ಬೆಂಗಳೂರು : ಎಲ್ಲರ ಕಂಗಳ ಮುಂದೆಯೇ ಮೂರು ಪ್ಲೈವುಡ್ ಫಲಕಗಳನ್ನು ಜೋಡಿಸಿ ಮಾಡಿದ್ದ ಪೆಟ್ಟಿಗೆ ಖಾಲಿ ಇದೇ ಎಂದುಕೊಂಡವರಿಗೆ ಅಚ್ಚರಿ ಕಾದಿತ್ತು. ಅದನ್ನು ತೆರೆದಾಗ ಮಿರಿಮಿರಿ ಮಿಂಚುವ ಟ್ರೋಫಿಯೊಂದಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಪ್ರತ್ಯಕ್ಷರಾಗಿದ್ದರು.
ಹೌದು ಮಂಗಳವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣ ದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಎಂಟನೇ ಆವೃತ್ತಿಯ ಕಪ್ ಅನಾವರಣಗೊಂಡಿದ್ದು ಹೀಗೆ. ಅದೂ ಜಾದೂಗಾರ ಆಕರ್ಷ್ ಭಟ್ ಅವರ ಕಣ್ಕಟ್ಟಿನ ಕೈಚಳಕವಾಗಿತ್ತು.
ಅದಕ್ಕೆ ಹಿರಿಯ ಕ್ರಿಕೆಟಿಗ ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಸಿನಿತಾರೆ ಕಿಚ್ಚ ಸುದೀಪ್ ಅವರು ಸಾಕ್ಷಿಯಾದರು. ಕೆಎಸ್‌ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ಕಾರ್ಯದರ್ಶಿ ಸುಧಾಕರ್ ರಾವ್, ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ್ ಕೂಡ ಅಲ್ಲಿದ್ದರು.