ವ್ಯಕ್ತಿಯೊಬ್ಬನ ಬದುಕಿನಲ್ಲಿ ಅದೃಷ್ಟ ಎನ್ನುವುದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾಣಬೇಕಾದರೆ ಆ ವ್ಯಕ್ತಿಗಳ ಜೀವನವನ್ನೊಮ್ಮೆ ಇಣುಕಿ ನೋಡಬೇಕು.ಮನುಷ್ಯನಿಗೆ ಯೋಗ್ಯತೆ ಇದ್ದರೆ ಸಾಲದು,ಯೋಗವೂ ಬೇಕು. ಇವೆರಡೇ ಇದ್ದರೆ ಸಾಲದು ಅನುಭವಿಸುವ ಭಾಗ್ಯಬೇಕು. ವ್ಯಕ್ತಿಯೊಬ್ಬ ಶಕ್ತಿಯಾಗಿ ಲೋಕಮುಖಕ್ಕೆ ಕಾಣಿಸಿಕೊಳ್ಳುವಲ್ಲಿ ಯೋಗ್ಯತೆ,ಯೋಗ ಮತ್ತು ಭಾಗ್ಯಗಳ ಸಂಗಮವಾಗಬೇಕು. ರಾಜಕೀಯ, ಉದ್ಯೋಗ, ವ್ಯವಹಾರ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಕ್ಕೂ ಇದು ಅನ್ವಯಿಸುತ್ತದೆ.
ದಾಂಡು ಚೆಂಡನ್ನು ಕೈಯಲ್ಲಿ ಹಿಡಿದು,ಕ್ರಿಕೆಟ್ ಅನ್ನು ಉಸಿರಾಗಿಸಿಕೊಂಡು ಬದುಕುವ ಪ್ರತಿಯೊಬ್ಬ ಕ್ರಿಕೆಟಿಗನ ಕನಸು, ತಾನು ಈ ಕ್ರೀಡೆಯಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬೇಕು ಎಂಬುದು.ಅದು ಸಾಧ್ಯವಾಗಲ್ಪಡುವುದು ಆತನ ಪರಿಶ್ರಮ, ಕಠಿಣ ದುಡಿಮೆ,ಬದ್ಧತೆಗಳಿಂದ.ಬ್ಯಾಟ್ಸ್ಮನ್ ಆದರೇ ಸೆಂಚುರಿ ಮೇಲೆ ಸೆಂಚುರಿ ಹೊಡೆದೋ,ಬೌಲರ್ ಆದರೆ ನಿರಂತರವಾಗಿ ವಿಕೆಟ್ ಗಳ ಗೊಂಚಲುಗಳನ್ನು ಗಳಿಸುತ್ತಲೋ ತನ್ನ ಪ್ರತಿಭೆಯನ್ನು ತೋರ್ಪಡಿಸಬೇಕು.ದೇಶಿಯ ಕ್ರಿಕೆಟ್ ನಲ್ಲಿ ಅಂತಹದಕ್ಕೆ ವೇದಿಕೆ ಕಲ್ಪಿಸಿಕೊಡುವುದು ಪ್ರತಿಷ್ಠಿತ “ರಣಜಿ ಟ್ರೋಫಿ”.ಇಲ್ಲಿ ನಿರಂತರವಾಗಿ ತನ್ನ ಸಾಮರ್ಥ್ಯವನ್ನು ಸಾಬೀತುತಪಡಿಸುವ ಆಟಗಾರ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಾನೆ.ಆದರೆ ನಿರಂತರ ಉತ್ಕೃಷ್ಟ ವಾದ ಪ್ರದರ್ಶನ ತೋರುತ್ತಾ ಬಂದರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆಯಲು ಓರ್ವ ಆಟಗಾರ ವಿಫಲ ಆಗ್ತಾನೆ ಅಂತಾದರೆ ಆತ ನಿಜಕ್ಕೂ ಭಾಗ್ಯವಿಹೀನ ಎಂದಷ್ಟೇ ಅರ್ಥ. ಹೌದು ಅಂತಹ ನತದೃಷ್ಟ ಕ್ರಿಕೆಟಿಗನೇ ದೇಶ ಕಂಡ ಶ್ರೇಷ್ಠ ಎಡಗೈ ಸ್ಪಿನ್ನರ್, ರಣಜಿ ಟ್ರೋಫಿಯ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ “ರಾಜೀಂದರ್ ಗೋಯೆಲ್” ಎಂಬ ಹರ್ಯಾಣದ ಆಟಗಾರ.
