ಕುಂದಾಪುರ : ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಚಕ್ರಾಧಿಪತ್ಯ ಮೆರೆದ ತಂಡ ಚಕ್ರವರ್ತಿ ಕುಂದಾಪುರ.ದಶಕಗಳ ಕಾಲ ತಂಡವನ್ನು ಮುನ್ನಡೆಸಿ ಕುಂದಾಪುರದ ಕೀರ್ತಿಯನ್ನು ರಾಜ್ಯ ರಾಷ್ಟ್ರದೆಲ್ಲೆಡೆ ಪಸರಿಸಿದ ನಾಯಕ ಶ್ರೀಪಾದ ಉಪಾಧ್ಯಾಯ.
ಟೆನ್ನಿಸ್ ಕ್ರಿಕೆಟ್ ನ ಹಲವಾರು ತಾರೆಗಳ ಭವಿಷ್ಯ ರೂಪಿಸಿದ ಅಂಗಣ ಉಡುಪಿಯ ಅಜ್ಜರಕಾಡಿನ ಮೈದಾನ.1996 ರಲ್ಲಿ ಕರಾವಳಿ ಕ್ರಿಕೆಟರ್ಸ್ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿದ್ದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಉಡುಪಿಯ ದುರ್ಗಾ ಕ್ರಿಕೆಟರ್ಸ್ 10 ಓವರ್ ಗಳಲ್ಲಿ 32 ರನ್ ಗಳಿಸಿ ಆಲೌಟ್ ಆಗಿತ್ತು.
ಆರಂಭಿಕ ದಾಂಡಿಗನಾಗಿ ಅಂಗಣಕ್ಕಿಳಿದ ನಾಯಕ ಹಾಗೂ ಆಲ್ ರೌಂಡರ್ ಶ್ರೀಪಾದ ಉಪಾಧ್ಯಾಯರವರು ಮೊದಲ ನಾಲ್ಕು ಎಸೆತಗಳಲ್ಲಿ ಅಜ್ಜರಕಾಡು ಅಂಗಣದ ಮೂಲೆ ಮೂಲೆಗೂ ನಾಲ್ಕು ಸಿಕ್ಸರ್ ಸಿಡಿಸಿ,ಎಸೆತಗಾರ ಐದನೇ ಎಸೆತ ವೈಡ್ ಎಸೆದರೆ,ಮತ್ತೆ ಮುಂದಿನ ಎರಡು ಎಸೆತಗಳಲ್ಲಿ ಮತ್ತೆರಡು ಸಿಕ್ಸರ್ ಬಾರಿಸಿ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ದಾಖಲೆ ಬರೆದರು.ಪಂದ್ಯ ಒಂದೇ ಓವರ್ ನಲ್ಲಿ ಮುಕ್ತಾಯ ಕಂಡಿತ್ತು.ನಂತರದ ದಿನಗಳಲ್ಲಿ ಉಪಾಧ್ಯಾಯರಿಗೆ ಬೌಲಿಂಗ್ ಮಾಡಲು ಎಸೆತಗಾರರು ಅಂಜುವ ದಿನಗಳಿತ್ತು.
ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ವಿಭಾಗದಲ್ಲಿಯೂ ಬಹಳಷ್ಟು ಸಾಧನೆಗೈದ ಕೀರ್ತಿ ಉಪಾಧ್ಯಾಯರಿಗೆ ಸಲ್ಲುತ್ತದೆ.ನಾಯಕನಾಗಿ ರಾಜ್ಯದ ನೂರಾರು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಪಂದ್ಯಾಕೂಟಗಳಲ್ಲಿ ಇವರ ಸಾರಥ್ಯದಲ್ಲಿ ಯಶಸ್ಸನ್ನು ಸಾಧಿಸಿತ್ತು.
ಪ್ರಸ್ತುತ (Above-40),ಹಾಗೂ ರೋಟರಿ ಪಂದ್ಯಾಕೂಟಗಳಲ್ಲಿ ಪಾಲ್ಗೊಳ್ಳುವ ಉಪಾಧ್ಯಾಯರು ಯಶಸ್ಸಿನ ಯಶೋಗಾಥೆ ಬರೆದ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಮಹಾನ್ ನಾಯಕ.
ಶ್ರೀಪಾದ ಉಪಾಧ್ಯಾಯರಿಗೆ “ಸ್ಪೋರ್ಟ್ಸ್ ಕನ್ನಡ” ಕ್ರೀಡಾ ವೆಬ್ಸೈಟ್ ನ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಆರ್.ಕೆ.ಆಚಾರ್ಯ ಕೋಟ