50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..!
1958ರಿಂದ 1973ರವರೆಗೆ ನಿರಂತರವಾಗಿ 15 ಬಾರಿ ರಣಜಿ ಟ್ರೋಫಿ ಗೆದ್ದು ಮೆರೆದಾಡಿದ್ದ ಬಲಾಢ್ಯ ಮುಂಬೈ ತಂಡ… ಮುಂಬೈಯನ್ನು ಕಟ್ಟಿ ಹಾಕಲು ಬಂದವರೆಲ್ಲಾ ನಡು ಮುರಿದುಕೊಂಡು ಬಿದ್ದಿದ್ದ ಸಮಯ… ಅಲ್ಲಿಯವರೆಗಿನ ಒಟ್ಟು 39 ರಣಜಿ ಟೂರ್ನಿಗಳಲ್ಲಿ 25 ಬಾರಿ ಫೈನಲ್ ತಲುಪಿ 24 ಬಾರಿ ಕಪ್ ಗೆದ್ದು ಬೀಗಿದ್ದ ಮುಂಬೈ ತಂಡವನ್ನು ಆ ಕಾಲಕ್ಕೆ ಸೋಲಿಸೋದು ಅಂದ್ರೆ, ಅದು ಸಾಧ್ಯವಾಗದ ಮಾತು ಎಂಬ ಪರಿಸ್ಥಿತಿ.
ಅಂಥಾ ಸಮಯದಲ್ಲಿ ಅಂಥಾ ದೈತ್ಯ ತಂಡದ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿ ಸೊಕ್ಕಡಗಿಸಿದ್ದು ಎರಾಪಳ್ಳಿ ಪ್ರಸನ್ನ ನೇತೃತ್ವದ ಕರ್ನಾಟಕ ತಂಡ.
1973-74ನೇ ಸಾಲಿನ ರಣಜಿ ಟ್ರೋಫಿ ಟೂರ್ನಿ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ Vs ಮುಂಬೈ ಸೆಮಿಫೈನಲ್ ಪಂದ್ಯ. ಮುಂಬೈ ತಂಡದಲ್ಲಿದ್ದವರು ಸುನಿಲ್ ಗವಾಸ್ಕರ್, ಅಜಿತ್ ವಾಡೇಕರ್, ಏಕನಾಥ್ ಸೋಳ್ಕರ್ ಅವರಂಥಾ ದಿಗ್ಗಜರು. ಸತತವಾಗಿ 15 ಬಾರಿ ರಣಜಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮುಂಬೈ ತಂಡವನ್ನು ಎದುರಿಸಿ ನಿಂತಿತ್ತು spirited ಕರ್ನಾಟಕ ಟೀಮ್.
ಜಿ.ಆರ್ ವಿಶ್ವನಾಥ್(162) ಮತ್ತು ಬ್ರಿಜೇಶ್ ಪಟೇಲ್(106) ಬಾರಿಸಿದ ಶತಕಗಳು, ಪ್ರಸನ್ನ-ಚಂದ್ರಶೇಖರ್ ಜೋಡಿಯ ಸ್ಪಿನ್ ಮೋಡಿ ಅವತ್ತು ಚಿನ್ನಸ್ವಾಮಿಯಲ್ಲಿ ಹೊಸ ಚರಿತ್ರೆಯನ್ನೇ ಸೃಷ್ಠಿಸಿ ಬಿಟ್ಟಿತ್ತು. ಮುಂಬೈಯನ್ನು ಸೆಮಿಫೈನಲ್’ನಲ್ಲೇ ಮಲಗಿಸಿ, ಇನ್ನಿಂಗ್ಸ್ ಲೀಡ್ ಆಧಾರದಲ್ಲಿ ಫೈನಲ್ ತಲುಪಿತು ಕರ್ನಾಟಕ.
ಜೈಪುರದಲ್ಲಿ ರಾಜಸ್ಥಾನ ವಿರುದ್ಧ ಫೈನಲ್ ಪಂದ್ಯ. ಎ.ವಿ ಜಯಪ್ರಕಾಶ್ (ಎರಡೂ ಇನ್ನಿಂಗ್ಸ್’ಗಳಲ್ಲಿ ಅರ್ಧಶತಕ), ವಿ.ಎಸ್ ವಿಜಯ್ ಕುಮಾರ್ (ಪ್ರಥಮ ಇನ್ನಿಂಗ್ಸ್”ನಲ್ಲಿ 66 ರನ್), ಬಿ.ವಿಜಯಕೃಷ್ಣ (ಪ್ರಥಮ ಇನ್ನಿಂಗ್ಸ್”ನಲ್ಲಿ 71 ರನ್), ಸೈಯದ್ ಕಿರ್ಮಾನಿ (2ನೇ ಇನ್ನಿಂಗ್ಸ್’ನಲ್ಲಿ 60 ರನ್), ವಿಜಯ್ ಕುಮಾರ್ (5 ವಿಕೆಟ್), ಪ್ರಸನ್ನ (9 ವಿಕೆಟ್), ಚಂದ್ರಶೇಖರ್ (5 ವಿಕೆಟ್) ಅವರ ಅಮೋಘ ಆಟ ಕರ್ನಾಟಕಕ್ಕೆ ಮೊದಲ ರಣಜಿ ಟ್ರೋಫಿ ಗೆದ್ದು ಕೊಟ್ಟಿತ್ತು. ಫೈನಲ್’ನಲ್ಲಿ ದಕ್ಕಿದ್ದು 185 ರನ್’ಗಳ ದೊಡ್ಡ ಗೆಲುವು.