1940 ಸೆಪ್ಟೆಂಬರ್ 20 ರಂದು ಹರ್ಯಾಣದ “ನರ್ವಾನ” ದಲ್ಲಿ ರೇಲ್ವೆ ಯ ಸ್ಟೇಷನ್ ಮಾಸ್ಟರ್ ಒಬ್ಬರ ಮಗನಾಗಿ ಜನಿಸಿದ ಗೋಯೆಲ್ ತನ್ನ ಕ್ರಿಕೆಟ್ ಬದುಕನ್ನು ಆರಂಭಿಸಿದ್ದು ಸರ್ವಿಸಸ್ ವಿರುದ್ಧ ಪಾಟಿಯಾಲ ತಂಡದ ಪರವಾಗಿ ಆಡುತ್ತಾ. ಅಂದಿನಿಂದ ಮೊದಲ್ಗೊಂಡು ತನ್ನ ಕೊನೆಯ ಪಂದ್ಯದವರೆಗೂ ನಿಷ್ಠೆ, ಬದ್ಧತೆಯೊಂದಿಗೆ ಈ ಆಟದಲ್ಲಿ ತೊಡಗಿಸಿಕೊಂಡು ತನ್ನ ನಿಖರವಾದ ವೇಗ ಮತ್ತು ಅಂತರವನ್ನು ಕಾಯ್ದುಕೊಳ್ಳುವ ಎಸೆತಗಾರಿಕೆಯಿಂದ ಬ್ಯಾಟ್ಸ್ಮನ್ ಗಳಿಗೆ ಅಕ್ಷರಶಃ ಕಂಟಕಪ್ರಾಯರಾಗಿದ್ದರು.ಅವರ ಅಂಕಿ ಅಂಶಗಳತ್ತ ಗಮನಿಸಿದರೆ ತಿಳಿಯುವುದು ಅವರೆಂತಹ ಬೌಲರ್ ಎಂಬುದು. 157 ಪಂದ್ಯಗಳಿಂದ 750 ವಿಕೆಟ್ ಗಳು ಅದೂ ಸರಾಸರಿ 18.58 ರಂತೆ, 59 ಬಾರಿ ಐದು ವಿಕೆಟ್ ಗಳ ಗೊಂಚಲು,ಪಂದ್ಯವೊಂದರಲ್ಲಿ ಹದಿನೆಂಟು ಬಾರಿ ಹತ್ತು ವಿಕೆಟ್ ಗಳನ್ನು ಪಡೆದುಕೊಂಡದ್ದು ಸಾಧಾರಣ ಸಾಧನೆ ಅಲ್ಲವೇ ಅಲ್ಲ.ಕೇವಲ ರಣಜಿ ಪಂದ್ಯಾವಳಿಯಲ್ಲಿಯೇ 637 ವಿಕೆಟ್ ಗಳು,ಅದೂ ಈಗಲೂ ರಾಷ್ಟ್ರೀಯ ದಾಖಲೆಯಾಗಿಯೇ ಉಳಿದಿದೆ ಇವರ ನಂತರದ ಸ್ಥಾನ 530 ವಿಕೆಟ್ ಪಡೆದಿರುವವರು ಮತ್ತೋರ್ವ ಮೇರು ಸ್ಪಿನ್ನರ್ ಎಸ್,ವೆಂಕಟ್ ರಾಘವನ್.ಅಂದರೇ ಪ್ರಥಮ ಮತ್ತು ದ್ವಿತೀಯ ಸ್ಥಾನಗಳ ನಡುವೆ 1೦7 ವಿಕೆಟ್ ಗಳ ಅಂತರವಿದೆ.ಪ್ರಾಯಶಃ ಇವರ ಈ ದಾಖಲೆಯನ್ನು ಮುರಿಯುವವರು ಹುಟ್ಟಿ ಬರಲಾರರು.1958 ರಿಂದ 1984 ರ ವರೆಗೆ ನಿರಂತರವಾಗಿ 26 ವರ್ಷಗಳ ದೇಶೀಯ ಕ್ರಿಕೆಟ್ ನ ರಾಜನಾಗಿ ಮೆರೆದ ಈ ಸ್ಪಿನ್ನರ್ ತನ್ನ ಕ್ರಿಕೆಟ್ ಜೀವನದ ಕೊನೆಯ ಎರಡೂ ಸೀಸನ್ ಗಳಲ್ಲಿಯೂ ಪಂದ್ಯಾವಳಿಯ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಮೂಡಿಬಂದಿದ್ದರು.
