ಕ್ರಿಕೆಟ್ನಲ್ಲಿ 5,6,7 ನೇ ಕ್ರಮಾಂಕಗಳು ನೋಡಲು ಸುಲಭವೆನಿಸಿದರೂ ಈ ಕ್ರಮಾಂಕದಲ್ಲಿ ಆಡುವ ಆಟಗಾರರು ತನ್ನ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ಪಡುವ ಪಾಡು ಹೇಳತೀರದು.
ಸಾಧಾರಣ ತಂಡದ ಎದುರು ಇವರಿಗೆ ಬ್ಯಾಟಿಂಗ್ ನಡೆಸಲು ಅವಕಾಶವೇ ಸಿಗುವುದಿಲ್ಲ. ಅಗ್ರಕ್ರಮಾಂಕದ ಆಟಗಾರರು ಆಡಿಕೊಳ್ಳುತ್ತಾರೆ. ಕಠಿಣ ಎಣಿಸಿದ ತಂಡಗಳೆದುರು ಕ್ಲಿಷ್ಟಕರ ಬೌಲಿಂಗ್ ಪಡೆಯ ಎದುರು ಅಗ್ರಕ್ರಮಾಂಕದ ಆಟಗಾರರು ವೈಫಲ್ಯ ಗೊಂಡಾಗ ಮಾತ್ರ 5,6 7ನೇ ಕ್ರಮಾಂಕದ ಆಟಗಾರರಿಗೆ ಅವಕಾಶ.
ಈ ಕ್ರಿಕೆಟ್ ಎಂಬ ಕ್ರೀಡೆಯಲ್ಲಿ 1,2,3ನೇ ಯ ಕ್ರಮಾಂಕದ ಆಟಗಾರರಿಗೆ ಸ್ವಲ್ಪ ರಿಯಾಯಿತಿ ಇರುತ್ತದೆ. ಹೆಚ್ಚಿನ ಎಸೆತಗಳನ್ನು ಅಳೆದು ತೂಗಿ ನೋಡಿ ತಮ್ಮ ಬ್ಯಾಟಿಂಗನ್ನು ಮುಂದುವರಿಸುವ ವಿಪುಲ ಅವಕಾಶವನ್ನು ಇವರು ಹೊಂದಿರುತ್ತಾರೆ. ಹತ್ತು ಹದಿನೈದು ಇನ್ನಿಂಗ್ಸ್ ಗಳಿಗೊಮ್ಮೆ ಸೆಂಚುರಿಯನ್ನು ಕೂಡಾ ಗಳಿಸುತ್ತಾರೆ. ಹಾಗೆಯೇ ಸ್ಟ್ರೈಕ್ ರೇಟ್ ಕೂಡ ಐವತ್ತು-ಅರವತ್ತು ಇದ್ದರೂ ಯಾರು ಏನು ಮಾತನಾಡುವುದಿಲ್ಲ. ಯಾಕೆಂದರೆ ಅಗ್ರ ಕ್ರಮಾಂಕದ ಆಟಗಾರ ಇರುವುದೇ ಈ ರೀತಿಯಲ್ಲಿ ಆಡಲು ಎಂಬ ಭಾವನೆ ಎಲ್ಲರ ಮನದಲ್ಲಿ ಮೂಡಿಯಾಗಿದೆ.
ಆದರೆ ಇದಕ್ಕೆ ವಿರುದ್ಧವಾಗಿ 5 6 ಏಳನೇ ಕ್ರಮಾಂಕದ ಆಟಗಾರ ಮೈದಾನಕ್ಕೆ ಎಂಟ್ರಿಕೊಡುವುದು ತಂಡ ಕಷ್ಟದಲ್ಲಿದ್ದಾಗ ಮತ್ತು ನೆಕ್ ಟು ನೆಕ್ ಎಂಬ ಪರಿಸ್ಥಿತಿಯಲ್ಲಿದ್ದಾಗ. ಚೇಸಿಂಗ್ ನಡೆಯುತ್ತಿರುವಾಗಂತೂ ಆ ಒತ್ತಡ ಹೇಳತೀರದು. ಹೆಚ್ಚಿನ ಪಂದ್ಯಗಳಲ್ಲಿ ಅವರು ಎಂಟ್ರಿ ಕೊಡುವಾಗ ಡೆತ್ ಓವರ್ಗಳು ನಡೆಯುತ್ತಿರುತ್ತದೆ. ಈ ಡೆತ್ ಓವರ್ಗಳನ್ನು ಎಸೆಯುವ ಜವಾಬ್ದಾರಿ ತಂಡದ ಬೆಸ್ಟ್ ಬೌಲರ್ಗಳಾದ ಆಗಿರುತ್ತದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಒಂದು ಕಡೆ ತನ್ನ ಸ್ಥಾನ ಉಳಿಸಿಕೊಳ್ಳುವ ಸಂದಿಗ್ಧತೆ ಇನ್ನೊಂದು ಕಡೆ ತನ್ನ ತಂಡವನ್ನು ವಿಜಯಿ ದಡಕ್ಕೆ ತಲುಪಿಸುವ ಅನಿವಾರ್ಯತೆ, ಇವೆರಡನ್ನು ಮೆಟ್ಟಿನಿಂತು 5,6, 7 ನೇ ಕ್ರಮಾಂಕದ ಆಟಗಾರ ಗಳಿಸುವ 30 40 50 ಅತ್ಯಮೂಲ್ಯ ರನ್ನುಗಳು ಟಾಪ್ ಆರ್ಡರ್ ಗಳ ಶತಕಕ್ಕೆ ಸರಿಸಮಾನ.