ರಣಜಿ ಫೈನಲ್ ಮ್ಯಾಚ್ ನೋಡಲು ಜೈಪುರಕ್ಕೆ ಹೋಗಿದ್ದ ಕನ್ನಡಿಗರ ಒಂದು ಗುಂಪು, ಪಂದ್ಯದ ಅಷ್ಟೂ ದಿನ ರಾತ್ರಿಯಿಡೀ ಮೈದಾನದಲ್ಲೇ ಮಲಗಿ ಪಿಚ್’ಗೆ ಕಾವಲು ಕೂತಿತ್ತು. ಕರ್ನಾಟಕದ ಗೆಲುವನ್ನು ತಡೆಯಲು ರಾತ್ರೋ ರಾತ್ರಿ ಪಿಚ್ ಸ್ವರೂಪವನ್ನು ಬದಲಿಸುವ ಅನುಮಾನ ಇದ್ದದ್ದರಿಂದ ಪಿಚ್’ನ ರಕ್ಷಣೆಗೆ ನಿಂತಿತ್ತು ಆ ತಂಡ.
ಜೈಪುರದಲ್ಲಿ ರಣಜಿ ಟ್ರೋಫಿ ಗೆದ್ದು ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದ ಕರ್ನಾಟಕ ತಂಡದ ಆಟಗಾರರು ಮನೆಗೆ ಹೋಗಿದ್ದು ಮೂರು ದಿನಗಳ ನಂತರ. ಬೆಂಗಳೂರು, ಮೈಸೂರಿನಲ್ಲಿ ಸನ್ಮಾನ ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ರಣಜಿ ಟ್ರೋಫಿ ಆರಂಭವಾಗಿ 40 ವರ್ಷಗಳ ನಂತರ ಕರ್ನಾಟಕ ಮೊದಲ ಬಾರಿ ಕಪ್ ಗೆದ್ದಿದ್ದ ಕಾರಣ, ಕನ್ನಡಿಗರಿಗೆ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ.
ಅಲ್ಲಿಂದ ಕರ್ನಾಟಕ ಒಟ್ಟು 8 ಬಾರಿ ರಣಜಿ ಟ್ರೋಫಿ ಗೆದ್ದಿದೆ. ಆದರೆ first is always best. ಕರ್ನಾಟಕದ ಮೊದಲ ರಣಜಿ ಟ್ರೋಫಿ ವಿಕ್ರಮಕ್ಕೆ 50 ವರ್ಷಗಳು ತುಂಬಿರುವ ಹೊತ್ತಲ್ಲಿ, ಆ ತಂಡದಲ್ಲಿದ್ದವರನ್ನು ಕರೆಸಿ ಗೌರವಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಡಿದರೆ, ಅದು ಕ್ರಿಕೆಟ್’ಗೆ ಕೊಡುವ ಗೌರವ.
1973-74ರಲ್ಲಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಆಟಗಾರರು:
ಎರಾಪಳ್ಳಿ ಪ್ರಸನ್ನ (ನಾಯಕ), ರಘುನಾಥ್ ಬಿರಾಲ, ಆರ್.ಸುಧಾಕರ್ ರಾವ್, ಬ್ರಿಜೇಶ್ ಪಟೇಲ್, ಸಿದ್ದರಾಮು ಬಿ., ಕೆ.ಲಕ್ಷ್ಮಣ್, ಸಂಜಯ್ ದೇಸಾಯಿ, ಎ.ವಿ ಜಯಪ್ರಕಾಶ್, ವಿಜಯಪ್ರಕಾಶ್, ಬಿ.ವಿಜಯಕೃಷ್ಣ, ಬಿ.ಎಸ್ ಚಂದ್ರಶೇಖರ್, ಜಿ.ಆರ್ ವಿಶ್ವನಾಥ್, ಸೈಯದ್ ಕಿರ್ಮಾನಿ, ವಿ.ಎಸ್ ವಿಜಯ್ ಕುಮಾರ್; ಸಿ.ನಾಗರಾಜ್(ಮ್ಯಾನೇಜರ್).
#RanjiTrophy #KarnatakaCricket #Ranji Karnataka Ranji Team/ ಕರ್ನಾಟಕ ರಣಜಿ ತಂಡ KSCA Official