ಪ್ರತಿಯೊಬ್ಬ ವ್ಯಕ್ತಿಗೆ ಕಾಲ ಸರಿ ಇದ್ದಾಗ ಮಾತ್ರ ಎಲ್ಲವೂ ಅವನ ಪರವಾಗಿ ಹೊಂದಿ ಬರುತ್ತದೆ. ರಾಜೇಂದ್ರ ಗೋಯಲ್ ರ ಪಾಲಿಗೂ ಕೂಡ ಅದೇ ಆಗಿದ್ದು.ಅವರು ಆಡಿದ ಕಾಲಘಟ್ಟ, ಪ್ರಸನ್ನ ಬೇಡಿ ಚಂದ್ರಶೇಖರ್ ಎಂಬ ವಿಶ್ವ ಶ್ರೇಷ್ಠ ತ್ರಿವಳಿಸ್ಪಿನ್ನರ್ ಗಳು ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಕಾಲ.ಅದರಲ್ಲೂ ಸ್ವತಃ ಎಡಗೈ ಸ್ಪಿನ್ನರ್ ಆದ ಬೇಡಿ ಇರುವ ತನಕ ಗೋಯೆಲ್ ಅವಕಾಶವಂಚಿತರಾಗಲೇ ಬೇಕಾಯಿತು.ಇವರ ದುರದೃಷ್ಠ ಎಷ್ಠರಮಟ್ಟಿಗೆ ಕೇಳಿದರೆ ,1974 ನವೆಂಬರ್ ರಲ್ಲಿ ಕ್ಲೈವ್ ಲಾಯ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಮಾಡುತ್ತದೆ, ಆ ಸರಣಿಯ ಪ್ರಥಮ ಟೆಸ್ಟ್ ಬೆಂಗಳೂರಿನಲ್ಲಿ ನಡೆದಿತ್ತು( ದೈತ್ಯ ಆಟಗಾರ ವಿವಿಯನ್ ರಿಚರ್ಡ್ ರ ಪಾದಾರ್ಪಣಾ ಟೆಸ್ಟ್) ಆ ಟೆಸ್ಟ್ ಗೆ ಬೇಡಿಯವರನ್ನು ಅಶಿಸ್ತಿನ ಕಾರಣದಿಂದಾಗಿ ಹೊರಗಿಡಲಾಗಿತ್ತು ಬದಲಿ ಆಟಗಾರನಾಗಿ ಸ್ಥಾನ ಪಡೆದ ಗೋಯಲ್ ಗೆ ಪ್ರಾಪ್ತವಾದದ್ದು ಮಾತ್ರ ಹನ್ನೆರಡನೆಯ ಆಟಗಾರನಾಗಿ ನೀರು ಕೊಡುವ ಕೆಲಸ.ಎರಡನೆಯ ಟೆಸ್ಟ್ ಗೆ ಬೇಡಿ ಪುನಃ ಆಯ್ಕೆ ಆಗ್ತಾರೆ ತದನಂತರ ಭಾರತ ತಂಡದ ಕದ ಶಾಶ್ವತವಾಗಿ ಗೋಯಲ್ ಪಾಲಿಗೆ ಮುಚ್ಚಲ್ಪಡುತ್ತದೆ.ಮುಂದೆ 1979-80 ರ ಕಿಂ ಹ್ಯೂಸ್ ನಾಯಕತ್ವದ ಆಷ್ಟ್ರೇಲಿಯಾ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅವಕಾಶ ಸಿಕ್ಕುತ್ತದೆ ಅಲ್ಲಿಯೂ 9 ವಿಕೆಟ್ ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಾರೆ,ಆದರೆ ಅಲ್ಲೂ ಕೂಡ ಆಯ್ಕೆದಾರರು ಇವರತ್ತ ಕಣ್ಣೆತ್ತಿಯೂ ಕಾಣುವುದಿಲ್ಲ. ಹೀಗೆ ಮೇಲಿಂದ ಮೇಲೆ ಪ್ರತಿಬಾರಿ ತನಗೆ ಪ್ರತಿಕೂಲವಾಗಿಯೇ ನಿರ್ಣಯಗಳು ಬರುತ್ತಿದ್ದರೂ ಯಾವುದೇ ಪ್ರತಿರೋಧ ತೋರದೇ ದೇಶೀಯ ಕ್ರಿಕೆಟ್ ನಲ್ಲಿ ಶೃದ್ಧೆಯಿಂದ ತನ್ನ ನೆಚ್ಚಿನ ಕ್ರೀಡೆಯನ್ನು ಮುಂದುವರಿಸಿದ್ದರು.