5, 6 7 ನೇಯ ಕ್ರಮಾಂಕದ ಆಟಗಾರರು ಕೇವಲ BATSMAN ಆಗಿದ್ದರೆ ಆತನಿಗೆ ಅವಕಾಶ ಸ್ವಲ್ಪ ಕಡಿಮೆಯೇ ಆತ ಬೌಲಿಂಗ್ ಕೂಡ ಮಾಡಬೇಕು, ಇಲ್ಲವೇ ವಿಕೆಟ್ ಕೀಪರ್ ಆಗಿರಬೇಕು.
ಇಂತಹ ಸನ್ನಿವೇಶಗಳನ್ನು ಎದುರಿಸಿ ಸಾಕಷ್ಟು ಪಂದ್ಯಗಳನ್ನಾಡಿದ ಲಾನ್ಸ್ ಕ್ಲೂಸ್ನರ್, ಜಾಂಟಿ ರೋಡ್ಸ್, ಮೈಕೆಲ್ ಬೆವನ್ , ಕ್ರಿಸ್ ಕೈರ್ನ್ಸ್, ಕ್ರಿಸ್ ಹ್ಯಾರಿಸ್, ರಾಬಿನ್ ಸಿಂಗ್, ಎಡ್ಡೊ ಬ್ರಾಂಡೀಸ್, ಮಾರ್ಕ್ ಬೌಚರ್, ಯುವರಾಜ್ ಸಿಂಗ್, ಜೇಕಬ್ ಓರಂ, ಕಾರ್ಲ್ ಸೂಪರ್, ಆಂಡ್ರೂ ಸೈಮಂಡ್ಸ್, ಮೊಯಿನ್ ಖಾನ್, ರಶೀದ್ ಲತೀಫ್, ಎಂ ಎಸ್ ಧೋನಿ, ಇವರಿಗೆಲ್ಲ ಯಾರು ಸರಿಸಮಾನರು???
ಓಪನರ್ ನೂರಿಪ್ಪತ್ತು ನೂರಮೂವತ್ತು ಎಸೆತಗಳನ್ನು ಎದುರಿಸಿ ಶತಕ ಗಳಿಸಿದ ಎಂದಮಾತ್ರಕ್ಕೆ ನಾವೆಲ್ಲ ಆತನ ಫಾಲೋವರ್, ಫ್ಯಾನ್ ಆಗಿಬಿಡುತ್ತೇವೆ ಒತ್ತಡರಹಿತವಾಗಿ ಆಡುವುದು ಮತ್ತು ಒತ್ತಡದೊಂದಿಗೆ ಆಡುವುದು ಇವೆರಡರ ವ್ಯತ್ಯಾಸವನ್ನು ಅರಿತವರಿಗೆ ಮಾತ್ರ ಮಧ್ಯಮ ಕ್ರಮಾಂಕದವರ ಆಟದ ಬೆಲೆ ಮನದಟ್ಟಾಗುತ್ತದೆ. ನಿಮ್ಮ ತಂಡದಲ್ಲೇ ಇರುವ ಐದು ಆರು ಮತ್ತು ಏಳನೇ ಕ್ರಮಾಂಕದ ಆಟಗಾರರಲ್ಲಿ ಒಮ್ಮೆ ಅವರುಗಳು ಅನುಭವಿಸುವ ಈ ಒತ್ತಡದ ಬಗ್ಗೆ ಕೇಳಿ ನೋಡಿ. 5,6,7 ನೇ ಕ್ರಮಾಂಕದ ಆಟಗಾರರು ಕ್ರಿಕೆಟ್ ನಲ್ಲಿ ತನ್ನ ತಂಡಕ್ಕೆ ಸಲ್ಲಿಸಿದ ಸೇವೆ ಸಲ್ಲಿಸುತ್ತಿರುವ ಸೇವೆಗೆ ಬೆಲೆಕಟ್ಟಲಾಗದು ಬಿಡಿ.