀಚೆಗೆ ಆತ ಕ್ರಿಕೆಟ್ ಬಿಟ್ಟುಬಿಟ್ಟ ಎಂಬ ಸುದ್ದಿಗಳೂ ಬಂದಿದ್ದವು.
ನಮ್ಮಲ್ಲಿ ಬಹುತೇಕರಿಗೆ ಈ ಹುಡುಗನ ನೆನಪಾಗುವುದು ಅರ್ಜುನ್ ತೆಂಡೂಲ್ಕರ್‌ನ ಹೆಸರು ಕೇಳಿಬಂದಾಗ ಮಾತ್ರವೇ.ಅರ್ಜುನ್ ತೆಂಡೂಲ್ಕರ್ ಯಾವುದಾದರೂ ಪಂದ್ಯಾವಳಿಗೆ ಆಯ್ಕೆಯಾದರೆ ಸಾಕು ,ತಕ್ಷಣವೇ ಮೀಮ್‌ಗಳು ಪ್ರತ್ಯಕ್ಷ.ಆಟೊ ಚಾಲಕನ ಮಗ ಸಾವಿರ ರನ್ನು ಹೊಡೆದರೂ ಆಯ್ಕೆಯಾಗಲಿಲ್ಲ,ಆದರೆ ‘ತೆಂಡೂಲ್ಕರ್’ ಎನ್ನುವ ಹೆಸರಿನಿಂದ ಆಯ್ಕೆ ಎನ್ನುವ ಭಾವುಕ, ರೋಷಾವೇಶದ ಮಾತುಗಳು.ತೆಂಡೂಲ್ಕರ್ ಮಗನ ಆಯ್ಕೆ ಕೇವಲ ತೆಂಡೂಲ್ಕರ್ ಎನ್ನುವ ಕಾರಣಕ್ಕೆ ಆಗುವುದು ಎಷ್ಟು ತಪ್ಪೋ ,ಹಾಗೆ ಸಾವಿರ ರನ್ನುಗಳ ಒಂದು
ಹೈಸ್ಕೂಲ್ ಮಟ್ಟದ ಇನ್ನಿಂಗ್ಸ್‌ನ ಕಾರಣಕ್ಕೆ ಹುಡುಗನೊಬ್ಬನ ಆಯ್ಕೆಯೂ ತಪ್ಪೆ ಎನ್ನುವುದು ನನ್ನ ತರ್ಕವಾದರೂ ,’ಆಟೋ ಚಾಲಕ’ ಎನ್ನುವ ‘ಬಡವರ’ಮಗನನ್ನು ಟೀಕಿಸಿದ ಮಹಾಪರಾಧಕ್ಕೆ ನನಗೆ ಶಿಕ್ಷೆಯಾದೀತು ಎಂದು ಸುಮ್ಮನಾಗಿದ್ದೇನಷ್ಟೇ
ಇವತ್ತು ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಎಂಬ ಸುದ್ದಿ ನೋಡಿ ನನಗೆ ಇದೆಲ್ಲ ನೆನಪಾಯಿತು.