16.4 C
London
Monday, May 13, 2024
Homeಸ್ಪೋರ್ಟ್ಸ್ಏಷಿಯಾಡ್ 2023 - ಭಾರತದ ಮಹಾ ವಿಜಯ.

ಏಷಿಯಾಡ್ 2023 – ಭಾರತದ ಮಹಾ ವಿಜಯ.

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಶತಕ ಪದಕಗಳನ್ನು ದಾಟಿ ಮುನ್ನಡೆ ಪಡೆಯಿತು ಭಾರತ.
ಭಾರತದ ಹೆಗ್ಗಳಿಕೆಗೆ ಕಾರಣವಾದ ಆ 20 ಅಂಶಗಳು.
———————————–
2023ರ ಏಷಿಯಾಡ್ ಚೀನಾ ದೇಶದಲ್ಲಿ ಈ ವಾರಾಂತ್ಯದಲ್ಲಿ  ಮುಗಿದಿದ್ದು ಭಾರತವು ಸಾರ್ವತ್ರಿಕ ದಾಖಲೆ ಮಾಡಿದೆ. ಭಾರತವು ನೂರು ಪದಕಗಳ ಟ್ಯಾಲಿ ದಾಟಿ
ಮುನ್ನಡೆದದ್ದು ಇದೇ ಮೊದಲು. ಬಲಿಷ್ಠ ರಾಷ್ಟ್ರಗಳನ್ನು ಹಿಂದೆ ಹಾಕಿ ಭಾರತವು ಟಾಪ್ 4ನೆ  ಸ್ಥಾನವನ್ನು ಆಕ್ರಮಿಸಿದ್ದು ಸಣ್ಣ ಸಾಧನೆಯಲ್ಲ. ಅದರ ಸಾರಾಂಶವನ್ನು ಗಮನಿಸಿದಾಗ ಇದು ಭಾರೀ ದೊಡ್ಡ ಸಕ್ಸಸ್. ಇದರ ಕೀರ್ತಿಯು ಆ ಎಲ್ಲ ಕ್ರೀಡಾಪಟುಗಳಿಗೆ, ಅವರ ಕೋಚ್ ಮತ್ತು ಭಾರತ ಸರಕಾರದ ಕ್ರೀಡಾ ಸಚಿವಾಲಯಕ್ಕೆ ಸಲ್ಲಬೇಕು.
‘ಇಸ್ ಬಾರ್ 100 ಪಾರ್’  – ಇದು ಘೋಷಣೆ ಆಗಿತ್ತು.
———————————–
ಜಕಾರ್ತಾದಲ್ಲಿ ನಡೆದ ಕಳೆದ  ಏಷಿಯಾಡ್ ಕೂಟದಲ್ಲಿ ಭಾರತವು 70 ಪದಕ ಮಾತ್ರ ಗೆದ್ದಿತ್ತು. ಆಗಲೇ ಭಾರತದ ಕ್ರೀಡಾ ಸಚಿವಾಲಯವು  ಸ್ಟ್ರಾಂಗ್ ಆದ ಕ್ರಿಯಾ ಯೋಜನೆ ಹಾಕಿಕೊಂಡು ಹೊರಟಿತ್ತು. ‘ ಇಸ್ ಬಾರ್ 100 ಪಾರ್’ ಎನ್ನುವುದು ಈ ಬಾರಿಯ ಘೋಷಣೆ ಆಗಿತ್ತು. ಸಚಿವಾಲಯವು ಸಣ್ಣ ಸಣ್ಣ ಅಂಶಗಳನ್ನು ಕೂಡ ಗಮನಿಸಿತು. ಎಲ್ಲ ರಾಜ್ಯಗಳಿಂದ ನೂರಾರು ಯುವ ಪ್ರತಿಭೆಗಳನ್ನು ಆರಿಸಿ ತಂದಿತು. ಉತ್ತಮ ಕೋಚಿಂಗ್ ವ್ಯವಸ್ಥೆ ಮಾಡಿತು. ಕ್ರೀಡಾ ಸಲಕರಣೆ ತಂದು ಕೊಟ್ಟಿತ್ತು. ಅದರ ಫಲವಾಗಿ ಈ ಅದ್ಭುತವಾದ ಫಲಿತಾಂಶ ಬಂದಿದ್ದು ಭಾರತವು ಹೆಮ್ಮೆಯಿಂದ ಬೀಗುವಂತೆ ಆಗಿದೆ. ಹಾಗೆಯೇ ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಭಾರತದ ನಿರೀಕ್ಷೆಗಳು ಹೆಚ್ಚಾಗಿವೆ.