ಆಯ್ಕೆದಾರರು ಇವರನ್ನು ಗಮನಿಸದೇ ಹೋದರೇನಂತೆ,ರಣಜಿ ಟ್ರೋಫಿ ಯಲ್ಲಿ ಗೋಯಲ್ 600 ವಿಕೆಟ್ ಪಡೆದ ಕಾಲಕ್ಕೆ ಆ ಕಾಲದ ಓರ್ವ ಕುಖ್ಯಾತ ಡಕಾಯಿತ ಭೂಖಾಸಿಂಗ್ ಯಾದವ್ ಎಂಬವ ಗ್ವಾಲಿಯರ್ ಜೈಲಿನಲ್ಲಿ ಇದ್ದುಕೊಂಡೇ ಇವರಿಗೆ ಅಭಿನಂದನಾ ಪತ್ರವನ್ನು ಬರೆಯುತ್ತಾನಂತೆ, ಅವರ ಖ್ಯಾತಿ ಎಷ್ಟಿತ್ತು ಎಂಬುದಕ್ಕೆ ಇದೊಂದು ನಿದರ್ಶನ ವಷ್ಟೆ.ಇಂದಿಗೂ ದೇಶೀಯ ಕ್ರಿಕೆಟ್ ನ ಒಂದು ವಿಶಿಷ್ಟ ಹಾಗೂ ವಿಲಕ್ಷಣ ಘಟನೆಯಾಗಿಯೇ ಇದು ಗುರುತಿಸಲ್ಪಟ್ಟಿದೆ.
ನಿವೃತ್ತಿಯ ಬಳಿಕ ಭಾರತ ಕಿರಿಯರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ರಾಗಿ,ಹರ್ಯಾಣ ತಂಡದ ಪ್ರಧಾನ ಆಯ್ಕೆದಾರರಾಗಿ,ದೇಶೀಯ ಕ್ರಿಕಟ್ ನಲ್ಲಿ ಹಲವು ವರ್ಷಗಳ ಕಾಲ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಿ ಮೊನ್ನೆಯಷ್ಟೇ ತಮ್ಮ 77 ನೇಯ ಇಳಿವಯಸ್ಸಿನಲ್ಲಿ ಧೈವಾಧೀನರಾದರು.ಲಕ್ಷಾಂತರ ಕ್ರಿಕೆಟಿಗ ರಿಗೆ ಮಾರ್ಗದರ್ಶಕರಾಗಿ,ಅವರ ಏಳಿಗೆಯಲ್ಲಿ ತನ್ನ ಕೊಡುಗೆಯನ್ನಿತ್ತು ತನ್ನ ಕ್ರೀಡಾಜೀವನವನ್ನು ಆ ಆಟಗಾರರಿಗೆ ಮಾದರಿ ಯಾಗಿಸಿ ಅವರೆಂದೂ ಧೃತಿಗೆಡದಂತೆ ಪ್ರೋತ್ಸಾಹಿಸಿ ಈ ಆಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಭಾರತ ಕ್ರಿಕೆಟ್ ಜಗತ್ತಿನ ಒಂದು ಅನರ್ಘ್ಯ ರತ್ನ ದ ಸುವರ್ಣ ಅಧ್ಯಾಯ ಕೊನೆಗೊಂಡಿತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2017 ರಲ್ಲಿ ಅವರ ಜೀವಮಾನದ ಸಾಧನೆಯನ್ನು ಗುರ್ತಿಸಿ ನೀಡಿದ ಕರ್ನಲ್ “ಸಿ.ಕೆ.ನಾಯ್ಡು ಜೀವಮಾನದ ಪ್ರಶಸ್ತಿ” ಅವರಿಗೆ ಸಂದ ಆರ್ಹ ಗೌರವ.
ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