ಮಂಗಳೂರು-ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2023 ರ ಮೊದಲನೇಯ ಆವೃತ್ತಿಯು ವಾರಾಂತ್ಯದಲ್ಲಿ ಮಂಗಳೂರಿನ ಎ ಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮೈದಾನದಲ್ಲಿ ನಡೆಯಿತು.
ಎ.ಜೆ. ರಾಯಲ್ಸ್ ತಂಡವು ಟೀಮ್ ಮಣಿಪಾಲ ವಿರುದ್ಧದ ಫೈನಲ್‌ನಲ್ಲಿ ವೀರೋಚಿತ ಜಯ ದಾಖಲಿಸಿತು. ಸಂಘಟಕರಾದ ಡಾಕ್ಟರ್ ಶರಣ್ ಜೆ ಶೆಟ್ಟಿಯವರ ಎ.ಜೆ. ರಾಯಲ್ಸ್ ಸೇರಿದಂತೆ 16 ಕ್ಕೂ ಹೆಚ್ಚು ಕಾರ್ಪೊರೇಟ್ ತಂಡಗಳು ಕಾರ್ಪೊರೇಟ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪ್ರಶಸ್ತಿಗಾಗಿ ಸ್ಪರ್ಧಿಸಿದವು, ಎ.ಜೆ. ರಾಯಲ್ಸ್ ತಂಡ ತಾನು ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಅಂತಿಮ ಸುತ್ತಿಗೆ ಪ್ರವೇಶಿಸಿತು ಮತ್ತು ಪ್ರತಿಷ್ಠಿತ ಎ.ಜೆ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿಯನ್ನು ಮುಡಿಗೇರಿಸಿತು.
ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಲೀಗ್ ಪಂದ್ಯಗಳು, ಕ್ವಾರ್ಟರ್ ಫೈನಲ್ ನಾಕೌಟ್ ಪಂದ್ಯಗಳು ಮತ್ತು ಸೆಮಿ-ಫೈನಲ್‌ಗಳನ್ನು ಟೂರ್ನಮೆಂಟ್ ಒಳಗೊಂಡಿತ್ತು, ಪಂದ್ಯಾವಳಿಯ ಭಾಗವಾಗಿ, ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲು ಪ್ರತಿ ಭಾಗವಹಿಸುವ ತಂಡವು ಮೂರು ಲೀಗ್ ಪಂದ್ಯಗಳನ್ನು ಆಡಬೇಕಾಗಿತ್ತು, ನಂತರ ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫೈನಲ್ ಪಂದ್ಯಕ್ಕೆ ಹೋರಾಡಲು ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಯಿತು . ಡಾಕ್ಟರ್ ವಿನೋದ್ ನಾಯಕ್ ನೇತೃತ್ವದ ಟೀಮ್ ಮಣಿಪಾಲ ತಂಡವು ಸೆಮಿ ಫೈನಲ್ ನಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ತಂಡವನ್ನು ರೋಚಕ ಸೆಮಿ ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿತು. ಎ ಜೆ ರಾಯಲ್ಸ್ ತಂಡವು ಎಂ ಸಿ ಎಫ್ ಕ್ರಿಕೆಟ್ ಕ್ಲಬ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ನಂತರ ನಡೆದ ಫೈನಲ್ ಪಂದ್ಯವು ಪ್ರೇಕ್ಷಕರನ್ನುಮೈದಾನದಲ್ಲಿ ಬೇರೂರಿಸಿತು. ಎ.ಜೆ. ರಾಯಲ್ಸ್ ನ ಪ್ರಮುಖ ಆಟಗಾರ ಲೋಕೇಶ್ (ಲೋಕಿ ಪುತ್ತೂರು ) ಟೂರ್ನಮೆಂಟ್ನ ಉದ್ದಕ್ಕೂ ಅತ್ಯದ್ಭುತವಾಗಿ ಆಡಿ ತನ್ನ ಸಾಹಸವನ್ನು ತೋರ್ಪಡಿಸಿ ನೆರೆದಿದ್ದ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು. ಡೇ ಅಂಡ್ ನೈಟ್ ರೂಪದಲ್ಲಿ ನಡೆದ ಟೂರ್ನಮೆಂಟ್ ಅದ್ಭುತವಾಗಿ ಮುಕ್ತಾಯ ಕಂಡಿತು.
ನೇರ ಪಂದ್ಯಗಳು ಮತ್ತು ಸ್ಕೋರ್‌ಕಾರ್ಡ್ ಅನ್ನು ಪ್ರಸಾರ ಮಾಡಲು ದೊಡ್ಡ ಡಿಜಿಟಲ್ ಪರದೆಯು ಸ್ಥಳದಲ್ಲಿತ್ತು. ಸ್ಥಳಕ್ಕೆ ಬರಲು ಸಾಧ್ಯವಾಗದ ಕ್ರಿಕೆಟ್ ಉತ್ಸಾಹಿಗಳಿಗಾಗಿ ಪಂದ್ಯಗಳನ್ನು M9 ಸ್ಪೋರ್ಟ್ಸ್ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಡ್ಯಾನ್ಸಿಂಗ್ ಅಂಪೈರ್ ಮದನ್ ಮಡಿಕೇರಿ, ದೀಕ್ಷಿತ್ ಮಂಗಳೂರು, ಪ್ರಭಾಕರ್ ಉಜಿರೆ ಮತ್ತು ಸ್ವರೂಪ್ ತೀರ್ಥಹಳ್ಳಿ ಟೂರ್ನಮೆಂಟ್ ನ ತೀರ್ಪುಗಾರರಾಗಿದ್ದರು. ಅರವಿಂದ ಮಣಿಪಾಲ ಮತ್ತು ಸುರೇಶ್ ಭಟ್ ಮುಲ್ಕಿ ವೀಕ್ಷಕ ವಿವರಣೆಯನ್ನು ನೀಡಿದರು.
ಮಹಿಳಾ ತಂಡಗಳ ನಡುವೆ ಕೂಡಾ ರೋಚಕ ಮಹಿಳಾ ಕ್ರಿಕೆಟ್ ಪಂದ್ಯವೂ ನಡೆಯಿತು.
ಪಂದ್ಯಾವಳಿಯ ನಂತರ ಮಾತನಾಡಿದ ಆಯೋಜಕರಲ್ಲಿ ಪ್ರಮುಖರಾದ ಡಾ. ಶರಣ್ ಜೆ ಶೆಟ್ಟಿ ಭವಿಷ್ಯದಲ್ಲಿ ಪ್ರತಿವರ್ಷವೂ ಕೂಡಾ ಈ ರೀತಿಯ ಟೂರ್ನಮೆಂಟ್ ನಡೆಯಲಿದೆ ಮತ್ತು ಹೆಚ್ಚಿನ ತಂಡಗಳ ಭಾಗವಹಿಸುವಿಕೆಗಾಗಿ ನಾವು ಆಶಿಸುತ್ತೇವೆ ಎಂದರು. ಡಾಕ್ಟರ್ ಸಾಕ್ಷಾತ್ ರೈ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದರು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.