2023 ಏಷಿಯಾಡಿನ ಹೆಮ್ಮೆಯ ಕ್ಷಣಗಳು. 
———————————-
೧) ಭಾರತವು ಗೆದ್ದ ಒಟ್ಟು ಪದಕಗಳ ಸಂಖ್ಯೆ -107( 28 ಚಿನ್ನ +38 ಬೆಳ್ಳಿ+41 ಕಂಚು). ಇದು ಭಾರೀ ದೊಡ್ಡ ದಾಖಲೆ. ಇಷ್ಟು ಪದಕಗಳನ್ನು ಭಾರತವು ಏಷಿಯಾಡ್ ಕೂಟದಲ್ಲಿ ಈವರೆಗೆ ಗೆದ್ದಿರಲಿಲ್ಲ!
೨) ಅಥ್ಲೆಟಿಕ್ ಈವೆಂಟ್ ಭಾರತಕ್ಕೆ ಈ ಬಾರಿ 29 ಪದಕಗಳನ್ನು  ತಂದುಕೊಟ್ಟಿತ್ತು. ಇದು ಕೂಡ ದಾಖಲೆ.
೩) ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ನಿರೀಕ್ಷೆ ಮೀರಿ 22 ಪದಕಗಳು ದೊರೆತವು.
೪) ಸಾತ್ತ್ವಿಕ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಭಾರತಕ್ಕೆ ಮೊಟ್ಟಮೊದಲ ಬ್ಯಾಡ್ಮಿಂಟನ್ ಡಬಲ್ಸ್ ಗೋಲ್ಡ್ ತಂದುಕೊಟ್ಟರು. ಇದು ಮೊದಲ ಬಾರಿ ಆಗಿರುವ ಘಟನೆ.
೫) ರಾಷ್ಟ್ರೀಯ ದಾಖಲೆಯನ್ನು  ಹೊಂದಿರುವ ಪಾರೂಲ್ ಚೌಧರಿ ಈ ಬಾರಿ 5000 ಮೀಟರ್ ಓಟದಲ್ಲಿ ಚಿನ್ನದ ಓಟ ಪೂರ್ತಿ ಮಾಡಿದರು. ಆ ರೇಸ್ ನೋಡಿದವರು ಖಂಡಿತ ರೋಮಾಂಚನ ಪಟ್ಟಿರುತ್ತಾರೆ. ಕೊನೆಯ ಕ್ಷಣದಲ್ಲಿ ಆಕೆ ಚಿರತೆಯ ಹಾಗೆ ಓಡಿ ಚಿನ್ನದ ಗೆರೆ ದಾಟಿದ್ದು ನನಗೆ ರೋಮಾಂಚನ ಕೊಟ್ಟ ಘಟನೆ.  28 ವರ್ಷದ ಆಕೆ 3000 ಮೀಟರ್ ಸ್ಟೀಪಲ್ ಚೇಸನಲ್ಲಿ ಬೆಳ್ಳಿಯ ಪದಕವನ್ನು ಕೂಡ  ಗೆದ್ದರು.
೬) ಉತ್ತರಪ್ರದೇಶದ ಮೀರತ್ ನಗರದ ಕಡು ಬಡತನದ ಕುಟುಂಬದ ಜಾಟ್ ಮಹಿಳೆ ಅನ್ನೂ  ರಾಣಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದರು. 31 ವರ್ಷದ ಆಕೆ ಬಾಲ್ಯದಲ್ಲಿ ತಾನೇ ಸಿದ್ಧಪಡಿಸಿದ ಬಿದಿರಿನ ಜಾವೆಲಿನ್ ಹಿಡಿದು ಪ್ರಾಕ್ಟೀಸ್ ಮಾಡುತ್ತಿದ್ದರು ಅನ್ನೋದು ರೋಮಾಂಚಕ ಘಟನೆ.
೭) ಆರ್ಚರಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮಹಿಳೆ ವೆನ್ನಂ ಜ್ಯೋತಿ ಸುರೇಖಾ ಆಂಧ್ರಪ್ರದೇಶದವರು. B.E ಮತ್ತು M.B.A ಪದವಿ ಪಡೆದಿರುವ ಆಕೆ ಆರ್ಚರಿ ವಿಶ್ವಕಪ್ ಕೂಟದಲ್ಲಿ ಕೂಡ ಚಿನ್ನ ಗೆದ್ದಿದ್ದಾರೆ. ಆಕೆಯ ವಯಸ್ಸು ಇನ್ನೂ  27.
೮) ಭಾರತದ ಸ್ಟಾರ್ ಕ್ರಿಕೆಟ್ ಆಟಗಾರರು ಈಗ ವಿಶ್ವಕಪ್ ಕೂಟದಲ್ಲಿ ಆಡುತ್ತಿರುವ ಕಾರಣ ಭಾರತವು ಏಶಿಯಾಡಿಗೆ ತನ್ನ B ಟೀಮ್ ಕಳುಹಿಸಬೇಕಾಯಿತು. ಋತುರಾಜ್ ಗಾಯಕವಾಡ್ ನಾಯಕತ್ವದ ಕ್ರಿಕೆಟ್ ತಂಡ ಚೀನಾದಲ್ಲಿ ಚಿನ್ನದ ಪದಕ ಗೆದ್ದು ಮೆರೆದಿದೆ. ಮಹಿಳಾ ಕ್ರಿಕೆಟ್ ತಂಡ ಕೂಡ ಅನಾಯಾಸವಾಗಿ ಚಿನ್ನ ಗೆದ್ದಿತು.
೯) ಕಬ್ಬಡ್ಡಿಯ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಭಾರತವು ಚಿನ್ನದ ಪದಕ ಬೇಟೆ ಆಡಿದೆ.
೧೦) ಪ್ರಗ್ಯಾನಂದ ಇರುವ ಪುರುಷರ ಚೆಸ್ ತಂಡ, ಕೊನೆರು ಹಂಪಿ ಇರುವ ಚೆಸ್ ಮಹಿಳೆಯರ ತಂಡ ಎರಡೂ ಇಲ್ಲಿ ಬೆಳ್ಳಿಯ ಪದಕ ಗೆದ್ದು ಬೀಗಿವೆ.
೧೧) ಆರ್ಚರಿ ವಿಭಾಗದಲ್ಲಿ ಈ ಬಾರಿ ಭಾರತಕ್ಕೆ ಭಾರೀ ಅಚ್ಚರಿಯ ಫಲಿತಾಂಶ. ಒಟ್ಟು ಒಂಬತ್ತು ಪದಕಗಳು ಭಾರತದ ಬುಟ್ಟಿಗೆ ಸೇರಿವೆ.
.೧೨) ಭಾರತದ ಪರಿಣತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಈ ಬಾರಿ ಭಾರತಕ್ಕೆ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ತಂದಿದ್ದಾರೆ. ಅವರ ವಯಸ್ಸು 43 ಮಾತ್ರ! ರೋಹನ್ ಬೋಪಣ್ಣ  ಕನ್ನಡವರು. ಅವರ ಜೊತೆ ಟೆನ್ನಿಸ್ ಆಡಿದ ಋತುಜಾ ಭೋಂಸ್ಲೆ ಕೊನೆಯ ಕ್ಷಣದಲ್ಲಿ ಅವರ ಡಬಲ್ಸ್ ಜೊತೆಗಾರರಾಗಿ ಆಯ್ಕೆ ಆದವರು.
೧೩) ಅದಿತಿ ಅಶೋಕ್ ನಿರೀಕ್ಷೆಯಂತೆ ಭಾರತಕ್ಕೆ ಮೊದಲ ಗಾಲ್ಫ್ ಬೆಳ್ಳಿ ತಂದುಕೊಟ್ಟರು. ಅವರು ಕೂಡ ಕನ್ನಡಿಗರು.
೧೪) ಶೂಟಿಂಗ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುವ ದಿವ್ಯ ಟಿ ಎಸ್ ಬೆಂಗಳೂರಿನವರು. ಬಾಲ್ಯದಿಂದಲೂ ಬಾಸ್ಕೆಟ್ ಬಾಲ್ ಆಡುತ್ತ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದ ಆಕೆ ಈ ಬಾರಿ ಬೆನ್ನು ನೋವಿನ ಕಾರಣಕ್ಕೆ ಬಾಸ್ಕೆಟ್ ಬಾಲ್ ಬಿಟ್ಟು ಶೂಟಿಂಗ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು!
೧೫) ಮಹಾರಾಷ್ಟ್ರದ ಸೈನಿಕ ಅವಿನಾಶ್ ಸಾಬ್ಲೆ 3000 ಮೀಟರ್ ಸ್ಟೀಪಲ್ ಚೇಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರು ಮತ್ತು 5000 ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಪಡೆದರು. ಸಣಕಲು ಶರೀರದ ಅವರು ಲಾಂಗ್ ರೇಸ್ ಓಡುವಾಗ ಆಯಾಸದ ಪರಿವೆಯೇ ಇರುವುದಿಲ್ಲ ಅನ್ನೋದು ಅಚ್ಚರಿ. ಅವರೊಳಗೆ ಒಂದು ಪುಟ್ಟ ಡೈನಮೋ ಇದೆ ಅನ್ನುವುದು ನನ್ನ ಅನಿಸಿಕೆ.
೧೬) ನಿರೀಕ್ಷೆಯಂತೆ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರ ಚಿನ್ನ ಗೆದ್ದರು. ಅವರಿಗೆ ತೀವ್ರವಾದ ಸ್ಪರ್ಧೆ ಒಡ್ಡಿದ ಭಾರತದ್ದೇ ಕಿಶೋರ್ ಜೆನ್ನ ಬೆಳ್ಳಿಯ ಪದಕವನ್ನು ಗೆದ್ದದ್ದು ಭಾರತಕ್ಕೆ ಹೆಮ್ಮೆ.
೧೭) ನಾಗಪುರದ ಓಜಸ್ ದೇವತಾಲ್ ಆರ್ಚರಿಯಲ್ಲಿ ಎರಡು ಚಿನ್ನದ ಪದಕ ಗೆದ್ದರು. ಆತನನ್ನು ಭಾರತದ ಭವಿಷ್ಯದ ಸ್ಟಾರ್ ಎಂದು ಕರೆಯಲಾಗುತ್ತದೆ.
೧೮) ತೇಜಿಂದರ್ ಸಿಂಘ್ ಶಾಟಪುಟ್ ವಿಭಾಗದಲ್ಲಿ ನಿರೀಕ್ಷೆಯಂತೆ ಚಿನ್ನವನ್ನು ಗೆದ್ದರು. ಇದರಿಂದಾಗಿ ಸತತ ನಾಲ್ಕು ಏಷಿಯನ್ ಕೂಟಗಳಲ್ಲಿ ಭಾರತವು ಶಾಟ್ಪುಟ್ ಚಿನ್ನದ ಪದಕಗಳನ್ನು ಗೆದ್ದ ಹಾಗಾಯ್ತು.
೧೯)ಅಪರೂಪದಲ್ಲಿ ಅಪರೂಪವಾದ ಕನೋಯಿಂಗ್, ಸ್ಕೇಟಿಂಗ್, ಸೇಪಕ್ ಟಕ್ರ, ವುಶು,
 ಇಕ್ವೆಸ್ಟ್ರಿಯನ್, ಬ್ರಿಜ್ ಮೊದಲಾದ ಆಟಗಳಲ್ಲಿ ಕೂಡ ಭಾರತವು ಈ ಬಾರಿ ಪದಕಗಳನ್ನು ಗೆದ್ದಿದೆ.
೨೦) ನಮ್ಮ ಸಾಪ್ರದಾಯಿಕ ಎದುರಾಳಿ ಆಗಿರುವ ಪಾಕಿಸ್ತಾನ ಕೇವಲ ಮೂರು ಪದಕ ಗೆದ್ದಿತು ಅಂದರೆ ಭಾರತದ ಸಾಧನೆಯು ಖಂಡಿತ ಎದ್ದು ಕಾಣುತ್ತದೆ.
ಭರತ ವಾಕ್ಯ – ಭಾರತವು ಇಂದು ಎಲ್ಲ ವಿಭಾಗಗಳಲ್ಲೂ ಸಾಧನೆ ಮಾಡಿರುವ ಹಾಗೆ ಹೊಸ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮುಂದಿನ ಒಲಿಂಪಿಕ್ ಕೂಟಕ್ಕೆ  ಕೂಡ ಭಾರತವು ಈ ಏಷಿಯನ್ ಕ್ರೀಡೆಯ ಮೂಲಕ ಆತ್ಮವಿಶ್ವಾಸ
ಹೆಚ್ಚಿಸಿಕೊಂಡಿದೆ ಎನ್ನಬಹುದು. ಕೇಂದ್ರ ಸರ್ಕಾರವು ಯಶಸ್ವೀ ಆಗಿ ಜಾರಿಗೆ ತಂದಿರುವ ‘ಖೇಲೋ ಇಂಡಿಯಾ’ ಯೋಜನೆಯ ಫಲ ಇಲ್ಲಿ ದೊರಕಲು ಆರಂಭವಾಗಿದೆ  ಎಂದು ಖಚಿತವಾಗಿ ಹೇಳಬಹುದು.

Latest stories

LEAVE A REPLY

Please enter your comment!
Please enter your name here

4 − four =